ಅನ್ಯಮನಸ್ಕಳಾಗಿ ಕುಳಿತಿದ್ದ ಸುಮತಿಯನ್ನು ಅವಳ ಅಕ್ಕನ ಧ್ವನಿ ಎಚ್ಚರಿಸಿತು…. “ಸುಮತೀ…. ನೀನು ಇಲ್ಲಿ ಇದ್ದೀಯಾ ನಾನು ಎಲ್ಲೆಲ್ಲಾ ಹುಡುಕಿದೆ. ಅಪ್ಪ ಬಂದಿದ್ದಾರೆ…. ಅಪ್ಪ ಅಮ್ಮನ ನಡುವೆ ಏನೋ ಮಾತುಕತೆ ಜೋರಾಗಿ ನಡೆಯುತ್ತಾ ಇದೆ…. ಆದರೆ ಏನು ಅಂತ ಸರಿಯಾಗಿ ನನಗೆ ಗೊತ್ತಿಲ್ಲ ಬೇಗ ಬಾ…. ಮನೆಗೆ ಹೋಗೋಣ ಎಂದಳು ಅಕ್ಕ. ಅಕ್ಕನ ಮಾತುಗಳನ್ನು ಕೇಳಿ ಸುಮತಿ ದಿಗ್ಭ್ರಮೆಗೊಂಡಳು.

ಅವಳಿಗೆ ಅಚ್ಚರಿಯಾಯಿತು ಅಪ್ಪ ಅಮ್ಮ ಎಂದೂ ಜೋರಾಗಿ ಮಾತನಾಡಿದವರೇ ಅಲ್ಲ. ಇಂದೇಕೆ ಹೀಗೆ ಎಂದು ಗಾಭರಿಯಾಗಿ ಆತುರಾತುರವಾಗಿ ಅಕ್ಕನ ಹಿಂದೆ ಓಡಿದಳು. ಎದುರಿಸಿತು ಬಿಡುತ್ತಾ ಅಪ್ಪ ಅಮ್ಮ ಮಾತನಾಡುತ್ತಾ ಇದ್ದ ಕೋಣೆಯ ಹತ್ತಿರ ಬಂದಳು. ಆದರೆ ಒಳಗೆ ಹೋಗಲಿಲ್ಲ. ಅಪ್ಪ ಅಮ್ಮ ಮಾತನಾಡುವಾಗ ಎಂದೂ ಮಧ್ಯ ಹೋಗುವ ಅಭ್ಯಾಸ ಮಕ್ಕಳಿಗೆ ಇರಲಿಲ್ಲ. ಅಮ್ಮ ಹೇಳಿದ್ದರು ದೊಡ್ಡವರು ಮುಖ್ಯವಾದ ವಿಷಯ ಮಾತನಾಡುವಾಗ ಅಲ್ಲಿಗೆ ಬರಬಾರದು ಎಂದು. ಹಾಗಾಗಿ

ಒಳಗೆ ಹೋಗದೇ ಅಲ್ಲೇ ನಿಂತಳು.  ಆದರೂ ಮನದಲ್ಲಿ ಏನೋ ಆತಂಕ ಏನಿರಬಹುದು ಏಕಿರಬಹುದು ಅಪ್ಪ ಇಷ್ಟು ಜೋರಾಗಿ ಮಾತನಾಡುತ್ತಾ ಇರುವುದು?  ಆದರೂ ಅಸ್ಪಷ್ಟವಾಗಿ ಅಪ್ಪ ಹೇಳಿದ್ದು ಕಿವಿಗೆ ಬಿತ್ತು…” ನಾನು ನಿನಗೆ ಮೊದಲೇ ಹೇಳಿದ್ದೆ ಯಾರು ವಿರೋಧ ಮಾಡಿದರೂ ನಾನು ಆಗಲೇ ಎಲ್ಲವೂ ತೀರ್ಮಾನಿಸಿ ಆಯ್ತು…. ಅದು ಹೇಗೆ ನೀನು ಬರುವುದಿಲ್ಲ ಅಲ್ಲಿಗೆ… ಬಂದೇ ಬರುತ್ತೀ ” ಎನ್ನುವ ಮಾತು ಕೇಳಿ ವಿಷಯ ಏನು ಎಂದು ಸುಮತಿಗೆ ಅರ್ಥ ಆಗಲಿಲ್ಲ. ಅಕ್ಕನ ಮುಖ ನೋಡಿದಳು ತನಗೂ ಏನೂ ಗೊತ್ತಿಲ್ಲ ಎನ್ನುವಂತೆ ಅವಳೂ ತಲೆ ಆಡಿಸಿದಳು. ಸುಮತಿಯ ಮನದಲ್ಲಿ ಪ್ರಶ್ನೆ ಮೂಡಿತು ಅಮ್ಮ ಅಪ್ಪನ ಜೊತೆ ಸಕಲೇಶಪುರಕ್ಕೆ ಬರಲು ತನ್ನ ಅಸಮ್ಮತಿ ಸೂಚಿಸುತ್ತಾ ಇರುವರೇ? ಹಾಗಾದರೆ ನಾವು ಮಕ್ಕಳು?

