ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಅಂತರಂಗ ಮತ್ತು ಬಹಿರಂಗದಲ್ಲಿ ಎರಡು  ಒಂದೇ ರೀತಿಯಿದ್ದಾಗ ಅವನ ವ್ಯಕ್ತಿತ್ವ ಘನವಾಗುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅನೇಕ ಸಂಗತಿಗಳಲ್ಲಿ ನಾವು ನಡೆದುಕೊಳ್ಳುವ ಮಾತುಗಳು, ನುಡಿಗಳು, ನಡೆಗಳು ಎಲ್ಲವನ್ನು ಒಳಗೊಂಡಿರುತ್ತದೆ.  ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಯಾವ ರೀತಿಯಲ್ಲಿ ವ್ಯವಹಾರಿಸುತ್ತಾನೆ ಎನ್ನುವುದರ ಮೇಲೆ ಅವನ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಆತನದೇ ಆದ ವ್ಯಕ್ತಿತ್ವವಿದ್ದರೂ ಕೆಲವರು ಅಸಹ್ಯಗೊಳಿಸುವಂತಹ ಅನೇಕ ಕೂಕ್ರತ್ಯಗಳಲ್ಲಿ ತೊಡಗುತ್ತಾರೆ.  ಇದರಿಂದ ಸಾರ್ವಜನಿಕ ಜೀವನದಲ್ಲಿ ಅನೇಕ ಕಿರಿಕಿರಿಗಳನ್ನು ಅನುಭವಿಸುತ್ತಾರೆ. ಅಂತಹ ಅನೇಕ ಕಿರಿಕಿರಿ ಪ್ರಸಂಗಗಳನ್ನು ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಪಯಣದ ಸಂದರ್ಭದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ,  ಆ ರಸ್ತೆಗಳಲ್ಲಿ ಎದುರಿಸುವುದನ್ನು ಕಾಣುತ್ತೇವೆ.

ಮೊನ್ನೆ ಹೀಗೆಯೇ ರಸ್ತೆಯ ಮೇಲೆ ಗೆಳೆಯನೊಂದಿಗೆ ಬೈಕಿನಲ್ಲಿ ಹೋಗುವಾಗ ಹಿಂದಿನಿಂದ ಯಾರೋ ಕರೆದಂತಾಯಿತು. ತಿರುಗಿ ನೋಡಿದರೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ನೋಡು ನೋಡುತಿದ್ದಂತೆ, ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ಥೂಫಕ್ ಎಂದು ಉಗುಳಿಬಿಟ್ಟ..!!  ನಾವು ಪಕ್ಕದಲ್ಲಿ ಹೋಗುತ್ತಿದ್ದರಿಂದ  ನಮಗೆ  ಕೆಂಪು ಬಣ್ಣದಿಂದ ವಿವಿಧ ಊರುಗಳ ನಕ್ಷೆಯು ಮೂಡಿತು.  ಆತನು ಉದ್ದೇಶಪೂರ್ವಕ ಮಾಡಿದನೋ.. ದುರುದ್ದೇಶದಿಂದ ಮಾಡಿದನೋ ಗೊತ್ತಿಲ್ಲ.
ಆದರೆ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಕನಿಷ್ಠಪ್ರಜ್ಞೆ ನಮ್ಮೊಳಗೆ ಇಲ್ಲದೇ ಹೋದರೆ ಇಂತಹ ಅನಾಹುತಗಳು ಜರುಗುತ್ತವೆ.  ಸಾರ್ವಜನಿಕ ವಾಹನಗಳಲ್ಲಿ ತಿಂದು ಬೀಸಾಕಿದ ಕಸ ಕಡ್ಡಿಗಳು,  “ನಾವು  ವಾಹನದಲ್ಲಿ ಇದ್ದೇನೆ” ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಉಗುಳುವುದನ್ನು ನಾವು ಕಾಣುತ್ತೇವೆ. ರಸ್ತೆಯನ್ನು ತಮ್ಮ ಮನೆಗೆ ನಳವನ್ನು ಕಲ್ಪಿಸುವುದಕ್ಕಾಗಿಯೋ ಅಥವಾ ಯಾವುದೋ ಒಂದು ತಂತಿಯನ್ನು ಎಳೆಯುವದಕ್ಕಾಗಿಯೋ ರಸ್ತೆಯನ್ನು ಅಗೆದು ಹಾಗೆಯೇ ಬಿಟ್ಟು ಹೋಗುವ ಅನೇಕ ಘಟನೆಗಳನ್ನು ನಾವು ನೋಡುತ್ತೇವೆ. ಇದರಿಂದ ಸಾರ್ವಜನಿಕ ರಸ್ತೆ ಹದಗೆಡುವುದಲ್ಲದೆ ಸಾರ್ವಜನಿಕರ ಪ್ರಯಾಣಕ್ಕೆ ಕಿರಿಕಿರಿ ಉಂಟಾಗುತ್ತದೆ. ಹಾಗೆಯೇ ಬಸ್ ನಿಲ್ದಾಣಗಳಲ್ಲಿ ಎಲ್ಲಿಬೇಕಂದರೆ  ಅಲ್ಲಿ ಉಗುಳುವ, ಮೂತ್ರ ಮಾಡುವ,  ಬಹುಶಃ ನೋಟಿಸ್ ಹಾಕುವ ಸ್ಥಳದಲ್ಲಿಯೇ ಅತಿ ಹೆಚ್ಚು ಇವರು ಅದೇ ಕೆಲಸವನ್ನು ಮಾಡುವುದನ್ನು ಕಾಣುತ್ತೇವೆ. ಇದು ವ್ಯಕ್ತಿಯ ಅನಾಗರಿಕತೆಯ ಲಕ್ಷಣ..!!  ನಾಗರಿಕನಾದವನು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ, ಸಾರ್ವಜನಿಕ ಬದುಕಿನ ನಡವಳಿಕೆ, ಶಿಸ್ತು ಇವೆಲ್ಲವನ್ನು ತನ್ನ ಇತಿಮಿತಿಯ ಪ್ರಜ್ಞೆಯೊಳಗೆ ಇಟ್ಟುಕೊಂಡಾಗ ಇನ್ನೊಬ್ಬರಿಗೆ ಕಿರಿಕಿರಿಯಾಗುವುದಿಲ್ಲ.


