ಹರಟೆ

ಇಲಿ ಪುರಾಣ

Rats | Types Of Rats In North America | Automatic Trap Company ...

ಶೀಲಾ ಭಂಡಾರ್ಕರ್

“ಇಲಿಗಳ ಸಂಸಾರದಲ್ಲೂ ಅಜ್ಜಿಯರು ಇರ್ತಾರಾ?

ರಾತ್ರಿ ಮಲಗುವಾಗ ಒಳ್ಳೊಳ್ಳೆ ನೀತಿ ಕತೆಗಳನ್ನು ಹೇಳಿ ಮಲಗಿಸ್ತಾರಾ?

ಹೇಗೆ ತಪ್ಪಿಸಿಕೊಳ್ಳುವುದು ಅನ್ನುವ ಟಿಪ್ಸ್ ಹೇಳಿ ಕೊಡ್ತಾರಾ?”

ಗೊಣಗ್ತಾ ಇದ್ದೆ ನಾನು.

ಮಕ್ಕಳಿಬ್ಬರೂ ಮುಖ ಮುಖ ನೋಡಿಕೊಂಡು “ಅಮ್ಮ ಶಶಿಕಪೂರ್” ಅಂತ ಮುಸಿ ಮುಸಿ ನಗ್ತಾ ಇದ್ರು.

ನಮ್ಮನೇಲಿದ್ದ ಗೊಣಗುವ ಶೇಷಿಯ ಕತೆ ಹೇಳಿದ್ನಲ್ಲ. ಶೇಷಿಗೆ ದಿನ್ನು, ಶಶಿಕಪೂರ್ ಅಂತ ಹೆಸರಿಟ್ಟಿದ್ದನ್ನೂ ಹೇಳಿದ್ದೇನೆ. ನಿಮಗೆ ಮರೆತಿರಬಹುದು.

ನನಗೆ ಕೋಪ ಬಂತು. “ನಿಮಗೇನು ಗೊತ್ತು? ನಗ್ತಿದಿರಲ್ಲ ನೀವು!” ಅಂತ ಬೈದೆ.

ದೊಡ್ಡವಳು ಕೂಡಲೇ ಕೂತಲ್ಲಿಂದ ಎದ್ದು ಅಡುಗೆ ಮನೆಗೆ ಬಂದು ನನ್ನ ಭುಜ ಹಿಡಿದು ಪ್ರೀತಿಯಿಂದ “ಏನಾಯ್ತಮ್ಮ?” ಅಂದಾಗ.. ಚಿಕ್ಕವಳೂ ಬಂದು ನಿಂತಳು.

“ಏನಿಲ್ವೆ… ಇಷ್ಟು ವರ್ಷದಲ್ಲಿ ಮೊದಲ ಸಲ ನಮ್ಮನೇಲಿ ಇಲಿ ಸೇರಿಕೊಂಡಿದೆ. ಒಂದೆರಡು ಸಲ ನೋಡಿದೆ”

ಅನ್ನುವುದರೊಳಗೆ, … ಚಿಕ್ಕವಳು “ಅಬಾ….” ಅಂದವಳೇ ಒಂದೇ ಉಸಿರಿಗೆ ಓಡಿ ಡೈನಿಂಗ್ ಟೇಬಲ್ ಚೇರ್ ಹತ್ತಿ ನಿಂತು ಬಿಟ್ಟಳು.

ದೊಡ್ಡವಳು ಸ್ವಲ್ಪ ಧೈರ್ಯದಿಂದ “ಎಲ್ಲಿ!?” ಅಂತ ಕೇಳಿದಳು.

“ಇಲ್ಲೇ ಈಗ ನೋಡಿದೆ. ಆದರೆ ಪಕ್ಕದ ಮನೆಯವರ ಹತ್ತಿರ ಇಲಿ ಹಿಡಿಯುವ ಬೋನು ತಂದು ಇಟ್ಟು ಮೂರು ದಿನ ಆಯ್ತು. ಬೋನ್ ಹತ್ರ ಮಾತ್ರ ಹೋಗ್ತಿಲ್ಲ. ಜಾಗ ಬದಲಿಸಿ ಬದಲಿಸಿ ಇಟ್ಟು ನೋಡಿದೆ.” ಅಂದೆ.

ಅಡುಗೆ ಮನೆಯ ಒಳಗಿದ್ದವಳು ಮೆಲ್ಲ ಮೆಲ್ಲ ಹೊರಗೆ ಹೋಗುತ್ತಾ.. “ಇರು ಗೂಗಲ್ ಮಾಡ್ತೇನೆ. ಮೌಸ್ ಹೇಗೆ ಹಿಡಿಯುವುದು ಅಂತ” ಅನ್ನುತ್ತಾ ಮೊಬೈಲ್ ತಗೊಂಡು ಕೂತಳು.

Curious Kids: where did rats first come from?

