ಪಾಕಪ್ರವೀಣರ ಲೋಕದೊಳಗೊಂದು ಸುತ್ತು.ಜ್ಯೋತಿ , ಡಿ . ಬೊಮ್ಮಾ.ಅವರ ಲಲಿತ ಪ್ರಬಂಧ

ಪ್ರಬಂಧ ಸಂಗಾತಿ

ಪಾಕಪ್ರವೀಣರ ಲೋಕದೊಳಗೊಂದು ಸುತ್ತು.

ಜ್ಯೋತಿ , ಡಿ . ಬೊಮ್ಮಾ.

  ಟಕ್ ಟಕ್ ಟಕ್ , ಚುಯ್ಯ , ..ಏನು ಅಂದೊಂಡ್ರಿ.. , ಅಡುಗೆ ರೆಸಿಪಿಗಳು ನೋಡುವಾಗ ಹೊಮ್ಮುವ ಶಬ್ದಗಳು ಇವು. ಪೋನ್ ಸ್ಕ್ರೀನಿಗೆ ಕಣ್ಣು ಒತ್ತಿ ನೋಡುವಾಗ ಅವರು ಮಾಡುವದನ್ನು ನೋಡುವದೆ ಒಂದು ಆನಂದನುಭವ.ಏನು ಮಾಡುತ್ತಾರೆ ರುಚಿ ಹೇಗಿರುತ್ತದೆ ಇದೆಲ್ಲ ನಂತರದ ಸಂಗತಿಗಳು.ನಮ್ಮ  ಧ್ಯಾನವೆಲ್ಲ  ಅವರು ಬಳಸುವ ಪಾತ್ರೆಗಳು , ಅಡಿಗೆ ಮನೆಯ ಒಳಾವರಣ , ಪದಾರ್ಥ ಇಡಲು ಬಳಸುವ ತಟ್ಟೆ ಬಟ್ಟಲು, ಅವು ಗಾಜಿನವೊ , ಪಿಂಗಾಣಿಯದೊ , ಸ್ಟಿಲ್ ನದೊ ಹೀಗೆ ಅದರ ಮೇಲೆ ಚಿತ್ತ ನೆಟ್ಟಿರುತ್ತದೆ. ಪೊನ್ ನಲ್ಲಿ ಬರುವ ಎಲ್ಲಾ ಅಡುಗೆ ರೆಸಿಪಿಗಳು ಅಡುಗೆ ಮನೆಯಲ್ಲಿ ಮಾತ್ರ ಮಾಡುವದು ಅಂದುಕೊಂಡಿರಾ.. , ಖಂಡಿತ ಇಲ್ಲ .ಯಾರು ಮನೆಯಲ್ಲಿ ಅಡುಗೆ ಮಾಡುವದು ತೊರಿಸಿದರೆ ,  ಮತ್ತೊಬ್ಬರು ಹೊಲದಲ್ಲಿ  , ಇನ್ನೊಬ್ಬರ ಪಾಕಪ್ರಾವಿಣ್ಯತೆ ಬೆಟ್ಟಗುಡ್ಡಗಳಡಿಯಲ್ಲಿ ಪರಿಮಳಿಸುತ್ತದೆ.ಕೆಲವರು ಸಮುದ್ರ ತೀರದಲ್ಲಿ,  ಹೀಗೆ ನೋಡುಗರಿಗೆ ಮನೊರಂಜನೆ ಒದಗಿಸಲು ಎಲ್ಲೆಲ್ಲೂ ಪಾಕಶಾಸ್ತ್ರ ಪ್ರವೀಣರು ತಮ್ಮ ಪ್ರವರ ಒಪ್ಪಿಸುತ್ತಿರುತ್ತಾರೆ.ದೊಡ್ಡ ದೊಡ್ಡ ಟಿ ವಿ ಚನಲ್ ನವರು ದೊಡ್ಡ ಕಿಚನ್ ನಲ್ಲಿ ಬಣ್ಣಬಣ್ಣದ ಪಾತ್ರೆಗಳಲ್ಲಿ ಅಡುಗೆ ಮಾಡುವ ವಿಧಾನ ನೋಡುತಿದ್ದರೆ ಮನ ಸೋಜಿಗಗೊಳ್ಳುತ್ತದೆ. ಹಾಂ , ಇಂತ ಚನಲ್ ಗಳಲ್ಲಿ ಅಡುಗೆ ಮಾಡುವರೆಲ್ಲ ಪುರುಷರೆ ಕುಕ್ ಗಳು ,  ಕೈಗೆ ಗ್ಲವ್ಸ ಹಾಕಿಕೊಂಡು , ತಲೆಗೆ ಸ್ಕಾರ್ಫ ಕಟ್ಟಿಕೊಂಡು ,  ಒಗ್ಗರಣೆ
 ಹಾಕುವಾಗ ಅವರು ಮೇಲಿಂದ ಉದುರಿಸುವ ಉಪ್ಪು ಖಾರ ಸಾಸಿವೆ ಜೀರಿಗೆಗಳೆಲ್ಲ ಹಾಗೆ ಸ್ಲೋ ಮೋಷನ್ ನಲ್ಲಿ ಮೇಲಿಂದ ಒಂದೊಂದೆ ಉದುರಿ ಬಾಣಲೆಗೆ ಬೀಳುವ ಪರಿ ,  ಇರುಳ್ಳಿ , ತರಕಾರಿ ಚಕಚಕನೆ ಕತ್ತರಿಸುವ ನೈಪುಣ್ಯ ತೆ   ನೋಡುತ್ತ ನೋಡುತ್ತ ನಾವು ಯಾವಾಗ ಆ ಅಡುಗೆ ರೆಸಿಪಿಗಳ ಚನಲ್ ಗಳಿಗೆ ಅಡಿಯಾದೆವೋ ತಿಳಿಯಲೆ ಇಲ್ಲ.