ಕೋಣೆಯಿಂದ  ನಾರಾಯಣನ್ ನೇರವಾಗಿ ಹೊರಗೆ ಬಂದು ಕಾರ್ಯಸ್ಥನ್ ಅವರನ್ನು ಉದ್ದೇಶಿಸಿ…

” ಎಲ್ಲವನ್ನೂ ಸರಿಯಾಗಿ ನೋಡಿ ಲೆಕ್ಕಾಚಾರ ಮಾಡಿ ನಂತರ ನನಗೆ ತಿಳಿಸಿ…. ಹೊರಗೆ ಸ್ವಲ್ಪ ಕೆಲಸ ಇದೆ ಹೋಗಿ ಬರುವೆ ಎಂದು ಹೇಳಿ ಕೋಪದಿಂದಲೇ ಹೊರ ನಡೆದರು. ಮೊದಲೇ ಬೆಳ್ಳಗೆ ಕೆಂಪಗೆ ಇದ್ದ ನಾಣುವಿನ ಮುಖ ಕೋಪದಿಂದ ರಕ್ತ ವರ್ಣಕ್ಕೆ ತಿರುಗಿತ್ತು. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಎದುರಿಸುತ್ತಾ ಇದ್ದ ಅಪ್ಪ ಪಂಚಾಯತಿಯಲ್ಲಿ ಕೂಡಾ ಎಂತಹ ಜಟಿಲ ಸಮಸ್ಯೆಗಳು ಇದ್ದರೂ ಸಹನೆ ತಾಳ್ಮೆಯಿಂದ ಯೋಚಿಸಿ ಪರಿಹರಿಸುತ್ತಾ ಇದ್ದ ಅಪ್ಪ ಇಂದೇಕೆ ಹೀಗೆ? ಅದೂ ಅಮ್ಮನ ಜೊತೆ ಈ ರೀತಿ ಕೋಪದಲ್ಲಿ ಮಾತನಾಡುವುದು ಸುಮತಿ ಎಂದೂ ನೋಡಿಯೇ ಇರಲಿಲ್ಲ. ಅಮ್ಮನೂ ಕೂಡಾ ಅಪ್ಪನ ಮಾತಿಗೆ ವಿರೋಧವಾಗಿ ಇಲ್ಲಿಯವರೆಗೂ ಒಂದು ಮಾತು ಆಡಿದವರಲ್ಲ. ಅಂಥದ್ದು ಏನಾಯ್ತು ಎಂದು ತಿಳಿದುಕೊಳ್ಳಲೇಬೇಕು ಎಂದುಕೊಳ್ಳುತ್ತಾ ಸುಮತಿ ಗಡಿಬಿಡಿಯಿಂದ ಒಳಗೆ ಓಡಿದಳು. ಅವಳು ಉಟ್ಟಿದ್ದ ಉದ್ದನೆಯ ಲಂಗ ಹೊಸ್ತಿಲು ದಾಟುವಾಗ ಬೆರಳಿಗೆ ಸಿಲುಕಿ ಕೆಳಗೆ ಬಿದ್ದಳು. ನೋವಿನಿಂದ ಅಲ್ಲಿಂದಲೇ…. “ಅಮ್ಮಾ” ಎಂದು ಕೂಗಿದಳು.  ಮಗಳು ನೋವಿಂದ ಕೂಗುವ ಧ್ವನಿ ಕೇಳಿ ಕಲ್ಯಾಣಿ ಸೀರೆಯ ಸೆರಗಿನಿಂದ ಕಣ್ಣು ಮೂಗು ಮುಖ ಒರೆಸಿಕೊಂಡು ಧಾವಿಸಿ ಅಲ್ಲಿಗೆ ಬಂದರು. ಕೆಳಗೆ ಬಿದ್ದಿದ್ದ ಮಗಳನ್ನು ನೋಡಿ ಸಂಕಟದಿಂದ …. “ಏನಾಯ್ತು  ಸುಮತಿ” ಎಂದು ಕೇಳುತ್ತಾ ಕೈ ಹಿಡಿದು ಎಬ್ಬಿಸಿದರು…. “ನೋಡಿಕೊಂಡು ಬರಬಾರದೇ ಮಗಳೇ”… ಎಂದು ಹೇಳುತ್ತಾ ಎಲ್ಲಾದರೂ ಪೆಟ್ಟು ಆಗಿರ ಬಹುದೇ ಎಂದು ನೋಡಿದಾಗ ಅವಳ ಮೊಣಕೈಯಿಂದ ರಕ್ತ ಜಿನುಗುತ್ತಾ ಇತ್ತು. ಆ ನೋವಿನಲ್ಲೂ ಕೂಡಾ ಅತ್ತು ಕೆಂಪಾಗಿದ್ದ ಅಮ್ಮನ ಕಣ್ಣುಗಳನ್ನು ನೋಡಿ ಕೇಳಿದಳು….”

