ಶಿಕ್ಷಕರ ವಿದ್ವತ್ತಿಗೆ ಇಲ್ಲದ ಸಮ್ಮಾನ-ವಿಶ್ವಾಸ್. ಡಿ ಗೌಡ

ಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಮುಖ ಸದ್ಯಸರು ಏಕೆಂದರೆ ಅವರ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ.

  _ವಿದ್ಯಾರ್ಥಿಗಳಿಗೆ ಶಿಕ್ಷಿಸಿದರೆ ವಿವಾದ_

ನಾನು ವಿದ್ಯಾರ್ಥಿ ಯಾಗಿದ್ದ ಸಮಯದಲ್ಲಿ ಕೋಲಿನಿಂದ ಹೊಡೆದು ಕಲಿಸುತ್ತಿದ್ದರು. ಬಹುಶಃ ಪ್ರತಿ ಶಿಕ್ಷಕನ ಈ ಕ್ರಮದ ಹಿಂದೆ ಇದ್ದುದ್ದು ವಿದ್ಯಾರ್ಥಿಗೆ ಉತ್ತಮ ಶಿಕ್ಷಣ ನೀಡಬೇಕು. ಸಚ್ಚಾರಿತ್ರೆಯ ವ್ಯಕ್ತಿಯನ್ನಾಗಿ ರೂಪಿಸಬೇಕು. ಆದರೆ ಈಗ ಕೋಲು ಬಿಡಿ ಕೈಯಿಂದ ಹೊಡೆದರೂ ಅದರಲ್ಲಿ ಇಲ್ಲದ ವಿವಾದ ಸೃಷ್ಟಿಯಾಗುವ ಸಾಧ್ಯತೆಯೂ ಇದೆ ,ಕಾರಣ ಇಷ್ಟೇ .ಹಿತೋಪದೇಶ ಕೇಳಿಸಿಕೊಂಡ ವಿದ್ಯಾರ್ಥಿಯು ಮನೆಯಲ್ಲಿ ಎಂಥ ಬಣ್ಣ ಬಳಿದು ವರ್ಣಿಸಬಹುದು ?ಆತನ ಮನೆಯವರು ಬಂದು ಗಲಾಟೆ ಮಾಡಬಹುದೇ? ಅದು ಪೊಲೀಸ್ ಠಾಣೆ ಮೆಟ್ಟಿಲೇರಿತೇ ಇಂಥ ಭೀತಿ ಪ್ರತಿಯೊಬ್ಬ ಶಿಕ್ಷಕರನ್ನೂ ಸದಾ ಕಾಡದೇ ಇರದು.

 ವ್ಯವಸ್ಥೆಯ ವ್ಯಂಗ್ಯ

 ಗುರುವನ್ನು ದೇವರಿಗೆ ಸಮಾನವಾಗಿ ಕಾಣುವ ಸಂಸ್ಕೃತಿಯಲ್ಲಿ ಬೆಳೆದು ಬಂದವರು ಭಾರತೀಯರು. ಹೀಗಿರುವಾಗ ಒಂದು ಕಾಲದ ದೇವರನ್ನು ಇಂದು ತುಚ್ಚವಾಗಿ ಕಾಣುವಂಥ ಬದಲಾವಣೆಯಾಗಲು ಕಾರಣ ಪೋಷಕರ ಅತಿಯಾದ ಮಕ್ಕಳ ಮೇಲಿನ ಪ್ರೀತಿಯೇ? ಇಲ್ಲಾ ಇಂದಿನ ಸಿನಿಮಾಗಳಲ್ಲಿ ಶಿಕ್ಷಕ ಪಾತ್ರವನ್ನು ನಗೆಪಾಟಲಿನ ಪಾತ್ರವಾಗಿ ಚಿತ್ರಿಸುವ ಕ್ರಮವೇ ಎಂದು ಪ್ರಶ್ನಿಸಿಕೊಂಡಾಗ, ಉತ್ತರ ಹೌದು ಎಂದು ಹೇಳದೇ ಇರಲು ಸಾಧ್ಯವಿಲ್ಲ (ಇದಕ್ಕೆ ಒಂದೆರಡು ಸಿನಿಮಾಗಳು ಹೊರತಾಗಿ ಬಹುದು) . Teaching profession is a Noble profession ಎನ್ನುವ ಮಾತಿದೆ. ಆದರೆ, Noble profession ಅನ್ನು ನಿರ್ವಹಿಸುವ ಶಿಕ್ಷಕನ ಬಗ್ಗೆ ಗೌರವಾಧರಗಳನ್ನು ಇಟ್ಟುಕೊಳ್ಳದಿರುವುದು ವ್ಯವಸ್ಥೆಯ ವ್ಯಂಗ್ಯ.

