ರಸ ಋಷಿ ಕುವೆಂಪು ನೆನಪಿನಲ್ಲಿ,ಸುಹೇಚ ಪರಮವಾಡಿ-ವಿಶ್ವಮಾನವ

ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ಅನ್ನು ಪ್ರತಿ ವರ್ಷ ‘ವಿಶ್ವ ಮಾನವ ದಿನಾಚರಣೆ’ಯನ್ನಾಗಿ ಆಚರಿಸಲು ರಾಜ್ಯ ಸರಕಾರ ಎಲ್ಲಾ ಶಾಲಾ ಕಾಲೇಜು, ಕಛೇರಿ ಮತ್ತು ಕನ್ನಡ ಪರ ಸಂಘಟನೆಗಳಿಗೆ ಸೂಚಿಸಿದ್ದು ಆ ನಿಮಿತ್ತ ಕುವೆಂಪುರವರ ಸಾಹಿತ್ಯ ಮೌಲ್ಯ ಕುರಿತೊಂದು ಕಿರು ಲೇಖನ)

ಕವಿ ಮಹೋದಯರಿಗೆ ಅಗ್ನಿ ಮುಖಿ, ಪ್ರಳಯ ಶಿಖಿ ಮಹೊನ್ನತ ಸ್ಥಾನ ನಿಡಿದ ವಿಶ್ವಮಾನವ ಕವಿ ಕುವೆಂಪು

ಕವಿ ಮಹನೀಯರಿಗೆ ಶಾಸ್ವತ ಸಾಮ್ರಾಟ, ಮಂತ್ರಿಮಂಡಲದ ಸ್ಥಾನ ಮಾನ ಕಲ್ಪಿಸಿದ ಕ್ರಾಂತಿ ಕವಿ ಕುವೆಂಪು

                    “ಸರ್ವೋದಯವೆಂದರೆ ಯಾವೊಬ್ಬ ವ್ಯಕ್ತಿಯ ಜಾತಿಯ ಅಥವಾ ಮತದ ಉದಯವಲ್ಲ; ಇಡೀ ಮನುಕುಲದ ಉದಯ; ಮನುಕುಲದ ಉದಯ ಮಾತ್ರವಲ್ಲ, ಇಡೀ ಜೀವಕೋಟಿಯ  ಉದಯವೂ ಅಹುದು. ಜ್ಯೋತಿ ಸಹ ತಮೋಲೀಲೆಗಾಗಿ ಜಡದ ಮುದ್ರೆಯಾಗುತ್ತದಷ್ಟೆ.” ಎಂದು ಸಾರಿದ ಸರ್ವೋತ್ತಮ ಕವಿ ಕುವೆಂಪು (ದೇ. ಜ. ಗೌ. ರವರ ರಾಷ್ಟ್ರ ಕವಿ ಕುವೆಂಪು ಕೃತಿ ಪುಟ ಸಂಖ್ಯೆ : 349) ರವರು ಸಾಹಿತ್ಯದಿಂದ ಸರ್ವೋದಯ ಸಾಧ್ಯವೆಂದು ನಂಬಿದವರು.

