ಬಿ ಆರ್ ಲಕ್ಷ್ಮಣರಾವ್ ಕೃತಿ “ಬಿನ್ನಹಕೆ ಬಾಯಿಲ್ಲವಯ್ಯ(ಈವರೆಗಿನ ಲೇಖನಗಳು)”ಅವಲೋಕನ ನಂದಿನಿ ಹೆದ್ದುರ್ಗ

ಪುಸ್ತಕ ಸಂಗಾತಿ

ಬಿ ಆರ್ ಲಕ್ಷ್ಮಣರಾವ್ ಕೃತಿ

“ಬಿನ್ನಹಕೆ ಬಾಯಿಲ್ಲವಯ್ಯ(ಈವರೆಗಿನ ಲೇಖನಗಳು)”

ನಂದಿನಿ ಹೆದ್ದುರ್ಗ

ಕೃತಿ–ಬಿನ್ನಹಕೆ ಬಾಯಿಲ್ಲವಯ್ಯ(ಈವರೆಗಿನ ಲೇಖನಗಳು)
ಬೆಲೆ–₹450
ಕೃತಿಕಾರರು–ಬಿ ಆರ್ ಲಕ್ಷ್ಮಣರಾವ್
ಸಿವಿಜಿ ಪಬ್ಲಿಕೇಷನ್ಸ್
ಕೃತಿಗಳನ್ನು 9845693614 ಇಲ್ಲಿ ಪಡೆಯಬಹುದು

