ರಸ ಋಷಿಯ ನೆನಪಲ್ಲಿ,ಡಾ.ಶಶಿಕಾಂತ ಪಟ್ಟಣ ರಾಮ ದುರ್ಗ -ಕ್ರಾಂತಿ ಕವಿ ಕುವೆಂಪು

 ಕರ್ನಾಟಕದ ಸರ್ವ ಶ್ರೇಷ್ಠ ಕವಿ ದಾರ್ಶನಿಕ ನಾಟಕಕಾರ ಕಾದಂಬರಿಕಾರ ಮಾನವತಾವಾದಿ,ಕನ್ನಡದ ಪ್ರಗತಿಪರ ಚಿಂತಕ ವಿಶ್ವ ಪತಾಕೆ ಹೆಜ್ಜೆ ಹಾಕಲು ಕರೆ ಕೊಟ್ಟ ಧೀಮಂತ ಕವಿ ಕನ್ನಡದ ಕುವೆಂಪು. .

1904ರ ಡಿಸೆಂಬರ್ ೨೯  ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು.

ಬಾಲ್ಯ
  ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು. ತಂದೆ ವೆಂಕಟಪ್ಪ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.
ಶಿಕ್ಷಣ
ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು.[೩] ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ವೃತ್ತಿಜೀವನ
ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.

ವೈವಾಹಿಕ ಜೀವನ
ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.

ನಿಧನ
ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ

ಕಾದಂಬರಿಗಳು
ಕಾನೂರು ಹೆಗ್ಗಡತಿ (ಚಲನ ಚಿತ್ರವಾಗಿದೆ)
ಮಲೆಗಳಲ್ಲಿ ಮದುಮಗಳು (ಧಾರಾವಾಹಿಯಾಗಿದೆ)

ನಾಟಕಗಳು

ಬೆರಳ್ಗೆ ಕೊರಳ್
ಶೂದ್ರ ತಪಸ್ವಿ
ಸ್ಮಶಾನ ಕುರುಕ್ಷೇತ್ರ
ರಕ್ತಾಕ್ಷಿ
ಬಿರುಗಾಳಿ
ಯಮನ ಸೋಲು
ನನ್ನ ಗೋಪಾಲ (ಮಕ್ಕಳ ನಾಟಕ)
ವಾಲ್ಮೀಕಿಯ ಭಾಗ್ಯ
ಮಹಾರಾತ್ರಿ
ಜಲಗಾರ
ಚಂದ್ರಹಾಸ
ಬಲಿದಾನ
ಮೋಡಣ್ಣನ ತಮ್ಮ (ಮಕ್ಕಳ ನಾಟಕ)

ಕಾವ್ಯಗಳು
ಶ್ರೀ ರಾಮಾಯಣ ದರ್ಶನ೦
ಕೊಳಲು
ಅಗ್ನಿಹಂಸ
ಅನಿಕೇತನ
ಅನುತ್ತರಾ
ಇಕ್ಶುಗಂಗೋತ್ರಿ
ಕದರಡಕೆ
ಕಥನ ಕವನಗಳು
ಕಲಾಸುಂದರಿ
ಕಿಂಕಿಣಿ
ಕೃತ್ತಿಕೆ
ಜೇನಾಗುವ
ನವಿಲು
ಪಕ್ಷಿಕಾಶಿ
ಚಿತ್ರಾಂಗದಾ
ಪ್ರೇತಕ್ಯು
ಪ್ರೇಮಕಾಶ್ಮೀರ
ಮಂತ್ರಾಕ್ಷತೆ
ಷೋಡಶಿ
ಹಾಳೂರು
ಕೋಗಿಲೆ
ಪಾಂಚಜನ್ಯ
ಕುಟೀಚಕ

ಕಥಾಸಂಕಲನ
ನನ್ನ ದೇವರು ಮತ್ತು ಇತರ ಕಥೆಗಳು

ವಿಮರ್ಶೆ : ದ್ರೌಪದಿಯ ಶ್ರೀಮುಡಿ

ಜೀವನ ಚರಿತ್ರೆ : ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ

ಕುವೆಂಪು ಮತ್ತು ವಿ ಕೃ ಗೋಕಾಕರ ಸಾಹಿತ್ಯ ಪೈಪೋಟಿಗೆ ಕುವೆಂಪುರವರ ಒಂದು ಕವನ ಇಲ್ಲಿ ದಾಖಲಿಸಲು ಇಚ್ಛಿಸುತ್ತೇನೆ.  ಡಾ ವಿ ಕೃ ಗೋಕಾಕರೂ ಕೂಡ ನಾಡಿನ ಶ್ರೇಷ್ಠ ಸಾಹಿತಿ ವಿದ್ವತ್ತಿನ ಖನಿಜ . ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.
ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನ ಪ್ರಿನ್ಸಿಪಾಲರ ಹುದ್ದೆ ಕಾದಿತ್ತು. ಆಕ್ಸಫರ್ಡ  ವಿಶ್ವ ವಿದ್ಯಾಲಯದಿಂದ ಅವರು ಸಮುದ್ರಯಾನ ಬಯಸಿದರು ಕನಿಷ್ಠ ಮೂವತ್ತು ದಿನಗಳ ಪ್ರವಾಸ ಸಮುದ್ರಗೀತಗಳು ಎಂಬ ಕವನ ಸಂಕಲನ ಸಿದ್ಧಗೊಂಡಿದ್ದು ಇದೆ ಸಮಯದಲ್ಲಿ .
        ಇವರನ್ನು ಹಾಡಿ ಹೊಗಳಿದ ಪತ್ರಿಕೆಗಳು ಬಾನುಲಿ ಮತ್ತು ಧಾರವಾಡದ ಮೈಸೂರಿನ ಸಾಹಿತಿ ವರ್ಗ . ಕವಿಗೆ ಒಬ್ಬ ವಿಮರ್ಶಕ ಅಗತ್ಯವೂ ಇದೆ.  ಕುವೆಂಪುರವರೂ ವಿ ಕೃ ಗೋಕಾಕರ ವಿದ್ವತ್ತಿನ ಬಗ್ಗೆ ಅಪಾರ ಗೌರವವಿದ್ದವರು. ಆದರೆ ತಾವು ಕಾವ್ಯ ಮಾರ್ಗದಲ್ಲಿ ನಡೆದು ಬಂದ   ದಾರಿಯನ್ನು ತನ್ನ ಸ್ನೇಹಿತ ಕವಿ ವಿಕೃ ಗೋಕಾಕರೂ ಅನುಸರಿಸಲಿ ಎಂದು ಕವಿಗೆ ಆಹ್ವಾನ  ನೀಡುತ್ತಾರೆ.

