ಧಾರಾವಾಹಿ-ಅಧ್ಯಾಯ –15
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮನೆ ಆಸ್ತಿ ಎಲ್ಲವನ್ನೂ ಕೊಂಡುಕೊಂಡ ಮಾಲೀಕರು ಸ್ವಲ್ಪ ದಿನಗಳ ವಾಯಿದೆ ಕೊಟ್ಟರು. ಅಷ್ಟರೊಳಗೆ ಹೊರಡುವ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಬೇಕಿತ್ತು ನಾಣುವಿನ ಕುಟುಂಬ. ಈಗೀಗ ನಾಣು ಮನೆಗೆ ಬರುತ್ತಾ ಇದ್ದದ್ದು ಬಹಳ ತಡವಾಗುತ್ತಾ ಬಂತು. ಕಲ್ಯಾಣಿಯೊಂದಿಗೆ ಹೆಚ್ಚಿನ ಮಾತಿಲ್ಲ. ಊಟವನ್ನು ಕೂಡಾ ಸಮೀಪದಲ್ಲಿ ಇರುವ ಅಕ್ಕನ ಮನೆಯಲ್ಲಿ ಮಾಡಿ ಬರುತ್ತಿದ್ದರು. ಅಪರೂಪಕ್ಕೊಮ್ಮೆ ಮನೆಯಲ್ಲಿ ಊಟ ಮಾಡಿದರೂ…. ” ನೀನು ಈಗೀಗ ಮಾಡುತ್ತಾ ಇರುವ ಅಡುಗೆ ರುಚಿಯಿಲ್ಲ….ಸಾಂಬಾರಿಗೆ ಉಪ್ಪಿಲ್ಲ…. ಪಲ್ಯದ ತರಕಾರಿ ಬೆಂದಿಲ್ಲ …. ಕಾಳನ್ ಗೆ ಮೊಸರು ಹುಳಿ ಸಾಲದು….ನೋಡು ಅನ್ನದಲ್ಲಿ ತಲೆಕೂದಲು ಇದೆ”…. ಎಂದೆಲ್ಲಾ ಏನಾದರೂ ತಗಾದೆ ತೆಗೆಯುತ್ತಾ ಅರ್ಧಕ್ಕೆ ಊಟ ಬಿಟ್ಟು ಎದ್ದು ಹೋಗುತ್ತಾ ಇದ್ದರು ನಾಣು. ಮುಖ ಕೊಟ್ಟು ಮಾತನಾಡಿದ ದಿನಗಳೇ ಮರೆತಂತೆ ಆಗಿದೆ ಕಲ್ಯಾಣಿಗೆ. ಏನಾದರೂ ಹೇಳಬೇಕೆಂದರೆ ಕಲ್ಯಾಣಿಯ ಮುಖವನ್ನು ನೋಡದೇ ಬೇರೆಲ್ಲೋ ನೋಡುತ್ತಾ ಮಾತನಾಡುವುದು ಈಗೀಗ ಹೊಸತು ಅನಿಸುತ್ತಿತ್ತು. ಪ್ರೀತಿಯಿಂದ ಮಾತನಾಡಿಸಿದರು ಕೂಡಾ ಅದಕ್ಕೆ ಉತ್ತರ ಕೊಡುತ್ತಾ ಇರಲಿಲ್ಲ ನಾಣು. ರಾತ್ರಿ ಎಂದಿನಂತೆ ಕೆಲಸವೆಲ್ಲ ಮುಗಿಸಿ ಕೋಣೆಗೆ ಬಂದು ಸನಿಹದಲ್ಲಿ ಮಲಗಿದರೂ ಮಂಚದ ಕೊನೆಯಲ್ಲಿ ಸರಿದು ಮಲಗುತ್ತಿದ್ದ ಪತಿಯ ನಡವಳಿಕೆಯಿಂದ ಕಲ್ಯಾಣಿಯ ಮನಸ್ಸು ವೇದನೆಯಿಂದ ಹೊಯ್ದಾಡಿತು. ನನ್ನನ್ನು ಎಷ್ಟು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ಪತಿ ಹೀಗೇಕೆ ಆದರು? ಇಷ್ಟು ವರ್ಷಗಳಲ್ಲಿ ಇವರು ಹೀಗೆ ನಡೆದುಕೊಂಡಿದ್ದೇ ಇಲ್ಲ ಇಷ್ಟೊಂದು ಕಠೋರವಾಗಿ ನಡೆದು ಕೊಳ್ಳಲು ಇವರಿಗೆ ಹೇಗೆ ಸಾಧ್ಯವಾಗುತ್ತಿದೆ? ನಮ್ಮ ಇಷ್ಟು ವರ್ಷದ ಸುಖೀ ದಾಂಪತ್ಯಕ್ಕೆ ಯಾರ ಕೆಟ್ಟ ದೃಷ್ಟಿ ಬಿದ್ದಿತೋ ಏನೋ!! ಮನೆಯಲ್ಲಿ ಈಗ ಮೊದಲಿದ್ದ ತಿಳಿ ವಾತಾವರಣ ಮರೆಯಾಗಿದೆ. ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆಲ್ಲ ಕೊನೆ ಎಂದು? ಎಲ್ಲವೂ ಮೊದಲಿನಂತೆ ಆದರೆ ಸಾಕು ಕೃಷ್ಣಾ ಅಂಬಲಪುಳ ಕ್ಷೇತ್ರಕ್ಕೆ ಪತಿಯೊಂದಿಗೆ ಬಂದು ನಿನ್ನ ದರ್ಶನ ಮಾಡಿ ದೀಪಾಲಂಕಾರ ಮಾಡಿಸಿ ಅರ್ಚನೆ ಮಾಡಿಸುವೆ ಪ್ರಭುವೇ ಎಂದು ಮನದಲ್ಲಿ ಕೃಷನನ್ನು ಧ್ಯಾನಿಸುತ್ತಾ ಕಣ್ಣು ಮುಚ್ಚಿ ನಿದ್ರೆ ಮಾಡುವ ಪ್ರಯತ್ನ ಮಾಡಿದರು.
ಅಕ್ಕ ಹಾಗೂ ತಮ್ಮಂದಿರ ಜೊತೆ ಕೋಣೆಯಲ್ಲಿ ಮಲಗಿದ್ದ ಸುಮತಿಗೆ ಅಪ್ಪ ಅಮ್ಮನ ಬಗ್ಗೆಯೇ ಚಿಂತೆ. ಸೂಕ್ಷ್ಮಮತಿಯಾದ ಅವಳ ಮನಸ್ಸಿಗೆ ಇತ್ತೀಚಿನ ಬದಲಾವಣೆಗಳು ಏಕೋ ಅವ್ಯಕ್ತವಾದ ಭಯ ಹಾಗೂ ನೋವನ್ನು ತರಿಸಿತ್ತು. ಏಕೆ ಈಗೀಗ ಅಪ್ಪ ತುಂಬಾ ಬದಲಾಗಿದ್ದಾರೆ? ಎನ್ನುವುದೇ ಅವಳಿಗೆ ಅರ್ಥ ಆಗದ ವಿಷಯವಾಗಿತ್ತು. ದಿನಗಳು ಉರುಳಿದವು. ಹೊರಡುವ ತಯಾರಿ ಭರದಿಂದ ನಡೆದಿತ್ತು. ಮನೆಯಲ್ಲಿನ ಬಂಗಾರದ ಆಭರಣ ಬಟ್ಟೆಗಳು ಹಾಗೂ ದೇವರ ಫೋಟೋಗಳು ದೇವರ ಶ್ಲೋಕದ ಪುಸ್ತಕಗಳು