ಕಾವ್ಯಯಾನ

ಎರಡು ಲಾಕ್ ಡೌನ್ ಕವಿತೆಗಳು

Internal Silence and the Art of Correct Speech_Humanity Healing

ಶ್ರೀದೇವಿ ಕೆರೆಮನೆ

ಮಾತು ಮುಗಿದ ಹೊತ್ತಲ್ಲಿ

ನೀನು ಸಂಪರ್ಕಗಳೆಲ್ಲವನ್ನೂ ನಿಲ್ಲಿಸಿ
ಅಂತರ ಕಾಯ್ದುಕೊಳ್ಳ ತೊಡಗಿದ ಮೇಲೆ
ನಾನು ಫೋನು ಕೈಗೆತ್ತಿಕೊಂಡೆ
ಅತ್ತಕಡೆಯ ನೀರಸ ಮಾತುಗಳ ಹೊರತಾಗಿಯೂ
ಒಂದಿಷ್ಟು ಜೀವ ತುಂಬಲು
ಯಾವುದೋ ಹಳೆ ನೆನಪುಗಳ ಹೆಕ್ಕಿ
ಪೋಣಿಸುತ್ತ ಮಾಲೆ ಮಾಡಿದರೂ
ಕಾಣದ ಉತ್ಸಾಹ ನಿನ್ನ ಮಾತಿನಲ್ಲಿ

ಅರ್ಥವಿಲ್ಲದ ನೀರಸ ಮಾತುಗಳ
ಆಡುವುದಾದರೂ ಅದೆಷ್ಟು ಸಮಯ ?
ಹತ್ತೇ ನಿಮಿಷಗಳಲ್ಲಿ ಮಾತು ಸೋತು
ಅಲ್ಲಿಯೂ ಅಂತರ ಇಣುಕಿ
ವ್ಯರ್ಥ ಪ್ರಲಾಪವೆನಿಸಿದಾಗ
ಮತ್ತದೇ ಅಂತರ

ಮಾತ್ತೆಲ್ಲವೂ ಮುಗಿದು
ಎರಡೂ ಬದಿಯಿಂದ
ಬರಿದೇ ಮತ್ತೆ ಎಂಬ ಶಬ್ಧ
ಪುನರಾವರ್ತನೆಯಾಗುವ ವಿಕ್ಷಿಪ್ತ ಹೊತ್ತಲ್ಲಿ
ನಾನು ನಿಟ್ಟುಸಿರಿಡುತ್ತ
ಮಾತು ಮುಗಿಸುವ ಮಾತನಾಡುವಾಗಲೇ
ಅತ್ತ ಕಡೆಯಿಂದ ತೇಲಿ ಬರುತ್ತದೆ
‘ಈ ದಿಗ್ಬಂಧನವೆಲ್ಲ ಮುಗಿದು
ಸಿಗುವುದಾದರೂ ಯಾವಾಗ
ನೀನು ಒಮ್ಮೆ ನನ್ನತೋಳಿಗೆ ?
ಅದೆಷ್ಟು ತಿಂಗಳು ಕಾಯಬೇಕು ನಾನು ,
ನಿನ್ನದೊಂದು ಮೈಮರೆಸುವ ಅಪ್ಪುಗೆಗೆ
ನಶೆಯೇರಿಸುವ ಮುತ್ತಿಗೆ?’

ಮುಗಿಯುತ್ತ ಬಂದ ಮಾತುಗಳಲ್ಲೀಗ
ತುಳುಕುತಿದೆ ಹೊಸ ಹರೆಯ
ದೂರದಲ್ಲೆಲ್ಲೋ ಕೂಗುವ ಕೋಗಿಲೆ
ಅನುರಣಿಸಿ ಇಬ್ಬರ ಫೋನಿನಲ್ಲೂ
ಜೊತೆಗಿರುವ ಭರವಸೆ ತುಂಬುತಿದೆ

———–

ದಿಗ್ಭಂದನ ಮುಗಿಯುವಾಗ

Internal Silence and the Art of Correct Speech_Humanity Healing

ನಾಗಾಲೋಟದಿಂದ ಓಡುತ್ತಿದ್ದ ದಿನಗಳೀಗ
ಬಸವನಹುಳದಂತೆ ತೆವಳುತಿದೆ
ನಿಮಿಷಗಳೆಲ್ಲ ಗಂಟೆಗಳಾಗಿ
ಸೆಕೆಂಡುಗಳೂ ಇನ್ನೇನು ಗಂಟೆಗಳಾಗುವ
ಈ ದುರಂಧರ ಸಮಯದಲ್ಲಿ
ಇಬ್ಬರ ಮುಖದಲ್ಲೂ
ಪ್ರತಿಫಲಿಸುವ ಪೇಲವ ನಗೆಗೆ
ಅಂತರ ಮುರಿಯುವ ಶಕ್ತಿಯಿಲ್ಲ

