ಮಧುಮಾಲತಿ ರುದ್ರೇಶ್-ಬರಿದೇ ಬೀಗದಿರು

ಹೇ ಮನುಜ ಬರಿದೇ ಬೀಗದಿರು ನೀನು
ಪ್ರತಿ ಅಣುಕಣವೂ ದೇವಲೀಲೆಯಲ್ಲವೇನು

ಕೆಸರೊಳಿದ್ದರೂ ತಾವರೆ ತಾನರಳಿ ನಗುವುದು
ಭಾಸ್ಕರನುದಯಕೆ ಧನ್ಯತೆಯಲ್ಲಿ ತಾ ಬಿರಿವುದು

ನೀಲಾಕಾಶದಿ ತೇಲಿ ನಗುವ ಮಳೆ ಮೇಘಗಳಿಗೆ
ಮುತ್ತು ಮಣಿಯಾಗಿ ಧರೆಗಿಳಿವುದೇ ಶುಭಘಳಿಗೆ

ಸುತ್ತಲೂ ಸುಗಂಧ ಪಸರಿಸಿ ನಗುವ ವನಸುಮಕೆ
ಬೇಕಿಲ್ಲ ಹೊಗಳಿಕೆ ಮನ ಮುದಗೊಳಿಸುವ ಕಾಯಕಕೆ

ಸಸ್ಯ ರಾಶಿಗೆ ಜೀವಕಳೆಯನಿತ್ತು ಕಡಲ ಸೇರುವ ನದಿಯದು
ಯಾರ ಪ್ರಶಂಸೆಯನೂ ತಾ ಅಪೇಕ್ಷಿಸದು

ಜಗದ ತಮವ ಕಳೆವ ನೇಸರ ನಿಗೆಲ್ಲಿದೆ ಬೇಸರ
ಬೆಳಗುವ ತಾ ಜೀವ ಕಳೆಯ ತುಂಬುತ ನಿತ್ಯ ನಿರಂತರ

ಮೂರು ದಿನದ ಬಾಳಿಗೆ ಹಮ್ಮು ಬಿಮ್ಮುಗಳೇಕೆ
ಕತ್ತಲೆಯಲಿ ಭರವಸೆಯನೀವ ದೀಪವಾಗಬಾರದೇಕೆ


2 thoughts on “ಮಧುಮಾಲತಿ ರುದ್ರೇಶ್-ಬರಿದೇ ಬೀಗದಿರು

  1. ತಮ್ಮ ಪ್ರೋತ್ಸಾಹಕ್ಕೆ ತುಂಬು ಧನ್ಯವಾದಗಳು. ಸಂಗಾತಿ ಬ್ಲಾಗ್ ಹೀಗೆ ಹೆಚ್ಚಿನ ಓದುಗರನ್ನು ಹೊಂದಿ ಯಶಸ್ಸು ಗಳಿಸಲೆಂದು ಆಶಿಸುತ್ತೆವೆ

Leave a Reply

Back To Top