   ನೀನೇರಬಲ್ಲೆಯಾ ನಾನೇರುವ ಎತ್ತರಕೆ
ನೀನು ಹಾರ ಬಲ್ಲೆಯಾ ನಾನು ಹಾರುವ ಅಗಲಕ್ಕೆ
ನೀನು ಮುಳುಗ ಬಲ್ಲೆಯಾ
ನಾನು ಮುಳುಗುವ ಆಳಕ್ಕೆ ?
ಇಲ್ಲ? ನಡೆ ದೂರ ಸರಿ
 ಹೌದು ?  ಬಾ ಹತ್ತಿರಕೆ

ಎಷ್ಟೊಂದು ಕಳಕಳಿ ಮತ್ತು ಸ್ವ ಸಾಮರ್ಥ್ಯ ಶಕ್ತಿ  ಕುವೆಂಪುರವರಿಗೆ ಇತ್ತು ಮತ್ತು ಅದನ್ನು ಅಭಿವ್ಯಕ್ತಗೊಳಿಸುವ ರೀತಿ ಎಷ್ಟೊಂದು ನೇರ ದಿಟ್ಟ  ಎಂದು ಗೊತ್ತಾಗುತ್ತದೆ.

 ಆಗಬೇಡ ನೀನು ಪುಸ್ತಕದ ಪಂಡಿತ
ಕೊಡದಿರು ಶರಧಿಗೆ ಷಟ್ಪದಿಯ   ದೀಕ್ಷೆ
ಶರಧಿ ಎಂದರೆ ಸಮುದ್ರ. ಇನ್ನೊಂದು ಅರ್ಥದಲ್ಲಿ ಶರ ಕುಸುಮ ಭೋಗ ಭಾಮಿನಿ ವಾರ್ಧಿಕಿ ಎಂಬ ಕಾವ್ಯ ಶೈಲಿಯ ಪ್ರಕಾರಗಳು  ಸಮುದ್ರ ಗೀತಗಳು ಅತ್ಯಂತ ಪ್ರಸಿದ್ಧವಾದ ಕಾಲ ಘಟ್ಟದಲ್ಲಿ ಕುವೆಂಪುರವರು ಕವಿ ತನ್ನ ಸಾಧನೆಯಲ್ಲಿ ನಿಲ್ಲದೆ ಮುಂದೆ ಹೋಗಲಿ ಎಂಬ ಆಶಯ ಕುವೆಂಪು ಹೊಂದಿದ್ದರು. ಸಮುದ್ರಕ್ಕೆ ಕೊಡಬೇಡ ಷ್ಟಪದಿಗಳ ದೀಕ್ಷೆ ಎನ್ನುವುದು ಕವಿಯ ಆಶಯ.

ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು :
 ಮಗಳು ಕಂಡ ಕುವೆಂಪು – ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ,
 ಅಣ್ಣನ ನೆನಪು – ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ,

ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು

1956-ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ.
1957-ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷ ಪದವಿ.
1964-ರಾಜ್ಯ ಸರ್ಕಾರದಿಂದ ರಾಷ್ಟ್ರ ಕವಿ ಬಿರುದಿನ ಗೌರವ.
1968-ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ.
1968-ರಾಷ್ಟ್ರಪತಿಗಳಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ.
1988-ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ ಪ್ರದಾನ.
1992-ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ.

1956ರಿಂದ1995 ರವರೆಗೆ – 8 ಬೇರೆ-ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇನ್ನೊಂದು ಅತ್ಯಂತ ಸತ್ಯದ ಸಂಗತಿಯೆಂದರೆ ಡಾ ಕೆ ವಿ ಪುಟ್ಟಪ್ಪನವರ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಶಿಫಾರಸವಾದಾಗ ಅವರು ಸುತಾರಾಂ ಒಪ್ಪುತ್ತಿರಲಿಲ್ಲ . ದೇಜವರೇಗೌಡ ಮತ್ತು ಹಾಮಾನಾಯಕರು ತಮ್ಮ ಗುರು ಕುವೆಂಪು ಅವರಿಗೆ ಮನವರಿಕೆ ಮಾಡಿಕೊಟ್ಟು ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಲು ಮನವನ್ನು ಒಲಿಸಿದರು.

ಕುವೆಂಪು ಮತ್ತು ರಾಜಕೀಯ

ಕವಿ ಕುವೆಂಪು ಅವರು ಆಗಿನ್ನೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆಗ ಮೈಸೂರು ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯುವರಾಜ ಜಯಚಾಮರಾಜ ಒಡೆಯರ್. ಒಮ್ಮೆ ಜಯಚಾಮರಾಜರ ಕನ್ನಡದ ಉತ್ತರ ಪತ್ರಿಕೆಯನ್ನು ಕುವೆಂಪು ಮೌಲ್ಯಮಾಪನ ಮಾಡಿದರು. ನೂರಕ್ಕೆ 17 ಅಂಕವನ್ನು ಕೊಟ್ಟರು. ಇದು ಆಗಿನ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎನ್.ಎಸ್.ಸುಬ್ಬರಾವ್ ಅವರಿಗೆ ಗೊತ್ತಾಯಿತು. ಅಲ್ಲದೆ ಈ ವಿಷಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೂ ತಿಳಿಯಿತು. ಕುಲಪತಿ ಅವರು ಈ ಬಗ್ಗೆ ವಿಚಾರಣೆ ನಡೆಸಲು ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಂಡರು.

ವೆಂಕಣ್ಣಯ್ಯ ಅವರು ಕುವೆಂಪು ಅವರನ್ನು ಕರೆದು, `ಏನಯ್ಯ, ರಾಜಕುಮಾರರಿಗೆ 17 ಅಂಕ ನೀಡಿದ್ದೀಯಲ್ಲ’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಕುವೆಂಪು, `ನಾನು ನೀಡಿದ್ದಲ್ಲ. ಅವರು ತೆಗೆದುಕೊಂಡಿದ್ದು ಅಷ್ಟು’ ಎಂದು ಉತ್ತರಿಸಿದರು. `ಅದನ್ನು 71 ಮಾಡಲು ಸಾಧ್ಯವಿಲ್ಲವೇ?’ ಎಂದು ವೆಂಕಣ್ಣಯ್ಯ ಕೇಳಿದಾಗ, `ಉತ್ತರ ಪತ್ರಿಕೆಯನ್ನು ನೀವೇ ನೋಡಿ. ಎಷ್ಟು ಬೇಕಾದರೂ ಅಂಕ ಕೊಡಿ’ ಎಂದು ಕುವೆಂಪು ಹೇಳಿದರಂತೆ.

