ಗುರುವಂದನೆ

ಗುರುವಂದನೆ

ಪೂರ್ಣಿಮ ಸುರೇಶ್

ಗೃಹಬಂಧಿಯಾಗಿ ಕರೋನ ಪೊಸಿಟಿವ್,ನೆಗಟಿವ್,ಹಸಿರು,ಹಳದಿ,ಕೆಂಪು ಅನ್ನುವ ಸುದ್ದಿಮಾಯೆಯ ಸೆಳೆತಕ್ಕೆ ಹೊಂದಿಸಿಕೊಂಡು.ಮೌನ ಹೊದ್ದ ದಿನಗಳು ತೆವಳುತ್ತಿದೆ. ಇಂತಹ ಸಮಯದಲ್ಲೇ ಬೆಂಗಳೂರಿನ ಗೆಳೆಯರೊಬ್ಬರು ಕರೆ ಮಾಡಿ ‘ನಿಸಾರ್ ಹೋಗಿಬಿಟ್ರಲ್ವಾ’..ಮನಸ್ಸು ಒಪ್ಪಲಾರದ,ಬುದ್ದಿ ಗ್ರಹಿಸಲಾರದ ಏನನ್ನೋ ಆಡುತ್ತಿದ್ದಾರೆ. ಉತ್ತರಿಸಲಾಗದ ಮಂಕು ಕವಿಯಿತು. ವಾಟ್ಸಫ್ ತೆರೆದರೆ ಆಗಲೇ ಹಲವಾರು ಸ್ನೇಹಿತರು ಸಂದೇಶ ಕಳುಹಿಸಿದ್ರು. ಒಳಹೊರಗೆಲ್ಲ ಸೂತಕ. ಸಾರ್..ಹೋಗಿಬಿಟ್ರೇ..ಸಾಧ್ಯವೇ ಇದು..ಟಿ.ವಿಯಲ್ಲೂ ಅದೇ ಸುದ್ದಿ..ಬಂಧು,ಗುರು,ಮಾರ್ಗದರ್ಶಿ..ಇನ್ನಿಲ್ಲ. ಹೇಗೆ ನಂಬಲಿದನ್ನು..ಸುಳ್ಳಾಗಬಾರದೇ.. ಅಂತರಂಗದಲ್ಲಿ ಕಚ್ಚಿಕೊಂಡ ನೆನಪುಗಳು,ಬರಹಗಳು ಮಾತ್ರ ನಮ್ಮ ಜೊತೆ.

