ಕಾವ್ಯಸಂಗಾತಿ
ನಾಗರಾಜ ಬಿ.ನಾಯ್ಕ
ಸಾವೊಂದು ಋತ
ಆರಡಿಯ ದೇಹ ಮಣ್ಣೊಳಗೆ
ಸತ್ಯವೆಂದರೂ ಒಪ್ಪಲಾಗದ ಚಿತೆಯೊಳಗೆ
ಇರುವಾಗ ಅಪ್ಪಿಕೊಳ್ಳಲಾಗದ
ಸತ್ತಾಗ ಇಟ್ಟುಕೊಳ್ಳಲಾಗದ
ಸಹಜ ರಕ್ತ ಮಾಂಸ ಮತ್ತೇನೋ
ಎಲ್ಲವೂ ನಿಂತ ಮೇಲೆ ಮಾತು ಮೌನ
ನೋವು ನಲಿವುಗಳು ಗೌಣ
ಉಸಿರೇ ಅಸ್ತಿತ್ವವಾಗಿ ಉಳಿದು
ಕಾಣದೇ ಹೋಗುವುದು ಸಜ
ನೋಡಿದೆಡೆಯೆಲ್ಲಾ ಕಾಣುವ ಜೀವ
ಇಲ್ಲವಾದರೆ ಕಾಯುವುದು ನೋವ
ಅಂದುಕೊಂಡಂತೆ ಕಥೆ ಮಾತುಗಳು
ಭಾರವಾದ ಆಕಾರವಿಲ್ಲದ ನಡೆಗಳು
ಇದ್ದಾಗ ಎಲ್ಲವೂ ಧನ್ಯ ಮಾನ್ಯ
ಹೋದಮೇಲೆ ನಮಗೆ ನಾವೇ ಅಪರಿಚಿತ
ಆದರೂ ಉಳಿವೆವು ಬದುಕೆಂಬ
ಒಲುಮೆಯಲ್ಲಿ ನಲುಮೆಯಲ್ಲಿ
ನಾನು ನನ್ನದು ಎಂಬ ಉಳಿತಾಯದಲ್ಲಿ
ಸತ್ಯ ತೋಚಿದರೂ ಗೀಚಿದರೂ ಅದೇ
ಬದಲಾಗದ ಸಾವು ಹುಟ್ಟು ಬದುಕು
ಒಂದು ದಿನ ಎಲ್ಲವೂ ಕತೆಯೇ
ನಾವು ಎಂಬುದು ಅಂತಿಮವೇ
ಎಲ್ಲವೂಗಳಾಚೆ ಇದೊಂದು ಋತ
ಅನುಭವಕ್ಕಾಗಿ ಅನುಭಾವಕ್ಕಾಗಿ ಹಿತ
ನಾಗರಾಜ ಬಿ.ನಾಯ್ಕ
ಸೂಪರ್ ಸರ್
ಇದ್ದವರ ಕಾಡುವುದು … ನೋವು ತುಂಬುವುದು.. ಸತ್ತವರಿಗೆ ಅಂತಿಮ ನೆಮ್ಮದಿಯ ನೀಡುವುದು ಸಾವು. ಹುಟ್ಟನ್ನು ಯಾರೂ ಬಯಸಿ ಪಡೆದಿರುವುದಿಲ್ಲ .. ಸಾವನ್ನು ಯಾರು ಬಯಸುವುದಿಲ್ಲ..ಆದರೂ ಹುಟ್ಟು ಸಾವುಗಳು ಸಹಜ .. ಇರುವ ಕ್ಷಣಗಳನ್ನು ಉಪಯೋಗಿಸಿಕೊಳ್ಳಬೇಕು ಮನುಜ. ಆರಕ್ಕೆ ಏರುವುದು ಮುಖ್ಯವಲ್ಲ .. ಮೂರಕ್ಕೆ ಇಳಿಯುವುದು ಕನಿಷ್ಠವಲ್ಲ … ಇರುವಷ್ಟು ದಿನ ನಾಲ್ಕು ಜನಕ್ಕೆ ನೆಮ್ಮದಿ ನೀಡಿದರೆ ಅದುವೇ ಸಾರ್ಥಕ ಜೀವನ.. ಉಸಿರು ನಿಂತ ಮೇಲೆ ಸತ್ತು ಬದುಕುವುದೇ ಬದುಕಿನ ಸಾಫಲ್ಯತೆ…