ಇದರಿಂದ ಮಹಾರಾಜರೇನೂ ಸಿಟ್ಟಾಗಲಿಲ್ಲ. ಬದಲಿಗೆ ಕುವೆಂಪು ಅವರಿಗೆ ವಾರಕ್ಕೆ ಮೂರು ದಿನ ಅರಮನೆಗೆ ಬಂದು ಯುವ ರಾಜರಿಗೆ ಪಾಠ ಮಾಡಿ. ನಿಮ್ಮನ್ನು ಕರೆದುಕೊಂಡು ಬರಲು ಕಾರು ಕಳುಹಿಸಲಾಗುತ್ತದೆ. ಅಲ್ಲದೆ ನೂರು ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಿದರಂತೆ. ಆದರೆ ಅದಕ್ಕೂ ಕುವೆಂಪು ಒಪ್ಪಲಿಲ್ಲ. ಮಹಾರಾಜರ ಆಹ್ವಾನವನ್ನು ತಿರಸ್ಕರಿಸಿದ್ದೇ ಅಲ್ಲದೆ ಒಂದು ಕವನವನ್ನೂ ಬರೆದರು.

ವಸಂತ ವನದಲ್ಲಿ ಕೂಗುವ ಕೋಗಿಲೆ
ರಾಜರ ಬಿರುದನ್ನು ಬಯಸುವುದಿಲ್ಲ
ಕವಿಗೆ ಅರಸುಗಿರಸುಗಳ ಋಣವಿಲ್ಲ
ಅವನು ಅಗ್ನಿಮುಖಿ ಪ್ರಳಯ ಶಿಖಿ

ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಇನ್ನೂ ಮಾನಸ ಗಂಗೋತ್ರಿಗೆ ಸಂಪೂರ್ಣವಾಗಿ ಸ್ಥಳಾಂತರವಾಗಿರಲಿಲ್ಲ. ಸ್ಥಳಾಂತರಕ್ಕೆ ಸಾಕಷ್ಟು ಮಂದಿಯ ವಿರೋಧ ಕೂಡ ಇತ್ತು. ಮಾನಸ ಗಂಗೋತ್ರಿಗೆ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸುವ ಸಾಹಸದಲ್ಲಿ ಕುವೆಂಪು ನಿರತರಾಗಿದ್ದರು.

ಮಾಜಿ ಕೇಂದ್ರ ಸಚಿವರೂ ಆಗಿದ್ದ ಸಿ.ಡಿ.ದೇಶಮುಖ್ ಅವರು ಆಗ ಯುಜಿಸಿ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ತಮ್ಮ ಪತ್ನಿ ಜೊತೆಗೆ ಕೃಷ್ಣರಾಜಸಾಗರಕ್ಕೆ ಬಂದು ಉಳಿದುಕೊಂಡಿದ್ದರು. ಹೀಗೆ ಬಂದ ದೇಶಮುಖ್ ಅವರಿಗೆ ಜ್ವರ ಬಂದು ನಾಲ್ಕು ದಿನ ಇಲ್ಲಿಯೇ ಉಳಿದುಕೊಳ್ಳುವಂತೆ ಆಯಿತು. ಆಗ ಪ್ರತಿ ದಿನ ಕುವೆಂಪು ಕೆಆರ್‌ಎಸ್‌ಗೆ ಹೋಗಿ ಅವರನ್ನು ನೋಡಿಕೊಂಡು ಬರುತ್ತಿದ್ದರಂತೆ.  ದೇಶಮುಖ್ ಅವರ ಪತ್ನಿ ಒಳ್ಳೆ ಕವಯತ್ರಿ. ಕುವೆಂಪು ಅವರು ಅಲ್ಲಿಗೆ ಹೋದಾಗ ಇವರೊಂದು ಅವರೊಂದು ಕವನ ವಾಚಿಸುತ್ತಿದ್ದರಂತೆ.

ಆಗಿನ್ನು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಯುಜಿಸಿ ವೇತನ ಸಿಗುತ್ತಿರಲಿಲ್ಲ. ಕುವೆಂಪು ಈ ಬಗ್ಗೆ ದೇಶಮುಖ್ ಅವರಲ್ಲಿ ಪ್ರಸ್ತಾಪಿಸಿದಾಗ, `ನಿಮ್ಮ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಕಳುಹಿಸಿದರೆ ತಕ್ಷಣವೇ ಅದಕ್ಕೆ ಒಪ್ಪಿಗೆ ಕೊಡುತ್ತೇನೆ’ ಎಂಬ ಭರವಸೆಯನ್ನು ನೀಡಿದರು.

       ಖುಷಿಯಾದ ಕುವೆಂಪು ಈ ಬಗ್ಗೆ ಚರ್ಚೆ ನಡೆಸಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ `ತಮ್ಮನ್ನು ಕಾಣಲು ಬರಬೇಕು. ನಿಮ್ಮ ಸಮಯ ತಿಳಿಸಿ’ ಎಂದು ಕೇಳಿಕೊಂಡರು. ಅದಕ್ಕೆ ನಿಜಲಿಂಗಪ್ಪ `ನೀವು ನನ್ನನ್ನು ನೋಡಲು ಇಲ್ಲಿಗೆ ಬರುವುದಾ? ನನಗೆ ಅವಮಾನ ಮಾಡಬೇಡಿ. ನಮ್ಮ ಶಿಕ್ಷಣ ಸಚಿವರನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಚರ್ಚೆ ಮಾಡಿ. ನಾನು ಎಲ್ಲ ಅನುಕೂಲ ಮಾಡಿಕೊಡುತ್ತೇನೆ’ ಎಂದು ಉತ್ತರಿಸಿದರು.

ಅದರಂತೆ ಆಗಿನ ಶಿಕ್ಷಣ ಸಚಿವ ವಿ.ವೆಂಕಟಪ್ಪ ಕುವೆಂಪು ಅವರ ಬಳಿಗೆ ಬಂದು ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಆಲಿಸಿದರು. ಯುಜಿಸಿಗೆ ಸೂಕ್ತ ಪ್ರಸ್ತಾವನೆಯನ್ನೂ ಸಲ್ಲಿಸಿದರು. ಅಲ್ಲದೆ ಮಾನಸ ಗಂಗೋತ್ರಿಯಲ್ಲಿ ಸಂಚರಿಸಿ ಅಲ್ಲಿ ಮೂರು ಕಟ್ಟಡಗಳನ್ನು ನಿರ್ಮಿಸಲು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು ನೀಡಲು ಒಪ್ಪಿಕೊಂಡರು.

