ವಿಶ್ವಾಸ ಡಿ. ಗೌಡ ಲೇಖನ-ಅಂಕಗಳ ಬೆನ್ನೇರಿ

ಲೇಖನ ಸಂಗಾತಿ

ವಿಶ್ವಾಸ ಡಿ. ಗೌಡ

ಅಂಕಗಳ ಬೆನ್ನೇರಿ

ಎಲ್ಲರೂ ನೂರಕ್ಕೆ ನೂರು ಅಂಕ ತೆಗೆದುಕೊಂಡ ಬಗ್ಗೆಯೇ ಮಾತಾಡುತ್ತಿದ್ದಾರೆ…ಅದು ಖಂಡಿತ ಸಾಧನೆಯೇ, ಜ್ಞಾನದಿಂದ ಬರೆದಿರಲಿ, ಕಂಠಪಾಠ ಮಾಡಿರಲಿ , ಎಲ್ಲದಕ್ಕೂ ಪ್ರಯತ್ನ ಅವಶ್ಯ.. ಮಕ್ಕಳಿಗೆಲ್ಲ ಶುಭಾಷಯಗಳನ್ನು ಹೇಳಲೇಬೇಕು.

ಆದರೆ,ಪಾಲಕರಾಗಿ ನಾವಿಷ್ಟೇ ಮಾಡಿದರೆ ಸಾಕೇ..ನಾಗರೀಕರಾಗಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಗಾಗ ಓರೆಗೆ ಹಚ್ಚಿ ಪರೀಕ್ಷಿಸುವ ಜವಾಬ್ದಾರಿ ನಮ್ಮದಲ್ಲವೇ,

ನಮ್ಮ ಶಿಕ್ಷಣ ಹೇಗಿದೆ ಅಂದರೆ ಬಿ.ಕಾಂ ಮಾಡಿದವನಿಗೆ ಚೆಕ್ ಬುಕ್ ಕೊಟ್ಟು ಪೇಮೆಂಟ್ ರೆಡಿ ಮಾಡು ಅಂದ್ರೆ ಚೆಕ್ ಬರ್ಯೊಕೆ ಬರಲ್ಲ.ಬ್ಯಾಂಕ್ ಗೆ ಕಳಿಸಿ ಡಿಡಿ ತಗೊಂಬಾ ಅಂದ್ರೆ ಡಿಡಿ ಪಾರಂ ಪಿಲಪ್ ಮಾಡೊಕೆ ಅಲ್ಲಿಗೆ ಬಂದಿರೊರ ಹೆಲ್ಪ ತಗೊತಾನೆ… ಇಂಡಸ್ಟ್ರಿಯಲ್ ಪ್ರೊಡಕ್ಶನ್ ಇಂಜಿನಿಯರ್ ಒಬ್ಬನಿಗೆ quote to cash process ಹೇಳೊ ಅಂದ್ರೆ ಖರೀದಿ, ಬಟವಡೆ, ಮಾರಾಟ, ವಸೂಲಿ ಅಂತ ಮಾತು ಮುಗಿಸ್ತಾನೆ… ಬಿ.ಎಡ್ ಮಾಡಿ ಬಂದಿರೊ ವಿಜ್ಞಾನ ಶಿಕ್ಷಕ ಪೆಂಡೂಲಮ್ ತಯಾರಿಸಲು ಬೇಕಾದ ವಸ್ತುಗಳಿಗಾಗಿ ಪೇಟೆಗೆ ಹೊಗ್ತಾನೆ… ಮನೇಲಿ ಸುಟ್ಟ ಬಲ್ಬ ಚೇಂಜ್ ಮಾಡೊಕೂ ಯೂಟ್ಯೂಬ್ ವಿಡಿಯೊ ನೋಡೊ ಕಾಲ ಇದು.

ಎಲ್ಲಿಯವರೆಗೆ ಸಾಮಾನ್ಯ ಜ್ಞಾನಕ್ಕೆ, ಜೀವನ ಕೌಶಲ್ಯಗಳಿಗೆ ಶಾಲೆಗಳಲ್ಲಿ ಜಾಗವಿಲ್ಲವೊ ಅಲ್ಲಿವರೆಗೆ ನೂರು ಬಂದರೂ ಅಷ್ಟೇ, ಸಾವಿರ ಬಂದರೂ ಅಷ್ಟೇ.