ಅವರು ಮಾಡುವ ಅಡುಗೆ ಅದೇಷ್ಟು ಬೇಗ ತಯ್ಯಾರಾಗುತ್ತೆ ಅಂತ..ಚಿಟಿಕೆ ಹೊಡೆದರೆ ಒಂದು ರೆಸಿಪಿ ರೆಡಿ.ಚಪ್ಪಾಳೆ ಹೊಡೆದರೆ ಇನ್ನೊಂದು , ಅಂಗೈ ಪಾತ್ರೆ ಮೇಲೆ ಕೈ  ಆಡಿಸಿದ್ದೆ ತಡ ಅದರಲ್ಲಿ ಪದಾರ್ಥ ರೆಡಿ. ವ್ಹಾ , ನೋಡುವದು (ತಿನ್ನುವದಲ್ಲ) ಸೋಜಿಗವಲ್ಲದೆ ಮತ್ತೆನು.ಮತ್ತೊಂದು ಇಷ್ಟದ ಸಂಗತಿ ಎಂದರೆ ಅಡುಗೆ ಮಾಡುವ ಯಾರು ಅಸ್ತವ್ಯಸ್ತ ಉಡುಪು  ,ಕೇಶ , ಹೊಂದಿರುವದಿಲ್ಲ.ಸುಂದರವಾಗಿ ಅಲಂಕರಿಸಿಕೊಂಡು , ಒಳ್ಳೆ ಉಡುಪು ಧರಿಸಿದವರಾಗಿರುತ್ತಾರೆ , ಅಡುಗೆ ಮಾಡುವ ಸ್ಥಳವೆಲ್ಲ ಅಚ್ಚುಕಟ್ಡು , ತರಕಾರಿ ಸಿಪ್ಪೆಯಾಗಲಿ.ಇರುಳ್ಳಿ ಸಿಪ್ಪೆಯಾಗಲಿ ಎಲ್ಲೂ ಕಾಣುವದೆ ಇಲ್ಲ.ಇಂತಹ ಅಚ್ವುಕಟ್ಟಾಗಿ ಮಾಡುವ ಅಡುಗೆಗಳನ್ನು ನೋಡುವದು ಒಂದು ಗೀಳಾಗಿಸಿಕೊಳ್ಳುತಿದ್ದೆವೆ.