ವಿಮರ್ಶೆಗಳನ್ನು ಓದುವಾಗ ಕಾಣದ ಕಾರಣಕ್ಕೆ  ಈ ವಿಮರ್ಶೆಯಿಂದ ಕವಿತೆಗೆ ನೋವಾಗಿದೆ ಎನ್ನುವ
ಯೋಚನೆ ಹುಟ್ಟಿ ಕಂಗಾಲಾಗುವವಳು ನಾನು.
ಈ ಮನಸ್ಥಿತಿಯಿಂದಾಗಿ ವಿಮರ್ಶಾ ಕೃತಿಗಳನ್ನು ಓದುವುದು ಮೊದಲಿಂದಲೂ ತ್ರಾಸು.
ಕವಿತೆಯ ರಸಾನುಭವ ಆಗುವುದಕ್ಕೂ ಓದುಗನ ಮನೋಭಿತ್ತಿಗು  ನೇರ ಸಂಬಂಧ ಇದೆ.
ಯಾರಿಗೋ ಬಹಳ ಸೊಗಸಾಗಿದೆ ಎಂದ ಕವಿತೆಯೊಂದು ನನಗೆ ತೀರಾ ಸಾಧಾರಣ ಅನಿಸುವುದು ನನ್ನ ಮನೋಭಿತ್ತಿಯ ತಪ್ಪೇ ಹೊರತು ಕವಿತೆಯದಲ್ಲ ಎನ್ನುವುದು ನನ್ನ ಅಚಲ ನಂಬಿಕೆ.
ವಿಮರ್ಶೆ ಕವಿತೆಗೊಂದು ನೋಟ ಕೊಟ್ಟು ಅದರಿಂದಾಚೆಗೆ ನಿರುಕಿಸಲು ಓದುಗನಿಗೆ ಬಿಡುವುದಿಲ್ಲ ಎನ್ನುವ ಗೊಂದಲವೇ ತುಂಬಿಕೊಂಡವಳಿಗೆ ಬಿ‌ಆರ್ ಲಕ್ಷ್ಮಣರಾವ್ ಅವರ
‘ಬಿನ್ನಹಕೆ ಬಾಯಿಲ್ಲವಯ್ಯ’
(ಈವರೆಗಿನ ಲೇಖನಗಳು)ಕೃತಿಯನ್ನು ಓದಿ ಕವಿತೆಯ ಕುರಿತಾಗಿ ಇಷ್ಟು ಮಧುರವಾಗಿಯೂ ಮೆದುವಾಗಿಯೂ  ಬರೆಯಬಹುದೆಂದು ಅರಿವಾಯಿತು.
ಈ ಕೃತಿಯಲ್ಲಿ ಲಕ್ಷ್ಮಣರಾವ್ ಸರ್ ಅವರ ಈವರೆಗಿನ ಎಲ್ಲಾ ಲೇಖನಗಳು ಇವೆ.
ಕೃತಿಯ ಲೇಖನಗಳನ್ನು  ವಿಚಾರ ವಿನೋದ ವಿಮರ್ಶೆ ವ್ಯಕ್ತಿ ಚಿತ್ರ ಎಂದು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಬಹುತೇಕ ಎಲ್ಲ ಲೇಖನಗಳಲ್ಲೂ ಗುರುಗಳ ಸಟೈರ್ ಮಾದರಿಯ ಬಗೆ ಕಾಣುತ್ತಾದರೂ ವಿಷಯ ತಲುಪಿಸುವಾಗ ಖಚಿತ ಮತ್ತು ಸಹಜ ಬಗೆ ಕಾಣಿಸುತ್ತದೆ. ನವ್ಯದ ಕಾಲದಲ್ಲಿ ಕನ್ನಡದ ಕವಿಗಳ ಮೇಲಾದ ಪಾಶ್ಚಾತ್ಯ ಕವಿಗಳ ಪ್ರಭಾವವನ್ನು ಹೇಳುತ್ತಲೇ ಆಂದಿನ ಪ್ರತಿ ಕವಿಯೂ  ಹೇಗೆ ಅಡಿಗೋನ್ಮಾದಕ್ಕೆ ಒಳಪಟ್ಟು ಮೆಲ್ಲಗೆ ಅದರಿಂದ ಬಿಡಿಸಿಕೊಂಡು ಸ್ವಂತಿಕೆ ಪಡೆದಿದ್ದರ ಕುರಿತು ಇಲ್ಲಿನ ಬಹುತೇಕ ಬರಹಗಳಲ್ಲಿ ಕಾಣಬಹುದು.
ವಿಚಾರ ಮತ್ತು ವಿನೋದ ದ ಬರಹಗಳನ್ನು ಓದುವಾಗ ಟೈರೀಸಿಯಸ್ ಪ್ರಜ್ಞೆ, ಅಸ್ತಿತ್ವ ವಾದದ ವಿವರ ,ಷಾಜಾದೆಯ ವಿವರ,ಜಿಡ್ಡು ಓಶೊ‌ ಸಾರ್ಥ್ ರಂತಹ ವ್ಯಕ್ತಿ ವಿವರಗಳಿವೆ. ನವ್ಯದ ಮತ್ತು ಪ್ರಸ್ತುತದ ಕವಿತೆಗಳಲ್ಲಿ ಬರುವ ಕೆಲವು ಪಾತ್ರಗಳು ತಿಳಿಯದೆ  ಗೂಗಲಿಸುವ  ನನ್ನಂತ ಸಾಹಿತ್ಯದ ಅಕಾಡೆಮಿಕ್ ಓದಿಲ್ಲದವರು ಅವಶ್ಯ ಇಂತಹ ಲೇಖನಗಳನ್ನು ಓದಬೇಕು.
ಈ ಇಡೀ ಕೃತಿಯ ಬೆಸ್ಟ್ ಪಾರ್ಟ್ ವಿಮರ್ಶೆ.
ಕೂದಲು ಸೀಳುವ‌ ವಿಮರ್ಶೆ ,ಅಡಿಗಡಿಗೆ ಪ್ರಶ್ನೆ ಎಸೆದು ಕವಿತೆ ವಿವರಿಸುವ ಬರಹಗಳನ್ನು ಓದುವಾಗಲೇ ಕವಿತೆ ದುಃಖಿಸುತ್ತಿದೆ ಎನ್ನಿಸುವವರಿಗಾಗಿಯೇ ಬರೆದಿರುವ ವಿಮರ್ಶಾ ಲೇಖನಗಳಂತೆ ಎನಿಸುತ್ತದೆ ಇವು.
ವಿಮರ್ಶೆ ಎನ್ನುವ ಪದವೂ ಭಾರವಾಗುವ , ಸಮತೋಲನದ ,ಸಂವೇದನೆಗಳಿಗೆ ಎಲ್ಲೂ ಸಂಕಟವಾಗದ ಕೃತಿ ಪರಿಚಯಗಳು ಇಲ್ಲಿವೆ.
ಗುರುಗಳು ತಮಗೆ ಪ್ರಿಯರಾದ ಸುಮತೀಂದ್ರ ನಾಡಿಗರು ಮತ್ತು ನಿಸಾರ್ ರ ಸಂಕಲನಗಳ ಬಗ್ಗೆ ತಟಕು ಹೆಚ್ಚೇ ಮಾತಾಡಿದ್ದಾರೆ.
ನಾಡಿಗರು, ನಿಸಾರರು ,ತೆಲುಗಿನ ದಿಗಂಬರ‌ಕವಿಗಳು, ಡುಂಡಿ ರಾಜರ ಹನಿಗವಿತೆಗಳು ,ಲಂಕೇಶ್ ,ಬೇಂದ್ರೆ , ಕಣವಿ ,ಕೆಎಸ್ ನ  ,ಎಚ್ ಎಸ್ ವಿ ,ಕಾಯ್ಕಿಣಿ ಸರ್, ಇನ್ನೂ ಮೊದಲಾದ ಈ ಕಾಲದ ಕವಿಗಳ ಕೃತಿಗಳ ಕುರಿತು ,ಬಿಡಿಕವಿತೆಗಳ ಕುರಿತು ಬರೆದಿದ್ದಾರೆ.