ನನ್ನ ಪ್ರಕಾರ ನಿಮ್ಮ ಮಕ್ಕಳು ಹತ್ತನೇ ತರಗತಿ ತೇರ್ಗಡೆಯಾಗುವುದರೊಳಗೆ  ಈ ಕೆಳಗಿನ ಕೆಲಸ ಮಾಡಲು ಬರುತ್ತಾ ಅಂತ ಪಾಲಕರು ಖಚಿತಪಡಿಸಿಕೊಳ್ಳಲೇಬೇಕು ಹೆಣ್ಣು -ಗಂಡು ಬೇಧವಿಲ್ಲದೇ,
 ಅವರವರ ಶೂ, ಬಟ್ಟೆಯನ್ನು ಅವರೇ ಕೈಯಲ್ಲಿ ಒಗೆದು, ಒಣಗಿಸಿ, ಇಸ್ತ್ರಿ ಮಾಡಿಟ್ಟು ಕೊಳ್ತಾರಾ.. ವಾಶಿಂಗ್ ಮಶೀನ್ (ಇದ್ದರೆ) ಉಪಯೊಗಿಸೊಕೆ ಬರುತ್ತಾ?
– ಮನೆಯಲ್ಲಿ ಒಂದೆರಡು ದಿನ ಒಬ್ಬರನ್ನೇ ಬಿಟ್ಟು ಹೋದರೆ (ಸುರಕ್ಷತಾ ವಿಷಯ ಹೊರತಾಗಿ) ತನಗೆ ಬೇಕಾದ ಅನ್ನ, ಸಾರು, ಮೊಸರು (ಹಾಲು ಹೆಪ್ಪಾಕಿ) ಮಾಡಿಕೊಳ್ತಾರಾ? (ಪಾರ್ಸಲ್ ತಂದ್ಕೊಂಡು ತಿನ್ನೊದಲ್ಲ).. ಕುಕರ್ರ್ ಕೂಗ್ಸೊಕೆ, ಮಿಕ್ಸರ್ ನಲ್ಲಿ ರುಬ್ಬೊಕೆ ಬರುತ್ತಾ? ಪಾತ್ರೆ ತೊಳೆದು ತೆಗೆದಿಡ್ತಾರಾ?
– ಕಸ ಗುಡಿಸೊದು, ನೆಲ ಒರೆಸೊದು, ವ್ಕಾಕ್ಯೂಮ್ ಕ್ಲೀನರ್ (ಇದ್ದರೆ) ಉಪಯೋಗಿಸೋದು ಮಾಡಲು ಬರುತ್ತಾ?
– ಮನೇಲಿ ಬಲ್ಪ ಚೇಂಜ್, ಹ್ಯಾಂಡ್ ಶವರ್ ಚೇಂಜ್, ಸಣ್ಣಗೆ ಲೀಕಾಗ್ತಿರೊ ನೀರಿನ ಪೈಪ್ ಸೀಲ್, ಗಡಿಯಾರದ ಸೆಲ್ ಚೇಂಜ್, ಮುಂತಾದ ಸಣ್ಣ ಪುಟ್ಟ ರಿಪೇರಿ ಕೆಲಸ ಮಾಡೊಕೆ ಬರುತ್ತಾ?
– ದೂರ ಪ್ರಯಾಣ ಹೊರಡುವಾಗ ತಮಗೆ ಬೇಕಾದ ಎಲ್ಲಾ ಸಾಮಾನು ಸರಂಜಾಮಿನೊಂದಿಗೆ, ಬಟ್ಟೆ ಬರೆಗಳೊಂದಿಗೆ ತನ್ನ ಬ್ಯಾಗ್ ನ ತಾವೇ ಪ್ಯಾಕ್ ಮಾಡ್ಕೊತಾರಾ?
– ಲಿಸ್ಟ ಮಾಡಿ ಕೊಟ್ರೆ ಅಂಗಡಿಗೆ ಹೊಗಿ ದಿನಸಿ, ಹಣ್ಣು ಹಂಪಲು, ಸೊಪ್ಪು ತರಕಾರಿ ತರೊಕೆ ಗೊತ್ತಾ? ಆ ಕೆಲ್ಸಾನಾ ಎಷ್ಟು ದಕ್ಷತೆಯಿಂದ ಮಾಡ್ತಾರೆ?
– ಬ್ಯಾಂಕ್ ಸೊಸೈಟಿಗೆ  ಹೊಗಿ ಹಣ ಡ್ರಾ ಮಾಡೊದು, ನೆಫ್ಟ ಮಾಡೊದು, ಡಿಡಿ ತರೊದು, ಮಾಡ್ತಾರಾ? ಮುಖ್ಯವಾಗಿ ಹಣಕಾಸು ಸಂಬಂಧಿ ಆಪ್ ಗಳ ಬಗ್ಗೆ ತಾಂತ್ರಿಕ ಜ್ಞಾನ ಎಷ್ಟಿದೆ?
– ತಿಂಗಳಿಗೆ ಮನೆಯ ಖರ್ಚು ವೆಚ್ಛಗಳ ಅಂದಾಜಿದೆಯಾ (ದಿನಸಿ, ಹಾಲು, ಕರೆಂಟ್ ಬಿಲ್, ಶಾಲಾ ಫೀ, ಪೆಟ್ರೊಲ್ ವೆಚ್ಛ ಇತ್ಯಾದಿ ಎಲ್ಲವೂ).. ಮನೆಯಲ್ಸಿ ಉಪಯೊಗಿಸುವ ಅವಶ್ಯಕ ವಸ್ತುಗಳ, ಮಶೀನುಗಳ ಬೆಲೆಯ ಅಂದಾಜಿದೆಯೇ?
– ಸರಕಾರಿ ಅರ್ಜಿ ತುಂಬೊದು, ಅರ್ಜಿ ಬರೆಯೊದು, ತಕ್ಕಮಟ್ಟಿಗೆ ವ್ಯವಹರಿಸೊದು ಗೊತ್ತಾ?
– ಮನೆಯ ಎಲ್ಲರ ಗುರುತಿನ ಚೀಟಿಗಳು, ವಿಮಾ ಪಾಲಿಸಿ, ಆಸ್ತಿ, ಬ್ಯಾಂಕ್ ಎಕೌಂಟ್ ಗಳ ವಿವರ ಎಲ್ಲಿದೆ ಅಂತ ಗೊತ್ತಿದೆಯಾ? ಅದನ್ನ ಓದಿ / ನೊಡಿ ಅರ್ಥೈಸಲು ತಿಳಿದಿದೆಯಾ? (ಮುಖ್ಯವಾಗಿ ಒಂದೇ ಮಗುವಾಗಿದ್ದರೆ..)

