ಪಿ ಎಂ ಕೊಟ್ರಸ್ವಾಮಿಯವರ ಕೃತಿ “ಇದು ಯಾರ ಹಂಗಿರದ ಮಣ್ಣು” ಅವಲೋಕನ ಭಾರತಿ ಅಶೋಕ್

ಭೌತಿಕ ಅಸ್ತಿಗೆ ವರಸುದಾರರು ನೂರು. ತುಂಡು ಭೂಮಿಗೆ ಬಡಿದಾಡಿಕೊಳ್ಳುವ ಸಂಬಂಧಗಳ ಜಂಜಾಟದಿಂದ ದೂರ ನಿಂತು  ಯಾರ ಹಂಗಿರದ ಮಣ್ಣ ರೂಪಕ ಕೊಡುತ್ತಾರೆ *ನಿನ್ನ ನುಣುಪಾದ ಕೈಗೆ ನನ್ನ ಕೈ ಎಣೆದು
ಎದೆಯ ಮೇಲೆ ಮಲಗಿಬಿಡು
ಇದು ಯಾರ ಹಂಗಿರದ ಮೆತ್ತನೆಯ ಮಣ್ಣು*
 ಪ್ರೇಮಿಗೆ  ತನ್ನಿನಿಯನ/ಳ ಎದೆ ನೆಲವೆ ಭರವಸೆಯ ತಂಪನೀವ ಭೂಮಿ. ಅಲ್ಲಿ ತನ್ನ ಪ್ರೇಮವನ್ನು ಭದ್ರವಾಗಿ  ಕಾಪಿಡುವ, ಹುಲುಸಾಗಿ ಬೆಳೆಯುವ-ಬೆಸೆದುಕೊಂಡು ಎನ್ನುವ ಸಾಲುಗಳು ಓದುಗನನ್ನು ಅವ್ಯಕ್ತ ಭಾವಲೋಕಕ್ಕೆ ಕರೆದೊಯ್ಯತ್ತವೆ. ಈ ಸಾಲುಗಳನ್ನು ಒಮ್ಮೆ ಕಣ್ಮುಚ್ಚಿ ಧ್ಯಾನಿಸಿದರೆ ಇನ್ನೊಂದು  ವ್ಯಕ್ತ ರೂಪಕ ಬೆಸೆದುಕೊಳ್ಳುತ್ತದೆ. ಅದು ಭೂತಾಯಿ ಮತ್ತು ರೈತನದ್ದು.  ಅವಳ  ಮೃದು ಎದೆಯ ಮೇಲೆ  ಎಲ್ಲವನ್ನು ಸಮರ್ಪಿಸಿ ಅವಳಿಗೆ ಶರಣಾಗಿ  ಅವಳೆದೆಗೆ ಒರಗಿದ  ರೈತನದ್ದು.