ಬರಿ ಸ್ಟೂಡಿಯೋ ದಲ್ಲಿ ಅಥವಾ ಬೇರೆ ಸ್ಥಳದಲ್ಲಿ ಮಾಡುವ ಅಡುಗೆಗಳೊಂದಿಗೆ ಬೀದಿಬದಿಯಲ್ಲಿ ಮಾಡುವ ಅಡುಗೆಗಳನ್ನು ನೋಡುವದು ಇಷ್ಟವೆ ನಮಗೆ.ಅಲ್ಲಿ ಎಲ್ಲೆಲ್ಲೂ ಅಸ್ತವ್ಯಸ್ತತೆ. ಅಡುಗೆ ಮಾಡುವವರು ತಲೆಗೆ ಕೈಗೆ ಏನು ಹಾಕಿಕೊಳ್ಳದೆ , ನೆಗ್ಗು ಬಿದ್ದ ಪಾತ್ರೆಗಳಲ್ಲಿ ತಳ್ಳುವ ಗಾಡಿಯಲ್ಲಿ ಒಂದು ಸ್ಟೋ ಇಟ್ಟು ಪಟ ಪಟ ಬಡಿಯುತ್ತ ಎರ್ರಾಬಿರ್ರಿ ಎಣ್ಣೆ  ಬೆಣ್ಣೆ ಸುರಿದು ಮಾಡುವ ತಿಂಡಿಗಳು. ಅದನ್ನು ತಿನ್ನಲು ಮುಗಿಬಿಳುವ ಜನ.ಕುಳಿತಲ್ಲೆ ಅವನ್ನು ನೋಡಿ ನಾವು ಓಡಿಹೋಗಿ ತಿನ್ನಬೇಕು ಅನ್ನಿಸದೆ ಇರದು. ಒಟ್ಟಿನಲ್ಲಿ ಅಡುಗೆ ಮಾಡುವದನ್ನು ಟಿವಿ ಪೋನ್ಗಳಲ್ಲಿ ನೋಡುವದು ಮಹಿಳೆಯರು ಒಂದು ವ್ಯಸನವಾಗಿಸಿಕೊಳ್ಳುತಿದ್ದೆವೆ.

ನಮ್ಮ ಸ್ಮಾರ್ಟ್ ಪೋನ್ ಕೂಡ ಅತಿ ಬುದ್ದಿವಂತ ವಾಗಿರುತ್ತದೆ.ನಮಗೇನು ಇಷ್ಟ , ಹೆಚ್ವು ಹೆಚ್ಚು ನಾವೇನು ಇಷ್ಟಪಡುತ್ತೆವೆ ಅದನ್ನೆ ಪದೇಪದೇ ತಂದು ನಮ್ಮ ಸ್ಕ್ರೀನ್ ಗೆ ಒಗಿಯುತ್ತದೆ.ಪೋನ್ ಆನ್ ಮಾಡುವದೆ ತಡ ಒಂದರಬೆನ್ನಿಗೊಂದು ಅವೆ.ಕಣ್ಣು ಅತ್ತಿತ್ತ ಕೀಳಿಸದಷ್ಟು ಅದರಲ್ಲೆ ಮುಳುಗಿಸಿಬಿಡುವದು.ಒಂದು ಅಡುಗೆ ರೆಸಿಪಿ ನೋಡಿದರೆ ಸಾಕು , ಸಾಲು ಸಾಲು ಖಾದ್ಯಗಳ ತಯ್ಯಾರಿಸುವವರ ಲೈನ್ ಮುಗಿಯುವದೆ ಇಲ್ಲ ನಾವಾಗೆ ಮುಗಿಸುವವರೆಗೆ.