ಹಾಗೂ ಅತ್ಯವಶ್ಯಕವಾಗಿ ಬೇಕಾದಂತಹ ವಸ್ತುಗಳನ್ನೆಲ್ಲ ಪ್ರತ್ಯೇಕಿಸಿ ಇಟ್ಟಾಯ್ತು. ಇನ್ನು ಅಲ್ಲಿಂದ ಸಕಲೇಶಪುರಕ್ಕೆ ಹೊರಡುವ ದಿನ ಸಮೀಪಿಸಿತು. ಕಲ್ಯಾಣಿಯವರ ತವರಿನವರು ಬಂದರು. ಹೊರಡುವ ತಯಾರಿಯನ್ನೆಲ್ಲ ಗಮನಿಸಿದರು. ನಾಣು ಸಂಜೆ ಬರುವುದನ್ನೇ ಕಾಯುತ್ತಾ ಇದ್ದರು ಅವರೆಲ್ಲ. ಸಂಜೆ ನಾಣು ಬಂದು ಪೂಜೆ ಮುಗಿಸಿದ ನಂತರ ಕಲ್ಯಾಣಿಯ ತವರಿನವರು ನಾಣುವಿನ ಜೊತೆ ಮಾತುಕತೆಗೆ ಕುಳಿತರು. ನಾಣುವಿನ ಜೊತೆಗೆ ಮುಖ್ಯವಾದ ವಿಷಯವನ್ನು ಚರ್ಚಿಸಲು ಕಲ್ಯಾಣಿಯ ತವರಿನವರು ಬಂದಿದ್ದರು. ಅವರ ಮನದ ಇಂಗಿತ ಇದಾಗಿತ್ತು. ಕಲ್ಯಾಣಿ ಹಾಗೂ ಮಕ್ಕಳು ತವರಿನಲ್ಲಿ ಸಧ್ಯಕ್ಕೆ ಸ್ವಲ್ಪ ದಿನವಿರಲಿ. ನಾರಾಯಣನ್ ಮಾತ್ರ ಮೊದಲು ಹೋಗಿ ತೋಟ ಖರೀದಿಸಿ ನಂತರ ಸಾವಧಾನವಾಗಿ ಇವರೆಲ್ಲರನ್ನೂ ಕರೆದುಕೊಂಡು ಹೋಗಲಿ ಎಂದು. ಕಲ್ಯಾಣಿಯ ತವರಿನವರು ಕೊಟ್ಟ ಈ ಪ್ರಸ್ತಾಪವನ್ನು ನಾರಾಯಣನ್ ಒಪ್ಪಿಕೊಳ್ಳಲಿಲ್ಲ. ಹೋಗುವುದಾದರೆ ಪತ್ನಿ ಹಾಗೂ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗುವುದು. ಅವರನ್ನು ಇಲ್ಲಿ ಬಿಡುವ ಪ್ರಮೇಯವೇ ಇಲ್ಲ ಎಂದು ಅವರ ಅಭಿಪ್ರಾಯವನ್ನು ನೇರವಾಗಿ ತಿಳಿಸಿದರು.
ಅವರಿಗೂ ಅನಿಸಿತು ನಾರಾಯಣನ್ ಇತ್ತೀಚೆಗೆ ತುಂಬಾ ಬದಲಾಗಿದ್ದಾರೆ ಎಂಬುದು. ಯಾಕಿಷ್ಟು ಹಠ ಇಲ್ಲಿಗಿಂತ ಹೆಚ್ಚಿನ ನೆಲವನ್ನು ಅಲ್ಲಿ ಕೊಳ್ಳಬಹುದು ಆದರೆ ಇಲ್ಲಿ ದೊರೆಯುವಂತಹ ನೆಮ್ಮದಿ ಅಲ್ಲಿ ದೊರಕುವುದೇ? ತಾಯ್ನಾಡಿನ ಸ್ವಂತಿಕೆಯ ಭಾವ ಅಲ್ಲಿ ಹುಟ್ಟುವುದೇ?