ಈಗ ಬರೆಯುತ್ತಿರುವವರೆಲ್ಲರಿಗೂ ಅತ್ಯಂತ ಪ್ರೀತಿಯವರಾದ ಜೋಗಿ ಸರ್ ಬಗ್ಗೆ ಗುರುಗಳು ಬರೆದಿರುವುದು ಬಹಳ ಸೊಗಸಾಗಿದೆ. ‘ಜೋಗಿಯವರಿಗಿಂತ ತಾನು ಹಿರಿಯನಾದರೂ ಅವರ ಸಹವಾಸದಲ್ಲಿ  ಓರಗೆಯವರಾದೆವು’ ಎನ್ನುವ ಮಾತನ್ನು ಓದುವಾಗ  ಅಲ್ಲಿನ ಜೀವನೋತ್ಸಾಹ ಓದಿದ ಹೃದಯಕ್ಕೂ ತಾಕುತ್ತದೆ.

ಸ್ಮಿತಾ ಅಮೃತ್‌ರಾಜ್, ಶಾಂತಿ ಅಪ್ಪಣ್ಣ ರಂತಹ ಯುವ ಬರಹಗಾರ್ತಿಯರೂ ಇಲ್ಲಿ ಸೇರಿರುವುದು ಗುರುಗಳ ಸಮನ್ವಯತೆಯ ದೃಷ್ಟಿಯನ್ನು ತೋರುತ್ತದೆ.

ಬಹುತೇಕರ ಮಾತಿನಲ್ಲಿ ಕಾಣುವ ಕಾಲ‌ ಬದಲಾಯಿತು ,ಕವಿತೆ ದಾರಿ ತಪ್ಪಿತು ,ಈಗಿನವರೆಲ್ಲ ಸದ್ಯೋಜಾತರು ಎನ್ನುವ ಹಳಹಳಿಕೆ ಈ ಕೃತಿಯ ಯಾವ ಬರಹದಲ್ಲೂ ಕಾಣದೆ  ಬದಲಾವಣೆ ಬಾಳಿನೊಗ್ಗರಣೆ ಎನ್ನುವ ಕವಿ‌ ಚನ್ನ ವೀರಕಣವಿಯರ ಮಾತುಗಳಿಗೆ ತೀರಾ ಒಗ್ಗಿಹೋದವರಂತೆ ಇಲ್ಲಿನ ಬರಹಗಳಿವೆ.

