ವೀಣಾ ಹೇಮಂತ್ ಗೌಡ ಪಾಟೀಲ್ -ವಿಚ್ಛೇದನ

ವಿಚಿತ್ರವಾದರೂ ಸತ್ಯ…  ಪರಸ್ಪರ ಗಂಡು-ಹೆಣ್ಣುಗಳು, ಪಾಲಕರು ಮತ್ತು  ಹಿರಿಯರು… ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಪಾರಿವಾರಿಕವಾಗಿ ಪರಸ್ಪರ ಹೊಂದಾಣಿಕೆ ಸಾಧ್ಯ ಎಂಬುದನ್ನು ಪರಿಶೀಲಿಸಿ, ಒಪ್ಪಿ ಮಾಡಿರುವ ವಿವಾಹದ ಬಂಧವನ್ನು ಕೋರ್ಟ್ನ ಮೂಲಕ ಮುರಿದು ಹಾಕುವುದು ಅಥವಾ ಬೇರ್ಪಡಿಸುವುದು ವಿಚ್ಛೇದನ.

ಹಾಗಾದರೆ ಸಂಬಂಧಗಳು ಹಳಸುವುದು ಯಾವಾಗ?

*ಪರಸ್ಪರ ಒಬ್ಬರಿಗೊಬ್ಬರು ಸಮಯ, ಪ್ರೀತಿ ನೀಡದೆ ಇದ್ದಾಗ ಮತ್ತು ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಳ್ಳದೆ ಹೋದಾಗ

*ದಾಂಪತ್ಯ ಎಂಬುದು ಎರಡು ಜೀವಗಳು ಒಟ್ಟಾಗಿ ಜೊತೆಯಾಗಿ ಸಾಗಿಸಬಹುದಾದ ಸುಧೀರ್ಘ ಸಂಬಂಧ ಮತ್ತು ಆ ಸಂಬಂಧದಲ್ಲಿ ಪರಸ್ಪರ ಕುಂದು ಕೊರತೆಗಳನ್ನು ಅರಿಯುವುದು ಮತ್ತು ಕುಂದು ಕೊರತೆಗಳ ಸಮೇತ ಅವರನ್ನು ಸ್ವೀಕರಿಸದೇ ಇರುವುದು.

*ಇತ್ತೀಚೆಗಿನ ಮಾಧ್ಯಮಗಳ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಅತಿರಂಜಿತವಾದ ಭ್ರಾಮಕ ಬದುಕಿನ ಚಿತ್ರಣಗಳು ಮತ್ತು ಅದರ ಪರಿಣಾಮವಾಗಿ ಸ್ವೇಚ್ಚೆಯ ಜೀವನವನ್ನು ಬಯಸುವ ಯುವಜನ.

*ಪರಸ್ಪರ ಅರಿವಿನ ಮತ್ತು ಹೊಂದಾಣಿಕೆಯ ಕೊರತೆ, ಸಂಬಂಧಗಳಲ್ಲಿ ತಲೆದೋರುವ ಅಹಂ

*ಮದುವೆ ಎಂಬ ಸುಮಧುರ ಮತ್ತು ಸುಭದ್ರ ಸಾಮಾಜಿಕ ವ್ಯವಸ್ಥೆಯ ಕುರಿತಾದ ಶಿಥಿಲ ತಿಳುವಳಿಕೆಗಳು.

* ಇನ್ನೂ ಹಲವು ಬಾರಿ ಮಾನಸಿಕ ಮತ್ತು ದೈಹಿಕ ಹಲ್ಲೆಗಳು.

ಮಾತೆತ್ತಿದರೆ ನಾನು ನಿನಗೆ ಡೈವೋರ್ಸ್ ಕೊಟ್ಟುಬಿಡುತ್ತೇನೆ ಎಂದು ಕೂಗಾಡುವ ದಂಪತಿಗಳು ಮುಖ್ಯವಾಗಿ ಅರಿಯಬೇಕಾಗಿರುವುದು
ವಿಚ್ಛೇದನವನ್ನು ದಂಪತಿಗಳು ಪರಸ್ಪರ ಒಬ್ಬರಿಗೊಬ್ಬರು ಕೊಡುವುದಲ್ಲ!! ವಿಚ್ಛೇದನವನ್ನು ಕೊಡಬೇಕೇ?? ಬೇಡವೆ?? ಎಂಬುದನ್ನು ತೀರ್ಮಾನ ಮಾಡುವುದು ನ್ಯಾಯಾಲಯ. ದಂಪತಿಗಳು ತಮ್ಮ ವಿವಾಹ ಸಂಬಂಧದ ವಿಚ್ಛೇದನಕ್ಕೆ ಕೋರ್ಟಿನ ಮೊರೆ ಹೋಗಬೇಕು, ವಿಚ್ಛೇದನಕ್ಕೆ  ಸಮಂಜಸವಾದ ಕಾರಣಗಳನ್ನು ಕೋರ್ಟ್ನ ಮುಂದೆ ಇಡಬೇಕು ಮತ್ತು ಅದನ್ನು ಪರಿಶೀಲಿಸಿದ ಕೋರ್ಟ್ ಕೌಟುಂಬಿಕ ಸಲಹೆಗಳಿಗಾಗಿ ಮತ್ತೆ ಆದೇಶ ನೀಡುತ್ತದೆ. ಪರಸ್ಪರ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂದು ಮನವರಿಕೆಯಾದಾಗ ಮಾತ್ರ ಕೋರ್ಟ್ ವಿಚ್ಛೇದನಕ್ಕೆ ಆದೇಶ ನೀಡಬಹುದು, ಇಲ್ಲವೇ ಮತ್ತೆ ಹೊಂದಾಣಿಕೆಯ ಮೂಲಕ ಕೌಟುಂಬಿಕ ಜೀವನ ನಡೆಸಲು ಹೇಳಬಹುದು. ಆದರೆ ವಿಚ್ಛೇದನದ ಈ ಪ್ರಕ್ರಿಯೆ ಕೆಲವೊಮ್ಮೆ ಅನೇಕ ವರ್ಷಗಳ, ದಶಕಗಳ ಕಾಲ ಜರುಗುತ್ತದೆ.

