ಬೆಳಕಿನ ಹಲವು ಮುಖಗಳು ಜ್ಯೋತಿ , ಡಿ.ಬೊಮ್ಮಾ ಪ್ರಬಂಧ

ಪ್ರಬಂಧ ಸಂಗಾತಿ

ಬೆಳಕಿನ ಹಲವು ಮುಖಗಳು

ಜ್ಯೋತಿ , ಡಿ.ಬೊಮ್ಮಾ

ಹ್ಯಾಪಿ ದೀಪಾವಳಿ , ಹ್ಯಾಪಿ ದಿವಾಳಿಗಳ ಮೇಸೆಜಿಗೆಲ್ಲ reply ಮಾಡತಾ ಮಾಡತಾ phone ನಲ್ಲಿ ಬರಿ ದೀಪಗಳದ್ದೆ ಚಿತ್ರ ನೋಡಿ ಮನೆ ಮುಂದೆ ದೀಪ ಹಚ್ಚುವ ನೆನಪಾಯಿತು.ಅದು ಡಿಜಿಟಲ್ ದೀಪಗಳು. ಎಣ್ಣೆ ಬದಲು ನೀರು ಹಾಕಿದರೆ ಚಕ್ ಅಂತ ಉರಿಯೋ ದೀಪಗಳು. ಅಧುನಿಕತೆ ಎಷ್ಟೋಂದು ಸೌಲಬ್ಯ ಕಲ್ಪಿಸಿತು ಎಂದು ಸೋಜಿಗವಾಯಿತು.

ನಾವು ಚಿಕ್ಕವರಿದ್ದಾಗ ದೀಪಾವಳಿ ಅಂದ್ರೆ ಮನಿ ಮುಂದೆ ಕಾಂಪೌಂಡ್ ಮೇಲೆಲ್ಲ ದೀಪ ಹಚ್ಚಿ ಇಡೋದೆ ಒಂದು ಸಂಭ್ರಮ. ದೀಪಗಳು ಹಚ್ವಿ ಮನೆ ಹೊರಗೆ ಹೋಗಿ ದೂರ ನಿಂತು ನೋಡಿ ಸಂಭ್ರಮ ಪಡತಿದ್ದೆವು. ಎಲ್ಲರೂ ಸ್ಪರ್ದೆಗೆ ಬಿದ್ದವರಂತೆ ಹೆಚ್ಚು ಹೆಚ್ವು ದೀಪ ಹಚ್ಚುವ ಹುಚ್ವು. ಅದರಲ್ಲಿ ಎಣ್ಣೆ ಹಾಕಿ ಇಟ್ಟರೆ ಅದು ಸೋರಿ ಕೆಳಗೆಲ್ಲ ಎಣ್ಣೆಮಯ . ಮೆಟ್ಡಿಲು , ಕಾಂಪೌಂಡ್ ಗೋಡೆ , ತಲಬಾಗಿಲ ಮುಂದೆ ಎಲ್ಲೆಲ್ಲೂ ಎಣ್ಣೆಯ ಜಿಡ್ಡು . ಮುಂಜಾನೆ ಮತ್ತೆ ನಿರ್ಮಾ ಪುಡಿ ಹಾಕಿ ಸ್ವಚ್ಚಗೊಳಿಸೊ ಕೆಲಸ.ಇದು ಹಬ್ಬದ ಮೂರು ದಿನ ಪುನಾರಾವರ್ತನೆಯಾಗುತಿತ್ತು. ಮನೆ ಹೋರಗೆಲ್ಲ ದೀಪ ಹಚ್ಚಿ ದೂರ ನಿಂತು ಸಂಭ್ರಮಿಸುವ ಮನಸ್ಥಿತಿ ಅದೆಲ್ಲಿ ಮಾಯವಾಯಿತೊ..! ನಾವು ಚಿಕ್ಕವರಿದ್ದಾಗ ಕರೆಂಟ್ ಹೋದರೆ ಸೀಮೆ ಎಣ್ಣೆ ದೀಪ ಬಳಸುತಿದ್ದೆವು.ದೀಪದ ಮೇಲಿನ ಗಾಜಿನ ಕವಚ ತೊಳೆಯವದೆಂದರೆ ನನಗೆ ಬಹಳ ಅಚ್ವು ಮೆಚ್ಚಿನ ಕೆಲಸವಾಗಿತ್ತು.ತೊಳೆದಾಗ ದೀಪದ ಸ್ವಚ್ಚ ಬೆಳಕು ಅದರ ಪ್ರಖರತೆ ನೋಡುತ್ತ ಪರವಾಶವಾಗಿ ಕೂಡುತಿದ್ದೆ.ಅದರೊಂದಿಗೆ ಸೀಮೆ ಎಣ್ಣೆಯ ಹಿತವಾದ ವಾಸನೆಗೆ ಮನ ಮುದಗೊಳ್ಳುತಿತ್ತು.ಈಗಲೂ ಎಣ್ಣೆ ಬತ್ತಿಯ ಬೆಳಕಿನ ತುದಿಯಿಂದ ಹೊಮ್ಮುವ ಕಿರಣಗಳು ನನ್ನನ್ನು ಕ್ಷಣ ಕಾಲ ಹಿಡಿದಿಡುತ್ತವೆ.
ಈಗ ಕರೆಂಟ್ ಹೋದದ್ದು ಗೊತ್ರಾಗದಂತೆ ಇನ್ವರ್ಟರ್ ಜಾಗ್ರತೆ ವಹಿಸುತ್ತದೆ.

ಕೃಮೇಣ ಎಲೆಕ್ಟ್ರಿಕ್ ದೀಪಗಳು ವಿಜೃಂಬಿಸತೊಡಗಿದವು . ಪೂಜೆ ಸಮಾರಂಭಗಳಲೆಲ್ಲ ಅವುಗಳೆ ದೀಪಗಳು . ಸ್ವಿಚ್ ಅದುಮಿದರೆ ಜಗ್ಗನೆ ಹತ್ತಿಕೊಳ್ಳುವವು. ಎಣ್ಣೆ ಬತ್ತಿಯ ರಗಳೆ ಇಲ್ಲ. ಎಣ್ಣೆ ಸೋರುವ ಆತಂಕವಿಲ್ಲ.
ಗಾಳಿಗೆ ಆರಬಹುದೆಂಬ ದುಗುಡವೂ ಇಲ್ಲ.ಎಣ್ಣೆ ಮುಗಿದು ದೀಪ ಆರಬಹುದೆಂದು ಮತ್ತೆ ಮತ್ತೆ ಎಣ್ಣೆ ತುಂಬುವ ಹವಣಿಕೆಯು ಇಲ್ಲ.

ಈಗ ದೀಪಾವಳಿ ಹಬ್ಬ ಎಂದರೆ ಮನೆ ಒಳಗೆ ಹೊರಗೆ ಎಲ್ಇಡಿ ಲೈಟ್ ಗಳು ಹಚ್ಚುವದು.ಮನೆಯ ಗೇಟ್ ಕಾಂಪೌಂಡ್ , ಮನೆ ಮುಂದೆ ಗಿಡಗಳಿದ್ದರೆ ಅದಕ್ಕೂ ಚಿಕ್ಕ ಚಿಕ್ಕ ಲೈಟ್ಗಳ ಸರಮಾಲೆ ಸುತ್ತುವದು. ಬಾಗಿಲುಗಳಿಗೆ ಲೈಟ್ ಗಳಿಂದ ಅಲಂಕರಿಸುವದು.ಮನೆ ಮುಂದೆ ದೊಡ್ಡ ಲೈಟ್ ಇರುವ ಆಕಾಶ ಬುಟ್ಟಿ ತೂಗುಬಿಡುವದು . ಇದು ಈಚಿನ ದೀಪಾವಳಿ ಹಬ್ಬದ ಟ್ರೆಂಡ್.

ದೇವರ ಮುಂದೆ ಹಚ್ಚುವ ಆರತಿ , ನಂದಾದೀಪಗಳು , ಮಂಗಳಾರತಿ ತಟ್ಟೆ ಇವುಗಳು ಎಲೆಕ್ಟ್ರಿಕ್ ಮಯವಾಗಿವೆ. ದೇವರ ಮೂರ್ತಿ ಸುತ್ತಲೂ ಝಗಮಗಿಸುವ ದೊಡ್ಡ ದೊಡ್ಡ ಲೈಟ್ಗಳು. ಈ ಲೈಟ್ಗಳ ಪ್ರಖರತೆಗೆ ಪಾಪ ದೇವರು ಅದೆಂಗೆ ಅಷ್ಟು ಸೆಕೆ ತಾಳಿಕೊಳ್ಳತಾನೊ..!