“ಅದಕ್ಕೆಲ್ಲ ಗೂಗಲ್ ಯಾಕೆ? ಬೋನಿನೊಳಗೆ ಬೀಳುತ್ತೆ. ಆದರೆ ನನಗೆ ಡೌಟ್ ಅದರಜ್ಜಿ ಎಲ್ಲೋ ಹೇಳಿಕೊಟ್ಟಿರಬೇಕು.” ಅನ್ನುತ್ತಾ ದೋಸೆ ತಟ್ಟೆಗೆ ಹಾಕಿ ಚಟ್ನಿ ಬೆಣ್ಣೆ ಡೈನಿಂಗ್ ಟೇಬಲ್ ಮೇಲಿದೆ ತಗೊಂಡು ತಿನ್ನು ಅಂತ ಚಿಕ್ಕವಳನ್ನು ಕರೆದರೆ. ಅಲ್ಲಿಂದಲೇ

“ನೀನೇ ಹಾಕಿ ಕೊಡು ನಾನಿಲ್ಲಿ ನಿಂತೇ ತಿನ್ನುತ್ತೇನೆ.”

ದೊಡ್ಡವಳು ಮೊಬೈಲಿಂದ ತಲೆ ಎತ್ತದೆ “ಇಷ್ಟು ಡುಮ್ಮಿ ಇದಿಯಾ. ನಿನ್ನ ಒಂದು ಬೆರಳಿನಷ್ಟಿರೋ ಇಲಿಗೆ ಹೆದರ್ತಿಯಲ್ಲ” ಅಂತ ಛೇಡಿಸಿದಾಗ, ಫಕ್ಕನೆ ಕುರ್ಚಿಯಿಂದ ನೆಗೆದು,

ನಂಗೆ ಡುಮ್ಮಿ ಅಂತಿಯಾ ಅಂತ ಅವಳಿಗೆ ಹೊಡೆಯಲು ಹೋದಳು.

“ಅಮ್ಮಾ…. ಇಲಿ” ಅಂತ ದೊಡ್ಡವಳು ಕಿರುಚಿದಾಗ ಡುಮ್ಮಿ ಒಂದೇ ನೆಗೆತಕ್ಕೆ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ನಿಂತಾಯ್ತು.

ಪಾಪ ಅಂತ ಅಲ್ಲಿಯೇ ತಟ್ಟೆ ಕೈಗೆ ಕೊಟ್ರೆ ತಿನ್ನುತ್ತಾ ” ಬೋನಿನೊಳಗೆ ಹೇಗೆ ಹೋಗುತ್ತೆ?”  ಅವಳು ಹಾಗೆಯೇ.

“ಅಬ್ಬಾ!! ಶುರುವಾಯ್ತು ಇನ್ನು ಪ್ರಶ್ನೆಗಳ ಸರಮಾಲೆ. ಅಮ್ಮ ನೀನೇ ಹೇಳ್ತಾ ಹೋಗು. ಇವಳಿಗೆ ಪ್ರಶ್ನೆ ಕೇಳಲಿಕ್ಕೆ ಬಿಡಬೇಡ.”  ದೊಡ್ಡವಳು ಅಂದಾಗ.

ಕುರ್ಚಿಯ ಮೇಲಿನವಳು ” ಇರು ನಿಂಗೆ. ಇಲಿ ಹೋಗ್ಲಿ. ಆಮೇಲೆ ಮಾಡ್ತಿನಿ”.

“ದೇವರೇ… ಇಲಿ ಇಲ್ಲೇ ಇರಲಿ.”

ದೊಡ್ಡವಳಿಗೆ ಆಟ. ಚಿಕ್ಕವಳಿಗೆ ಸಂಕಟ.

ಹೊಟ್ಟೆ ತುಂಬಿತೇನೋ ಚಿಕ್ಕವಳಿಗೆ ಯೋಚನೆ ಶುರುವಾಯ್ತು.

“ನಾನು.. ಶಾಲೆಗೆ, ಟ್ಯೂಷನ್ ಗೆ ಹೇಗೆ ಹೋಗ್ಲಿ”

“ಮೊದಲು ಇಳಿದು ಕೈ ತೊಳೆಯಲು ಹೋಗು” ಅಂದೆ.

“ಅಯ್ಮಮ್ಮಾ…… ಆಗಲ್ಲ. ನಂಗೆ ಭಯ”

Rat Trap Cage Small Live Animal Pest Rodent Mouse Control Bait ...

ನಾನು ಹೇಳಿದೆ, “ಪಕ್ಕದ ಮನೆಯವರ  ಇಲಿ ಬೋನು ತಂದು ಇಟ್ಟಿದ್ದೇನೆ. ಅವರಂದ್ರು, ಕಾಯಿ ಚೂರಾಗಲಿ, ವಡೆ ಬೋಂಡ ಅಂತಾದ್ದು ಏನಾದರೂ ಆ ತಂತಿಗೆ ಸಿಕ್ಕಿಸಿಡಿ ಅಂತ.