ವಿಚ್ಛೇದನದ ಪರಿಣಾಮಗಳು

*ಆರ್ಥಿಕವಾಗಿ ಸಬಲಳಲ್ಲದ ಪತ್ನಿಗೆ ವಿಚ್ಛೇದನದ ನಂತರ ಆಕೆಯ ಜೀವನ ನಿರ್ವಹಣೆಗೆ ಪರಿಹಾರವಾಗಿ ಆಸ್ತಿ ಮತ್ತು ಹಣವನ್ನು ನೀಡಬೇಕಾಗುತ್ತದೆ. ತನ್ನ ಮತ್ತು ತನ್ನ ಮಕ್ಕಳ ಜೀವನಕ್ಕೆ ಬೇಕಾಗುವ ಹಣಕಾಸಿನ ವ್ಯವಸ್ಥೆಯನ್ನು ಮಹಿಳೆ ಮಾಡಿಕೊಳ್ಳಲೇಬೇಕಾಗುತ್ತದೆ. ಸಾಮಾಜಿಕವಾಗಿಯೂ ಆಕೆ ಕೆಟ್ಟ ಮಾತು, ಅವಮಾನ ಮತ್ತು ಕುಹಕಗಳಿಗೆ ಬಲಿಯಾಗಬೇಕಾಗುತ್ತದೆ.

*ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ…….
 ಪತಿ ಪತ್ನಿಯರ ನಡುವಿನ ವಿಚ್ಛೇದನದ ಪ್ರಕ್ರಿಯೆಯಲ್ಲಿ ದಂಪತಿಗಳಿಗೆ ಮಕ್ಕಳಿದ್ದರೆ ಮುಂದೆ ಆ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯನ್ನು ಯಾರು ಹೊರಬೇಕು ಎಂಬುದು ಕೂಡ ಮುಖ್ಯ ಕಾರಣವಾಗುತ್ತದೆ. *ಪತಿ ಪತ್ನಿಯರ ನಡುವಿನ ಬಿರುಕು ಮತ್ತು ವಿಚ್ಛೇದನದ ಪರಿಣಾಮ ಮಗುವಿನ ಮೇಲೆ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಬೀರುವ ದುಷ್ಪರಿಣಾಮವಂತೂ ಘೋರ. ಮಗು ಮಾನಸಿಕವಾಗಿ ಅಭದ್ರತೆಯಿಂದ ಬಳಲುತ್ತದೆ.

*ಮದುವೆ ಎಂಬ  ವ್ಯವಸ್ಥೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ಪರಸ್ಪರ ಪತಿ-ಪತ್ನಿಯರನ್ನು ಒಂದು ಸುಮಧುರ ಬಂಧನದಲ್ಲಿ ಬೆಸೆದಿರುತ್ತದೆ. ಆದರೆ ಪರಸ್ಪರ ಕುಂದು ಕೊರತೆಗಳ ಅರಿವು, ನಂಬಿಕೆ ವಿಶ್ವಾಸ ಮತ್ತು ಪ್ರೀತಿಯ ಬಂಧನವಿಲ್ಲದೆ ಹೋದಾಗ ಈ ವ್ಯವಸ್ಥೆ ಕುಸಿದು ಬೀಳುತ್ತದೆ.

