ಇಂದಿರಾ ಮೋಟೆಬೆನ್ನೂರ ಕವಿತೆ-ಸ್ಮರಣೋತ್ಸವ

ಅವ್ವನ ಮಡಿಲಿನ
ಅಪ್ಪನ ಹೆಗಲಿನ
ಮಮತೆಯ ಒಡಲಿನ
ಕರುಳಿನ ಕಡಲಿನ
ಅಂತರಂಗದಂತಃಕರಣದ
ನೆನಪಿನ ಹಬ್ಬವಿದು..
ದಿವ್ಯಾತ್ಮಗಳ ಸ್ಮರಣೋತ್ಸವ…
ನಿತ್ಯೋತ್ಸವವಿದು….. ಶರಣೋತ್ಸವವಿದು..

ಹೆಗಲ ಮೇಲೆ ಹೊತ್ತು
ಜಗವ ಸುತ್ತಿ ಮುಗಿಲು
ತೋರಿದ ಅಪ್ಪ..
ತಪ್ಪ ತಿದ್ದಿ ಬುದ್ಧಿ ಹೇಳಿ
ಒಪ್ಪಮಾಡಿ ಮನ್ನಿಸಿ
ಬಾಳ ತೆಪ್ಪದೊಳು ತೇಲಿಸಿ
ಹಾಲು ತುಪ್ಪವಾದ
ಅಪ್ಪನ ಹೆಗಲ ಮೇಲೆ
ನಲಿದ ಜೀವ ಭಾವೋತ್ಸವ..
ನಿತ್ಯೋತ್ಸವವಿದು…ಶರಣೋತ್ಸವವಿದು

ಹೊತ್ತುಹೆತ್ತು ಹೊತ್ತೊತ್ತಿಗೆ
ತುತ್ತುಣಿಸಿ ಶಶಿಗೆ ಮುತ್ತಿಟ್ಟು
ಶರಣ ತತ್ವ ಬಿತ್ತಿಬೆಳೆದು
ಸದ್ದಿಲ್ಲದೇ ಎದ್ದು ಹೋದ
ಅಕ್ಕರೆಯ ಅವ್ವನ
ಸಕ್ಕರೆ ಸವಿ ಮನದ
ಪ್ರೀತಿ ವಾತ್ಸಲ್ಯದ ಪುಣ್ಯೋತ್ಸವ…
ನಿತ್ಯೋತ್ಸವವಿದು…ಶರಣೋತ್ಸವವಿದು..

ಕರುಳ ಬಳ್ಳಿ ಕುಡಿಗಳ
ಕೊರಳತಬ್ಬಿ ಮಿಡಿಯುತ
ಬೆರಳ ಹಿಡಿದು ಸರಿದಾರಿ
ತೋರಿ ಗುರಿ ಮುಟ್ಟಿಸಿ
ಮುಗಿಲ ನಗುವ ನಕ್ಷತ್ರಗಳಾದ
ಶರಣ ಸಂಪ್ರೀತಿ ಸನ್ನಿಧಿಯ
ಹದುಳ ಹೃದಯ ಶರಣರ
ವರ್ಷ ಹರ್ಷಕಾವ್ಯೋತ್ಸವ…
ನಿತ್ಯೋತ್ಸವವಿದು..ಶರಣೋತ್ಸವವಿದು..

ಆದರ್ಶ ತತ್ವ ಶಾಂತಿಯ
ಕಾರುಣ್ಯ ಕುರುಹು..
ಬೆಳಕದೊಂದಿಯ ಹಾದಿಯಲಿ
ಮುಡಿಸಿ ಅರಿವ ಬೆಳಕು…
ಸಾಲು ಹಣತೆ ವಚನ ಸೊಡರು
ಸತ್ಯ ಪಥದಿ ದೀಪೋತ್ಸವ…
ಶರಣ ಜೀವ ಸ್ಮರಣೋತ್ಸವ
ವಚನ ದೀಪ ಬಸವೋತ್ಸವ…
ನಿತ್ಯೋತ್ಸವವಿದು..ಶರಣೋತ್ಸವವಿದು….


Leave a Reply

Back To Top