ಮಾತೇ ಜ್ಯೋತಿರ್ಲಿಂಗ ಲೇಖನ ಡಾ ಅನ್ನಪೂರ್ಣಾ ಹಿರೇಮಠ

ಮಾತು ಎನ್ನುವುದು ಮನುಜನಿಗೆ ದೇವನಿಟ್ಟ ಅಮೂಲ್ಯವಾದ ವರ. ಎಲ್ಲ ಜೀವಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದು ಈ ಕಾರಣಕ್ಕೆ. ಮನುಜಕುಲದ ಹುಟ್ಟಿನೊಂದಿಗೆ ಮಾತು ಹುಟ್ಟಲಿಲ್ಲ, ಪ್ರಕೃತಿಯ ಮಡಿಲಲ್ಲಿ ಮನುಜಕುಲದ ಬೆಳವಣಿಗೆಯೊಂದಿಗೆ ಮಾನವನ ಬುದ್ಧಿಮಟ್ಟ ವೃದ್ಧಿಸಿದಂತೆ, ಮನುಷ್ಯ ಹಲವು ರೀತಿಯಲ್ಲಿ ಬೆಳೆಯತೊಡಗಿದ. ಹಕ್ಕಿಗಳ ಕೂಗು, ನದಿ ತೊರೆಗಳ ಶಬ್ದ, ಗಾಳಿಯ ಝೇಂಕಾರ  ಮರದೆಲೆಗಳ ಪಿಸುಗುಟ್ಟುವಿಕೆ ಮುಂತಾದ ಧ್ವನಿಗಳನ್ನು ಕೇಳುತ್ತಾ ಅವುಗಳಿಗೆ ದನಿಗೂಡಿಸುತ್ತಾ ಶಬ್ದಗಳನ್ನು ಹೊರಡಿಸುತ್ತಾ ಮಾತುಗಳ ಕಲಿತ.

ಹಾಗೆಯೇ ಸಂವಹನ ಮಾಧ್ಯಮವಾಗಿ ಮಾತು ಮನದಾಳದ ವಿಷಯಗಳನ್ನು ಹಂಚಿಕೊಳ್ಳುತ್ತಾ ವಿಶಾಲ ರೂಪ ಪಡೆದುಕೊಂಡಿತು. ಮಾತಿಲ್ಲದೆ ಬದುಕು ಉಹಿಸಿಕೊಳ್ಳಲಾಗದಷ್ಟು ಹಾಸುಹೊಕ್ಕಾಗಿ ಬೆಳೆಯಿತು.
ಮನುಷ್ಯ ಬುದ್ಧಿಜೀವಿ ಎನಿಸಿಕೊಳ್ಳಲು ಈ ಮಾತೇ ಕಾರಣವಾಯಿತು.
ಆದರೆ ಅದರೊಂದಿಗೆ ಒಳ್ಳೆಯ-ಕೆಟ್ಟ ಎಲ್ಲಾ ಮಾತುಗಳು ಹುಟ್ಟಿಕೊಂಡವು. ಹಲವರು ಇತಿಮಿತಿ ಮೀರಿ ಮಾತನಾಡುವುದನ್ನು ಕಲಿತರು,

ಮಾತು ಹೇಗಿರಬೇಕು? ಎಷ್ಟು ಮಾತನಾಡಬೇಕು? ಯಾರೊಂದಿಗೆ ಏನು ಮಾತನಾಡಬೇಕು? ನಾವಾಡುವ ಮಾತುಗಳು ಹಿತವಾಗಿವೆಯೇ? ಕರ್ಕಶವಾಗಿವೆ? ಇನ್ನೊಬ್ಬರಿಗೆ ನೊವು ಕೊಡುವಂತಹ ಮಾತುಗಳೇ? ಆಡಿದ ಮಾತನ್ನು ಮರಳಿ ಪಡೆಯಬಹುದೇ?ಹೀಗೆ ಹಲವಾರು ಮುಖಗಳಲ್ಲಿ ವಿಚಾರಿಸಿ ಮಾತನಾಡಲು ಕಲಿತರೆ ಮನುಷ್ಯ ಮಾನವನಾಗುವ ದಾರಿ ತಿಳಿದಿದ್ದಾನೆ ಎಂದರ್ಥ.
ಹಲವಾರು ಬುದ್ಧಿಜೀವಿಗಳು ಮಾತು ಹೇಗಿರಬೇಕು? ಮಾತಿನಿಂದ ಆಗುವ ಅನಾಹುತಗಳೇನು? ಎಂದೆಲ್ಲಾ ವಿಷಯವನ್ನು ಮನುಕುಲಕ್ಕೆ ತಿಳಿಸುತ್ತಾ ಬಂದಿದ್ದಾರೆ.