“ಏನಾಯ್ತು ಅಮ್ಮ…. ಏಕೆ ಅಪ್ಪ ಜೋರಾಗಿ ಮಾತನಾಡುತ್ತಾ ಇದ್ದರು…. ನೀನೇಕೆ ಅಳುತ್ತಾ ಇರುವೆ?

ಸುಮತಿಯ ಈ ಮಾತಿಗೆ ಕಲ್ಯಾಣಿಯವರಿಗೆ ಏನು ಹೇಳಬೇಕು ಎಂದು ತೋಚಲಿಲ್ಲ. ಮಗಳ ಮುಗ್ದ ಮುಖವನ್ನೇ ದಿಟ್ಟಿಸಿ ನೋಡಿದರು.ನಂತರ ನಿಧಾನವಾಗಿ….”ಸುಮತಿ ನಾವು ಯಾರೂ ಇಲ್ಲಿಂದ ಹೋಗುವುದು ಬೇಡ ಅಂತ ಅಪ್ಪನಿಗೆ ಹೇಳು…. ನನಗೇಕೋ ನಾವು ಇಲ್ಲಿಂದ ಅಲ್ಲಿಗೆ ಹೋಗುತ್ತಿರುವುದು ಸರಿ ಎಂದು ಅನಿಸುತ್ತಾ ಇಲ್ಲ. ಅಪ್ಪ ತೀರ್ಮಾನಿಸಿದ ವಿಷಯಗಳಲ್ಲಿ ಮೊದಲ ಬಾರಿ ನನಗೆ ಇದೊಂದು ಸರಿ ಅನಿಸುತ್ತಲೇ ಇಲ್ಲ. ನಾನು ಮತ್ತೊಮ್ಮೆ ಹೇಳಿದರೆ ಅವರಿಗೆ ಕೋಪ ಇನ್ನೂ ಹೆಚ್ಚು ಆಗಬಹುದು…. ನೀವು ಮಕ್ಕಳು ಹೇಳಿದರೆ ಅವರ ಮನಸ್ಸು ಬದಲಾಗಬಹುದೇನೋ ಅನ್ನುವ ಸಣ್ಣ ಆಸೆ ಮನದಲ್ಲಿ”…. ಸುಮತಿಯು ಅಚ್ಚರಿಯಿಂದ ಅಮ್ಮನ ಮುಖವನ್ನು ನೋಡಿದಳು. ಈಗ ಅವಳಿಗೆ ಅರ್ಥವಾಯ್ತು ಅಪ್ಪ ಏಕೆ ಆಗ ಅಷ್ಟೊಂದು ಜೋರಾಗಿ ಮಾತನಾಡುತ್ತಾ ಇದ್ದಿದ್ದು ಎಂದು. ಅವಳಿಗೂ ಅನಿಸಿತ್ತು ಅಪ್ಪ ಏಕೆ ಹೀಗೆ ಬದಲಾದರು? ಎಷ್ಟು ಪ್ರೀತಿಯಿಂದ ಮಾತನಾಡುತ್ತಿದ್ದ ಅಪ್ಪ ಏಕೆ ಈಗೀಗ ಹಾಗಿಲ್ಲ. ಸಕಲೇಶಪುರಕ್ಕೆ ಹೋಗಿ ಬಂದಾಗಿನಿಂದ ತುಂಬಾ ಬದಲಾಗಿದ್ದಾರೆ. ಏನಾಯ್ತು ಅಪ್ಪನಿಗೆ? ಅಮ್ಮ ಹೇಳಿದಂತೆ ನಮಗೂ ಕೂಡ ಹೋಗಲು ಸ್ವಲ್ಪವೂ ಮನಸ್ಸಿಲ್ಲ. ಆದರೆ ಅಪ್ಪನ ಮಾತು ಮೀರುವಂತೆಯೂ ಇಲ್ಲ. ಏನು ಮಾಡುವುದು. ನಾನು ಮತ್ತು ಅಕ್ಕ ಹೇಗೆ ಹೇಳುವುದು? ಅಪ್ಪನ ಮುಂದೆ ನಿಂತು ನೇರವಾಗಿ ಮಾತನಾಡಲು ಧೈರ್ಯವಿಲ್ಲ. ಆದರೆ ಅಮ್ಮ ಈಗ ಹೇಳುತ್ತಾ ಇರುವುದು ಕೂಡಾ ಸರಿಯಾಗಿಯೇ ಇದೆ. ತಮ್ಮಂದಿರ ಮೂಲಕ ಹೇಳಿಸೋಣ ಎಂದರೆ ಅವರಿನ್ನೂ ಚಿಕ್ಕವರು. ದೊಡ್ಡವರೆಲ್ಲ ಹೇಳಿದ ಮೇಲೂ ಕೇಳದ ಅಪ್ಪ ಈಗ ನಮ್ಮ ಮಾತು ಕೇಳುತ್ತಾರೆಯೆ? ಈ ಎಲ್ಲಾ ಯೋಚನೆ ಮನದಲ್ಲಿ ಮೂಡಿದಾಗ ಸುಮತಿಯ ಮುಖ ಕಳೆಗುಂದಿತು. ಅಮ್ಮನ ಮಾತಿಗೆ ಉತ್ತರ ಹೇಳದೇ ನೆಲವನ್ನು ನೋಡುತ್ತಾ ನಿಂತಳು.

ಕಲ್ಯಾಣಿಯವರಿಗೆ ಸುಮತಿಯ ಮನಸ್ಸು ಅರ್ಥ ಆಯ್ತು.

ಅಪ್ಪನ ಎದುರು ನಿಂತು ಮಾತನಾಡಲು ಮಗಳು ಹೆದರುವಳು. ಎಲ್ಲರೂ ಹೇಳಿದರೂ ನಿರ್ಧಾರ ಬದಲಾಯಿಸದ ಪತಿ ಇನ್ನು ಮಕ್ಕಳು ಹೇಳಿದರೆ ಬದಲಿಸುವರೆ? ಇನ್ನು ಆ ದೇವರೇ ಕಾಪಾಡಬೇಕು ಎಂದುಕೊಂಡು ಮಗಳನ್ನು ಅಲ್ಲಿಂದ ಕರೆದುಕೊಂಡು ಒಳ ನಡೆದರು. ರಕ್ತ ಜಿನುಗುತ್ತಾ ಇದ್ದ ಮಗಳ ಮೊಣಕೈ ತೊಳೆದು 