ಈ ನಿಮ್ಮಪ್ಪ, ಒಂದು ಈರುಳ್ಳಿ ಹೆಚ್ಚಿ ನಾಲ್ಕು ಬೋಂಡ ಮಾಡು ಮೂರು ನನಗಿರಲಿ, ಒಂದು ಇಲಿಗೆ ಇಡು. ಪಾಪ ನಮ್ಮನೆಗೆ ಬಂದಿದೆ ಅಷ್ಟಾದರೂ ನೋಡಿಕೊಳ್ಳಬೇಕಲ್ವಾ. ಅಂತೆ.

ಈರುಳ್ಳಿ ಬೋಂಡ ಇಟ್ಟು ಮೂರು ದಿನ ಆಯ್ತು, ಇನ್ನೂ ಬಿದ್ದಿಲ್ಲ” ಅಂದೆ.

” ಏನೂ… ಮೂರು ದಿನ ಆಯ್ತಾ? ಯೆಬ್ಬೇ. ದಿನಾ ಫ್ರೆಶ್ ಆಗಿ ಇಡಬೇಕಮ್ಮ. ಪಾಪ.” ಅಂದ ದೊಡ್ಡವಳ ತಲೆಯ ಮೇಲೊಂದು ಮೊಟಕಿ ಹೇಳಿದೆ, ” ಅಥವಾ ನಿಮ್ ತರ ಈಗಿನ ಜಮಾನಾದ ಇಲಿಗೂ ಪಿಜ಼ಾ, ಬರ್ಗರ್ ಬೇಕೇನೋ ಯಾರಿಗ್ಗೊತ್ತು.”

ಇದೊಳ್ಳೆ ಮಾಡರ್ನ್ ಇಲಿ ಆಯ್ತಲ್ಲ. ಏನು ಮಾಡುವುದೀಗ?

ಪಕ್ಕದ ಮನೆಯವರ ಬಳಿ ಹೇಳಿದಾಗ ಅವರಂದರು ಈವಾಗ ಏನೋ ಮ್ಯಾಟ್ ತರ ಬಂದಿದೆಯಂತೆ ಅದನ್ನು ಬಿಡಿಸಿಟ್ಟರೆ ಅದರಲ್ಲಿರೋ ಜೆಲ್ ಗೆ ಇಲಿ ಅಂಟಿ ಕೊಳ್ಳುತ್ತಂತೆ ಅಂತ.

ಅದನ್ನು ತಂದಿಟ್ಟು ನೋಡೋಣ ಅಂದೆ.

“ನಿನ್ನ ಮಾಡರ್ನ್ ಇಲಿ ಮರಿ ಅದನ್ನೂ ಗೂಗಲ್ ಮಾಡಿ ನೋಡಿರಬಹುದು, ಅದನ್ನು ದಾಟೋದಕ್ಕೆ ಉಪಾಯವನ್ನು ಕೂಡ ಕಂಡು ಹಿಡಿದಿರಬಹುದು”

ಅಂದಳು ನಮ್ಮ ಗೂಗಲ್ ರಾಜಕುಮಾರಿ.

ನಮ್ಮಜ್ಜಿ, ನಮ್ಮಮ್ಮ ಎಲ್ಲಾ ಹೇಳ್ತಿದ್ರು, ಗಣಪತಿಗೇನಾದರೂ ಹರಕೆ ಹೇಳಿದ್ದು ಮರೆತು ಹೋಗಿದ್ದರೆ ನೆನಪಿಸಲು ಇಲಿಯನ್ನು ಕಳಿಸ್ತಾನೆ ಅಂತ.

ಮರೆತಿರಬಹುದಾದ ಎಲ್ಲ ಹರಕೆಗಳನ್ನು ತೀರಿಸುತಿದ್ದೇನೆ.

ನೋಡೋಣ ಯಾವಾಗ ಹೋಗುತ್ತೋ. ಅದರ ಬಾಯಿಗೆ ಯಾವುದೂ ಸಿಗದ ಹಾಗೆ ಇಡುವ ಕೆಲಸವೇ ಇಡೀ ದಿನ.

ಅಥವಾ ಹೊಸ ಬಜ್ಜಿ ಬೋಂಡದ ಆಸೆಗೆ ಕಾಯ್ತಾ ಇದೆಯೋ.

ಇವಳು ಈ ಜನ್ಮದಲ್ಲಿ ಫ್ರೆಶ್ ಬೋಂಡ ಇಡಲ್ಲ ಅಂತ ಗೊತ್ತಾಗ್ಲಿ. ಮತ್ತೆ ಯಾವತ್ತೂ ನಮ್ಮನೆ ದಾರಿಲಿ ಬರಕೂಡದು.

ಹಾಗಂದುಕೊಂಡಿದ್ದೇನೆ

***********************

Leave a Reply

Back To Top