                    ಕುವೆಂಪುರವರಿಗಿಂತ ಚೆನ್ನಾಗಿ ಬರೆದ ಕವಿಗಳಿರಬಹುದು, ಕತೆಗಾರರಿರಬಹುದು
ಆದರೆ ಕುವೆಂಪು ಅವರನ್ನು ಮೀರಿಸುವ ಪ್ರತಿಭೆಯ ವ್ಯಕ್ತಿ ಮತ್ತು ಗುರು ಇನ್ನೊಬ್ಬರಿಲ್ಲ. ಸುತ್ತಣ ಜಗತ್ತು ಅಸೂಕ್ಷ್ಮವಾಗಿ, ಸಿಟ್ಟುಗೊಳ್ಳುವ ಎಚ್ಚರವೇ ಇಲ್ಲದೆ, ಮೌಢ್ಯವನು ತೊಲಗಿಸುವ ಛಲವಿಲ್ಲದೆ ಸತ್ತ ಸ್ಥಿತಿಯಲ್ಲಿದ್ದಾಗ ಕುವೆಂಪು ಸೂಕ್ಷ್ಮವಾಗಿ ನೋಡಿ ವ್ಯಂಗ್ಯ, ಕೋಪ, ಪ್ರೀತಿ ಮತ್ತು ನೋವಿನಿಂದ ಬರೆಯುತ್ತಾರೆ. ಅವರ ಭಾವಗೀತೆಗಳಲ್ಲಿ ಸಂಕೀರ್ಣತೆ, ಉನ್ಮಾದ ನಿರೀಕ್ಷಿಸಿದವರಿಗೆ ಎದುರಾಗುವುದು ಅವರ ಮುಗ್ಧತೆ ಮತ್ತು ಸರಳತೆ. “ಟುವ್ವಿ ಟುವ್ವಿ” ಎಂದು ಹಾಡುವ ಹಕ್ಕಿಯನ್ನು ಧ್ಯಾನಿಸಿದರೆ ಇದು ತಿಳಿಯುತ್ತದೆ. – ಪಿ. ಲಂಕೇಶ್ ರವರ ಈ ಬರಹ ಟಿಪ್ಪಣಿ ಕುವೆಂಪು ರವರ ಸಾಹಿತ್ಯ ಮೌಲ್ಯದ ಹಿರಿಮೆಯನ್ನು, ವೈಚಾರಿಕತೆಯ ಹರವನ್ನು ಅರಿಸುತ್ತದೆ.

                  ಕವಿ ಕುವೆಂಪು ಅವರು ಆಗಿನ್ನೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆಗ ಮೈಸೂರು ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯುವರಾಜ ಜಯಚಾಮರಾಜ ಒಡೆಯರ್. ಒಮ್ಮೆ ಜಯಚಾಮರಾಜರ ಕನ್ನಡದ ಉತ್ತರ ಪತ್ರಿಕೆಯನ್ನು ಕುವೆಂಪು ಮೌಲ್ಯಮಾಪನ ಮಾಡಿದರು. ನೂರಕ್ಕೆ 17 ಅಂಕವನ್ನು ಕೊಟ್ಟರು. ಇದು ಆಗಿನ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎನ್. ಎಸ್. ಸುಬ್ಬರಾವ್ ಅವರಿಗೆ ಗೊತ್ತಾಯಿತು. ಅಲ್ಲದೆ ಈ ವಿಷಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೂ ತಿಳಿಯಿತು. ಕುಲಪತಿ ಅವರು ಈ ಬಗ್ಗೆ ವಿಚಾರಣೆ ನಡೆಸಲು ಟಿ. ಎಸ್. ವೆಂಕಣ್ಣಯ್ಯ ಅವರನ್ನು ಕೇಳಿಕೊಂಡರು.

                  ವೆಂಕಣ್ಣಯ್ಯ ಅವರು ಕುವೆಂಪು ಅವರನ್ನು ಕರೆದು, `ಏನಯ್ಯ, ರಾಜಕುಮಾರರಿಗೆ 17 ಅಂಕ ನೀಡಿದ್ದೀಯಲ್ಲ’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಕುವೆಂಪು, `ನಾನು ನೀಡಿದ್ದಲ್ಲ. ಅವರು ತೆಗೆದುಕೊಂಡಿದ್ದು ಅಷ್ಟು’ ಎಂದು ಉತ್ತರಿಸಿದರು. `ಅದನ್ನು 71 ಮಾಡಲು ಸಾಧ್ಯವಿಲ್ಲವೇ?’ ಎಂದು ವೆಂಕಣ್ಣಯ್ಯ ಕೇಳಿದಾಗ, `ಉತ್ತರ ಪತ್ರಿಕೆಯನ್ನು ನೀವೇ ನೋಡಿ. ಎಷ್ಟು ಬೇಕಾದರೂ ಅಂಕ ಕೊಡಿ’ ಎಂದು ಕುವೆಂಪು ಹೇಳಿದರಂತೆ.