ವಿಚ್ಛೇದನದ ಅವಶ್ಯಕತೆ…. ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯ ಎಂಬ ಪ್ರಾಚೀನ ಆದರೆ ಎಂದೆಂದಿಗೂ ಪ್ರಸ್ತುತವಾಗಿರುವ ನಮ್ಮ ಭಾರತೀಯ ವ್ಯವಸ್ಥೆಯಲ್ಲಿ ತೀರ ಅನಿವಾರ್ಯವಲ್ಲದ ಹೊರತು ವಿಚ್ಛೇದನ ಅಪೇಕ್ಷಣೀಯವಲ್ಲ.
ನಮ್ಮ ತಂದೆ-ತಾಯಿಗೆ, ಅಣ್ಣ-ತಮ್ಮಂದಿರಿಗೆ, ಅಕ್ಕ-ತಂಗಿಯರಿಗೆ, ಸಂಬಂಧಿಗಳಿಗೆ, ಮಕ್ಕಳಿಗೆ ನಾವೆಂದೂ ವಿಚ್ಛೇದನ ಕೊಡುವುದಿಲ್ಲ… ಬದಲಾಗಿ ಅವರ ಎಲ್ಲಾ ಕುಂದು ಕೊರತೆಗಳ, ಅತಿರೇಕಗಳ ಹೊರತಾಗಿಯೂ ಅವರಿರುವಂತೆಯೇ ಅವರನ್ನು ಸ್ವೀಕರಿಸುತ್ತೇವೆ…. ದಾಂಪತ್ಯವೂ ಹಾಗೆಯೇ. ಕ್ಷುಲ್ಲಕ ಕಾರಣಗಳು, ಅರ್ಥವಿಲ್ಲದ ಅನುಮಾನಗಳು, ಅವಮಾನಗಳು ನಿಂದನೆಗಳು ದಾಂಪತ್ಯದ ಸುಮಧುರಬಂಧನವನ್ನು ದುರ್ಬಲಗೊಳಿಸುತ್ತವೆ.
ಒಂದು ಸುಂದರ ದಾಂಪತ್ಯ ನಿಂತಿರುವುದು ಪರಸ್ಪರ ಪ್ರೀತಿ,ವಿಶ್ವಾಸ,ನಂಬಿಕೆ ಮತ್ತು ಜವಾಬ್ದಾರಿಯ ತಳಹದಿಯ ಮೇಲೆ. ಒಂದು ವಿಚ್ಛೇದನದಿಂದ ಮುಂದಿನ ಜೀವನ ಸರಳವಾಗುತ್ತದೆ ಎಂಬ ನಂಬಿಕೆ ಇದ್ದರೆ ಅದು ಸುಳ್ಳು ಎಂಬುದು ನೂರಕ್ಕೆ 90ರಷ್ಟು ಜನರ ಅಭಿಪ್ರಾಯ ಮತ್ತು ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರದಲ್ಲಿ ಅದು ಕಷ್ಟ ಸಾಧ್ಯವಾದದ್ದು ಕೂಡ.

ದಾಂಪತ್ಯ ದ್ರೋಹ, ಅತಿಯಾದ ಮಾನಸಿಕ ಮತ್ತು ದೈಹಿಕ ಹಿಂಸೆ, ವರದಕ್ಷಿಣೆ ಕಿರುಕುಳದಂತಹ ಸಾಮಾಜಿಕ ಪಿಡುಗುಗಳು, ಕೌಟುಂಬಿಕ ಹಿಂಸೆಯ ಮುಂತಾದ ಪ್ರಕರಣಗಳಲ್ಲಿ ಪರಿಸ್ಥಿತಿಯು ದುರ್ಬರಗೊಳ್ಳದಿರಲು ಮತ್ತು ಸುರಕ್ಷತೆಯ ದೃಷ್ಟಿಯಿಂದ ವಿಚ್ಛೇದನ ಅನಿವಾರ್ಯ ಮತ್ತು ಅವಶ್ಯಕವೂ ಹೌದು. ಆದರೆ ಸಣ್ಣ ಪುಟ್ಟ ಬಗೆಹರಿಸಬಹುದಾದ ಜಗಳಗಳು, ಕಿರಿಕಿರಿಗಳು ವಿಚ್ಛೇದನಕ್ಕೆ ದಾರಿ ತೋರಿಸಬಾರದು.

ದಾಂಪತ್ಯ ಎಂಬುದು ಪ್ರೀತಿ, ವಿಶ್ವಾಸ, ನಂಬಿಕೆ ಆದರಗಳನ್ನು ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಕ್ರಿಯೆ. ಇಲ್ಲಿ ಸೋತು ಗೆಲ್ಲಬೇಕು ಗೆದ್ದು ಸೋಲಬೇಕು. ತಮ್ಮ ಸುತ್ತ ಕಟ್ಟಿರುವ ಅಹಮ್ಮಿಕೆಯ ಗೋಡೆಯನ್ನು ತಾವೇ ಒಡೆಯಬೇಕು ದಂಪತಿಗಳಿಬ್ಬರು ಪರಸ್ಪರರ ಪ್ರೀತಿಗೆ ಸೋತು, ವಿಶ್ವಾಸವನ್ನು ಗೆದ್ದು ಜೀವನ ಸಾಗಿಸಬೇಕು. ಒಬ್ಬರನ್ನೊಬ್ಬರು ಗೆಲ್ಲಿಸಬೇಕು.
ಗೆಲ್ಲಬೇಕು.


Leave a Reply

Back To Top