ರಾಜೇಶ್ವರಿ ಎಚ್ ಬಜ್ಪೆ ಕವಿತೆ-ನೆನಪು

ಮತ್ತೆ ಮತ್ತೆ ಸೆಳೆಯುತ್ತಿದೆ
ನಿನ್ನ ಪ್ರೀತಿ ನನ್ನೆಡೆ
ದೂರ ತೀರ ಸಾಗಿ ನಡೆದರೂ
ಕಣ್ಣ ನೋಟ ನಿನ್ನೆಡೆ

‌ಹೂವಿಗೇನು ಗೊತ್ತು ಗಮ್ಯ
ಅರಳಿ ನಗುವ ಬೀರಿತು
ತೇರನೆಳೆದು ಚೆಲುವ ಬೀರಿ
ಮರೆತು ಮಂದೆ ಸಾಗಿತು

ಮೊಳಕೆಯೊಡೆದ ಭಾವ ಬಲಿತು
ಮನವ ಹಸಿರು ಮಾಡಿದೆ
ಏನ ಬೇಡದೆ ಸತ್ತ್ವ ತನ್ನದೆ
ನೂರು ಕನಸಿನ ಬೇರಿದೆ

ಕಾಣದಿರುವ ಬಂಧ ಹಳೆಯದು
ಬೆಸೆದ ಕ್ಷಣವು ಯಾವುದೋ
ಹೊಸೆಯದಂತೆ ಸರಿಸಿ ದೂರಕೆ
ನಗೆಗು ಸಂಭ್ರಮ ಯಾರದೋ

ಹರಿವ ಕಾಲವು ಹೊಸತು ಬಯಸೆ
ಸಡಿಲಗೊಂಡಿತು ಒಲುಮೆ
ಸುಪ್ತದೀಪ್ತಿ ಬೆಳಗುತಿರಲು
ನಿಜದ ಭಾವವು ಚಿಲುಮೆ


Leave a Reply

Back To Top