ಇದರಿಂದ ಮಹಾರಾಜರೇನೂ ಸಿಟ್ಟಾಗಲಿಲ್ಲ. ಬದಲಿಗೆ ಕುವೆಂಪು ಅವರಿಗೆ ವಾರಕ್ಕೆ ಮೂರು ದಿನ ಅರಮನೆಗೆ ಬಂದು ಯುವ ರಾಜರಿಗೆ ಪಾಠ ಮಾಡಿ. ನಿಮ್ಮನ್ನು ಕರೆದುಕೊಂಡು ಬರಲು ಕಾರು ಕಳುಹಿಸಲಾಗುತ್ತದೆ. ಅಲ್ಲದೆ ನೂರು ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಿದರಂತೆ. ಆದರೆ ಅದಕ್ಕೂ ಕುವೆಂಪು ಒಪ್ಪಲಿಲ್ಲ. ಮಹಾರಾಜರ ಆಹ್ವಾನವನ್ನು ತಿರಸ್ಕರಿಸಿದ್ದೇ ಅಲ್ಲದೆ ಒಂದು ಕವನವನ್ನೂ ಬರೆದರು.

ವಸಂತ ವನದಲ್ಲಿ ಕೂಗುವ ಕೋಗಿಲೆ
ರಾಜರ ಬಿರುದನ್ನು ಬಯಸುವುದಿಲ್ಲ
ಕವಿಗೆ ಅರಸುಗಿರಸುಗಳ ಋಣವಿಲ್ಲ
ಅವನು ಅಗ್ನಿ ಮುಖಿ ಪ್ರಳಯ ಶಿಖಿ

ಎಂದು ಕವಿತೆ ಬರೆಯುವ ಮೂಲಕ ಕವಿ ತಾನು ಯಾವ ಆಸೆ ಪಾಸೆಗೆ ಬಲಿಯಾಗದೆ, ಮಣಿಯದೆ, ಬೆದರದೆ ಲೋಕ ಕಲ್ಯಾಣ ಮಾಡಬೇಕೆಂಬ ಮಾದರಿಯನ್ನು ಹಾಕಿದವರು.

            ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಇನ್ನೂ ಮಾನಸ ಗಂಗೋತ್ರಿಗೆ ಸಂಪೂರ್ಣವಾಗಿ ಸ್ಥಳಾಂತರವಾಗಿರಲಿಲ್ಲ. ಸ್ಥಳಾಂತರಕ್ಕೆ ಸಾಕಷ್ಟು ಮಂದಿಯ ವಿರೋಧ ಕೂಡ ಇತ್ತು. ಮಾನಸ ಗಂಗೋತ್ರಿಗೆ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸುವ ಸಾಹಸದಲ್ಲಿ ಕುವೆಂಪು ನಿರತರಾಗಿದ್ದರು. ಮಾಜಿ ಕೇಂದ್ರ ಸಚಿವರೂ ಆಗಿದ್ದ ಸಿ. ಡಿ. ದೇಶಮುಖ್ ಅವರು ಆಗ ಯುಜಿಸಿ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ತಮ್ಮ ಪತ್ನಿ ಜೊತೆಗೆ ಕೃಷ್ಣರಾಜಸಾಗರಕ್ಕೆ ಬಂದು ಉಳಿದುಕೊಂಡಿದ್ದರು. ಹೀಗೆ ಬಂದ ದೇಶಮುಖ್ ಅವರಿಗೆ ಜ್ವರ ಬಂದು ನಾಲ್ಕು ದಿನ ಇಲ್ಲಿಯೇ ಉಳಿದುಕೊಳ್ಳುವಂತೆ ಆಯಿತು. ಆಗ ಪ್ರತಿ ದಿನ ಕುವೆಂಪು ಕೆಆರ್‌ಎಸ್‌ಗೆ ಹೋಗಿ ಅವರನ್ನು ನೋಡಿಕೊಂಡು ಬರುತ್ತಿದ್ದರಂತೆ.  ದೇಶಮುಖ್ ಅವರ ಪತ್ನಿ ಒಳ್ಳೆ ಕವಯತ್ರಿ. ಕುವೆಂಪು ಅವರು ಅಲ್ಲಿಗೆ ಹೋದಾಗ ಇವರೊಂದು ಅವರೊಂದು ಕವನ ವಾಚಿಸುತ್ತಿದ್ದರಂತೆ. ಆಗಿನ್ನು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಯುಜಿಸಿ ವೇತನ ಸಿಗುತ್ತಿರಲಿಲ್ಲ. ಕುವೆಂಪು ಈ ಬಗ್ಗೆ ದೇಶಮುಖ್ ಅವರಲ್ಲಿ ಪ್ರಸ್ತಾಪಿಸಿದಾಗ, `ನಿಮ್ಮ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಕಳುಹಿಸಿದರೆ ತಕ್ಷಣವೇ ಅದಕ್ಕೆ ಒಪ್ಪಿಗೆ ಕೊಡುತ್ತೇನೆ’ ಎಂಬ ಭರವಸೆಯನ್ನು ನೀಡಿದರು.