ಕಟ್ಟಡಗಳ ಒಳಾಂಗಣ ದ ಅಲಂಕಾರದ ವಿಷಯ ಬಂದರೆ ಈ ಎಲೆಕ್ಟ್ರಿಕ್ ಲೈಟ್ ಗಳ ಪಾತ್ರ ಬಹಳ ಮುಖ್ಯಾಗಿದೆ.ಮನೆಯ ಒಳಗಿನ ಛಾವಣಿಗಳ ಪಿಒಪಿ ಗಳ ಅಡಿ ಬಣ್ಣಣ್ಣದ ಆಕರ್ಷಕ‌ಲೈಟ್ಸಗಳು ಕಣ್ಣಿಗೆ ಆನಂದ ನೀಡುತ್ತವೆ.ಗೋಡೆಗಳಿಗೆ ಮೆಟ್ಟಿಲುಗಳಿಗೆ , ಶೋಕೇಸಿನಲ್ಲಿ , ವಿವಿಧ ವರ್ಣ ಗಳಿಂದ ಅಲಂಕರಿಸಿರುವದು ನೋಡುವದೆ ಒಂದು ಆನಂದ.ನಾವೆಲ್ಲ ಚಿಕ್ಕವರಿದ್ದಾಗ ಝೀರೊ ಬಲ್ಪ್ ಮತ್ತು ಅರವತ್ತು ವ್ಯಾಟ್ ಬಲ್ಪ್ಗಳು ಮಾತ್ರ ಪ್ರಚಲಿತವಾಗಿದ್ದವು.ಸ್ವಲ್ಪ ಸಮಯದ ನಂತರ ಟ್ಯೂಬ್ ಲೈಟ್ ಗಳು ಬಂದವು. ಓದುವುದಕ್ಕೆ ಟೇಬಲ್ ಲ್ಯಾಂಪ್ ಇದೆ ಎಂದರೆ ಅವರು ಉಳ್ಳವರೆಂದೆ ಅರ್ಥವಿತ್ತು. ಆವಾಗೆಲ್ಲ ಸ್ವಲ್ಪ ಓಲ್ಟೇಜ್ ನಲ್ಲಿ ಎರುಪೇರಾದರೆ ಬಲ್ಪಗಳು ಬೇಗ್ ಶಾಟ್ ಆಗುತಿದ್ದವು.ಮತ್ತೊಂದು ಬಲ್ಪ ತಂದು ಹಚ್ಚುವದಕ್ಕೆ ಒಂದೆರಡು ದಿನ ಆಗುತಿತ್ತು.ಅಷ್ಟು ಹೊತ್ತು ಆ ಸ್ಥಳದಲ್ಲಿ ಕತ್ತಲದ್ದೆ ಸಾಮ್ರಾಜ್ಯ.ಇಲ್ಲವೆ ಸೀಮೆ ಎಣ್ಣೆ ದೀಪ ಹಚ್ಚಿಡಬೇಕಾಗುತಿತ್ತು. ಆಗಿನ ಬಲ್ಪಗಳು ಈಗಿನ ಲೈಟ್ಗಳಂತೆ ಬಿಳಿ ಬಣ್ಣದ್ದಾಗಿರದೆ ಹಚ್ಚಿದರೆ ಒಂದು ರೀತಿ ಕೆಂಬಣ್ಣದ ಬೆಳಕು ಹರಡುತಿತ್ತು. ಆಗೆಲ್ಲ ಕರೆಂಟ್ ಇರುತಿದ್ದದ್ದಕ್ಕಿಂತ ಹೋಗುತಿದ್ದದ್ದೆ ಹೆಚ್ವು.ಈಗಲೂ ಹಳ್ಳಿಗಳಲ್ಲಿ ಅದೇ ಪರಿಸ್ಥಿತಿ ಇದೆ.