ಬದುಕಿನ ಅನುಭವಗಳ ಹೂರಣ ಕಾವ್ಯವಾದಾಗ, ಕವಿ ತಾನು ಬದುಕಲ್ಲಿ ಕಂಡುಂಡ ನೋವು, ನಲಿವುಗಳು ಕಾವ್ಯ ರೂಪ  ಪಡೆಯುತ್ತವೆ.  ಒಬ್ಬ ಕವಿ,ಲೇಖಕ ತನ್ನ ಸುತ್ತಲಿನ ಘಟನೆಗಳಿಗೆ ಕಿವಿಯಾದವನು ಪ್ರತಿಕ್ರಿಯಿಸದೇ ಇರಲಾರ. ತನ್ನ ಕಾಲದ ಸಾಮಾಜಿಕ ಆಗು ಹೋಗುಗಳಿಗೆ ಸ್ಪಂದಿಸದವನು, ಮತ್ತದನ್ನು ದಾಖಲಿಸದವನು  ಅಂತಹ ಯಾವುದೇ ಘಟನೆಗಳಿಗೆ ತಾನು ಕೈ ಜೋಡಿಸಿದವನೆಂದು,ಮತ್ತುಅಪರಾಧಿ ಎಂದೇ  ಪರಿಗಣಿಸಲಾಗುವುದು.ಏಕೆಂದರೆ ಅವನಿಗೆ ನೈತಿಕ ಹೊಣೆಗಾರಿಕೆ ಇದೆ. ಸಾಮಾಜಿಕ ಜವಾಬ್ಧಾರಿ ಇದೆ. ಅದರಿಂದ ನುಸುಳಿಕೊಳ್ಳುವಂತಿಲ್ಲ. ಅಂದಂದಿನ  ವೃತ್ತಾಂತಗಳನ್ನು ದಾಖಲಿಸಬೆಕಾಗುತ್ತದೆ. ಅಂತಹ ಹೊಣೆಗಾರಿಕೆಯನ್ನು ಮರೆದವರು  ಪಿ ಎಂ ಕೊಟ್ರಸ್ವಾಮಿಯವರು. ತಮ್ಮ ಬದುಕಿನ ಅನುಭವಕ್ಕೆ ಧಕ್ಕಿದ ಸಾರವನ್ನು ಚಂದದ ಉಪಮೆ, ರೂಪಕಗಳ ಮೂಲಕ ಕಾವ್ಯ ಹೆಣೆದಿದ್ದಾರೆ. ಅವರ ಕಾವ್ಯ ಕುಸುರಿಯಲ್ಲಿ  ರೂಪುಗೊಂಡ ಪ್ರತಿಮೆಗಳೇ  ಕಾವ್ಯ. ಇನ್ನು ಕೆಲವಕ್ಕೆ ಸೂಕ್ಷ್ಮ ಕುಸುರಿಯ ಅಗತ್ಯವಿತ್ತು ಎನ್ನಿಸದಿರದು. ಉದಾಹರಣೆಗೆ “ಹೋಗಲಿ ಕಳೆದುಕೊಂಡದ್ದಾದರು ಏನು? ಗಣಕನ ಮೂಲ ಕ್ರಿಯೆಗು ನಿಲುಕದಷ್ಟು”  ಇಲ್ಲಿ ಗಣಕ ಎನ್ನುವ ಬದಲು ಹೊಸ ರೂಪಕ  ಬಳಸಬಹುದಿತ್ತು. ‘ಕಾಲ ಚಕ್ರಕೂ’  ಅಥವಾ ‘ಗಡಿಯಾರದ ಮುಳ್ಳಿಗೂ’ ಎಂದಿದ್ದರೆ  ತಟ್ಟನೆ ಮುಂದೆ ಒದಿಸಿಕೊಂಡು ಹೋಗುತ್ತಿತ್ತು ಅನ್ನಿಸಿತು. ಇಲ್ಲಿ ಕವಿ ತಾನು ಹುಡುಕುವ ಕ್ರಿಯೆಯಲ್ಲಿ ತೊಡಗಿ, ಕಳೆದುಕೊಂಡದ್ದು, ಮತ್ತು ಹುಡುಕುವುದು ಏನನ್ನು ಎನ್ನುವುದು ಮರೆತು ಹೋಗುವಷ್ಟು ಕಾಲ ಹುಡುಕುತ್ತಿದ್ದೇನೆ ಎನ್ನುವುದು ಕಾಲಕ್ಕೂ ನಿಲುಕದಷ್ಟು. ಗಮನಕ್ಕೆ ನಿಲುಕದಷ್ಟು ತೀವ್ರವಾಗಿ ಬದುಕು ಬದಲಾಗುತ್ತಿರುವುದಕ್ಕೆ ವಿಷಾದವಿದೆ. ನೋವಿದೆ. ಕಳೆದುಕೊಳ್ಳುವ ಅತಂತ್ರದಲ್ಲಿ  ಕಳೆದು ಹೋಗುತ್ತಿರುವ ಹಳ್ಳಿಯ ಬದುಕಿನ ಅಸ್ಮಿತೆಯನ್ನು ನೆನೆಯುತ್ತಾರೆ.
“ಮಣ್ಣಲ್ಲಿ ಕಳೆದುದು ಸಿಕ್ಕೀತು,! ಗಾಳಿಯಲಿ ಕಳೆದುದು ಸಿಕ್ಕೀತೆ?  ಹೀಗೆ ಹೇಳುವಲ್ಲಿ ನೆಲಮೂಲ ಸಂಸ್ಕೃತಿ ಪಶ್ಚಿಮದ ಗಾಳಿಯಲ್ಲಿ ಕಳೆದು ಹೋಗಿದೆ.     ಪಾಶ್ಚಾತ್ಯ ಸಂಸ್ಕೃತಿಯ  ಗಾಳಿ  ಭಾರತೀಯ ಸಂಸ್ಕೃತಿಯನ್ನು  ಕೊಚ್ಚಿಕೊಂಡು ಹೋಗಿದೆ ಎನ್ನುವ ವಿಷಾದದ ಜೊತೆ ಜೊತೆಗೆ  ಅದನ್ನು ಹುಡುಕುವ ಸಂಕಲ್ಪವನ್ನು ಬಿಡುವುದಿಲ್ಲ.