                           ಖುಷಿಯಾದ ಕುವೆಂಪು ಈ ಬಗ್ಗೆ ಚರ್ಚೆ ನಡೆಸಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ `ತಮ್ಮನ್ನು ಕಾಣಲು ಬರಬೇಕು. ನಿಮ್ಮ ಸಮಯ ತಿಳಿಸಿ’ ಎಂದು ಕೇಳಿಕೊಂಡರು. ಅದಕ್ಕೆ ನಿಜಲಿಂಗಪ್ಪ `ನೀವು ನನ್ನನ್ನು ನೋಡಲು ಇಲ್ಲಿಗೆ ಬರುವುದಾ? ನನಗೆ ಅವಮಾನ ಮಾಡಬೇಡಿ. ನಮ್ಮ ಶಿಕ್ಷಣ ಸಚಿವರನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಚರ್ಚೆ ಮಾಡಿ. ನಾನು ಎಲ್ಲ ಅನುಕೂಲ ಮಾಡಿಕೊಡುತ್ತೇನೆ’ ಎಂದು ಉತ್ತರಿಸಿದರು. ಅದರಂತೆ ಆಗಿನ ಶಿಕ್ಷಣ ಸಚಿವ ವಿ.ವೆಂಕಟಪ್ಪ ಕುವೆಂಪು ಅವರ ಬಳಿಗೆ ಬಂದು ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಆಲಿಸಿದರು. ಯುಜಿಸಿಗೆ ಸೂಕ್ತ ಪ್ರಸ್ತಾವನೆಯನ್ನೂ ಸಲ್ಲಿಸಿದರು. ಅಲ್ಲದೆ ಮಾನಸ ಗಂಗೋತ್ರಿಯಲ್ಲಿ ಸಂಚರಿಸಿ ಅಲ್ಲಿ ಮೂರು ಕಟ್ಟಡಗಳನ್ನು ನಿರ್ಮಿಸಲು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು ನೀಡಲು ಒಪ್ಪಿಕೊಂಡರು.

               ಕುವೆಂಪು ಅವರು ಕರ್ನಾಟಕ ಏಕೀಕರಣದ ಪರವಾಗಿದ್ದರು. ಇದರಿಂದ ಮೈಸೂರು ಭಾಗದ ರಾಜಕಾರಣಿಗಳು ಸಿಟ್ಟಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕುವೆಂಪು ಅವರಿಗೆ ಒಂದು ನೋಟಿಸ್ ಜಾರಿ ಮಾಡಿತು. ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಕೇಳಿತು. ಅದಕ್ಕೆ ಕುವೆಂಪು ಪದ್ಯದ ರೂಪದಲ್ಲಿಯೇ ಉತ್ತರ ಬರೆದರು. ಆ ಪದ್ಯವೇ ಕುವೆಂಪು ಅವರ ಪ್ರಸಿದ್ಧ ಅಖಂಡ ಕರ್ನಾಟಕ’ ಪದ್ಯದ ಮುಖೇನ ರಾಜ್ಯ ಸರ್ಕಾರದ ನೋಟಿಸ್‌ಗೆ ಕುವೆಂಪು ಉತ್ತರ ಹೀಗಿದೆ:

ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ
ಹರಸುತಿಹನು ದೇವ ಗಾಂಧಿ
ಮಂತ್ರಿಸಿಹುದು ಋಷಿಯ ನಾಂದಿ