ನಿಸಾರ್ ಸಾರ್ ಗೆ ನಮ್ಮ ಉಡುಪಿಯ ಜೊತೆ ಅನನ್ಯವಾದ ನಂಟು. ಅವರೇ ಹೇಳುತ್ತಿದ್ದಂತೆ ದಾಖಲೆ ಎನ್ನುವಷ್ಟು ಕಾರ್ಯಕ್ರಮಗಳಿಗೆ ಉಡುಪಿಯಲ್ಲಿರುವ ಅವರ ಅಭಿಮಾನಿಗಳು ಕರೆಸಿಕೊಂಡಿದ್ದರು. ಅದು 2013 ಇರಬೇಕು ಅರಣ್ಯ ಇಲಾಖೆಯವರು ಪ್ರೊ ನಿಸಾರ್ ಅಹಮದ್ ಅವರನ್ನು ವನಮಹೋತ್ಸವ ಕಾರ್ಯಕ್ರಮ ಕ್ಕೆ ಅತಿಥಿಯಾಗಿ ಆಹ್ವಾನಿಸಿದ್ರು. ಜೊತೆಜೊತೆಗೆ ಅವರ ಒಪ್ಪಿಗೆಯಿಂದ ಬೇರೆ ಎರಡು ಸಾಹಿತ್ಯಕ ಕಾರ್ಯಕ್ರಮಗಳೂ ನಿಗದಿಯಾಗಿದ್ದವು. ಉಡುಪಿಯ ಟಿ.ವಿ. ಚಾನಲ್ ನವರು ಸಾರ್ ಅವರ ಸಂದರ್ಶನ ಮಾಡುವಂತೆ ನನ್ನ ಕೇಳಿಕೊಂಡಿದ್ರು. ನನಗೆ ಒಂದು ಎರಡು ತಾಸಿನ ಸಮಯ. ನಾನು ತಯಾರಾಗಬೇಕಿತ್ತು. ನನಗೋ ಗೊಂದಲ..ಅಷ್ಟಿಷ್ಟು ನಿಸಾರ್ ಅವರ ಕವನ ಓದಿದ್ದು ಅಷ್ಟೆ. ಅದು ಹೊರತುಪಡಿಸಿ ಮತ್ತೇನು ಗೊತ್ತು. ಮಾತಿನ ನಡುವೆ ಅವರು ನನ್ನನ್ನು ಸಾಹಿತ್ಯದ ಬಗ್ಗೆ ಏನಾದ್ರೂ ಪ್ರಶ್ನಿಸಿದರೆ..? ನಾನೋ ಅರೆಬೆಂದ ಕಾಳು. ಏನು ಮಾಡಲಿ. ಓದಿದ್ದೂ ಕೂಡಲೇ ನೆನಪಿಗೂ ಬರುತ್ತಿಲ್ಲ…ಸಂದಿಗ್ಧತೆಯಲ್ಲೇ ಚಾನಲ್ ಹುಡುಗರೊಂದಿಗೆ ಅವರು ಉಳಿದುಕೊಂಡಿದ್ದ ವಸತಿಗೃಹಕ್ಕೆ ಹೋಗಿದ್ದೆ. ಆಗಷ್ಟೆ ಅವರು ನಮ್ಮ ಊರನ್ನು ತಲುಪಿದ್ರು. ಮುಖದಲ್ಲಿ ಆಯಾಸ. ಏನು? ಎನ್ನುವ ಪ್ರಶ್ನೆ ಯೊಂದಿಗೆ ಸರಿದು ಒಳಬರಲು ನಮಗೆ ದಾರಿಕೊಟ್ಟರು. ನಾನು ವಿಷಯವನ್ನು ಅವರಿಗೆ ತಿಳಿಸಿ ಅಂದೆ. “ಸಾರ್,ಸಂದರ್ಶನ ಎನ್ನುವ ಧೈರ್ಯ ನನ್ನೊಳಗಿಲ್ಲ. ನಿಮ್ಮನ್ನ ಮಾತನಾಡಿಸಬೇಕು, ಸಾಹಿತ್ಯದ ಮಾತುಗಳನ್ನು ಕೇಳಬೇಕು . ಮಗುವಿನ ಕುತೂಹಲ. ನಿಮ್ಮನ್ನ ಪೂರ್ತಿ ಓದಿಲ್ಲ. ತಪ್ಪುಗಳಿದ್ದರೆ ಕೋಪಿಸದಿರಿ.” ಸಾರ್,ಒಂದು ತಾಸು ಬರಹದ ಬಗ್ಗೆ,ಕವಿತೆಗಳ ಬಗ್ಗೆ,ಬದುಕಿನ ಬಗ್ಗೆ..ಮಾತನಾಡುತ್ತಲೇ ಹೋದರು. ನಡುನಡುವೆ ನನ್ನ ಪ್ರಶ್ನೆ..ಸಮಯದ ಮಿತಿ ತಿಳಿದು ಮಾತಿಗೆ ಚುಕ್ಕಿ ಇಟ್ಟಿದ್ದೆ. ಗೊತ್ತಿಲ್ಲ ಅಂದವಳು ಅದೆಷ್ಟು ಒಳ್ಳೆಯ ಪ್ರಶ್ನೆಗಳನ್ನು ಕೇಳಿರುವೆ ತಾಯಿ..ಎನ್ನುವ ಸರ್ಟಿಫಿಕೇಟ್ ನೀಡಿದ್ರು. ಮರುದಿನ ಅವರ ಇನ್ನೊಂದು ಕಾರ್ಯಕ್ರಮದಲ್ಲಿ ತನ್ನ ಮಾತಿನ ನಡುವೆ ಈ ಸಂದರ್ಶನದ ನೆನಪು ಮಾಡಿ..ಎಲ್ಲಿ ಆ ಹುಡುಗಿ.. ಇದ್ರೆ ಸ್ವಲ್ಪ ನಿಂತುಬಿಡಮ್ಮಾ. ಬಹಳ ಚೆನ್ನಾಗಿ ಸಂದರ್ಶನ ನಡೆಸಿದೆ ಎನ್ನುತ್ತ ನನ್ನ ಒಳಗೊಂದು ಪುಳಕದ ತೇರನ್ನೇ ಎಳೆದುಬಿಟ್ಟರು. ಸಾರ್..ನನ್ನನ್ನ ಆಶೀರ್ವದಿಸಿದರು. ಇಂತಹ ಆಶೀರ್ವಾದ ನನ್ನಂತಹ ಅದೆಷ್ಟೋ ಜನರಿಗೆ ಮೊಗೆದು ಕೊಡುವ ಸಿರಿವಂತಿಕೆ ಆ ಮೇರು ವ್ಯಕ್ತಿತ್ವಕ್ಕಿತ್ತು.

ಮುಂದೆ ಉಡುಪಿಗೆ ಕಾರ್ಯಕ್ರಮಗಳಿಗಾಗಿ ಹಲವಾರು ಬಾರಿ ಸಾರ್ ಬಂದಿದ್ದರು. ನನ್ನ ಕವನ ಸಂಕಲನ ಅವರ ಕೈಗಿಟ್ಟು ಆಶೀರ್ವಾದ ಬೇಡಿದ್ದೆ. ಸಂಘಟಕಿಯಾಗಿ ನನ್ನ ಕೆಲಸದ ಬಗ್ಗೆ ಮೆಚ್ಚುಗೆ,ಹಾರೈಕೆ ನೀಡುತ್ತಲೇ ಉಡುಪಿಯೊಳಗೆ ಕಿರಿಯ ಸ್ನೇಹಿತರ,ಅಭಿಮಾನಿಗಳ ತಂಡವನ್ನೇ ನಿರ್ಮಿಸಿ ಬಿಟ್ಟರು. ಸಾರ್ ಬಂದಾಗಲೆಲ್ಲ ಸಿಹಿ ಕಂಡಾಗ ಮುಗಿ ಬೀಳುವ ಇರುವೆಗಳಂತೆ ಸೇರಿ ಬಿಡುತ್ತಿದ್ದರು . ಇವರಲ್ಲಿ ಗೂಡಂಗಡಿಯವರು, ಅರಣ್ಯ ಇಲಾಖೆಯ ಉದ್ಯೋಗಿಗಳು,ಸಾಹಿತಿಗಳು,ವ್ಯಾಪಾರಸ್ಥರು,ಉಪನ್ಯಾಸಕರು ವಿಧ್ಯಾರ್ಥಿಗಳು, ಎಲ್ಲ ಬಗೆಯ ಮನಸ್ಸುಗಳನ್ನು ಸೇರಿಸಿ ಮಾತು..ಪ್ರೀತಿ, ವಾತ್ಸಲ್ಯ ತುಂಬುತ್ತಿದ್ದರು. ಭೇಟಿಯಾದ ಪ್ರತಿಯೊಬ್ಬರ ಹೆಸರು ಅವರ ಮನಸ್ಸಿನಲ್ಲಿ ದಾಖಲಾಗುತ್ತಿತ್ತು. ಮಾತ್ರವಲ್ಲಅವರವಿಶೇಷತೆಗಳು,ಇಷ್ಟಗಳು,ಆಸಕ್ತಿಗಳ ಬಗ್ಗೆ ಥಟ್ಟಂತ ಹೇಳಿ ಬಿಡುತ್ತಿದ್ದರು.

ಅದೊಂದು ಸಲ ಉಡುಪಿಗೆ ಬಂದಾಗ ಅವರ ಆಪ್ತರು ರಾತ್ರಿ ಊಟಕ್ಕೆ ಹೋಟೇಲಿಗೆ ಕರೆದಿದ್ರು. ಊಟ ಮುಗಿಸಿ ಕಾಲ್ನಡಿಗೆಯಲ್ಲಿ ಅವರು ಉಳಿದುಕೊಂಡ ವಸತಿ ಗೃಹ ಕ್ಕೆ ಹೋಗುತ್ತಿದ್ದರು. ದಾರಿಯಲ್ಲಿ ಕುಡುಕನೊಬ್ಬ ಎದುರಾದ. ಇವರನ್ನು ದಾಟಿ ಮುಂದೆ ಹೋಗುವ ಸಮಯದಲ್ಲಿ ಥಟ್ಟಂತ ನಿಂತು ಅವರಿಗೆ ಸೆಲ್ಯೂಟ್ ನೀಡಿದ. ಸಾರ್ ಕೂಡಲೇ ಅವನ ಭುಜ “ಸವರಿ ಎಲ್ಲಿಂದ ಬರುತ್ತಿರೋದು” ಅಂದ್ರು. ಅವನು ಯಾವುದೋ ಕಟ್ಟಡ ಕಾರ್ಮಿಕ. ಅಮಲಿನಲ್ಲೇ ಉತ್ತರಿಸಿದ. ಕೈಯಲ್ಲಿ ಪೊಟ್ಟಣವಿತ್ತು. ಇದೇನು ಎಂದು ಪ್ರಶ್ನಿಸಿದರು. ಪರೋಟ ಅಂದ. ಮನೆಯಲ್ಲಿ ಯಾರಿದ್ದಾರೆ. ಎಷ್ಟು ಮಕ್ಕಳು..ಯಾಕೆ ಕುಡಿತದ ಅಭ್ಯಾಸ.ತಗೋ ಓದುವ ನಿನ್ನ ಮಗಳಿಗೆ ಇರಲಿ ಎಂದು ತಮ್ಮ ಕಿಸೆಯಿಂದ ಹಣವನ್ನ ತೆಗೆದು ಅವನ ಕೈಗಿರಿಸಿದ್ರು. ಉಡುಪಿಯಲ್ಲಿ ಪರಿಚಯವಾದ ಪ್ರತಿಯೊಬ್ಬರ ಮನೆಯ ಸದಸ್ಯರ ಹೆಸರು,ಅವರ ಆಸಕ್ತಿ..ಅದರ ಬಗ್ಗೆ ವಿಚಾರಣೆ ಬಲುಆಸ್ಥೆಯಿಂದ ಮಾಡುತ್ತಿದ್ದವರು.

ಒಮ್ಮೆ ಬೈಂದೂರಿನಲ್ಲಿ ಅವರ ಅಧ್ಯಕ್ಷತೆಯಲ್ಲಿ ಅಡಿಗರ ವಿಚಾರಗೋಷ್ಠಿ ನಡೆಯುವುದಿತ್ತು. ಉಡುಪಿಯಿಂದ ನಾವು ಒಂದಷ್ಟು ಜನ ಅವರ ಜೊತೆ ಹೊರಟಿದ್ದೆವು. ದಾರಿ ಮಧ್ಯದಲ್ಲಿ ಶಿವರಾಮ ಕಾರಂತರ ಊರು ಕೋಟ ಬಂದಾಗ ಅಟೋ ನಿಲ್ದಾಣ ..ಕಾರು ಸ್ವಲ್ಪ ನಿಲ್ಲಿಸಪ್ಪ..ಇದು ಕಾರಂತರ ಓಡಾಡಿದ ಪುಣ್ಯಭೂಮಿ ಅಲ್ವಾ.ನಾನು 15 ವರ್ಷಗಳ ಹಿಂದೆ ಇಲ್ಲಿ ಬಂದಾಗ ಒಬ್ಬ ಆಟೋ ಡ್ರೈವರ್ ನನ್ನನ್ನು ಕರೆದುಕೊಂಡು ಹೋಗಿದ್ದ. ಅವನ ಹೆಸರು ಎಂದು ಹೆಸರು ಹೇಳಿ, ಅವನು ಇದ್ರೆ ಮಾತಾಡಿಸಿ ಬರುವೆ ಎನ್ನುತ್ತ ಅಲ್ಲಿ ವಿಚಾರಿಸಿ ಬಂದಿದ್ದರು. ಯಾವುದೇ ಹಮ್ಮುಬಿಮ್ಮುಗಳಿಲ್ಲ,ಜಾತಿ,ಮತ,ಧರ್ಮ ಎಲ್ಲವನ್ನು ಮೀರಿ ಮಾನವತೆಯ ಮಂತ್ರವನ್ನು ತಮ್ಮೊಳಗೆ ತುಂಬಿಕೊಂಡವರು. ತಮ್ಮ ಆಪ್ತರಿಗೆ ಅದನ್ನೇ ಬೋಧಿಸಿದವರು. ಸಾಹಿತ್ಯವೆಂದರೆ ಹೃದಯಗಳನ್ನು ಬೆಸೆಯುವ ಶ್ರೇಷ್ಠ ಮಂತ್ರ ಎನ್ನುತ್ತಿದ್ದರು. ಅವರ ಸಾಹಿತ್ಯ ಹಾಗೂ ಅವರು ಬೇರೆಯಲ್ಲ. ಬರೆದಂತೆ ಬದುಕಿದವರು. ತನ್ಮ ಕಾರ್ಯಕ್ರಮಕ್ಕೆ ಬಂದ ಪರಿಚಿತರ ಹೆಸರನ್ನು ಪ್ರೀತಿಯಿಂದ ಉಲ್ಲೇಖಿಸಿ ಗುರುತಿಸುತ್ತಿದ್ದರು. ಬೆಂಗಳೂರಿನಲ್ಲಿ ನಾಗರಬಾವಿಯ ಅವರ ಮನೆಯಲ್ಲಿ ಪ್ರಕಾಶ್ ಎನ್ನುವ ಒಬ್ಬ ಅನಾಥರಿದ್ದರು. ತನ್ನ ಊಟದಲ್ಲಿ ಅರ್ಧವನ್ನು ಅವನಿಗೆ ನೀಡಿ ಖರ್ಚಿಗೆ ಕೊಟ್ಟು ಸಾಕುತ್ತಿದ್ದರು. ಆ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದ್ದಂತಿತ್ತು. ಕೆಲವೊಮ್ಮೆ ಜೋರಾಗಿ ಕಿರುಚಿ ಸಾರ್ ಗೆ ಬಯ್ಯುತ್ತಿದ್ದ. ಅದನ್ನೂ ಮುಗುಳ್ನಗೆಯಿಂದ ಸ್ವೀಕರಿಸಿ ಅನುಕಂಪದಿಂದ ಹೇಳುತ್ತಿದ್ರು. ಪಾಪ,ಅವನಿಗೆ ಯಾರಿದ್ದಾರೆ ?


ಲಕ್ಷ್ಮಣ್ ಎಂಬ ಹುಡುಗ ಕೇಬಲ್ ಕೆಲಸದಲ್ಲಿ ತೊಡಗಿಸಿಕೊಂಡವನು. ಸ್ವಂತ ಮಗನಿಗಿಂತ ಹೆಚ್ಚು ಎಂಬಂತೆ ಪ್ರೀತಿಸಿದರು. ಕ್ಯಾಮಾರ ಹಿಡಿದು ಫೋಟೋ ತೆಗೆಯುವ ಗೋವಿಂದರಾಜ್,ಅರಣ್ಯಾಧಿಕಾರಿಯಾಗಿ ನಿವೃತ್ತರಾದ ಯೋಗೇಶ್ವರ ದಂಪತಿಗಳು,ಪ್ರಕಾಶಚಂದ್ರ, ಭಾಸ್ಕರ್,ಕಲಾವಿದರು,ಸಿಹಿತಿಂಡಿ ತಯಾರಿಸುವ ಶ್ರೀಧರ್, ಬರಹಗಾರರಾದ ಪಾರ್ವತಿ ಐತಾಳ್,ಡಾ.ನಿಕೇತನ, ಡಾ.ಪ್ರಶಾಂತ್, ಡಾ.ಧನಂಜಯ್ ಕುಂಬ್ಳೆ, ರಾಜಕೀಯದಲ್ಲಿ ತೊಡಗಿಸಿಕೊಂಡ ಕುಯಿಲಾಡಿ ಸುರೇಶ್ ನಾಯಕ್,ಅಮೃತ್ ಶೆಣೈ,ಯು.ಆರ್,ಸಭಾಪತಿ, ಹೆಸರು ತಿಳಿಯದ ಬೀಡ ಮಾರುವ ಹುಡುಗ ಇನ್ನೂ ನನ್ನ ನೆನಪಿಗೆ ಸಿಗದ ಅದೆಷ್ಟೋ ಹೆಸರುಗಳು.. ಉಡುಪಿ, ಮಂಗಳೂರಿನ ಸ್ನೇಹ ಬಂಧುಗಳು. ಎಲ್ಲರೂ ಅವರಿಂದ ಪ್ರೀತಿಯ ಸವಿ ಉಂಡು ಪುಷ್ಠಿಗೊಂಡವರು. ತಮ್ಮ ಪರಿಧಿಯೊಳಗೆ ಇಣುಕಿದ ಎಲ್ಲ ಮನಸ್ಸುಗಳಿಗೂ ಲಗ್ಗೆ ಇಟ್ಟರು.


ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಕಂದಾ..ಎತ್ತರಕ್ಕೆ ಬೆಳೆದಷ್ಟು ನಾವು ವಿನೀತರಾಗಬೇಕು. ಕನ್ನಡ ನಮ್ಮ ತಾಯಿ ಆಕೆಯನ್ನು ಪ್ರೀತಿಸಬೇಕು, ಮನುಷ್ಯತ್ವ ಒಂದೇ ನಮ್ಮೆಲ್ಲರನ್ನೂ ಜೊತೆಯಾಗಿ ನಡೆಸಬಲ್ಲದು. ಎನ್ನುತ್ತಿದ್ದ ಸಾರ್ , ಅಂತೆಯೇ ಬದುಕಿದವರು. ಇಂದು ಭೌತಿಕವಾಗಿ ನಮ್ಮೆಲ್ಲರ ನ್ನೂ ಅಗಲಿ ಶೂನ್ಯವೊಂದನ್ನು ಮನಸ್ಸಿನಲ್ಲಿ ನೆಟ್ಟಿದ್ದಾರೆ. ಆ ನಿರ್ವಾತ ದೊಳಗಿಂದ ಅವರ ಆದರ್ಶ,ಆ ಮೇರು ವ್ಯಕ್ತಿತ್ವದ ಪರಿಮಳ ಹೆಕ್ಕುತ್ತ ನಾವು ನಡೆಯಬೇಕಾಗಿದೆ. ನಿಮ್ಮ ಸಾವಿರದ ನೆನಪುಗಳು,ವಿಶಿಷ್ಟ ಭಾಷೆಯ ಬರಹಗಳು,ಚಿಂತನೆ, ಕಾವ್ಯ ನಮ್ಮ ಜೊತೆಗಿದೆ ಸಾರ್. ಅವು ಅಜರಾಮರ. ಮನದಾಳದ ನಮನಗಳು

*******

One thought on “ಗುರುವಂದನೆ

  1. ನೆನಪಿನ ಅಮೂಲ್ಯ ಮಣಿಗಳನ್ನು ತುಂಬಾ ಸೊಗಸಾಗಿ ಪೋಣಿಸಿದ್ದೀರಿ.ಆದರ ಸೌಂದರ್ಯಕ್ಕೆ ಮರುಳಾಗಿರುವೆ.
    ಧನ್ಯನಾದೆ.

Leave a Reply

Back To Top