 ಅವರಲ್ಲಿ ಸರ್ವಜ್ಞರು ಮಾತಿನ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ. ಮಾತಿನಿಂದ  ನಡೆ ನುಡಿಯು ಮಾತಿನಿಂದ ಹಗೆ ಕೊಲೆಯು ಮಾತಿನಿಂದ ಸರ್ವಸಂಪದವು ಲೋಕಕ್ಕೆ ಮಾತೆ ಮಾಣಿಕವು ಸರ್ವಜ್ಞ. ಒಳ್ಳೆಯ ನುಡಿಗೆ ಸಾಕ್ಷಿ ಮಾತು ಅನುಚಿತವಾಗಿ ಮಾತನಾಡಿದರೆ ಅನಾಹುತಗಳು ಸಂಭವಿಸುತ್ತವೆ. ಮಾತು ಹಿತ ಮಿತವಾಗಿ ಸ್ಪಷ್ಟವಾಗಿ, ಬೇರೆ ವಿಚಾರಿಸಲು ಆಸ್ಪದವಿಲ್ಲದಂತಹ ಮಾತುಗಳನ್ನು ಆಡಬೇಕು ‌. ಇದ ಕಾರಣ “ಮಾತೇ ಮಾಣಿಕ್ಯ’ ” ಮಾತೆ ಮುತ್ತು, ಮಾತೆ ಮೃತ್ಯು” ಎಂಬೆಲ್ಲಾ ನಾಣ್ಣುಡಿಗಳು ಮಾತಿನ ಬಗ್ಗೆ ಚೆನ್ನಾಗಿ ತಿಳಿಸುತ್ತವೆ.

ಹೀಗೆಯೇ ಬಸವಣ್ಣನವರು ಮಾತಿನ ಬಗ್ಗೆ ಮಾತು ಹೇಗಿರಬೇಕು? ಸರ್ವಸಮ್ಮತವಾದ ಮಾತು ಎಂದರೇನು? ಮಾತನ್ನು ವಿಚಾರಿಸಿ ಆಡಬೇಕೆಂದು ಈ ವಚನದ ಮೂಲಕ ತಿಳಿಯಪಡಿಸಿದ್ದಾರೆ.
ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿದ್ದರೆ. ಎಂತೊಲೆವನಯ್ಯಾ ನಮ್ಮ ಕೂಡಲಸಂಗಮದೇವ.
ಬಸವಣ್ಣನವರು ತಮ್ಮ ವಚನದಲ್ಲಿ ನಾವಾಡುವ ಮಾತು ಒಂದಕ್ಕೊಂದು ಸೇರಿ ಸುಂದರವಾಗಿ ತೋರುವ ಮುತ್ತಿನ ಹಾರದಂತಿರಬೇಕು. ಮಾತು ಮಾಣಿಕ್ಯದ ಬೆಳಕಿನಂತೆ ಇನ್ನೊಬ್ಬರ ಜೀವನಕ್ಕೆ ದಾರಿ ಆಗಿರಬೇಕು, ಸ್ಪಟಿಕದ ಸಲಾಕೆಯಂತೆ  ಪಾರದರ್ಶಕವಾಗಿರಬೇಕು. ನಾವಾಡುವ ಮಾತುಗಳು ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಸಮಂಜಸ ಸರಿಯಾದ ತೂಕಯುಕ್ತ ,ಸೂಕ್ತವಾದ ಮಾತುಗಳು ಆಗಿರಬೇಕು. ಮತ್ತೆ ಹೇಳುತ್ತಾರೆ, ಉತ್ತಮ ಮಾತು ಆಡಿದರೆ ಸಾಲದು ಎಲ್ಲ ಉತ್ತಮ ಮಾತುಗಳನ್ನು  ಮಾತಾಡಿದಂತೆ ನಡೆದುಕೊಳ್ಳುವ ಛಲಗಾರಿಕೆ ನಮ್ಮಲ್ಲಿರಬೇಕು. ಉತ್ತಮ ಒಳ್ಳೆಯ ಸುಂದರ ಸುಲಲಿತ ಸ್ಪಷ್ಟ ಮಾತುಗಳು ನಮ್ಮವಾಗಿರಬೇಕು. ಈ ರೀತಿಯ ಮಾತುಗಳಂತೆ ನಾವು ನಡೆದುಕೊಳ್ಳುವ ಎದೆಗಾರಿಕೆ ಹೊಂದಿರಬೇಕು. ಹೀಗೆ ಇಲ್ಲದಿದ್ದರೆ ಕೂಡಲಸಂಗಮದೇವ ನಮ್ಮನ್ನು ಮೆಚ್ಚಲಾರ “ನುಡಿದಂತೆ ನಡೆ ಇದೆ ಜನ್ಮ ಕಡೆ’ ಎಂಬಂತೆ ನಾವಿರಬೇಕು.ಹಾಗೆಯೆ ನಡೆದು ತೋರಿಸಬೇಕು.