ಅಖಂಡ ಕರ್ನಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ

ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ

                  ಕುವೆಂಪು ಅವರ ಪದ್ಯರೂಪದ ಉತ್ತರ ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಅವರನ್ನು ಮೆಳ್ಳಗಣ್ಣು ಎಂದು ಟೀಕಿಸಿದ್ದು ಕೂಡ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗಿತ್ತು. ಮೈಸೂರಿನಲ್ಲಿ ಕೆಲವರು ಈ ಪದ್ಯವನ್ನು ಸಾವಿರಾರು ಪ್ರತಿ ಮಾಡಿ ಹಂಚಿಬಿಟ್ಟರು. ವಿಷಯ ಸಚಿವ ಸಂಪುಟದ ಮುಂದೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದವರು ಕೆ. ಸಿ. ರೆಡ್ಡಿ. ಸಂಪುಟ ಸಭೆಯಲ್ಲಿ ಕೆಲವು ಸಚಿವರು ಕುವೆಂಪು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅವರ ಬಡ್ತಿ ರದ್ದು ಮಾಡಬೇಕು. ಇನ್ನೊಂದು ನೋಟಿಸ್ ನೀಡಬೇಕು ಎಂದೆಲ್ಲಾ ಒತ್ತಾಯಿಸಿದರು. ಆಗ ಕೆ. ಸಿ. ರೆಡ್ಡಿ ಅವರು `ಒಂದು ನೋಟಿಸ್‌ಗೆ ಈ ಪದ್ಯ ಬರೆದಿದ್ದಾರೆ. ಇನ್ನೊಂದು ನೋಟಿಸ್ ನೀಡಿದರೆ ಮತ್ತೆ ಮೂರು ಪದ್ಯ ಬರೆಯಬಹುದು. ಬೆಂಕಿಯ ಜೊತೆ ಸರಸ ಒಳ್ಳೆಯದಲ್ಲ’ ಎಂದು ಹೇಳಿ ಈ ಬಗ್ಗೆ ತಾವು ವಿಚಾರಣೆ ನಡೆಸುವುದಾಗಿ ಹೇಳಿದಂತ ಅವರು ನಿಟ್ಟೂರು ಶ್ರೀನಿವಾಸರಾಯರ ಬಳಿ ಈ ಬಗ್ಗೆ ಚರ್ಚೆ ನಡೆಸಿದರು. ಆಗ ನಿಟ್ಟೂರು ಶ್ರೀನಿವಾಸರಾಯರು `ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸು ಪಡೆಯುವುದೇ ಸೂಕ್ತ’ ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದರು. ರೆಡ್ಡಿ ಅವರು ಕುವೆಂಪು ಅವರಿಗೆ ನೀಡಿದ್ದ ನೋಟಿಸ್ ವಾಪಸು ಪಡೆದರು. ಇದರಿಂದ ಕವಿ ಸಾಹಿತಿಗಳ ಬರಹ ಕಾರ್ಯ ಎಷ್ಟೆಲ್ಲಾ ಚುರುಕು ಮುಟ್ಟಿಸುತ್ತದೆ ಮತ್ತು ಸುಧಾರಣೆಗೆ ನಾಂದಿಯಾಗುತ್ತದೆ ಅನ್ನುವುದು ಜೀವಂತ ಸಾಕ್ಷಿ.

