ಕಾವ್ಯ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ
ಅವಳ ಸಂಕಟ…
ಎದೆಯ ದಾರಿಯ
ಸೀಳಿ ಹೊರಟವಳಿಗೆ
ಮುಂಗುರುಳು ಚುಚ್ಚಿ
ಕನಸ ಕಂಗಳು ಗಾಯಗೊಳಿಸಿದೆ
ರಕ್ತವಿರದ ಎಂತಹ ಗಾಯವಿದು..!!
ಉಸಿರ ಬಸಿರಿಗೆ
ಬೆಂದವಳ ಮನಸ್ಸು ಮುದುಡಿಕೊಂಡು
ಊರ ಹಾದಿ ಹಿಡಿದಿದೆ ಕೋಪಗೊಂಡು..!!
ಕೋಪ ತಾಪಕ್ಕಿಲ್ಲಿ ಜಾಗವಿಲ್ಲ
ನೋಡು..?
ಇಲ್ಲಿ ಕಣ್ಣೀರಿಗೆ
ಬೆಲೆ ಕಟ್ಟುವ ಖದೀಮರಿದ್ದಾರೆ
ಇನ್ನು ಅವಳ ಹಾದಿ ಸುಗಮ ಹೇಗೆ..?
ಆಸೆಯ ಪಲಕ್ಕಿಯಲ್ಲಿ
ಮೆರವಣಿಗೆ ಹೊರಡಬೇಕೆಂದವಳ ಪ್ರೀತಿಯು
ನಾಲ್ಕು ಜನರ ಹೆಗಲಿಗೆ ಬಂದಿದ್ದು
ಸೋಜಿಗವೇನಲ್ಲ ಬಿಡಿ..!!
ವೃತ್ತ ಆವೃತ್ತಿಯ ಪರಿಧಿಯೊಳಗೆ
ಬಿದ್ದು ಒದ್ದಾಡುವ ಜೇಡನಂತೆ
ಕಾಲು ಸೋತು ಗೋಣು ಮುರಿದು
ಅತ್ತು ಅತ್ತು ಬಿಕ್ಕಳಿಸಿದವಳ ರಮಿಸುವುದು ಸಾಧ್ಯವಿಲ್ಲ ಬಿಡಿ..!!
ರೆಕ್ಕೆ ಮುರಿದು
ಕಾಲು ಕತ್ತರಿಸಿ
ಮೇಲೊಂದಿಷ್ಟು ಬಣ್ಣ ಬಳಿದು
ಮುಸುಗು ಹಾಕಿ ಚೆಂದ ಚೆಂದದ
ಮಾತಿಗೆ ಮರುಳು ಮಾಡಿದರೂ…
ಮುಗಿಯುವುದಿಲ್ಲ ಅವಳ ಯಾತನೆಯ ಸರಪಳಿ
ಬಿಟ್ಟು ಬಿಡಿ ಅವಳ
ಪಾಡಿಗೆ ಅವಳನ್ನು
ಸಾವಿನ ಪಯಣದಲ್ಲಿಯಾದರೂ
ಸುಖವಾಗಿರಲೆಂದು…
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
Super
ಧನ್ಯವಾದಗಳು