ಗುರುಗಳಿಗೆ ಪ್ರಿಯವಾದ  
ಕವಿ ಸುಮತೀಂದ್ರ ನಾಡಿಗರ ‘ದಾಂಪತ್ಯ ಗೀತ’  ಸಂಕಲನದ ಒಂದು ಕವಿತೆಯ ಭಾಗ ಹೀಗಿದೆ.
‘ತಲೆಯ ಕೊಯ್ದಿಟ್ಟರೂ ಸೋರೆಬುರುಡೆ ಇದೆಂದು
ನೀನದನು ನೂಕಿ ಬಿಟ್ಟೆ
ರುಂಡ ಉರುಳಾಡಿತ್ತು ನಿನ್ನ ಕಾಲಡಿಯಲ್ಲಿ
ಮುಂಡ ನಿಂತೇ ಇತ್ತು ಪ್ರತಿಮೆಯಂತೆ’
ಇದನ್ನು ಓದಿದ ಯಾರಿಗೇ ಆದರೂ ಅವರ ದಾಂಪತ್ಯ ಗೀತೆ ಸಂಕಲನವನ್ನು ಪೂರ್ತಿಯಾಗಿ ಓದುವ ಅನಿಸದೆ ಇರದು.

ತಮಗೆ ರಸಾನುಭವ ನೀಡಿದ ಸಾಕಷ್ಟು ಕವಿಗಳ ಸಾಕಷ್ಟು ಕವಿತೆಗಳನ್ನು ಈ ಕೃತಿಯಲ್ಲಿ ಓದುವಾಗ ಪರಂಪರೆಯ ಆ ಕವಿಗಳನ್ನೆಲ್ಲ ಒಮ್ಮೆಗೆ ಓದಿಕೊಳ್ಳೋಣಾ ಎನ್ನುವ ತೀವ್ರ ಮೋಹ ಹುಟ್ಟುತ್ತದೆ.
ಅಂತಹ ಮೋಹ ಹುಟ್ಟಿಸುವುದೇ ಈ ಬರಹಗಳ ಮೂಲ ಉದ್ದೇಶವೂ ಆಗಿರುವುದರಿಂದ ಈ ಬರಹಗಳನ್ನು ಒಟ್ಟಿಗೆ ಓದುವ ಈ ಪ್ರಯತ್ನ ಯಶಸ್ವಿಯಾಗಿದೆ.
ಆದರೂ
ಇದರಲ್ಲಿನ ವಿಮರ್ಶಾ ಭಾಗವೇ ಪ್ರತ್ಯೇಕ ಸಂಕಲನವಾಗಿದ್ದರೆ ಹೆಚ್ಚು ಅರ್ಥವತ್ತಾಗುತ್ತಿತ್ತೇನೊ‌ ಎನ್ನುವ ಭಾವದೊಂದಿಗೆ ‌ಸುಮತೀಂದ್ರ ನಾಡಿಗರ ಮತ್ತೊಂದು ಕವಿತೆಯಲ್ಲಿ ಮುಗಿಸುತ್ತಿದ್ದೇನೆ.

‘ನನಗೀಗ ಅನಿಸಿದೆ ಸತ್ಯ ಹೇಳುವುದಕ್ಕೆ
ಹಿಂಜರಿಯಬೇಕಿಲ್ಲ ನಾಚಬೇಕಿಲ್ಲ,
ಆದರೂ ಈ ದಾರಿ‌ ಪ್ರಪಾತದಂಚಿನ ನಡಿಗೆ
ತಗ್ಗೆಂದರೆ ನನಗೆ ಕಾಲು ನಡುಕ’

 ಬಿನ್ನಹಕೆ ಬಾಯಿಲ್ಲವಯ್ಯ ಕೃತಿಯನ್ನು ಸಿವಿಜಿ ಪಬ್ಲಿಕೇಷನ್ಸ್ ಬೆಂಗಳೂರು ಪ್ರಕಟ ಮಾಡಿದೆ.
ಈ ಕೃತಿ ಬೇಕಾದವರು ಗುರುಗಳನ್ನು ನೇರ ಸಂಪರ್ಕಿಸಬಹುದು.


ನಂದಿನಿ ಹೆದ್ದುರ್ಗ

Leave a Reply

Back To Top