ಇದರಲ್ಲಿ ಏನೇನು ಗೊತ್ತಿಲ್ಲವೊ ಅದನ್ನ ಕಲಿಸಿ, ಗೊತ್ತಿದ್ದರೆ ಎಷ್ಟು ನಿಪುಣರೊ ನೋಡಿ. ಇದರ ಆಧಾರದ ಮೇಲೆ ನೀವೇ ಒಂದು ಅಂಕ ಪಟ್ಟಿ ತಯಾರಿಸಿ ನೋಡಿಕೊಳ್ಳಿ, ಹಾಗೇ ಪಡೆದ ಅಂಕಗಳು ಮಕ್ಕಳದ್ದಲ್ಲ.. ನಿಮ್ಮದು, ಪಾಲಕರಾಗಿ ನೀವೇನು ಮಾಡಿದ್ದೀರಾ ಅನ್ನೊದಕ್ಕೆ ಪ್ರಮಾಣ.
ಈಗ ಈ ಮೇಲಿನ ಕೆಲಸಗಳಿಗೆ ಸಿಕ್ಕ ಅಂಕಗಳನ್ನು, ನಿಮ್ಮ ಮಗು ಪಡೆದ ಶಾಲಾ ಅಂಕಕ್ಕೆ ಸೇರಿಸಿ ಶೇಕಡಾವಾರು ತೆಗೆದು ನೊಡಿ,ಆ ಶೇಕಡಾವಾರು ಅಂಕ ನಿಮ್ಮ ಮಗುವಿನದು.
ನಿಮ್ಮ ಮಗು ಬದುಕಿನಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಗಳಿಸುತ್ತದೆ, ನೆಮ್ಮದಿಯಿಂದ ಬದುಕುತ್ತದೆ ಎಂಬುದನ್ನು ಸೂಚ್ಯವಾಗಿ ತಿಳಿಸುವ ದಿಕ್ಸೂಚಿ.


ವಿಶ್ವಾಸ ಡಿ. ಗೌಡ

Leave a Reply

Back To Top