ಸಂವಹನ ಮಾಧ್ಯಮವಾಗಿ ಹರಡಿದ ಮಾತು ವಚನ, ನುಡಿ, ಹೀಗೆ ಬದಲಾಗಲು ಸಮಾಜ ಸುಧಾರಕರು, ಬುದ್ಧಿಜೀವಿಗಳು, ಉತ್ತಮರು, ಶಿಷ್ಟರು, ಚಿಂತಕರು, ದಾರ್ಶನಿಕರು, ತತ್ವಜ್ಞಾನಿಗಳು, ಈಗಿನವರೆಗೂ ಶ್ರಮಿಸುತ್ತಿದ್ದಾರೆ.
ಸಹಜ ಮಾತು ನುಡಿ ಆಗಲು, ಪಚನವಾಗಲು ಬಹಳ ಕಷ್ಟ ಪಡಬೇಕು. ಅಂದಾಗ ಮಾತ್ರ ಮಾತು ನುಡಿ ಪಚನವಾಗಲು ಸಾಧ್ಯ.ಸಮಾಜದ ಒಳಿತು-ಕೆಡುಕುಗಳನ್ನು ತೂಕ ಹಾಕಿ ಸಮಾಜಕ್ಕೆ ಹಿತವಾದ ಸರ್ವಸಮ್ಮತವಾದ ಮಾತುಗಳನ್ನಾಡಿ ನುಡಿದಂತೆ ನಡೆದವರ ಅಮೂಲ್ಯ ಕಾಣಿಕೆಗಳೇ ವಚನ ನುಡಿಮುತ್ತುಗಳು.ಇದಕ್ಕಾಗಿಯೇ ತಿಳಿದವರು “ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು'”  “ಮಾತು ಬೆಳ್ಳಿ ಮೌನ ಬಂಗಾರ” ಎಂದೆಲ್ಲ ಉದ್ಗರಿಸಿದ್ದಾರೆ. ಮಾತು ಒಮ್ಮೆ ಆಡಿದರೆ ಹೋಯಿತು ಮರಳಿ ಪಡೆಯಲಾಗದು ಆಡುವ ಮುನ್ನ ಮಾತನ್ನು ಮಂಥಿಸಿ ಸೋಸಿ ವಿಚಾರಿಸಿ ಹೊರಹಾಕಬೇಕು. ಮಾತು ಹಿತಮಿತವಾಗಿ ಸೂಕ್ತವಾದ ಮಾತಾಗಿರಬೇಕು.

ಮಾತುಗಳು ಸರಳ, ಸುಂದರ, ನೀತಿಯುಕ್ತ, ಯಾರ ಮನಸ್ಸಿಗೂ ನೋವಾಗದಂತಹ ಉತ್ತಮ ಮಾತುಗಳು ಮನುಷ್ಯನಿಗೆ ಒಳ್ಳೆಯ ಆಭರಣಗಳು. ಅವನಾಡುವ ಮಾತು ಅವನ ಘನತೆ-ಗೌರವ ವ್ಯಕ್ತಿತ್ವ ಪ್ರದರ್ಶಿಸುತ್ತವೆ. ಕಾರಣ ಸತ್ಯ ಶುದ್ಧ ಹಿತಮಿತ ಸ್ಪಷ್ಟ, ಸರಳ ಮಾತುಗಳನ್ನಾಡಲು ಪ್ರಯತ್ನಿಸೋಣ ಆಡಿದಂತೆ ನಡೆಯುವ ಛಲಗಾರಿಕೆ ಹೊಂದೋಣ. ನಡೆ-ನುಡಿ ಒಂದಾದ ಬದುಕು ಎಲ್ಲರದಾಗಲಿ. ಅಂತಹ ಶಕ್ತಿ ಸಹನೆ. ಮನಸ್ಥಿತಿ ದೇವರು ಎಲ್ಲರಿಗೂ ದಯಪಾಲಿಸಲಿ ಈ ಸಮಾಜ ಸರಳ ಸುಂದರ ಕಳಂಕರಹಿತ, ಕಲಹ ರಹಿತ ಸಮಾಜ ನಿರ್ಮಾಣದ ಪಣ ಎಲ್ಲರೂ ತೊಡೋಣವೆಂದು ಈ ಮೂಲಕ ಪ್ರಮಾಣ ಮಾಡಿ ಸಮಾಜದ ವ್ಯಕ್ತಿಯ ಘನತೆ, ಗೌರವವನ್ನು ಉಳಿಸಿಕೊಳ್ಳೋಣ..ಮಾತು ಆಡುತ್ತಿರಲಿ. ಆಡಿದಂತೆ ನಡೆದು ಮಾತಿನ ಘನತೆಯನ್ನು ಉಳಿಸಬೇಕು ಎಂಬುದು ನನ್ನ ಆಶಯ.


Leave a Reply

Back To Top