ಕಾವ್ಯಸಂಗಾತಿ
ಇಂದಿರಾ ಮೋಟೆಬೆನ್ನೂರ
‘ಮೌನ ಮಾತಾದಾಗ’
ನೋಡಲಾರೆ ನಾನು
ನಿನ್ನ ಕಣ್ಣಲಿ ನೀರು
ತಾಳಲಾರೆ ನಾನು
ನಿನ್ನ ವೇದನೆಯ ಕಾವು
ಎಲ್ಲ ಮರೆತೊಮ್ಮೆ
ಮಗುವಂತೆ ನಗಬಾರದೇ…
ನಿನ್ನೆದೆ ಮಿಡಿದ ನೋವ
ಈಟಿ ನನ್ನೆದೆ ಮೀಟಿ
ನಿನ್ನ ಮನದ ಅಳಲು
ನನ್ನೊಡಲ ಕಲಕಿ
ಎದೆ ಬಿರಿದು ಅಳುತಿದೇ
ಬಳಿಸಾರಿ ಬೆರಳಿಂದೊಮ್ಮೆ
ಒರೆಸಬಾರದೇ…
ನೋಡಲಾರೆ ನಿನ್ನ ವೇದನೆ …
ನಿನ್ನ ನಗುವೇ ಎನ್ನಾಸ್ತಿ
ನಿನ್ನ ನೆಮ್ಮದಿ ನನ್ನ ಶಕ್ತಿ..
ನಿನ್ನ ನಲಿವು ನನ್ನಗೆಲುವು
ಮೊಗದ ಮುಗುಳು ನನ್ನ ಕನಸು
ಬೆರೆತೊಮ್ಮೆ ನನಸಾಗಿಸಬಾರದೇ
ಎದೆ ಬಸಿದು
ಹುಸಿ ಹೋಗದ
ಭರವಸೆಗೆ ತುಸು
ಒಲವ ಕಸು ತುಂಬಿ
ನಸು ನಗುತ ಜೊತೆ
ಜೊತೆಗೆ ಸಾಗಬಾರದೇ..
ಇಂದಿದ್ದು ನಾಳೆ
ಉರುಳುವ ಬಾಳಿದು..
ಬೇಗ ಬಂದೊಮ್ಮೆ
ಭಾವ ದೀಪ ಬೆಳಗಿಸಿ
ಸ್ನೇಹ ರಾಗ
ನುಡಿಸಬಾರದೇ…
ಮಾಮರ ಮೈದುಂಬಿ
ಚಿಗುರು ಒಗರನು
ಹೊತ್ತು ನಿಂದಂತೆ..
ಕೋಗಿಲೆ ಮೈಮರೆತು
ಮನದುಂಬಿ ಮೊರೆದಂತೆ
ಮಾತಾಡಬಾರದೇ…
ಮುನಿಸೇಕೆ ಮನಬಿಚ್ಚಿ
ಮೌನ ತೊರೆದು
ಹೃದಯ ಗೂಡಲಿ
ಬಚ್ಚಿಟ್ಟ ಬಿತ್ತಿದ
ಭಾವಬುತ್ತಿಯ ಬಿಚ್ಚೊಮ್ಮೆ
ಉಣಿಸಬಾರದೇ…
ಇಂದಿರಾ ಮೋಟೆಬೆನ್ನೂರ.