ಅವ್ವ ಕಾಣುವ ಬೆಳಗಿನ ಕನಸಾದರೂ ಎಂಥಹದ್ದು  “ಊರು ಕೇರಿ ಮನೆ, ಮನಗಳಲಿ ಮಹಾತ್ಮನ ರಾಮರಾಜ್ಯ! ರಾಜ ಬೀದಿಗಳಲಿ ಉಸಿರು ಉಸಿರಿನ ನಡುವೆ ಸಮರಸದ ಸೇತು” ಈ ಕಳೆದು ಹೋದುದನ್ನು ಪಡೆಯುವ ಸಂಕಲ್ಪದ ಜೊತೆಗೆ ಅವ್ವನ ಕನಸು ಇನ್ನಷ್ಟು ಜೊತೆಯಾಗುತ್ತದೆ  ಆಕೆಯದ್ದು ರಾಮ ರಾಜ್ಯದ ಕನಸು ಬೆಳಗಿನ ಕನಸು ನನಸಾಗುವುದು ಎನ್ನುವ‌ ಮಾತಿಗೆ ಇಂಬು ಕೊಡುವಂತೆ ಅವ್ವ  ಜನರನ್ನು ಉಸಿರು ಉಸಿರಿನಲ್ಲೂ ಬೆಸೆಯುವ ಸೇತುವೆಯನ್ನೇ ಕನಸುತ್ತಾಳೆ.ಎಷ್ಟಾದರೂ  ಆಕೆಯದ್ದು ಒಡಲ  ವಾತ್ಸಲ್ಯದ ಪ್ರೇಮ.

ಕೂಡಲೇ ಯಾವುದೂ ಘಟಿಸುವುದಿಲ್ಲ ಎನ್ನುವ  ಪ್ರಜ್ಞೆ ಮತ್ತು ಅದಕ್ಕಾಗಿ ಕಾಯುವ ತಾಳ್ಮೆ ಕವಿತೆಗಿದೆ. ಆದರೆ ಅದರ ಪ್ರಯತ್ನದಿಂದ ವಿಮುಖವಾಗುವುದಿಲ್ಲ. ಆದರೆ ಯುದ್ಧದ ಭಿಕರತೆಯಿಂದ ವಿಮುಖನಾಗಲು ಹಪಾಹಪಿಸುತ್ತಾನೆ ಕವಿ ಅದಕ್ಕಾಗಿ ಕರೆ ಕೊಡುತ್ತಾನೆ. “ತೆರೆದು ನೋಡಿಬಿಡು ದೇವರ ಗುಡಿಯ ಬೀದಿ ತುಂಬ ಜೋಳಿಗೆ ಹಿಡಿದು ನಿಂತವರ ಕಣ್ಣ ಕರಾಳತೆಯನ್ನು, ಆದರೂ ಸದಾ ಈ ಜಗದ ತುಂಬಾ ಅವ್ವನ ಮೊಲೆ ಹಾಲ ಶ್ವೇತ ವರ್ಣದ ಪರಿಮಳ ಘಮಿಸುತ್ತಿದೆ”  ಯದ್ದವನ್ನು ನಿರಾಕರಿಸುತ್ತಾ  “ಮಾನವ ಕುಲ ತಾನೊಂದೆ ವಲಂ’ ಎನ್ನುವ ಉಕ್ತಿಯಂತೆ ನೆಲಕ್ಕಾಗಿ ಬಡಿದಾಡಿದಾಡಿಕೊಳ್ಳುವ ಎಲ್ಲರನ್ನು ಪೊರೆವ ತಾಯ ಎದೆ ಹಾಲಿನ ಬಣ್ಣದಲ್ಲೇನು ಕಲ್ಮಶವಿಲ್ಲ. ಅದು ಸದಾ ಶ್ವೇತ ವರ್ಣದಲ್ಲಿ ಶಾಂತಿ ಮಂತ್ರ ಸಾರುತ್ತದೆ. ಬಡಿದಾಡಿಕೊಂಡು ತಾಯ ಹೃದಯ ಘಾಸಿಗೊಳಿಸುವುದು ಬೇಡ ಎನ್ನುವ ಆಶಯ.