ಅಡುಗೆ ಅರಮನೆ , ಒಗ್ಗರಣೆ ಡಬ್ಬಿ , ಭಾನುವಾರದ ಬಾಡೂಟ , ಪೋನ್ನಲ್ಲಿ ಬರುವ ಅಡುಗೆ ಬ್ಲಾಗ್ ಗಳು ಇವುಗಳಲ್ಲಿನ ಅಡುಗೆ ನೋಡುದಕ್ಕೆ ಮಾತ್ರ ಚಂದ.ನಾವೇನಾದರೂ ಪ್ರಯತ್ನಿಸಿದರೆ ರಾಶಿ ಪಾತ್ರೆಗಳು , ಸುತ್ತಲೂ ಚಲ್ಲುವ ತರಕಾರಿ ಇರುಳ್ಳಿ ಸಪ್ಪೆಗಳು.ಕೈಜಾರಿ ಚಲ್ಲಿದ ಎಣ್ಣೆ , ಮೊಸರು . ಸರಿಯಾದ ಅಳತೆ ತಿಳಿಯದೆ ಹೊತ್ತುವ ಅಥವ ಪಾಯಸದಂತಾಗುವ ಅಡುಗೆ . ನಂತರ ಹರಡಿದ್ದೆಲ್ಲ ಒಪ್ಪ ಓರಣವಾಗಿಸಿ ಮನೆಯವರಿಗೆ ತಿನ್ನಲು ಕೊಟ್ಟರೆ ಅದೆನೆಂದು ನೋಡದೆ ತಲೆ ಬಗ್ಗಿಸಿ ಉಂಡೆಳುವ  ಗಂಡಮಕ್ಕಳ ಬಗ್ಗೆ ಕೆಂಡದಂತ ಕೋಪ ಬರದೆ ಇರದು. ಇನ್ನೊಮ್ಮೆ ಇಂಥದ್ದು ಮಾಡುವ ಗೋಜಿಗೆ ಹೋಗಬಾರದು ಎಂದು ನಿರ್ದರಿಸಿ ಮತ್ತೆ ಪೋನ್ ಹಿಡಿದುಕೊಂಡು ಅಡುಗೆ ರೆಸಿಪಿ ನೋಡುತ್ತೆವೆ.

ಈ ಅಡುಗೆ ರೆಸಿಪಿಗಳು ಹೆಚ್ಚು ಜನಪ್ರಿಯ ವಾಗಿದ್ದು ಕೋವಿಡ್ ಸಂದರ್ಬದಲ್ಲಿ. ಎಲ್ಲರೂ ಮನೆಯಲ್ಲಿ ಬಂಧಿಯಾಗಿ ಮಾಡಲೇನು ತೋಚದೆ ಬರಿ ಬಾಯಿ ಚಪಲದದ ಒತ್ತಡಕ್ಕೆ ಮನೆಯಲ್ಲೆ ಎಲ್ಲ ತಿಂಡಿ ತಯ್ಯಾರಿಸುವ ಸಂದರ್ಬ ಬಂದಾಗ ಎಲ್ಲರೂ ಜಿದ್ದಿಗೆ ಬಿದ್ದವರಂತೆ ತರಾವರಿ ತಿಂಡಿ ಮಾಡುವದು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವ ವದು ನಡೆದಿತ್ತು. ಹೊರಗಿನ ತಿಂಡಿಗಳಿಗೆಲ್ಲ ಕಡಿವಾಣ ಬಿದ್ದಾಗ ಆಗ ಸಹಾಯಕ್ಕೆ ಬಂದದ್ದು ಗೂಗಲಕ್ಕ , ಯುಟ್ಯೂಬಪ್ಪಗಳು. ಆಗಿನಿಂದ ಅಡುಗೆ ಚನಲ್ ಗಳು , ಬ್ಲಾಗ್ ಗಳು ನಾಯಿಕೊಡೆಯಂತೆ ಗುಂಪಾಗಿ ಬೆಳೆಯುತ್ತಲೇ ಇವೆ. ತಮ್ಮತಮ್ಮ ಸ್ವಂತ ಬ್ಲಾಗ್ ಮಾಡಿಕೊಂಡು ತಮ್ಮ ತಮ್ಮ ಪ್ರಾಂತ್ಯದ ವಿಶೇಶ ತಿನಿಸುಗಳು ಪ್ರದರ್ಶಿಸುವರು‌ ಇರುವರು. ಒಂದೊಂದು ರಾಜ್ಯದ , ಜಿಲ್ಲೆಯ ,ಹೊಬಳಿಯ ವಿಶೇಷ ಖಾದ್ಯ ಗಳೆಲ್ಲ ಜಾಲತಾಣದಲ್ಲಿ ಕೈಗೆಟುಕುತ್ತವೆ.

ಹಗಲೆಲ್ಲ ಹೊಸರುಚಿ ಮಾಡುವದನ್ನು ನೋಡುವ ನಾವು ಅವನ್ನು ಮಾಡಲು ಎಷ್ಟು ಪ್ರಯತ್ನಿಸುತ್ತೆವೆ ಎಂಬುದು ಪ್ರಶ್ನೆ. ಅದರಂತೆ ಮಾಡಲು ಹೋಗಿ ಅದು ಒಂದು ಬಿಟ್ಟು ಇನ್ನೊಂದಾಗಿ ಬೇಡಪ್ಪ ಹೊಸರುಚಿ ಸಹವಾಸ ಎಂದು ನಾನು ಅದರಿಂದ ದೂರವಾಗಿದ್ದೆನೆ.ಆದರೆ ನೊಡುವದು ಮಾತ್ರ ಇನ್ನೂ ಜಾರಿಯಲ್ಲಿದೆ. ಪ್ರತಿ ಖಾದ್ಯ ತಯ್ಯಾರಿಗೂ ಮುಖ್ಯವಾಗಿ ಬೇಕಾಗಿರುವ ದು ಉಪ್ಪು , ಖಾರ , ಹುಳಿ , ಸಿಹಿಯಾದರೆ ಹಾಲು ಸಕ್ಕರೆ , ಇವಿಷ್ಟು ಮುಖ್ಯ ಪದಾರ್ಥ ಗಳು.ಇನ್ನೂ ತರಕಾರಿ , ಹಿಟ್ಟು , ಬೇಳೆಕಾಳುಗಳು. ಇದರಿಂದ ತಯಾರಿಸುವ ಅಡುಗೆಗಳಿಗೆ ಅದೇಷ್ಟೊಂದು ಹೆಸರುಗಳು..! ಒಂದೊಂದು ರೆಸಿಪಿ ಹೆಸರುಗಳು ಮಾರುದ್ದ. ಹೊಟೆಲಿನ ಮೆನುವಿನಲ್ಲಿ ಈ ಹೆಸರುಗಳಿಗೆ ಮರುಳಾಗಿ ಆ ಖಾದ್ಯ ತರಿಸಿದರೆ ನಮ್ಮ ಮನೆಯಲ್ಲಿ ಮಾಡುವ ಅಡುಗೆಯೆ ಅದು.ಹೆಸರು ಮಾತ್ರ ಬೇರೆ.
ಇನ್ನೂ ಆ ಹೊಟೇಲಿನಲ್ಲಿ ಎಲ್ಲ ಪಲ್ಯಗಳ ಗ್ರೇವಿಗಳು ಒಂದೇ ರುಚಿ. ಹೆಸರು ಮತ್ತು ಬಣ್ಣ ಮಾತ್ರ ಬೇರೆ ಅಷ್ಟೆ.
ಸಾಸಿವೆ ,  ಜೀರಿಗೆ , ಇಂಗು , ತೆಂಗು , ಮೆಣಸು , ತರಕಾರಿ , ಕರಿಬೇವು ,ಕೊತ್ತಂಬರಿ ಇವಿಷ್ಟು ನಾವು ಪ್ರತಿ ಅಡುಗೆಗೆ ಬಳಸುವ ಪದಾರ್ಥಗಳು. ಪನೀರ್ ಚಿಸ್ಗಳ ಬಳಕೆಯು ಈಗ ನಮ್ಮ ಕಡೆ ಸಾಮಾನ್ಯವಾಗಿದೆ. ಇವನ್ನೆ ಬಳಸಿ ಮಾಡುವ ಅಡುಗೆಗಳನ್ನು ತಮ್ಮ ಮಾತುಗಳಿಂದ ವಿವರಿಸಿ ವಿವರಿಸಿ ತೊರಿಸುತ್ತಿರುತ್ತಾರೆ‌. ನಾವು ಮುಗ್ದವಾಗಿ ನೋಡುತ್ತಿರುತ್ತೆವೆ.

ಈಗೀಗ ಎಲ್ಲರೂ ತಮ್ಮ ಆರೋಗ್ಯ ದ ಬಗ್ಗೆ ಅತಿ ಕಾಳಜಿ ವಹಿಸುವ ಸನ್ನಿಗೆ ಒಳಪಡುತಿದ್ದೆವೆ.ಎಲ್ಲಿ ಕುಂತರು ನಿಂತರು  ಏನು ತಿನ್ನಬೇಕು , ಏನು ತಿನ್ನಬಾರದು ಎಂಬ ಚರ್ಚೆಯಲ್ಲೆ ಇರುತ್ತವೆ. ಯಾರಾದರು ನೆಗಡಿ ಎಂದರೆ ನಮಗೆ ಗೊತ್ತಿರುವ ಕಶಾಯಗಳ ಪ್ರವರ ಒಪ್ಪಿಸತೊಡಗುತ್ತೆವೆ.ಅಸಿಡಿಟಿ ಅಂದರೆ ಹುಳಿ ಬಿಡಲೇಬೆಕೆಂಬ ಉಪದೇಶ ಬರುತ್ತದೆ , ತೆಳ್ಳಗಿದ್ದವರಿಗೆ ದಪ್ಪ ಆಗುವ ಸಲಹೆಗಳು , ದಪ್ಪ ಇದ್ದವರಿಗೆ ತೆಳ್ಳಗಾಗುವ ಸಲಹೆಗಳು ಬಾಯಿಂದ ತಂತಾನೆ ಉದುರತೊಡಗುತ್ತವೆ. ಯಾವ ತರಕಾರಿಯಲ್ಲಿ ಯಾವ ಅಂಶವಿದೆ , ಯಾವ ಕಾಳಿನಲ್ಲಿ ಯಾವ ಪೌಷ್ಟಿಕ ವಿದೆ , ಸಕ್ಕರೆ ಉತ್ತಮವೋ , ಬೆಲ್ಲ ಉತ್ತಮವೋ . ಅನ್ನ ತಿನ್ನಬೆಕೋ ಬಿಡಬೇಕೋ . ಸಾವಯವ ಪದಾರ್ಥ ಗಳು ಎಲ್ಲಿ ದೊರಕುತ್ತವೆ. ಒಣ ಹಣ್ಣುಗಳು ಎಷ್ಟು ಉಪಯುಕ್ತ , ಮಲಬದ್ದತೆಗೆ ಏನು ಮಾಡಬೇಕು , ಹೃದಯಕ್ಕೆ ಯಾವ ಎಣ್ಣೆ ಒಳಿತು…ಇಂತವೆ ಮಾತುಗಳ ಪುನಾರಾವರ್ತನೆ .  ಇನ್ನೊಬ್ಬರಿಗೆ ಈ ಎಲ್ಲಾ ಸಲಹೆ ಕೊಡುವವರು ತಾವು ಇವೆಲ್ಲ ಅನುಸರಿಸುತಿದ್ದೆವಾ ಎಂದು ಅವಲೋಕಿಸುವ ಗೋಜಿಗೆ ಹೋಗದೆ ಮತ್ತೊಬ್ಬರಿಗೆ ಸಲಹೆ ಕೊಡತೊಡುಗುತ್ತಾರೆ. ಯಾರಾದರೂ ತಲೆ ನೋವು ಎನ್ನುವದೆ ತಡ ತಮ್ಮಲ್ಲಿರುವ ಬತ್ತಳಿಕೆಯಿಂದ ಒಂದು ಮನೆಮದ್ದು ಒಗೆದುಬಿಡುತ್ತಾರೆ.  ಅವರ ರೋಗ ಕೇಳುವ ತಾಳ್ಮೆ ಇರದೆ ತಮಗೆ ತಿಳಿದ ಔಷಧ ಹೇಳುವದೆ ಆತುರ ಅವರಿಗೆ. ಇವೆಲ್ಲವೂ ನಮ್ಮ ತಲೆಯಲ್ಲಿ ತುಂಬಿದ್ದು ಈ ಸೊಸಿಯಲ್ ಮೀಡಿಯಾ ಜನರು. ಬಿಪಿ ಬಂದ್ರೆ ಎನು ಮಾಡಬೇಕು. ಶುಗರ ಬರದಂತೆ ತಡೆಯುವದು ಹೇಗೆ. ಮಾನಸಿಕ ಸಮಸ್ಯೆ ನಿವಾರಿಸುವ ವಿಧಾನಗಳು , ಏನನ್ನು ತಿಂದರೆ ರೋಗ ಬರದಂತೆ ತಡೆಗಟ್ಟಬಹುದು. ಏನು ಮಾಡಿದರೆ ಸಾವು ಮುಂದೂಡಬಹುದು..ಇತ್ಯಾದಿಗಳು.

ಈ ಅಡುಗೆ ರೆಸಿಪಿಗಳು , ಈ ಆರೋಗ್ಯ ಟಿಪ್ಸಗಳು , ಜಿಮ್ ವ್ಯಾಯಾಮದ ಉಪಯೋಗಗಳು ಇವೆಲ್ಲ ನೋಡಿ ನಾವೆಷ್ಟು ಬದಲಾಗಿದ್ದೆವೆ ಎಂಬುದು ಯಕ್ಷ ಪ್ರಶ್ನೆ. ಇವೆಲ್ಲ ನೋಡಲು ಮತ್ತು ಮತ್ತೊಬ್ಬರಿಗೆ ಉಪದೇಶ ಮಾಡಲು ಮಾತ್ರ ನಾವು ಹೆಚ್ಚಾಗಿ ಬಳಸಿಕೊಂಡಿದ್ದೆವೆ. ಒಂದು ಅಡುಗೆ ರೆಸಿಪಿ ನಾವು ನೋಡಿ ಹೇಗೆ ಮಾಡಬೆಕೆಂದು ಮತ್ತೊಬ್ಬರಿಗೆ ವಿವರಿಸುವದರಲ್ಲಿನ ಉತ್ಸಾಹ ಸ್ವತಃ ನಾವೆ ಅದನ್ನು ಮಾಡುವಾಗ ಇರುವದಿಲ್ಲ. ಡಯಟ್ ಮಾಡಲು ಕಡಿಮೆ ಎಣ್ಣೆ ಬೆಣ್ಣೆ ಉಪಯೋಗಿಸಬೇಕೆಂದು ಹೇಳುವ ನಾವೆ  ಹೇರಳವಾಗಿ ಎಣ್ಣೆ ಬೆಣ್ಣೆ ಬಳಸಿ ಮಾಡುವ ಅಡುಗೆಗಳನ್ನು ಪೋನ್ ನಲ್ಲಿ ನೋಡುತ್ತ ಮೈಮರೆಯುತ್ತೆವೆ.

ನಾವು ಚಿಕ್ಕವರಿದ್ದಾಗ ಮಾಸಿಕ ಪತ್ರಿಕೆ ಗಳಲ್ಲಿ ಬರುವ ಅಡುಗೆ ರೆಸಿಪಿಗಳಿಗೆ ಬಹು ಪ್ರಾಮುಖ್ಯತೆ. ಓದಿ ಅದನ್ನು ತಯ್ಯಾರಿಸುವ ಆಸಕ್ತಿ ಇರುತಿತ್ತು.ನಂತರ ದೂರದರ್ಶನದ ಚನಲ್ ನಲ್ಲಿ ಹೊಸರುಚಿ ಅಡುಗೆಗಳ ಪ್ರಸಾರ ಬಹು ಬೇಡಿಕೆಯನ್ನು ಪಡೆಯಿತು. ತರಲಾ ದಲಾಲ್ ಎಂಬ ಎಂಬತ್ತರ ದಶಕದ ಪಾಕಪ್ರವಿಣೆ ಬಗ್ಗೆ ಇತ್ತಿಚೆಗೆ ಒಂದು ಚಲನಚಿತ್ರ ಬಂದಿದೆ.ಅಡುಗೆ ಕಾರ್ಯಕ್ರಮಗಳು ಇಡೀ  ದೇಶಾದ್ಯಂತ ಅದೇಷ್ಟು ಪ್ರಸಿದ್ದಿ ಪಡೆದಿದ್ದವು ಎಂಬುದು ಈ ಚಿತ್ರ ತಿಳಿಸುತ್ತದೆ.ಈಗ ಟಿ ವಿ , ಪೋನ್ ,ಪತ್ರಿಕೆ ಎಲ್ಲದರಲ್ಲೂ ಹೊಸರುಚಿಗಳ ಹಾವಳಿ. ನೋಡಿ ಮಾಡಲು ಯಾರಿಗೂ ಆಸಕ್ತಿ ಇಲ್ಲ.ಆದರೆ ಸುಮ್ಮನೆ ನೋಡುತ್ತ
 ಕುಳಿತುಕೊಳ್ಳುವದು ಮಾತ್ರ ಎಲ್ಲರ ಪ್ರಿಯ ಹವ್ಯಾಸ.

ಕೈಯಲ್ಲಿ ಪೋನ್ ಹಿಡಿದುಕೊಂಡು ಅದೇಷ್ಟು ಗಂಟೆಯಾಗಿತ್ತೊ.ಇಷ್ಟು ಹೊತ್ತು ಅದೆಷ್ಟು ನೂರು ಅಡುಗೆ ರೆಸಿಪಿಗಳನ್ನು ನೋಡಿದೆನೋ ಲೆಕ್ಕವಿಲ್ಲ.ದೇಶಿ , ವಿದೇಶಿ ಖಾದ್ಯಗಳು , ಒಲೆ ಹಚ್ಚದೆ ಮಾಡುವ ಖಾದ್ಯಗಳು , ವೇಗನ್ ರೆಸಿಪಿಗಳು , ಚಿಟಿಕೆ ಹೊಡೆಯುವದರಲ್ಲಿ ತಯ್ಯಾರಾಗುವ ಪದಾರ್ಥ ಗಳು. ಇತ್ಯಾದಿ ಇತ್ಯಾದಿ… ನೋಡುತ್ತ ನೋಡುತ್ತ ಮದ್ಯಾನವಾಗಿ ಮನೆಯವರ ಊಟದ ಸಮಯವಾಯಿತು… ಎಷ್ಟೇ ಹೊಸ ರುಚಿಗಳ ಪಾಕ ನೋಡಿದರು ಮತ್ತೆ ನಮ್ಮ ಮೂಲ ಪಾಕಕ್ಕೆ ಮರಳುವದು ನಮ್ಮ ರೂಢಿ . ಲಗುಬಗೆಯಿಂದ ಎದ್ದು ಕುಕ್ಕರಿನಲ್ಲಿ ಬೇಳೆ ಬೆಯಲಿಟ್ಟು. ಫ್ರೀಜ್ ನಲ್ಲಿರುವ ಒಂದು ತರಕಾರಿ ತೆಗೆದು ಪಟಪಟನೆ ಹೆಚ್ವಿ ಇರುಳ್ಳಿ ಬೆಳ್ಳುಳ್ಳಿ ಜಜ್ಜಿಹಾಕಿ ಪಲ್ಯ ಬೇಯಲಿಟ್ಟು , ಬೆಂದ ಬೇಳೆಗೆ ಹುಳಿ ಖಾರ ಉಪ್ಪು ಹಾಕಿ ಇಂಗಿನ ಒಗ್ಗರಣೆ ಕೊಟ್ಟು , ಮತ್ತೊಂದು ಕಡೆ ಕುಕ್ಕರ್ ನಲ್ಲಿ ಅನ್ನಕಿಟ್ಟು , ಪಟಪಟನೆ ರೊಟ್ಟಿ ಮಾಡತೊಡಗಿದೆ. ಇಷ್ಟೊತ್ತು ನೋಡಿದ ಹೊಸರುಚಿಗಳೆಲ್ಲ ತಲೆಯಿಂದ ಹೇಳಹೆಸರಿಲ್ಲದೆ ಮಾಯವಾಗಿ ಸುತ್ತಲೂ ರೊಟ್ಟಿ ಬಡಿತದ ಸದ್ದು ಮಾತ್ರ ಅನುರಣಿಸತೊಡಗಿತು.


 ಜ್ಯೋತಿ , ಡಿ . ಬೊಮ್ಮಾ.

Leave a Reply

Back To Top