ಕುವೆಂಪು ಅವರು ಕರ್ನಾಟಕ ಏಕೀಕರಣದ ಪರವಾಗಿದ್ದರು. ಇದರಿಂದ ಮೈಸೂರು ಭಾಗದ ರಾಜಕಾರಣಿಗಳು ಸಿಟ್ಟಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕುವೆಂಪು ಅವರಿಗೆ ಒಂದು ನೋಟಿಸ್ ಜಾರಿ ಮಾಡಿತು. ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಕೇಳಿತು. ಅದಕ್ಕೆ ಕುವೆಂಪು ಪದ್ಯದ ರೂಪದಲ್ಲಿಯೇ ಉತ್ತರ ಬರೆದರು. ಆ ಪದ್ಯವೇ ಕುವೆಂಪು ಅವರ ಪ್ರಸಿದ್ಧ `ಅಖಂಡ ಕರ್ನಾಟಕ’ ಪದ್ಯ.
ರಾಜ್ಯ ಸರ್ಕಾರದ ನೋಟಿಸ್‌ಗೆ ಕುವೆಂಪು ಉತ್ತರ ಹೀಗಿದೆ:

ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ
ಹರಸುತಿಹನು ದೇವ ಗಾಂಧಿ
ಮಂತ್ರಿಸಿಹುದು ಋಷಿಯ ನಾಂದಿ

ಅಖಂಡ ಕರ್ನಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ

ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ

ಕುವೆಂಪು ಅವರ ಪದ್ಯರೂಪದ ಉತ್ತರ ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಅವರನ್ನು ಮೆಳ್ಳಗಣ್ಣು ಎಂದು ಟೀಕಿಸಿದ್ದು ಕೂಡ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗಿತ್ತು. ಮೈಸೂರಿನಲ್ಲಿ ಕೆಲವರು ಈ ಪದ್ಯವನ್ನು ಸಾವಿರಾರು ಪ್ರತಿ ಮಾಡಿ ಹಂಚಿಬಿಟ್ಟರು. ವಿಷಯ ಸಚಿವ ಸಂಪುಟದ ಮುಂದೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದವರು ಕೆ.ಸಿ.ರೆಡ್ಡಿ. ಸಂಪುಟ ಸಭೆಯಲ್ಲಿ ಕೆಲವು ಸಚಿವರು ಕುವೆಂಪು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅವರ ಬಡ್ತಿ ರದ್ದು ಮಾಡಬೇಕು. ಇನ್ನೊಂದು ನೋಟಿಸ್ ನೀಡಬೇಕು ಎಂದೆಲ್ಲಾ ಒತ್ತಾಯಿಸಿದರು.

ಆಗ ಕೆ.ಸಿ.ರೆಡ್ಡಿ ಅವರು `ಒಂದು ನೋಟಿಸ್‌ಗೆ ಈ ಪದ್ಯ ಬರೆದಿದ್ದಾರೆ. ಇನ್ನೊಂದು ನೋಟಿಸ್ ನೀಡಿದರೆ ಮತ್ತೆ ಮೂರು ಪದ್ಯ ಬರೆಯಬಹುದು. ಬೆಂಕಿಯ ಜೊತೆ ಸರಸ ಒಳ್ಳೆಯದಲ್ಲ’ ಎಂದು ಹೇಳಿ ಈ ಬಗ್ಗೆ ತಾವು ವಿಚಾರಣೆ ನಡೆಸುವುದಾಗಿ ಹೇಳಿದರು.

ಅದರಂತೆ ಕೆ.ಸಿ.ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸರಾಯರ ಬಳಿ ಈ ಬಗ್ಗೆ ಚರ್ಚೆ ನಡೆಸಿದರು. ಆಗ ನಿಟ್ಟೂರು ಶ್ರೀನಿವಾಸರಾಯರು `ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸು ಪಡೆಯುವುದೇ ಸೂಕ್ತ’ ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದರು. ರೆಡ್ಡಿ ಅವರು ಕುವೆಂಪು ಅವರಿಗೆ ನೀಡಿದ್ದ ನೋಟಿಸ್ ವಾಪಸು ಪಡೆದರು.

1929ರ ವೇಳೆಗೆ ಕುವೆಂಪು ಇನ್ನೂ ಯುವಕರು. ಶ್ರೀರಂಗಪಟ್ಟಣದಲ್ಲಿ ಒಂದು ಭಾಷಣ ಮಾಡಿದರು. `ನಿರಂಕುಶಮತಿಗಳಾಗಿ’ ಎಂದು ಜನರಿಗೆ ಕರೆ ನೀಡಿದರು. ಸರ್ಕಾರದ ವಿರುದ್ಧ, ಮೂಢ ನಂಬಿಕೆಗಳ ವಿರುದ್ಧ ಅವರು ಮಾತನಾಡಿದ್ದು ಕೂಡ ಅಧಿಕಾರಸ್ಥರನ್ನು ಕೆರಳಿಸಿತು. ಈ ಬಗ್ಗೆ ವರದಿ ನೀಡುವಂತೆ ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಳ್ಳಲಾಯಿತು. ವೆಂಕಣ್ಣಯ್ಯ ಅವರು ಕುವೆಂಪು ಅವರ ಭಾಷಣವನ್ನು ಪರಿಶೀಲಿಸಿ `ನನ್ನ ಮಗನಿಗೆ ಬುದ್ಧಿ ಹೇಳಿ ಎಂದು ಯಾರಾದರೂ ಹೇಳಿದರೆ ನಾನು ಇದಕ್ಕಿಂತ ಚೆನ್ನಾಗಿ ಹೇಳಲಾಗದು’ ಎಂದು ಸರ್ಕಾರಕ್ಕೆ ವರದಿ ನೀಡಿದರು. ಅದು ಅಲ್ಲಿಗೇ ನಿಂತಿತು

ಕುವೆಂಪು ಅವರಿಗೆ ವಿನೋಬಾ ಭಾವೆ ಅವರನ್ನು ಕಂಡರೆ ತುಂಬಾ ಗೌರವ. ಯಾವಾಗಲೂ ಅವರನ್ನು ಹೊಗಳುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಕಾರ್ಯಕ್ರಮ. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಅಧ್ಯಕ್ಷತೆ. ಕುವೆಂಪು ಅತಿಥಿಗಳು. ಕುವೆಂಪು ತಮ್ಮ ಭಾಷಣದಲ್ಲಿ ವಿನೋಬಾ ಅವರನ್ನು ಸಾಕಷ್ಟು ಹೊಗಳಿದರು. ಇದು ಕೆಂಗಲ್ ಅವರಿಗೆ ಸರಿಕಾಣಲಿಲ್ಲ. ಅವರು ತಮ್ಮ ಭಾಷಣದಲ್ಲಿ ಕುವೆಂಪು ಅವರು ವಿನೋಬಾ ಅವರನ್ನು ಹೊಗಳಿದ್ದು ಹೆಚ್ಚಾಯಿತು ಎಂದರು. ಇದರಿಂದ ಕುವೆಂಪು ಸಿಟ್ಟಾದರಲ್ಲದೆ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಕೆಂಗಲ್ ಕಸಿವಿಸಿಗೊಂಡರು. ಈ ಸುದ್ದಿ ಯಾವ ಪತ್ರಿಕೆಯಲ್ಲೂ ಬರದಂತೆ ನೋಡಿಕೊಂಡರು.