ಜಗವೆಲ್ಲಾ ಕಾವ್ಯವಾಗಬೇಕು ಎನ್ನುವುದು ಕವಿಯ ಆಶಯ. ಅದು ಈಡೇರಬೇಕಾದರೆ ವರುಣನ ಪ್ರಾರ್ಥಿಸುತ್ತಾರೆ. ಸುರಿದು ಬಿಡು ಮಳೆರಾಯ. ಜಗದ ಬರವ ನೀಗು ಎಂದು. ಅಂದುಕೊಂಡಂತೆ ಬದುಕಲ್ಲಿ  ಏನೂ ನಡೆಯದು. ಬದುಕು ಅದೊಂದು ಪಯಣ ಸಾಗಿತ್ತಿರಬೇಕು.ಅಲ್ಲಲ್ಲಿ ಕೆಲವರು ಜೊತೆಯಾಗುವರು. ಜೊತೆ ಬಂದವರು ಪಯಣ ಮುಗಿಸುವರು – ಅವರವರ ತಾಣ ಬಂದಾಗ. ಹಾಗೆ ಪಯಣ ಮುಗಿಸಿದವರನ್ನು ನೆನೆಯುತ್ತಾ, ಹೊಸ ಪಯಣಿಗರ ಜೊತೆಗೆ ಮತ್ತೆ  ಪಯಣ ಮುಂದುವರಿಸಲೇಬೇಕು. -ನಮ್ಮದು ಮುಗಿಯುವವರೆಗು. ಬದುಕಿನ ಈ ಯಾನವು ಒಮ್ಮೊಮ್ಮೆ ನಿರೀಕ್ಷಿತ ಶ್ರಾವಣ, ಮತ್ತೊಮ್ಮೆ  ಏಕಾದಶಿ.  ನಿರೀಕ್ಷೆಗಳು ಬದುಕನ್ನು ಜರ್ಜರಿತಗೊಳಿಸುತ್ತವೆ. ಬಂದ ಹಾಗೆ ಬದುಕುವುದು ಒಂದು ಕಲೆ.  ಬದುಕಿನ ನೋವನ್ನೆಲ್ಲ ಸುಟ್ಟುಬಿಡು. ಆಸೆ ಅಮಿಷಗಳನ್ನು, ಅವ್ವನೆದೆಯ ನೊವನ್ನು ಸುಟ್ಟುಬಿಡು ಎನ್ನುತ್ತಾ ಮಾನವ ಪ್ರೇಮವನ್ನು ಚಿಗುರಿಸಿಬಿಡು ಎಂದು ಬೇಡುತ್ತಾರೆ. ಸಮಬಾಳು ಸಮಪಾಲು ಎನ್ನುತ್ತಾ ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ ” ದಣಿದಾಗ ಗೂಡುಸೇರಿ ಕಣ್ಣು ಮುಚ್ಚಿ ಇರುಳು ಹೀರೊಣ, ಮತ್ತೆ ಮಕ್ಕಳಾಗಿ ಇಬ್ಬನಿ ನುಂಗಿದ  ಹೂ ಬಿಸಿಲ ಕಾಯೊಣ”  ಸುಖ ದುಃಖ ಗಳು ಹಗಲು ರಾತ್ರಿಯಂತೆ.  “ನಿದ್ದೆಗೊಮ್ಮೆ ನಿತ್ಯ‌ ಮರಣ ಎದ್ದ ಸಲ ನವೀನ ಜನನ”  ಎನ್ನುವ ಕವಿ ವಾಣಿಯಂತೆ ಹಗಲು ದಣಿದ ಮನಕೆ ರಾತ್ರಿ ಸಾಂತ್ವಾನಿಸಿ ಮತ್ತೆ ಬೆಳಗಿನ ಇಬ್ಬನಿಯಲಿ ಹೊಸತನವ ಕಾಣೋಣ ಎನ್ನುವ ಭರವಸೆಯೊಂದಿಗೆ.ಒಂದೆಡೆ ಸಾಯಂಕಾಲ  ಎನ್ನುವುದು ಬದುಕಿನ ಸಂಧ್ಯಾ ಕಾಲ. ಬೆಳಗು ಎನ್ನುವುದು  ಬಾಲ್ಯ ಯೌವನವನ್ನು  ಅನುಭವಿಸಿ ರಾತ್ರಿಗೆ ಬದುಕಿನ  ಗೆಯ್ಮೆಯನ್ನು ನೆನೆದು  ಸುಖಿಸುವ ಎನುತ್ತಾರೆ ಅದೆ ಬದುಕಿನ ತತ್ವ.

ಬದುಕಿನ ಬಂಡಿ ಮುನ್ನೆಡೆಯಲೇಬೇಕು ಎಂದಾಗ ನೊಗಕ್ಕೆ ಕತ್ತು ಕೊಟ್ಟವನು ಅದು ಹಿರಿಯನಾಗಲಿ ಕಿರಿಯನಾಗಲಿ  ಎಳೆಯಲೇಬೇಕು. ಅದು ಮೆಲಿನವನು ಕೊಡುವ  ನಿಶಾನೆ. ಅದನ್ನು ಮೀರುವಂತಿಲ್ಲ.  ಬದುಕಿನ ದಾರಿ ಯಾವಾಗಲೂ ಸುಗಮವಿರುವುದಿಲ್ಲ. ಅದನ್ನು ಸಾವರಿಸಿಕೊಂಡು ನಡೆಯಬೇಕು


“ದಾರಿ ಯಾವುದಾದರೇನು
ಮುಳ್ಳು ಸಾವರಿಸಬೇಕು ತಾನೆ
 ಮಣ್ಣೊಳಗಿನ ಅಕ್ಕಿಯನು
ಹಸನು ಮಾಡಿದಂತೆ ಬದುಕು


ಕುದಿವ ನೀರಲಿ ಬೆಂದು ಅನ್ನವಾಗಬೇಕು” ಬದುಕು ಎಲ್ಲರದು ಒಂದೇ ತೆರನಾದುದಲ್ಲ. ಅವರವರ ಬದುಕಿನ ದಾರಿಯನ್ನು ಅವರವರು ಅಣಿಗೊಳಿಸಿಕೊಳ್ಳಲೇಬೇಕು. ಅವರ ಹಸಿವಿಗೆ ಅವರೇ ಉಣ್ಣುವಂತೆ. ತನ್ನ ಪಾಲಿನ ಬದುಕು ತನ್ನ ಜವಾಬ್ಧಾರಿ.  ಕಷ್ಟ ಎನ್ನುವಂತಿಲ್ಲ. ಗುಡುಗು ಮಿಂಚುಗಳು ಸುಖದ ಮಳೆಗಾಗಿಯೇ.ಆದರೆ, ಬದುಕಿನ  ಸಂಕಷ್ಟಗಳಿಗೆ  ಅಂಜುವುದುಂಟೆ. ಬದುಕಿನ ಬಯಲನ್ನು ಹದಗೊಳಿಸಲು  ಸುಖದ ಮಳೆ ಹುಯ್ದರೆ  ಎದೆಯ  ಮಣ್ಣು ಹದವಾದೀತು. ಭವದ ಸಂಗಾತಿಗೆ ಎದೆ ನೆಲದ ಕಂಪನು ಕಾಪಿಟ್ಟು  ಕಾಯುವ ಅಮರ ಪ್ರೇಮಿ ಅಗಲು.