ಅರಿಶಿನ ಪುಡಿಯನ್ನು ಹಚ್ಚಿದರು. ಅಮ್ಮ ಅರಿಶಿನ ಪುಡಿ ಹಚ್ಚಿದ ಕೂಡಲೇ ಉರಿಯಾಗಿ…. ಹಾ…. ಅಮ್ಮಾ…. ಉರಿ…ಎಂದಳು ಸುಮತಿ…. “ಸ್ವಲ್ಪ ಹೊತ್ತಿನಲ್ಲಿ ಸರಿಯಾಗುತ್ತದೆ ಮಗಳೇ ಎಂದು ಹೇಳಿ ಸಮಾಧಾನ ಪಡಿಸಿದರು ಕಲ್ಯಾಣಿ”….ಆದರೆ ಅವರ ಮನಸ್ಸು ಪತಿಯ ಮಾತುಗಳಿಂದ ತುಂಬಾ ನೊಂದಿತ್ತು. ಈ ನಡುವೆ ಮನೆಯಲ್ಲಿ ಸರಿಯಾಗಿ ಊಟ ಮಾಡುತ್ತಾ ಇಲ್ಲ ಪತಿ. ಮೊದಲಿನಂತೆ ಮಾತಿಲ್ಲ ನಗುವಿಲ್ಲ. ಯಾವಾಗಲೂ ಮುಖ ಗಂಟಿಕ್ಕಿಕೊಂಡು ಇರುತ್ತಾರೆ. ಅಗತ್ಯವಿದ್ದಾಗ ಮಾತ್ರ ಒಂದೋ ಎರಡೋ ಮಾತುಗಳು. ಯಾವಾಗಲೂ ಶಾಂತ ಚಿತ್ತದಿಂದ ಇರುವವರು ಈಗ ಸಿಡಿಸಿಡಿ ಎಂದು ಇರುತ್ತಾರೆ.

ನನ್ನ ನಕಾರ ಇವರನ್ನು ಇಷ್ಟು ಬದಲಾಗುವಂತೆ ಮಾಡಿತೇ?

ಈಗೇನು ಮಾಡುವುದು? ಎಂದು ಯೋಚಿಸುತ್ತಾ ಮಗಳಿಗೆ ಹೇಳಿದರು… ” ನೀನು ಸ್ವಲ್ಪ ವಿಶ್ರಾಂತಿ ತೆಗೆದುಕೋ ಮಗಳೇ 

ಪೆಟ್ಟಾದ ಕಡೆ ತಗುಲಿಸಿಕೊಳ್ಳಬೇಡ…. ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿ ಕೋಣೆಗೆ ಕಳುಹಿಸಿದರು. ಸುಮತಿ ಕೋಣೆಗೆ ಬಂದಳು ಅವಳಿಗೆ ಕೈಗೆ ಬಿದ್ದ ಪೆಟ್ಟು ಅಷ್ಟು ಹೆಚ್ಚಾಗಿ ತೋರಲಿಲ್ಲ. ಆದರೆ, ಅಪ್ಪ ಅಮ್ಮನ ಈ ಶೀತಲ ಸಮರವು ಅವಳ ಮನಸ್ಸನ್ನು ವ್ಯಾಕುಲಗೊಳಿಸಿತು. ಎಲ್ಲವೂ ಮೊದಲಿನಂತೆ ಆಗಲು ಏನು ಮಾಡುವುದು? ಎಂದು ಯೋಚಿಸುತ್ತಾ ಉರಿಯುತ್ತಿದ್ದ ಮೊಣಕೈಯನ್ನು….

ಉಫ್….ಉಫ್ ಎಂದು ಗಾಳಿ ಊದುತ್ತಾ ನೋಡಿದಳು ಅಮ್ಮ ಹಚ್ಚಿದ ಅರಿಶಿನ ಪುಡಿ ಮೇಲೆಯೂ ರಕ್ತ ಜಿನುಗಿ ಕೆಂಪಗೆ ಕಾಣುತ್ತಾ ಇತ್ತು.


Leave a Reply

Back To Top