ಆದರೆ ಈ ಘಟನೆ ಕೆಂಗಲ್ ಮತ್ತು ಕುವೆಂಪು ಅವರ ಸಂಬಂಧವನ್ನು ಹಾಳು ಮಾಡಲಿಲ್ಲ. ಮುಂದೆ ಕುವೆಂಪು ಅವರನ್ನು ಮಹಾರಾಜ ಕಾಲೇಜು ಪ್ರಾಂಶುಪಾಲರನ್ನಾಗಿ ಮಾಡಿದ್ದು ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಿದ್ದು ಕೂಡ ಕೆಂಗಲ್ ಹನುಮಂತಯ್ಯ ಅವರೆ.

ಕೆಂಗಲ್ ಹನುಮಂತಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿತ್ತು. ಅವರನ್ನು ಕೆಳಕ್ಕೆ ಇಳಿಸಲು ಕಸರತ್ತುಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಒಮ್ಮೆ ಕುವೆಂಪು ಅವರು ಕೆಂಗಲ್ ಹುನುಮಂತಯ್ಯ ಅವರನ್ನು ನೋಡಲು ಅವರ ಮನೆಗೆ ಹೋದರು. ಆಗ ಹನುಮಂತಯ್ಯ ಪ್ಲೇಟೋನ `ರಿಪಬ್ಲಿಕ್’ ಪುಸ್ತಕವನ್ನು ಓದುತ್ತಿದ್ದರು. ಅದನ್ನು ಕಂಡು ಕುವೆಂಪು ಅವರಿಗೆ ಅಚ್ಚರಿಯಾಯಿತು.

`ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ನಿಮ್ಮ ವಿರೋಧಿಗಳು ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಆದರೂ ನೀವು ಶಾಂತವಾಗಿ ರಿಪಬ್ಲಿಕ್ ಓದುತ್ತಿದ್ದೀರಲ್ಲ?’ ಎಂದು ಕೆಂಗಲ್‌ರನ್ನು ಕುವೆಂಪು ಕೇಳಿದರು.

`ಪುಟ್ಟಪ್ಪ, ನಾನು ನನ್ನ ಬದುಕಿನಲ್ಲಿ ಹಲವಾರು ಬಾರಿ ಆತ್ಮಹತ್ಯೆಗೆ ಮನಸ್ಸು ಮಾಡಿದ್ದೆ. ಆಗೆಲ್ಲಾ ನನ್ನನ್ನು ರಕ್ಷಿಸಿದ್ದು ರಾಮಾಯಣ, ಮಹಾಭಾರತ, ಪ್ಲೇಟೊ, ಅರಿಸ್ಟಾಟಲ್ ಮುಂತಾದವರು. ಈಗ ಅದೆಲ್ಲಾ ಯಾಕೆ. ನೀವು ಅಕ್ಷರದಲ್ಲಿ ಮಹಾಕಾವ್ಯ ರಚಿಸಿದ್ದೀರಿ. ನಾನು ಕಲ್ಲಿನಲ್ಲಿ ಮಹಾಕಾವ್ಯ ರಚಿಸಿದ್ದೇನೆ. ನೋಡೋಣ ಬನ್ನಿ’ ಎಂದು ಕುವೆಂಪು ಅವರನ್ನು ವಿಧಾನಸೌಧ ತೋರಿಸಲು ಕರೆದುಕೊಂಡು ಹೋದರು. ಈ ಘಟನೆ ನಡೆದಾಗ ದೇಜಗೌ ಅವರು ಕುವೆಂಪು ಅವರೊಂದಿಗೆ ಇದ್ದರು.

ಒಮ್ಮೆ ವಿನೋಬಾ ಭಾವೆ ಅವರು ಮೈಸೂರಿಗೆ ಬಂದಿದ್ದರು. ಅವರನ್ನು ಕಾಣಲು ಕುವೆಂಪು ಹೋದರು. ಕುವೆಂಪು ಅವರ `ರಾಮಾಯಣ ದರ್ಶನಂ’ ಕಾವ್ಯವನ್ನು ವಿನೋಬಾ ಭಾವೆ ಅವರೂ ಓದಿದ್ದರು. ಭಾವೆ ಅವರನ್ನು ಭೇಟಿ ಮಾಡಿ ಹೊರಡುವಾಗ ಕುವೆಂಪು ಅವರಿಗೆ ವಿನೋಬಾ ಅವರು, `ನೀವು ನಿಮ್ಮ ಮನೆಗೆ ನನ್ನನ್ನು ಕರೆದೇ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಕುವೆಂಪು ಉತ್ತರ `ಧನ್ಯೋಸ್ಮಿ’ ಎಂದಷ್ಟೆ.

ನಂತರ ವಿನೋಬಾ ಕುವೆಂಪು ಅವರ `ಉದಯ ರವಿ’ಗೆ ಬಂದರು. ಕುವೆಂಪು `ರಾಮಾಯಣ ದರ್ಶನಂ’ ಬರೆದ ಜಾಗವನ್ನು ಕೇಳಿ ತಿಳಿದುಕೊಂಡು ಅಲ್ಲಿಯೇ ಕೊಂಚ ಕಾಲ ಧ್ಯಾನಸ್ಥರಾಗಿ ಕುಳಿತುಕೊಂಡರು. ಕೆಲವರಿಂದ `ರಾಮಾಯಣ ದರ್ಶನಂ’ನ ಕೆಲವು ಭಾಗಗಳನ್ನು ಮತ್ತೆ ಓದಿಸಿಕೊಂಡರು. ನಂತರ ಪುರಭವನದಲ್ಲಿ ನಡೆದ ಸಮಾರಂಭದಲ್ಲಿಯೂ ಕುವೆಂಪು ಅವರನ್ನು `ಸಂತ’ ಎಂದು ಕರೆದು ಹೊಗಳಿದರು.

     ಸಮಾಜವಾದಿ ಚಿಂತಕ  ಡಾ ರಾಮಮನೋಹರ ಲೋಹಿಯಾ ಅವರು ಕುವೆಂಪು ಅವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿ ಅನೇಕ ಪ್ರಶ್ನೆಗಳ ಮೂಲಕ ಸಂವಾದದಿಂದ ಸಮಾಜವಾದಿ ಚಿಂತನೆ ಮಾಡಿದರು. ಜಡಗೊಂಡ ಸಮಾಜಕ್ಕೆ ಚಲನಶೀಲತೆಯ ಬಗ್ಗೆ ಇವರಿಬ್ಬರು ಚರ್ಚಿಸಿದರು. ಕುವೆಂಪು ತಮ್ಮ ಚರ್ಚೆಯುದ್ದಕ್ಕೂ ಬಸವಣ್ಣ ಮತ್ತು ಅಕ್ಕ ಮಹಾದೇವಿಯವರ ಬಗ್ಗೆ ಪ್ರಸ್ತಾಪವನ್ನು ಮಾಡಿದರು.

ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು. ಆಗ ಒಬ್ಬ ಸಚಿವರು ಕುವೆಂಪು ಅವರಿಗೆ ಫೋನ್ ಮಾಡಿ ತಮ್ಮ ಕಡೆಯವರನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರಿದರು. ಕುವೆಂಪು ನಿರಾಕರಿಸಿದರು. ಅದಕ್ಕೆ ಸಚಿವರು `ನನ್ನ ಮಾತನ್ನೇ ಕೇಳುವುದಿಲ್ಲವೇ ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದರು. ಆಗ ಕುವೆಂಪು `ಏನ್ ನೋಡಿಕೊಳ್ಳುತ್ತೀಯಾ, ರಾಸ್ಕಲ್ ‘ ಎಂದು ಫೋನ್ ಇಟ್ಟುಬಿಟ್ಟರು. ಈ ಘಟನೆಗೂ ತಾವೇ ಸಾಕ್ಷಿ ಎಂದು ದೇಜಗೌ ಹೇಳುತ್ತಾರೆ.

ರಾಜಕೀಯ ಮತ್ತು ರಾಜಕಾರಣದ ಬಗ್ಗೆ ಕುವೆಂಪು ಅವರಿಗೆ ಸಿಟ್ಟಿತ್ತು. ಅವರು ತಮ್ಮ `ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಭಾಷಣದಲ್ಲಿ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ್ದ ಲಕ್ಷಾಂತರ ಸ್ನಾತಕರೇ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ, ಅಧಿಕಾರ, ಶಿಕ್ಷಣ ರಂಗದಲ್ಲಿ ನಿರ್ಲಜ್ಜರಾಗಿ ಪಾಪಮಯ ಭ್ರಷ್ಟಾಚಾರದಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

 ಸಮಾಜವಾದಿ ಚಿಂತನೆಯಿಂದ ಪ್ರಭಾವಿತರಾದ ಕುವೆಂಪು ಬುದ್ಧ ಬಸವಣ್ಣ ಇವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದರು. ಅಂದೊಮ್ಮೆ 1967 ರಲ್ಲಿ ಸಮಾಜವಾದಿ ಪಕ್ಷದ ಸಂಸದರಾದ ಶ್ರೀ ಜಯದೇವಪ್ಪ ಪಟೇಲರು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದರು,ಅವತ್ತಿನ ದಿನ ಕುವೆಂಪುರವರಿಗೆ ಅತ್ಯಂತ ಹರ್ಷದ ದಿನವೆಂದೇ ಸ್ಮರಿಸಿಕೊಳ್ಳುತ್ತಾರೆ. ಪೂರ್ಣ ಚಂದ್ರ ತೇಜಸ್ವಿ ತಮ್ಮ ತಂದೆಯನ್ನು ಅಣ್ಣ ಎಂದೇ ಸಂಭೋದಿಸುತ್ತಿದ್ದರು . ಕನ್ನಡದಲ್ಲಿ ಭಾಷಣ ಮಾಡಿದ ಕನ್ನಡದಲ್ಲಿನ ಅಭಿವ್ಯಕ್ತಿ ಕುವೆಂಪುರವರಿಗೆ ಹಬ್ಬದ ಸಡಗರ.

ನಮ್ಮಲ್ಲಿ `ಡೆಮಾಕ್ರಸಿ’ ಎನ್ನುವುದು ಬರಿಯ `ಮಾಕರಿ’ಯಾಗಿದೆ. ಕೋಟ್ಯಧೀಶರಲ್ಲದವರು ಚುನಾವಣೆಯಲ್ಲಿ ಗೆಲ್ಲುವುದು ಹಾಗಿರಲಿ, ನಿಲ್ಲುವುದು ಕೂಡ ಅಸಾಧ್ಯವಾಗಿದೆ. ಜಾತಿ, ಮತ, ಹೆಂಡ, ದುಡ್ಡು ಇವೇ ಓಟರುಗಳಾಗಿವೆ. ಓಟು ಕೊಡುವ ಪ್ರಜೆಗಳು ಬರಿಯ ನಿಮಿತ್ತ ಮಾತ್ರ. ಮೂಕ ವಾಹನಗಳಷ್ಟೆ. ನಾಲ್ಕಾರು ಜನ ಯಾತಕ್ಕೂ ಹೇಸದ ಖದೀಮರು ಸೇರಿ ಯಾವ ಉಪಾಯದಿಂದಾದರೂ ಕಾಳಸಂತೆಯ ಕಪ್ಪು ಹಣವೋ, ಕಳ್ಳ ಸಾಗಾಣಿಕೆಯ ಹಳದಿ ಹಣವೋ ಅಂತೂ ಹೆಚ್ಚು ಹಣ ಒಟ್ಟು ಮಾಡಿದರಾಯ್ತು ಚುನಾವಣೆ ಗೆಲ್ಲಬಹುದು.

ಒಮ್ಮೆ ಗೆದ್ದು ಅಧಿಕಾರ ಹಿಡಿದರಾಯ್ತು. ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನು ಅಧಿಕಾರದ ಭಯದಿಂದಲೋ ದುಡ್ಡಿನ ಬಲದಿಂದಲೋ ವಶಪಡಿಸಿಕೊಳ್ಳಬಹುದು. ಒಮ್ಮೆ ಜನಶಕ್ತಿ ಪ್ರತಿಭಟನೆಗೆ ನಿಂತರೂ ಪೊಲೀಸ್, ಸೇನೆ ಬಳಸಿ ವಿಫಲಗೊಳಿಸಬಹುದು ಎಂದು ಅವರು ಆಗಲೇ ಸಿಟ್ಟು ಕಾರಿದ್ದರು. ಗುಡುಗಿದರು. ಈಗಿನ ರಾಜಕೀಯವನ್ನು ನೋಡಿದ್ದರೆ ಏನು ಹೇಳುತ್ತಿದ್ದರೋ ಏನೋ ಎಂಬುದು ಅರಿವಿಗೆ ಬಾರದ್ದೇನು ಅಲ್ಲ.

ಇಂತಹ ಸೈದ್ದಾಂತಿಕ ಸಾಹಿತ್ಯ ಕ್ಷೇತ್ರದ ಮೇರುಪರ್ವತ ನಮ್ಮ ನಾಡಿನಲ್ಲಿ ಜನಿಸಿದ್ದೇ ನಮ್ಮ ಪಾಲಿನ  ಭಾಗ್ಯ ಎಂದು ಭಾವಿಸೋಣ.