ನಾಣುವಿಗೇನೋ ಖುಷಿ ಹೊಸ ಜಾಗ ಇಲ್ಲಿಗಿಂತ ಹತ್ತುಪಟ್ಟು ಹೆಚ್ಚಿನ ಭೂಮಿ ದೊರಕುವ ಸಂಭ್ರಮ ಆದರೆ ಕಲ್ಯಾಣಿ ಹಾಗೂ ಮಕ್ಕಳು ಖುಷಿಯಾಗಿ ನೆಮ್ಮದಿಯಿಂದ ಇರುವುದು ಇಲ್ಲಿ. ನಾಣುವಿನ ಉದ್ದೇಶ ಹಾಗೂ ಮುಂದಾಲೋಚನೆ ಒಳ್ಳೆಯದೇ ಆದರೆ ಇಷ್ಟು ಆತುರದ ನಿರ್ಧಾರ ಸರಿಯಲ್ಲ ಎಂದು ಕಲ್ಯಾಣಿಯ ಕುಟುಂಬದವರು ಅವರವರಲ್ಲೆ ಮಾತನಾಡಿಕೊಂಡರು. ಅವರಿಗೆ ಕಲ್ಯಾಣಿ ಹಾಗೂ ಮಕ್ಕಳ ಕಾಳಜಿ. ಮಕ್ಕಳು ಈಗಾಗಲೇ ಮನಸ್ಸಿನ ತಳಮಳ ಹೇಳಲಾರದೇ ಸೊರಗಿದ್ದಾರೆ. ಕಾಲಕ್ರಮೇಣ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ ಆದರೆ, ಈಗ ಅವರಿಗೆ ಸ್ವಲ್ಪ ಕಾಲಾವಕಾಶ ಬೇಕು. ಇಲ್ಲಿ ನಮ್ಮೊಂದಿಗೆ ಸ್ವಲ್ಪ ಕಾಲ ಇದ್ದರೆ ಅವರ ಮನಸ್ಸೂ ಕೂಡಾ ನಿಧಾನವಾಗಿ ಹೋಗುವ ಬಗ್ಗೆ ತಯಾರಿ ನಡೆಸುತ್ತದೆ. ಒಮ್ಮಿಂದೊಮ್ಮೆಲೇ ಹೀಗೆ ಹೋಗುವುದು ಸರಿ ಅಲ್ಲ ಅನ್ನುವುದು ಅವರೆಲ್ಲರ ಅಭಿಪ್ರಾಯವೂ ಆಗಿತ್ತು. ಆದರೆ ನಾರಾಯಣನ್ ಈಗ ಅಲ್ಲಿಗೆ ಹೋದರೂ ಸ್ವಲ್ಪ ದಿನಗಳ ನಂತರ ಮಕ್ಕಳು ಖಂಡಿತಾ ಅಲ್ಲಿನ ಪರಿಸರಕ್ಕೆ ಒಗ್ಗಿಕೊಳ್ಳುತ್ತಾರೆ
ಧಾರಾವಾಹಿ-ಅಧ್ಯಾಯ –15
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ನಾಣುವಿನ ಅಭಿಪ್ರಾಯ ತಿಳಿದು ಬೇಸರಗೊಂಡ ಕಲ್ಯಾಣಿಯ ಕುಟುಂಬದವರು ಏನೂ ಪ್ರತಿಯಾಗಿ ಹೇಳದೇ ಹೊರಟು ಹೋದರು. ಆದರೆ ಅವರಿಗೆ ಕಲ್ಯಾಣಿ ಹಾಗೂ ಮಕ್ಕಳನ್ನು ಈಗಲೇ ನಾಣು ಜೊತೆಗೆ ಕರೆದುಕೊಂಡು ಹೋಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಇನ್ನೇನು ಹೊರಡುವ ದಿನ ಬಂದೇ ಬಿಟ್ಟಿತು. ಗಂಡು ಮಕ್ಕಳಿಗೆ ಅಂತಹ ವ್ಯತ್ಯಾಸ ಅನಿಸಲಿಲ್ಲ. ಆದರೆ ಸುಮತಿ ಹಾಗೂ ಅವಳ ಅಕ್ಕ ಮಾತ್ರ ಊಟ ತಿಂಡಿ ಸರಿಯಾಗಿ ಮಾಡದೇ ಕೃಶರಾದರು. ಅದನ್ನು