ಬದುಕಿನ ಪ್ರೀತಿಗೆ ಪ್ರಕೃತಿಯನ್ನೇ ಪುರಾವೆಯಾಗಿಸಿಕೊಳ್ಳುತ್ತಾನೆ ಕವಿ. ವ್ಯಷ್ಟಿ ಪ್ರಜ್ಞೆ ಸಮಷ್ಟಿಯೆಡೆಗೆ ಸಾಗಿ. ಸಾಮಾಜಿಕ ಜವಾಬ್ದಾರಿ ಮೆರೆಯುವುದನ್ನು ಕಾಣುತ್ತೆವೆ.ನೋವು ಯಾರಿಗಿಲ್ಲ ಹುಡುಕುತ್ತಾ ಹೋದರೆ ಸಿಗುವುದು ಮತ್ತದೇ ನೊಂದ ಅನಾಥ ಪ್ರೀತಿ. ನಾನು ಎಂಬ ಆಹಮ್ಮಿನಿಂದ ದೂರ ಸರಿದವರಿಗೆ ಪ್ರೀತಿ ದಕ್ಕುವುದಾದರೂ ಹೇಗೆ. ಎಲ್ಲರೊಳೊಂದಾಗಬೇಕು.  ಜಗದ ಪ್ರೀತಿಗೆ ಶರಣಾಗಬೇಕು. ಪ್ರೆಮವನ್ನು ನಿರೀಕ್ಷಿಸುವವರು ದ್ವೇಷವನ್ನು ಬಿತ್ತಿದರೆ. ಪ್ರಿತಿ ಬೆಳೆ ಬಂದೀತೆ. ಪ್ರೀತಿ ಪ್ರಿತಿಯನ್ನು  ಸೃಜಿಸುತ್ತದೆ. ಜಗಕೆ ಬಿತ್ತಬೇಕಿರುವುದು ಪ್ರೀತಿಯನ್ನು. ಆಗ ಅನಾಥ ಭಾವ ಅಳಿಯುವುದು.

ಜಗದ ಕುಟುಂಬಕ್ಕೆ ಅಪ್ಪ, ಅವ್ವ ರೂಪಕವಾಗುತ್ತಾರೆ.  ಸಮಷ್ಟಿಯ ಹಿತದಲ್ಲಿ ತನ್ನ ಹಿತವೂ ಇದೆ  ಎಂದರೆ ದೂರವಾದೀತು.ಕುಟುಂಬದ ಹಿತದಲ್ಲಿ ತನ್ನ ಸುಖವಿದೆ ಎಂದು ಬಾಳುವ, ಬಾಳಗೊಡುವ  ಮನಸ್ಥಿತಿಗೆ ನಾವು ಅಣಿಯಾಗಬೇಕಿದೆ.  ಕಳೆದುಕೊಂಡುದರ ಅರಿವಿದ್ದವರಿಗೆ ಪಡೆಯುವ ಹಂಬಲ ಇರುತ್ತದೆ. ನಾವು ಜಾಣರಾಗಲಿಲ್ಲ ಎನ್ನುವ ನೋವು ಅಗಾಧವಿದೆ. ಕಳೆದುಕೊಂಡುದರ  ಅರಿವಿದೆ. ಅದಕಾಗಿ ಕಳೆದುಕೊಂಡ ಅಪ್ಪನ ನಿರೀಕ್ಷೆಯು ಅದ್ಭುತ ಕಾವ್ಯ ಪ್ರತಿಮೆ. ಪ್ರೀತಿ, ಸಹಬಾಳ್ವೆ ಕ್ಷಮದಾನ ನೀಡಿದ  ಬುದ್ದ ಬಸವ ಗಾಂಧಿ ಮತ್ತೆ ಬರುವ ನಿರೀಕ್ಷೆ ಸಹಜವಾಗಿದೆ‌. ಅದರೂ  ಎದೆ ನೆಲವ ಹದಗೊಳಿಸಿ ಹೋಗಿದ್ದಾರೆ ಪ್ರೀತಿ ಬೆಳೆಯ ಬೆಳೆಯಲು.


Leave a Reply

Back To Top