ಯುಗದ ಕವಿ
ಜಗದ ಕವಿ
ಕವಿ ಸಂತ
ರಾಷ್ಟ್ರಕವಿ

ರಸಋಷಿ ಕುವೆಂಪುರವರ ಜೀವನ ದರ್ಶನ ಮತ್ತು ಸಾಹಿತ್ಯ ಕೊಡುಗೆ ಅಪಾರವಾದದ್ದು.

 ಕವಿ ಸಾಹಿತಿ ಸಂಶೋಧಕರು ಕಂಡ ಕುವೆಂಪು

ಬಿ.ಎಂ.ಶ್ರೀ.
ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ.

ದ.ರಾ.ಬೇಂದ್ರೆ

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ – ಮಣಿಯದವರು ಯಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?
ಕನ್ನಡಿಸಲಿ ಶಿವ ಜೀವನ
ಮುನ್ನಡೆಸಲಿ ಯುವ-ಜನ-ಮನ
ಇದೆ ಪ್ರಾರ್ಥನೆ ನಮಗೆ
ತಮವೆಲ್ಲಿದೆ ರವಿಯಿದಿರಿಗೆ?
ಉತ್ತಮ ಕವಿ ನುಡಿ – ಚದುರಗೆ
ಚಾರುತ್ವದ ಕುಂದಣದಲಿ
ಚಾರಿತ್ರ್ಯದ ರತ್ನ
ಚಾತುರ್ಯದ ಮಂತಣದಲಿ
ಸತ್ಸಂಗದ ಯತ್ನ
ಇದೆ ತೃಪ್ತಿಯು ನಿಮಗೆ

.ದ ರಾ ಬೇಂದ್ರೆ ಕುವೆಂಪುರವರನ್ನು ಜಗದ ಕವಿ ಯುಗದ ಕವಿ ಕುವೆಂಪು ಎಂದು ಮನಸಾರೆ ಹಾಡಿ ಹೊಗಳಿದ್ದಾರೆ

ಸ.ಸ.ಮಾಳವಾಡ
ಹೊಸಗನ್ನಡ ಸಾಹಿತ್ಯವನ್ನು ಹಲವಂದದಲಿ ಸಿರಿವಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು. ಅವರು ಸಾಹಿತ್ಯ ಸೃಷ್ಟಿಯಲ್ಲಿ ಲೌಕಿಕ ಬಾಳಿನಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ. ಅವರು ಏಕಾಂತ ಜೀವಿ, ಧ್ಯಾನಶೀಲರು, ಭಾವಸಮಾಧಿಯಲ್ಲಿ ವಿರಮಿಸುವವರು. ಆದರೆ ಕನ್ನಡ ನಾಡು ನುಡಿಗಳ ಹಿತರಕ್ಷಣೆಗಾಗಿ ಸತತವೂ ಹೋರಾಟದಲ್ಲಿ ತೊಡಗಿದವರು. ಜನಸಂಪರ್ಕದಿಂದ ದೂರವುಳಿದರೂ ಜನ ಹಿತಕಾರ್ಯದಿಂದ ವಿಮುಖರಾಗಿಲ್ಲ. ಸನಿಹದಲ್ಲಿ ಅವರನ್ನು ಕಂಡಾಗ ಅವರು ಸ್ನೇಹಪರರು, ಕುಟುಂಬವತ್ಸಲರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಡಿ.ಎಲ್.ನರಸಿಂಹಾಚಾರ್
ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ.

ಹಾ.ಮಾ.ನಾಯಕ
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ.

ಸುಜನಾ
ಶ್ರೀ ಕುವೆಂಪು ದರ್ಶನದ ವೈಶಿಷ್ಟ್ಯ ಪರಂಪರೆ-ಯುಗ ಪ್ರಜ್ಞೆಗಳೆರಡರ ಸಮನ್ವಯದಿಂದ ಬಂದದ್ದು. ಈ ಅತಿಶಯ ಸಿದ್ಧಿ ಸಾಹಿತ್ಯಲೋಕದಲ್ಲಿ ವಿರಳ.

ಜಿ.ಎಸ್.ಶಿವರುದ್ರಪ್ಪ
ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ.

ದೇ.ಜ.ಗೌ
ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಸಚೇತನಗೊಳಿಸುತ್ತಿದೆ, ಪುಷ್ಟಿಗೊಳಿಸುತ್ತಿದೆ. ಸಾವಿರಾರು ವರ್ಷಗಳಿಂದ ಭಾರತೀಯ ಧರ್ಮದ ಸುತ್ತ ಬೆಳೆದುಕೊಂಡು, ಅದರ ಮೂಲ ಸ್ವರೂಪವನ್ನು ಮರೆಸಿರುವ ಮೌಢ್ಯಗಳಿಗೆ ಶುಷ್ಕ ಚಾರಗಳಿಗೆ ಕಂದಾಚಾರದ ಸಂಪ್ರದಾಯಗಳಿಗೆ ಅಗ್ನಿ ಸಂಸ್ಕಾರ ಮಾಡುವಲ್ಲಿ, ಜಾತೀಯತೆಯನ್ನು ಸಾಧ್ಯವಾದಷ್ಟು ತೊಡೆಯುವಲ್ಲಿ, ಪುರೋಹಿತ ಹಾಗೂ ಸಾಮ್ರಾಜ್ಯಶಾಹಿಯನ್ನು ಅಂತ್ಯಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ.