 ಟೀಚಿಂಗ್ ಸವಾಲಿನದು

 ಇಂದು ಟೀಚಿಂಗ್ ತುಂಬಾ ಸವಾಲಿನದು .ಏಕೆಂದರೆ ವಿದ್ಯಾರ್ಥಿಗಳ ಮನಸ್ಸನ್ನು ಮೊಬೈಲ್, ಲ್ಯಾಪ್ ಟಾಪ್, ಐಪ್ಯಾಡು ಗಳು ಆಕ್ರಮಿಸಿವೆ. ಅಲ್ಲದೆ ಇಯರ್ ಫೋನ್, ಸೆಲ್ಫಿಯ ಗುಂಗಿನಿಂದ ಬಿಡಿಸಿ, ತರಗತಿಯ ತನ್ಮಯತೆಯತ್ತಾ ಮರಳಿಸುವುದು ಸಾಹಸದ ಕೆಲಸ. ಪರಿಸ್ಥಿತಿ ಹೀಗಿದ್ದರೂ ಈಗಲೂ ಶಿಕ್ಷಕರು ವಿದ್ಯಾರ್ಥಿಗಳ ಹಿತವನ್ನೇ ಬಯಸುತ್ತಿರುತ್ತಾರೆ. ವಿದ್ಯಾರ್ಥಿಯ ಹಿತ ನನ್ನ ಆದ್ಯತೆ ಎಂದು ಭಾವಿಸುತ್ತಾರೆ ಆದರೆ ವಿದ್ಯಾರ್ಥಿಗಳು ಮಾತ್ರ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ ಆದರೆ ಒಂದಂತೂ ಸತ್ಯ .ಮನೆಯಲ್ಲಿ ಶಿಕ್ಷಕರ ಬಗ್ಗೆ ಗೌರವದ ಭಾವನೆಯಿದ್ದರೆ, ಶಿಕ್ಷಕರ ಬಗ್ಗೆ ಮಕ್ಕಳಿಗೆ ಉತ್ತಮ ಪಾಠ ಮನೆಯಿಂದ ದೊರೆತರೆ ಹಾಗೂ ಶಿಕ್ಷಕರ ಬಗ್ಗೆ ಸಮಾಜದ ಭಾವನೆ ಬದಲಾದರೆ ಖಂಡಿತವಾಗಿಯೂ ವಿದ್ಯಾರ್ಥಿಗಳು ಬದಲಾಗಲು ಸಾಧ್ಯ ಈ ದಿಶೆಯಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ಜಾಗೃತಗೊಳಿಸುವ ಅಗತ್ಯವಿದೆ.

 ಮನೆಯೇ ಮೊದಲ ಪಾಠಶಾಲೆ

“ಮನೆಯೇ ಮೊದಲ ಪಾಠಶಾಲೆ
ಜನನಿ ತಾನೇ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರೇ ಧನ್ಯರು”.
ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತು ಈ ನೆಲೆಯಲ್ಲಿ ಹುಟ್ಟಿಕೊಂಡಿದೆ ಎಂಬುದರಲ್ಲಿ ಸಂಶಯವಿಲ್ಲ. ಹೀಗಾಗಿ ಪೋಷಕರು ಮಕ್ಕಳನ್ನು ಕೇವಲ ಹಣ ದುಡಿಯುವ ಯಂತ್ರಗಳನ್ನಾಗಿಸದೆ , ಪಾಠ ಒಪ್ಪಿಸುವ ಗಿಳಿಗಳಾಗಿಸದೆ, ಮಾನವೀಯತೆ ಮೆರೆಯುವ ಗಣಿಗಳಾಗಿಸಬೇಕು .ಮಕ್ಕಳು ಡಾಕ್ಟರ್, ಇಂಜಿನಿಯರ್,ಐಎಎಸ, ಕೆಎಎಸ್ ಇತ್ಯಾದಿ ಅಧಿಕಾರಿಗಳಾಗಬೇಕೆಂದು ಬಯಸುವ ಪಾಲಕರು, ಅವರು ಮೊದಲು ಮನುಷ್ಯರಾಗುವುದನ್ನು ಕಲಿಸಬೇಕು.


One thought on “ಶಿಕ್ಷಕರ ವಿದ್ವತ್ತಿಗೆ ಇಲ್ಲದ ಸಮ್ಮಾನ-ವಿಶ್ವಾಸ್. ಡಿ ಗೌಡ

  1. ತುಂಬಾ ಅದ್ಭುತವಾದ ಲೇಖನ ಸರ್ . ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಗೌರವ, ವಿನಯ, ವಿಧೇಯ ಇಲ್ಲದಿರುವಿಕೆ ಯನ್ನೂ ನಿಮ್ಮ ಲೇಖನವು ಸ್ಪಷ್ಟೀಕರಿಸುತ್ತದೆ.

Leave a Reply

Back To Top