‘ಅಂಗಳದಲ್ಲೊಂದು ನಾಗಮಂಡಲ ನಾಟಕ’ ಪೂರ್ಣಿಮಾ ಸುರೇಶ್ ಕವಿತೆ

ಮೊನ್ನೆ ಅಂಗಳದಲ್ಲಿ
ಅದರಾಚೆ ಅಲ್ಲಿ ಹಟ್ಟಿಯ
ಹೊಸಿಲಲ್ಲಿ
ಬಸಿರಿನ ಹಸುವಿನ ನಿಡುದೂರ
ಮತ್ತೆ ಅವಳ ಕನಸಿನ ಮಾಡಿನ
ಪಕ್ಕಾಸನ್ನು ಆತು
ತಬ್ಬಿ ಸರಿದಾಡುತ್ತಿತ್ತು
ಆ ಚಿಗುರು ನಾಗರ

ಮನೆ ಹೊರಗಿನ ಗೂಡಿನಲ್ಲಿ ಬಂಧಿಯಾಗಿ ನಿಟ್ಟಿಸುವ
ಗಸ್ತು ತಿರುಗುವ
ನಾಯಿಗೆ
ಚಡಪಡಿಕೆ
ಅದೆಂತದೋ ಕ್ರೋಧ
ಬಾಗಿಲ ಸದ್ದು ಮಾಡುತ
ಮನೆ ಒಳಗಿನ ಜೀವದ ಮೋಹ
ಕಾಡಿ
ತನ್ನ ಅಸಹನೆಗೆ ಅದುರುತ್ತಿತ್ತು

ಹೊನಲೇರಿದಂತೆ ಬಳಕುವ
ಮೈ ಹೊರಳಿಸುತ್ತ ನೆಲ ಮುತ್ತಿಡುತ್ತ
ಒದ್ದೆ ಅಂಗಳ ದಾಟುತ್ತ
ಅದರಾಚೆಯ ಹಸಿರು ಹುಲ್ಲು
ಸವರುತ
ನಸುಗತ್ತಲಿನ ಮಾಟದ ಗಾಳಿ
ಹೀರುತ್ತ
ನಾಲಗೆ ಹೊರಚಾಚಿ ಸುಯ್ಯಿಲಿನ
ಸುಯ್ಲು ಹೊರಹಾಕಿ
ಸರಿದಾಡುತ್ತಿತ್ತು ಹಾವು

ಹೀಗೆ ನಡೆದ ಕತೆಯ ಒಂದು ಇಳಿಸಂಜೆ
ಅವಳು ಒಳಗಿನಿಂದ ಹೊರಬಂದಳು
ಸೆರೆಯಲಿ
ಗಸ್ತು ತಿರುಗುವನ ಕಣ್ಣ
ಬೇಡಿಕೆ
ಹಂಬಲ ಕಂಡು
ಸೃಷ್ಟಿಯ ಸೃಷ್ಟಿ ಸ್ಪರ್ಶಿಸುವ
ರುಚಿಸುವ ಗಳಿಗೆ
ಎನುತ
ಬಾಗಿಲ ತೆರೆದಳು

ಇಬ್ಬನಿಯ ಮಿದುಅಂಗಳದಲಿ
ಪಾದ ಊರುತ್ತ
ಒಳಮನೆಯ ಕತ್ತಲಿಗೆ
ನಡೆದಳು

ಮರುದಿನದ ಮುಂಜಾವು
ಅಂಗಳದ ತುದಿಯಲ್ಲಿತ್ತು
ತುಂಡು ಹಾವು
ತೆರೆದ ಬಾಗಿಲ ಗೂಡಿನೊಳಗೆ
ನಿಶ್ಚಿಂತೆಯ ನಿದ್ರೆಯಲ್ಲಿತ್ತು ಮನೆಯ ನಾಯಿ


3 thoughts on “‘ಅಂಗಳದಲ್ಲೊಂದು ನಾಗಮಂಡಲ ನಾಟಕ’ ಪೂರ್ಣಿಮಾ ಸುರೇಶ್ ಕವಿತೆ

Leave a Reply

Back To Top