ಕೀರ್ತಿನಾಥ ಕುರ್ತಕೋಟಿ
ಕುವೆಂಪು ಈ ತಲೆಮಾರಿನ ಹಿರಿಯ ಕವಿಗಳಲ್ಲೊಬ್ಬರಾಗಿದ್ದಾರೆ. ರಚನಾ ಕ್ರಮದಲ್ಲಿ ದೋಷಗಳನ್ನು ತೋರಿಸಬಹುದಾದರೂ ಅವರ ಕಾವ್ಯಶಕ್ತಿ ಸಹಜವಾದದ್ದು. ಅದು ಮುಖ್ಯವಾಗಿ ‘ರೊಮ್ಯಾಂಟಿಕ್’ ಜಾತಿಯ ಪ್ರತಿಭೆಯಾಗಿದ್ದರಿಂದ ಭಾವಾವೇಶ ಅಲ್ಲಿ ಅನಿವಾರ್ಯವಾಗುತ್ತದೆ. ಆದರೆ ಕುವೆಂಪು ರವರ ಕಾವ್ಯದ ಶ್ರೇಷ್ಠತೆಯಿರುವುದು ಅದು ಸಮಕಾಲೀನ ಜೀವನದ ಎಲ್ಲ ಅಂಶಗಳಿಗೂ ಪ್ರತಿಸ್ಪರ್ಧಿಯಾಯಿತೆಂಬುದೇ. ನಿಸರ್ಗದ ಚೆಲುವು, ದೇಶ ಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಆಧ್ಯಾತ್ಮಿಕತೆ ವೊದಲಾದ ಎಲ್ಲ ವಿಷಯಗಳಿಗೂ ಅವರ ಕಾವ್ಯ ಇಂಬುಕೊಟ್ಟಿದೆ. ಹೀಗಾಗಿ ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾಗಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಕೋ.ಚೆನ್ನಬಸಪ್ಪ
ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ – ಆತ್ಮಜ್ಞಾನ – ಪುಟ್ಟಪ್ಪನವರಿಗೆ ಚಿಕ್ಕಂದಿನಿಂದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಆತ್ಮಸಾಕ್ಷಾತ್ಕಾರವೇ ಅವರ ಬಾಳ ಗುರಿ; ಜೀವನೋದ್ದೇಶದ ಆದಿ ಅಂತ್ಯ. ಅವರಿಗೆ ಜೀವನದಲ್ಲಿ ಮತ್ತಾವ ಉಪಾಧಿಗಳೂ ಇರಲಿಲ್ಲ. ಇಂಥ ಅವರ ಜೀವನೋದ್ದೇಶಕ್ಕೆ ನೆರವಾದುದು ಅವರ ಕಾವ್ಯಶಕ್ತಿ. ಅದನ್ನವರು ಎಂದೂ ಮರೆಮಾಚಿಲ್ಲ. ಆದರೂ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ.

ಕೆ. ಸಚ್ಚಿದಾನಂದನ್
ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ ‘ರಾಮಾಯಣ ದರ್ಶನಂ’ ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ ‘ರಸೋ ವೈ ಸಃ’ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.

  ಕನ್ನಡಿಗರ ಹೃನಮನ
————————————–
ಕುವೆಂಪು ನೀವು ಬರೆದಿರಿ ಕನ್ನಡದೀ
ಇಪ್ಪತ್ತಮೂರು ಕವನ ಸಂಕಲನ
ಮೆರೆದಾಡಿದವು ಕಬ್ಬಿಗರ
ಸಾಹಿತ್ಯದಂಕಣ
ಕೊಳಲು ನುಡಿಸಿದಿರಿ
ಮೊಳಗಿತು ಕನ್ನಡದ
ಪಾಂಚಜನ್ಯ ಪಕ್ಷಿಕಾಶಿ
ಕುಣಿಯಿತು  ಶಬ್ದ ದರ್ಪಣದಿ
 ನವಿಲು ಕಲಾಸುಂದರಿ
ನುಡಿದವು ಕಥನ ಕವನಗಳು
ಪಕ್ಷಿ ಇಂಚರ  ದಾಟಿತು
ಕೋಗಿಲೆ ಮತ್ತು ಸೋವಿಯಟ್ ರಷ್ಯಾ
ಅದೆಷ್ಟು ನೋವು ಅಪಮಾನ
ಅಗ್ನಿಹಂಸ  ಬೆದರಲಿಲ್ಲ
ಮೌನದಲಿ ಅರಳಿದವು
ಕೃತ್ತಿಕೆ ಕಿಂಕಿಣಿ.
ಅವಳ ಚೆಲುವು ಷೋಡಶಿ
ಕರೆದಳು ಭಾವ
ಚಂದ್ರಮಂಚಕೆ ಬಾ ಚಕೋರಿ
ಒಳಗೊಳಗೇ ಕೊರೆದ ಅನುಭಾವ
ಇಕ್ಷುಗಂಗೋತ್ರಿ  ಜ್ಞಾನ ನಿಧಿ
 ಮನೆ ಬಿಟ್ಟು ಹೋರಾಟ
 ದಿವ್ಯ ಚೇತನ ಅನಿಕೇತನ
ಮನಸು ಜೇನಾಗುವ ಕ್ಷಣ
 ಮೌನ ಅನುತ್ತರಾ
 ಸರಳತೆಯಲಿ ಮದುವೆ
ಮಂತ್ರಾಕ್ಷತೆ
ಗಟ್ಟಿ ಗೊಂಡಿರಿ ಕದರಡಕೆ
 ಹೆದರಲಿಲ್ಲ  ಪ್ರೇತಕ್ಯೂ
ತೋರಿದಿರಿ ಕುಟೀಚಕ
ಮಸುಕು ಹರಿದ
ಹೊನ್ನ ಹೊತ್ತಾರೆ
ಇಳುವಿದಿರಿ ಭಾವ ಭಾರ  
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ
ನಿಮಗಿದೋ ನನ್ನ ನಮನ
 ಕುವೆಂಪು ಕನ್ನಡಿಗರ ಹೃನ್ಮನ
————————————————————————————————————–

8 thoughts on “ರಸ ಋಷಿಯ ನೆನಪಲ್ಲಿ,ಡಾ.ಶಶಿಕಾಂತ ಪಟ್ಟಣ ರಾಮ ದುರ್ಗ -ಕ್ರಾಂತಿ ಕವಿ ಕುವೆಂಪು

  1. ಅಬ್ಬಾ ತುಂಬಾ ಒಳ್ಳೆಯ ಲೇಖನ ಸರ್
    ಕವಿ ಪರಿಚಯ ಲೇಖನ ಚೆನ್ನಾಗಿ ಮೂಡಿ ಬಂದಿದೆ

  2. ಅತ್ಯಂತ ಮಾರ್ಮಿಕ ಚಿಂತನೆ! ಮಲ್ಲಿಗೆ ಹೂವಿನ ಸರವನ್ನು ಹೂಗಾರರೂ ಪೋಣಿಸಲಿಕ್ಕಿಲ್ಲ ಆ ರೀತಿ ಕುವೆಂಪು ರವರ ಬಗ್ಗೆ ಸಮಗ್ರ ಮಾಹಿತಿ ನೀಡಿ ಎಲ್ಲರ ಮನ ತುಂಬಿದ್ದೀರಿ, ಧನ್ಯವಾದಗಳು.

  3. ಸಮಗ್ರ ಮಾಹಿತಿಯುಳ್ಳ ಲೇಖನ …ಸರ್
    ಕುಪ್ಪಳ್ಳಿಯ ನೆನಪುಗಳು ಕಣ್ಣ ಮುಂದೆ ಹಾದು
    ಹೋದವು

    ಸುಶಿ

  4. ಅತ್ಯಂತ ಸುಂದರ ವೈಚಾರಿಕ ಲೇಖನ. ಒಮ್ಮೆ ಓದಿದರೆ ಇನ್ನೊಮ್ಮೆ ಓದಬೇಕು ಅನಿಸುತ್ತದೆ

Leave a Reply

Back To Top