ಅನುರಾಧಾ ರಾಜೀವ್ ಸುರತ್ಕಲ್ ಕವಿತೆ-ಒಲವ ಕುಂಚ

ಒಲವ ಕುಂಚದಲಿ ಚಿತ್ತಾರ ಬಿಡಿಸಿರುವೆ
‌ಹೃದಯದ ಕದವನೊಮ್ಮೆ ತೆರೆದು ನೋಡು
ಗೆಲುವ ಬೀರುತಲಿ ಬಳಿಗೆ ಕರೆದಿರುವೆ
ಪ್ರೇಮದ ಓಲೆಯನೊಮ್ಮೆ ಬರೆದು ಬಿಡು

ಎದೆಯ ಭಾವಗಳೆಲ್ಲಾ ಪದಪುಂಜಗಳಾಗಿ
ಕವಿತೆಯಾಗಿದೆ ಇಲ್ಲಿ
ಮಧುರ ನೆನಪುಗಳು ಕನಸ ಗೊಂಚಲಾಗಿ
ತೇಲುತಿದೆ ಇಲ್ಲಿ

ಮುಚ್ಚಿರುವ ಕಂಗಳಲಿ ನಿಚ್ಛಳವಾಗಿ
ಗೋಚರಿಸುತಿದೆ ರೂಪವು
ಬಚ್ಚಿಟ್ಟಿರುವ ಪ್ರೀತಿಧಾರೆ ಹರಿಯುತಿದೆ
ಬೇಯುತ ವಿರಹದ ತಾಪವು

ಹಚ್ಚಿಬಿಡು ಕೈಗಳಲಿ ಗೋರಂಟಿಯ ರಂಗು
ಬಿರಿದ ದಾಳಿಂಬೆಯ ಕೆಂಪಿನಲಿ
ಮುಚ್ಚಿಬಿಡು ಅಧರದ ಅಮೃತದ ಗುಂಗು
ಹುಣ್ಣಿಮೆಯ ಚಂದಿರನ ತಂಪಿನಲಿ


Leave a Reply

Back To Top