                 ಒಮ್ಮೆ ವಿನೋಬಾ ಭಾವೆ ಅವರು ಮೈಸೂರಿಗೆ ಬಂದಿದ್ದರು. ಅವರನ್ನು ಕಾಣಲು ಕುವೆಂಪು ಹೋದರು. ಕುವೆಂಪು ಅವರ `ರಾಮಾಯಣ ದರ್ಶನಂ’ ಕಾವ್ಯವನ್ನು ವಿನೋಬಾ ಭಾವೆ ಅವರೂ ಓದಿದ್ದರು. ಭಾವೆ ಅವರನ್ನು ಭೇಟಿ ಮಾಡಿ ಹೊರಡುವಾಗ ಕುವೆಂಪು ಅವರಿಗೆ ವಿನೋಬಾ ಅವರು, `ನೀವು ನಿಮ್ಮ ಮನೆಗೆ ನನ್ನನ್ನು ಕರೆದೇ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಕುವೆಂಪು ಉತ್ತರ `ಧನ್ಯೋಸ್ಮಿ’ ಎಂದಷ್ಟೆ. ನಂತರ ವಿನೋಬಾ ಕುವೆಂಪು ಅವರ `ಉದಯ ರವಿ’ಗೆ ಬಂದರು. ಕುವೆಂಪು `ರಾಮಾಯಣ ದರ್ಶನಂ’ ಬರೆದ ಜಾಗವನ್ನು ಕೇಳಿ ತಿಳಿದುಕೊಂಡು ಅಲ್ಲಿಯೇ ಕೊಂಚ ಕಾಲ ಧ್ಯಾನಸ್ಥರಾಗಿ ಕುಳಿತುಕೊಂಡರು. ಕೆಲವರಿಂದ ರಾಮಾಯಣ ದರ್ಶನಂ’ನ ಕೆಲವು ಭಾಗಗಳನ್ನು ಮತ್ತೆ ಓದಿಸಿಕೊಂಡರು. ನಂತರ ಪುರಭವನದಲ್ಲಿ ನಡೆದ ಸಮಾರಂಭದಲ್ಲಿಯೂ ಕುವೆಂಪು ಅವರನ್ನು  ‘ಸಂತ’ ಎಂದು ಕರೆದು ಹೊಗಳಿದರು.

                  ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು. ಆಗ ಒಬ್ಬ ಸಚಿವರು ಕುವೆಂಪು ಅವರಿಗೆ ಫೋನ್ ಮಾಡಿ ತಮ್ಮ ಕಡೆಯವರನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರಿದರು. ಕುವೆಂಪು ನಿರಾಕರಿಸಿದರು. ಅದಕ್ಕೆ ಸಚಿವರು `ನನ್ನ ಮಾತನ್ನೇ ಕೇಳುವುದಿಲ್ಲವೇ ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದರು. ಆಗ ಕುವೆಂಪು `ಏನ್ ನೋಡಿಕೊಳ್ಳುತ್ತೀಯಾ, ರ‌್ಯಾಸ್ಕಲ್’ ಎಂದು ಫೋನ್ ಇಟ್ಟುಬಿಟ್ಟರು. ಈ ಘಟನೆಗೂ ತಾವೇ ಸಾಕ್ಷಿ ಎಂದು ದೇಜಗೌ ಹೇಳಿದ್ದನ್ನು ಉಲ್ಲೇಖಿಸಬಹುದು. ರಾಜಕೀಯ ಮತ್ತು ರಾಜಕಾರಣದ ಬಗ್ಗೆ ಕುವೆಂಪು ಅವರಿಗೆ ಸಿಟ್ಟಿತ್ತು. ಅವರು ತಮ್ಮ ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಭಾಷಣದಲ್ಲಿ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ್ದ ಲಕ್ಷಾಂತರ ಸ್ನಾತಕರೇ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ, ಅಧಿಕಾರ, ಶಿಕ್ಷಣ ರಂಗದಲ್ಲಿ ನಿರ್ಲಜ್ಜರಾಗಿ ಪಾಪಮಯ ಭ್ರಷ್ಟಾಚಾರದಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

                     ಸರ್ವಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು. ಆ ಗುರು, ಈ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮೃತಿ ಮೊದಲಾದವು ಏನೇ ಹೇಳಲಿ ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಈಶ್ವರನೂ ನಮ್ಮಲ್ಲಿಯೂ ಇದ್ದಾನೆ. ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುದ್ಧಿಯಲ್ಲಿಯೂ ಪ್ರಕಾಶಿಸುತ್ತವೆ. ಆ ಪ್ರಕಾಶವೇ ಮತಿ ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತಾ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ. ಎಂಬುದನ್ನು ಬಹು ನಿಷ್ಠುರವಾಗಿ ಹೇಳಿದ್ದನ್ನು ಶ್ರೀ ಕುವೆಂಪುರವರ “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ” ಬರಹದಲ್ಲಿ ಕಾಣಬಹುದು.


Leave a Reply

Back To Top