ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ

ಬುದ್ದಂ ಶರಣಂ!

ಚೈತ್ರಾ ಶಿವಯೋಗಿಮಠ

ನಿನ್ನಲ್ಲಿ ನನ್ನಲ್ಲಿ ಎಲ್ಲೆಲ್ಲಿಯೂ
ದೇವರ ಕಂಡೆ
ಅಂತಹದರಲ್ಲಿ ನನ್ನನೇ ನೀನು
ದೇವರ ಮಾಡಿಕೊಂಡೆ

ದೀಪವ ಮುಡಿಸಿ, ಧೂಪವ
ಹಾಕಿದೆ ಮೂರ್ತಿ ಮಾಡಿ
ಒಳಗಿನ ದೀಪವ ಬೆಳಗಲಾರೆಯ
ಮನದ ಸೊಡರಿಗೆ ಕಿಡಿ ನೀಡಿ?

ಅನ್ನವ ಬೇಯಿಸಿ, ಹಿಸುಕಿ ಪರೀಕ್ಷಿಸಿ
ಬೆಂದನ್ನವ ಸಮರ್ಪಿಸಿದೆ ಎಡೆಯೆಂದು
ಮನದ ಗಡಿಗೆಯಲಿ ಭಾವದನ್ನವ
ಬೇಯಿಸಲಾರೆಯ ನೀನಿಂದು?

ನಾನು ದೇವರಲ್ಲ, ನಿನ್ನೊಳಗಿನ
ಪ್ರಾಂಜಲ ದೈವತ್ವ!
ದೇವರಾಗಿಸದೆ, ಮರೆಯದೆ
ಮೆರೆಸಿದರೆ ಸಾಕು ಮನುಷ್ಯತ್ವ!

ಇನ್ನಾದರೂ ನಿನ್ನೊಳಗಿರುವ
ನನ್ನ ಕೂಗನ್ನ ಕೇಳು
ಮಲಗಿದ್ದು ಸಾಕು ಬಿಡು.ನಡಿ
ಬೆಳದಿಂಗಳ ದಾರಿ ಹಿಡಿ ,ಏಳು.

********

Leave a Reply

Back To Top