“ಗ್ರಂಥಾಲಯಗಳಲ್ಲಿ ಮಾತನಾಡಬೇಡಿ” ಎಂದು ಬೋರ್ಡ್ ಹಾಕಿದರೂ ಕೂಡ ಓದುವುದನ್ನು ಬಿಟ್ಟು ಜೋರಾಗಿ ಮಾತನಾಡುವುದನ್ನು ನಾವು ನೋಡುತ್ತೇವೆ. ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ  ಧೂಮಪಾನ, ಮದ್ಯಪಾನ ಮಾಡಬಾರದು .. ಎನ್ನುವ ಸೂಚನೆಯನ್ನು  ನೋಡಿದರೂ ಅಲ್ಲಿ ಸಿಗರೇಟ್, ಬೀಡಿ ಸೇದುವ,  ತಂಬಾಕು ಜಿಗಿಯುವ, ಉಗುಳುವುದನ್ನು ನಾವು ನೋಡುತ್ತೇವೆ.  ಇದರಿಂದ ಸಾರ್ವಜನಿಕ ಸ್ಥಳಗಳು ಕಲುಷಿತಗೊಳ್ಳುವುದಲ್ಲದೆ ಇನ್ನೊಬ್ಬರಿಗೆ ತೊಂದರೆಯನ್ನು ಮಾಡುತ್ತವೆ. ಬಾಳೆಹಣ್ಣು ತಿಂದು ಎಸೆಯುವ, ಕಡಲೆಯನ್ನು ತಿಂದು ಎಲ್ಲಿಂದರಲ್ಲಿ ತ್ಯಾಜ್ಯವನ್ನು ಎಸೆಯುವ, ಸಾರ್ವಜನಿಕ ಬದುಕಿನಲ್ಲಿ ರಸ್ತೆಯ ಮೇಲೆ ಕಸ ಕಡ್ಡಿ ಚೆಲ್ಲವ, ಪುರಸಭೆ ನಗರಸಭೆಯ ವಾಹನಗಳು ಬಂದಾಗಲೂ  ಕಸವನ್ನು ವಿಂಗಡಿಸಿ ಹಾಕದ ಅನಾಗರಿಕ ಲಕ್ಷಣಗಳು ನಮ್ಮೊಳಗಿದ್ದರೆ, ನಾವು ಸಾರ್ವಜನಿಕ ಬದುಕಿನಲ್ಲಿ ರೋಗಿಷ್ಟ ಮನಸ್ಸುಗಳು ಎನ್ನುವುದರಲ್ಲಿ ಸಂಶಯವಿಲ್ಲ.

 ಇದು ನಮ್ಮ ವ್ಯಕ್ತಿತ್ವವನ್ನು ಕುಗ್ಗಿಸುತ್ತದೆ. ನಮ್ಮ ವೈಯಕ್ತಿಕ ನಡವಳಿಕೆಗಳು ಸಾರ್ವಜನಿಕ ನಡುವಳಿಕೆಗಳು ಯಾವಾಗಲೂ ಒಂದೇಯಾಗಿರಬೇಕು. ಶುಚಿತ್ವ, ವಿನಯತೆ, ಸಹನಶೀಲತೆ, ಸಹಕಾರ ಹೊಂದಾಣಿಕೆ ಇವು ಮನುಷ್ಯನಲ್ಲಿ ಇರಬೇಕಾದ ಕನಿಷ್ಠ ನಾಗರಿಕ ಪ್ರಜ್ಞೆಗಳು ಎನ್ನುವ ಸಂಗತಿಗಳನ್ನು ತಿಳಿದಾಗ ಬದಕಿನ ಒಲವನ್ನು ಅನುಭವಿಸಬಲ್ಲೆವು.
ನಾಗರೀಕರಾದ ಮೇಲೆ ಎಲ್ಲರಂತೆ ನಾನು : ನನ್ನಂತೆ ಎಲ್ಲರೂ ಎಂದು ತಿಳಿದು, ನಾಗರಿಕ ಪ್ರಜ್ಞೆಯನ್ನು ಬೆಳಸೋಣ.


Leave a Reply

Back To Top