ಕಾವ್ಯ ಸಂಗಾತಿ
ಚೈತ್ರ ಮಂಡ್ಯ
ನಾನೂ
ಕಥೆ ಬರೆಯಬೇಕಂತೆ!
ನಾನೂ ಬರೆಯುತ್ತೇನೆ
ಕಳೆದು ಹೋದ ನಿನ್ನೆಗಳೊಳಗೆ
ಶೃತಿಯಿದೆಯಂತೆ!
ನಾನೂ ಹದಗೊಳಿಸುತ್ತೇನೆ,
ನಿಷ್ಠುರವಾಗಿ ಕಂಡ ನಿನ್ನದೇ ಭಾವನೆಯ ಸಂಚಿಯೊಳಗೆ
ನೆಲೆಯಿದೆಯಂತೆ!
ನಾನೂ ಕಂಡಿದ್ದೇನೆ,
ಕೊನೆ ಕಂಡರೂ ಉಳಿಸಿಕೊಂಡ ಬಂಧದ ಸಾಂತ್ವಾನದೊಳಗೆ
ನಾಳೆಯೊಂದಿದೆಯಂತೆ!
ನಾನೂ ನೋಡಿದ್ದೇನೆ,
ಯಾರದೋ ಮನೆ ಮನಗಳ ಸಂಧಿಯೊಳಗೆ
ಕಹಿಯಿದೆಯಂತೆ!
ನಾನೂ ಸವಿದಿದ್ದೇನೆ.
ಸಿಹಿಯೆಂದು ಸವಿದ ನೆನಪುಗಳ ಖಜಾನೆಯೊಳಗೆ
ಮಿತಿಯಿದೆಯಂತೆ!
ನಾನೂ ಹುಡುಕಿದ್ದೇನೆ.
ಸೆಗಳ ತೆವಲು ಬೆನ್ನತ್ತುವ ಖಯಾಲಿಯೊಳಗೆ
ಬೆಳಕಿದೆಯಂತೆ!
ನಾನೂ ಕರುಬಿದ್ದೇನೆ.
ಯಾರದೋ ಎದೆಯ ನೋವಿನ ಗೋರಿಯೊಳಗೆ
ಬದುಕಿದೆಯಂತೆ!
ನಾನೂ ಬದುಕಿದ್ದೇನೆ,
ಸತ್ತು ನಾರುವ ಮನ ಹೊತ್ತು ಸೆರಗು ಹಾಸುವ ದೇಹದೊಳಗೆ
ಮತ್ತೀಗ,….
ಉರಿಯಬೇಕಂತೆ!
ಉರಿಯುತ್ತಿದ್ದೇನೆ, ಕಂಬನಿ ಬಿಡಿಸಿದ ಕವಿತೆ ಹರಿದ ಹಾಳೆಯೊಳಗೆ
ಚೈತ್ರ ಮಂಡ್ಯ