ದೇಶ ದೇಶಗಳಾದಿಯಾಗಿ
ರಾಜ್ಯ, ಜಿಲ್ಲೆ ತಾಲೂಕು
ಗ್ರಾಮಗಳ ಮಾತು ಬಿಡಿ
ಶಹರ, ಹಳ್ಳಿಗಳ ಒಂದೊಂದು ಗಲ್ಲಿ, ಓಣಿಯೂ
ದಿಗ್ಬಂಧನ ಹಾಕಿಸಿಕೊಂಡು
ಜೈಲಿನಲ್ಲಿರುವ ಏಕಾಂಗಿ ಕೈದಿಯಂತಾಗಿ
ವಿಲವಿಲನೆ ಒದ್ದಾಡುತ್ತಿರುವಾಗ
ನಮ್ಮದೇನು ಹೆಚ್ಚುಗಾರಿಕೆಯಿಲ್ಲ ಬಿಡು

ಅತ್ತ ತಿರುಗಿದರೂ
ಕಿರುಗುಡುವ ಜೋಡಿಮಂಚ
ಇತ್ತ ತಿರುಗಿದರೂ ಸದ್ದು ಮಾಡುವುದನು ಕೇಳಿಯೂ
ಒಂದೊಂದು ತುದಿಗೆ
ಒಬ್ಬೊಬ್ಬರು ನಿಟ್ಟುಸಿರಿಡುತ್ತಲೇ
ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ
ಅರಿವಿದೆ ನಮ್ಮಿಬ್ಬರಿಗೂ

ಮುಂಜಾನೆ ಬೇಗನೆದ್ದು
ಚಹಾಕ್ಕೆ ನೀರಿಡುವ ಮೊದಲೇ
ಗೀಜರ್’ನ ಬಟನ್ ಒತ್ತಿ
ಎಲ್ಲಕ್ಕಿಂತ ಮೊದಲು ಆಗಿಬಿಡಲಿ
ಸ್ನಾನವೇ ಎಂದು ಗೊಣಗಿ
ತಲೆಗೆರೆದುಕೊಂಡು, ಹಣೆಗೆ ಬಿಂದಿ ಇಡಲು
ಕನ್ನಡಿ ಎದುರು ನಿಂತಾಗಲೇ ಕಾಣುತ್ತದೆ
ಅಂತರ ಮುಗಿದ ಸೂಚನೆಗೆ
ಇನ್ನೂ ಹಾಸಿಗೆ ಬಿಟ್ಟೇಳದ
ನಿನ್ನ ಮುಖದಲ್ಲಿ ಅರಳುವ ಮುಗುಳ್ನಗೆ

**********

7 thoughts on “ಕಾವ್ಯಯಾನ

  1. ಎರಡೂ ಕವಿತೆಗಳು ಲಾಕ್ ಡೌನ್ ಸಮಯದಲ್ಲಿಯ ಎರಡು ತುಮುಲಗಳನ್ನು ತಿಳಿಸಿಕೊಡುತ್ತವೆ. ಒಂದರಲ್ಲಿ ತಳಮಳದ ಕಾತರ… ಇನ್ನೊಂದರಲ್ಲಿ ವಾಸ್ತವದ ವಿಸ್ಮಯ ಹದಗಟ್ಟಿದೆ.

  2. ಮೊದಲ ಕವನ ತುಂಬಾ ಸೊಗಸಾಗಿದೆ ಪ್ರೀತಿಸುವ ಹೃದಯಗಳು ಒಮ್ಮೆಲೇ ದೂರಾದಾಗ ಆಗುವ ವಿರಹವೇದನೆ ಕ್ಷಣ ಕ್ಷಣವೂ ಬೇಸರತರಿಸುವಂತಿದೆ ಎನ್ನುವ ಭಾವ,
    ಹಾಗೂ ಮಧುರ ಮೋಹದ ಮಾತುಗಳಿಂದ ಪ್ರಿಯತಮ ಸಂತುಷ್ಟಪಡಿಸುವದರ ಬಗ್ಗೆ ರೋಮ್ಯಾಂಟಿಕ ಆಗಿ ಮೂಡಿಬಂದಿದೆ.
    ಎರಡನೇ ಕವನ ಡೌನ್ ಮುಗಿದ ನಂತರ ಬೇಗನೇ ನಾವಿಬ್ಬರೂ ಒಂದಾಗುವ ಭರವಸೆ ಮೂಡಿಸಿದೆ. ಪ್ರಸ್ತುತ ವಿರಹ ವೇದನೆ ಅವನಲ್ಲಿಯೂ , ಅವಳಲ್ಲಿಯೂ ಇರುವ ಪರಿ, ಹೃದಯದ ವಿರಹವೇದನೆ ಕವನಗಳ ಜೀವ ತುಂಬಿದೆ.

    1. ಎರಡೂ ಕವಿತೆ ಇಷ್ಟವಾಯ್ತು . ಅಭಿನಂದನೆಗಳು ಸಿರಿ

  3. Yenendu odali we kavitheyannu , idu kavithiyo athava naanna mansanalli iddaddannu nakalu madidiro? Nannageno naanna manasaliyadannu nakalu madirirendenusuttide.

  4. ಲಾಕ್ದೌನ್ ಅವಧಿಯಲ್ಲಿ ಪಾಲಿಸಬೇಕಾದ ಕಡ್ಡಾಯ ಅಂತರ ಗಳ ವ್ಯಥೆ ಯನ್ನು ಈ ಕವನಗಳು ಸಾರುತ್ತಿವೆ.

Leave a Reply

Back To Top