ಕಂಡ ಅಮ್ಮನ ಮನಸ್ಸು ನೊಂದು ಹೋಯಿತು. ಅತ್ಯವಶ್ಯಕ ವಸ್ತುಗಳನ್ನೆಲ್ಲ ಎತ್ತಿ ಇಟ್ಟುಕೊಂಡಿದ್ದು ಆಯ್ತು. ಬೀಳ್ಕೊಡಲು ನೆಂಟರು ಇಷ್ಟರು ಎಲ್ಲರೂ ಬಂದರು. ಎಲ್ಲರ ಮುಖವೂ ಕಳೆಗುಂದಿತ್ತು. ನಾಣುವಿನ ತೋಟದಲ್ಲಿ ಕೆಲಸ ಮಾಡುತ್ತಾ ಇದ್ದ ಎಲ್ಲಾ ಕೆಲಸಗಾರರು ಅವರ ಮನೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದವರು ಅಕ್ಕ ಪಕ್ಕದ ಮನೆಯವರು ಪಂಚಾಯತಿಯ ಇತರೇ ಸದಸ್ಯರು ಹೀಗೆ ಊರಿಗೆ ಊರೇ ಇವರನ್ನು ಬೀಳ್ಕೊಡಲು ಬಂದಿತ್ತು. ಸುಮತಿಯ ಗೆಳತಿಯರು ಬಂದು ಅವಳ ಜೊತೆ ಮಾತನಾಡಲು ಸಾಧ್ಯವಾಗದೇ ಗದ್ಗದಿತರಾಗಿ ಅವಳ ದುಖಃ ಭರಿತ ಮುಖವನ್ನು ನೋಡಲಾರದೆ ನೆಲ ನೋಡುತ್ತಾ ನಿಂತರು. ಕಲ್ಯಾಣಿಯವರಿಗೆ ಇದೆಲ್ಲಾ ನೋಡಿ ಅಲ್ಲಿ ನಿಲ್ಲಲಾಗಲಿಲ್ಲ. ಅಂಗವಸ್ತ್ರದಿಂದ ಕಣ್ಣೀರನ್ನು ಒರೆಸಿಕೊಂಡು ಒಳ ನಡೆದರು. ಅಮ್ಮನನ್ನು ಮಕ್ಕಳು ಕೂಡಾ ಹಿಂಬಾಲಿಸಿದರು. ತನ್ನ ಹಿಂದೆಯೇ ಬಂದ ನಾಲ್ವರು ಮಕ್ಕಳನ್ನೂ ಅಪ್ಪಿ ಹಿಡಿದರು. ಎಲ್ಲರ ಕೆನ್ನೆಗೂ ಹೂ ಮುತ್ತನ್ನು ಕೊಟ್ಟರು…” ನನ್ನ ಮಕ್ಕಳೇ” ….ಎಂದು ಹೇಳುತ್ತಿರುವಾಗಲೇ ಅವರ ದುಖಃದ ಕಟ್ಟೆ ಒಡೆಯಿತು. ನಾಲ್ವರನ್ನು ಅಪ್ಪಿ ಅತ್ತು ಬಿಟ್ಟರು. ಅಮ್ಮನ ಅಳು ಕಂಡಾಗ ಹೇಳಬೇಕೆ ಮಕ್ಕಳೂ ಜೊತೆಗೆ ಅತ್ತು ಬಿಟ್ಟರು. ನಾರಾಯಣ್ ಒಳಗೆ ಬಂದವರೇ “ನಡೆಯಿರಿ … ಸಮಯವಾಗುತ್ತಾ ಬಂತು” …. ಎಂದು ಹೇಳಿದಾಗ ಇದ್ದ ಧೈರ್ಯವನ್ನೆಲ್ಲಾ ತಂದುಕೊಂಡು ದೃಢ ನಿರ್ಧಾರ ಎಂಬಂತೆ ಕಲ್ಯಾಣಿಯವರು ಸ್ವಲ್ಪ ಎತ್ತರದ ಧ್ವನಿಯಲ್ಲಿ ….” ನಾವು ಯಾರೂ ಬರುವುದಿಲ್ಲ…. ನೀವೇ ಹೋಗಿ…. ಮಕ್ಕಳು ನಾನು ಇಲ್ಲೇ ಇರುತ್ತೇವೆ…. ಎಂದರು.
ರುಕ್ಮಿಣಿ ನಾಯರ್
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು