ಡಾ. ಬಸಮ್ಮ ಗಂಗನಳ್ಳಿ ಅವರ ಕವಿತೆ-ಕನಸು ಕಮರುವುದಿಲ್ಲ.

ಭಾವ ಲೋಕದಿ ತೇಲಾಡುತ
ನಿರ್ಭಾವುಕಳಾದ ಅಕ್ಕ
ಕನಸೊಂದ ಕಂಡಳು ll

ಎಲ್ಲ ಹೆಣ್ಣಿನಂತೆ ಅವಳಿಗೂ
ನಲ್ಲನ ಚೆಲುವಿಕೆ,ಪ್ರೀತಿಯ
ನೆನಪಿನ ಮರುಕಳಿಕೆ ll

ಕಣ್ಣಿಗೆ ಕಾಣದ ಇನಿಯನ
ನೆನಪಿನ ಕನಸುಗಳು
ಚಿತ್ತಾರಗೊಂಡಿವೆ ll

ಜಗದ ಮದುವೆಗಿಂತ
ಅಂತರಂಗದ ಮದುವೆ
ಆನಂದಮಯವು ll

ಕಮರಿ ಹೋದ ಕನಸು
ಚಿಗುರೊಡೆದು ಅರಳಿ
ಪರಿಮಳಿಸಿದ ಅನುಭವ ll

ಚಿಕ್ಕವಯದಲಿ ಬಯಸಿದ
ಚೆನ್ನನ ಕಾಣುವ ಕೂಡುವ
ಕನಸುಗಳಿಗೆ ಲೆಕ್ಕವಿಲ್ಲ ll

ಕನಸು ನನಸಾಗಲು
ಬುದ್ಧಿ,ಭಾವ,ಮನಸು
ಮಾಗಬೇಕು ಪಕ್ವತೆಯಲಿ ll

ಹದಿಹರೆಯದಲಿ ಅದೆಂಥ
ಬಟ್ಟ ಬಯಲ ಪರಿಕಲ್ಪನೆ ?
ಅನೂಹ್ಯ ನಿಗೂಢತೆಯು ll

ಬಂಧಮುಕ್ತತೆ ಸ್ವಾತಂತ್ರ್ಯ
ತನ್ನಿಚೆಯ ಧೋರಣೆ
ನಿರ್ಮೋಹದ ಸಾಧನೆ ll

ಉತ್ತುಂಗದ ನಿಲುವಿಗೆ
ಇರದು ಯಾವ ಹೋಲಿಕೆ
ಮುಟ್ಟಲಾಗದ ದಿಟ್ಟತನವು ll

ಲೋಕದಲಿ ಹುಟ್ಟಿ
ಲೋಕದಂತಾಗದವಳ
ಅಲೌಕಿಕ ಅನುಭವವು ll

ಪತಿಯೇ ಪರದೈವವೆಂದ ನಿಯಮಕೆ ಹೊಸ
ಭಾಷ್ಯ ಬರೆದಳವಳು ll

ಎಷ್ಟು ಯುಗಗಳು ಕಳೆದರೂ
ಜಗಕೊಬ್ಬಳೇ ಅಕ್ಕಳು
ಎಲ್ಲ ಮೀರಿದ ಮೇರೆಯು ll

ಸ್ವಪ್ನ ಸುಂದರನ ಸತಿಯ
ಹಗಲಿರುಳ ಕನವರಿಕೆಯು
ಬಿಂದು ಬಿಂದುವ ಕೂಡಿತ್ತು ll

ಚೆನ್ನಮಲ್ಲಿಕಾರ್ಜುನೊಡಗೂಡಿ
ಕರ್ಪುರದ ಗಿರಿಯನು
ಉರಿಯು ಕೊಂಡಂತಾಯಿತು ll


Leave a Reply

Back To Top