ಈ ಲೈಟ್ ಪದದ ಬಳಕೆ ನನಗೆ ಒಂದು ಘಟನೆ ನೆನಪಿಸುತ್ತದೆ.ನಾವು ಚಿಕ್ಕವರಿದ್ದಾಗ ರಜೆಯಲ್ಲಿ ಅಜ್ಜಿಯ ಮನೆಯಲ್ಲಿ ಸೇರುತಿದ್ದೆವು . ನಾವೆಲ್ಲರೂ ಆಗ ಹೈಸ್ಕೂಲ್ ಓದುವವರು.ಇಂಗ್ಲಿಷ್ ಮಿಡಿಯಂ ಓದುವ ನನ್ನ ಸಹೋದರ ಸಹೊದರಿಯರೆಲ್ಲ ಮಾತಿನಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಪದ ಬಳಸುವ ಹವ್ಯಾಸ ತಮ್ಮ ಇಂಗ್ಲಿಷ್ ಪಾಂಡಿತ್ಯ ತೋರಿಸಲು ಬಳಸುತಿದ್ದರು. ರಾತ್ರಿ ನಾವೆಲ್ಲರೂ ಮಲಗಿದ ಮೇಲೆ ಹಳ್ಳಿಯಲ್ಲಿ ನಮ್ಮ ಮನೆಯಲ್ಲಿಯೇ ಇರುತಿದ್ದ ಕೆಲಸದ ಸಹಾಯಕನೊಬ್ಬ ಎಲ್ಲಾ ಕೆಲಸ ಮುಗಿಸಿ ಮಲಗಲು ತೆರಳುತಿದ್ದ. ನನ್ನ ತಂಗಿಯೊಬ್ಬಳು ಅವನನ್ನು ಹಾಲ್ ನಲ್ಲಿದ್ದ ಲೈಟ್ ತೆಗೆಯಲು ಒಳಗಿನಿಂದ ಕೂಗಿ ಹೇಳಿದಳು. ಅವನು ಓಡುತ್ತೊಡುತ್ತ ಅಡುಗೆ ಮನೆಗೆ ಹೋಗಿ ಒಲೆಯಮೇಲಿದ್ದ ಹಾಲಿನ ಗಡಿಗೆಯ ಮುಚ್ಚಳ ತೆರೆದು ನೋಡುತ್ತಾನೆ.. ಒಳಗೆ ಲೈಟ್ (ಬಲ್ಪ) ಇರದನ್ನು ನೋಡಿ ಹೊರಗೆ ಬಂದಾಗ ನನ್ನ ತಂಗಿ ಮೊದಲಿಗಿಂತ ಜೋರಾಗಿ ಹಾಲ್ ನಲ್ಲಿರುವ ಲೈಟ್ ತೆಗೆಯಲು ಕೂಗುತ್ತಾಳೆ.ಮೊದಲೆ ಮುಂಜಾನೆಯಿಂದ ದುಡಿದು ದಣಿದ ಅವನಿಗೆ ಸಿಟ್ಟು ಬಂದು , ಹಾಲ್ನಾಗ ಎಲ್ಲಿ ಲೈಟ್ ಬಿದ್ದದ್ದರಿ..ಗಡಿಗಿಮ್ಯಾಲ್ ಬುಟ್ಟಿ ಬಾಳಾಕಿನಿ. ಮ್ಯಾಲಿಂದ ಲೈಟ್ ಬಿದ್ರ ಬುಟ್ಟಿಮ್ಯಾಲ್ ಬಿಳಬೇಕು..ಒಳಗ ಹ್ಯಾಂಗ್ ಬಿಳತದ..ಈ ಪ್ಯಾಟಿ ಮಂದಿ ಹಿಂಗ..ಅನ್ನಕೊಂತ ತನ್ನ ಅಸಮಾಧಾನ ತೊರಿದನು. ಹಾಲ್ ಅನ್ನುವ ಪದ ಅವನ ಪದಕೋಶದಲ್ಲಿ ಹಾಲಿಗೆ ಮಾತ್ರ ಸಿಮೀತವಾಗಿತ್ತು.
ಗೊತ್ತಿರದವರ ಮುಂದೆ ತನ್ನ ಪಾಂಡಿತ್ಯ ಪ್ರದರ್ಶಿಸಿದ ನನ್ನ ತಂಗಿಯನ್ನು ನಂತರ ಎಲ್ಲರೂ ತರಾಟೆಗೆ ತೆಗೆದುಕೊಂಡವೆನ್ನಿ.

ಒಂದೊಮ್ಮೆ ಈ ಲೈಟ್ ಗಳು ಕೇವಲ ಬೆಳಕಿನ ಸಾಧನವಾಗಿದ್ದವುಗಳು ಕೃಮೇಣ ಗೃಹಾಲಂಕಾರದ ಸಾಧನಗಳಾದವು , ಬರುಬರುತ್ತ ಪೂಜೆಯ ಒಂದು ಭಾಗವಾದವು.ನೀರಿನಲ್ಲಿ ತೇಲುವ ದೀಪಗಳು , ನೀರು ಹಾಕಿದರೆ ಹತ್ತುವ ದೀಪಗಳು , ಎಣ್ಣೆ , ಬತ್ತಿ , ದೀಪದ ಸಂಬಂಧ ಅನ್ವರ್ಥಕಗೊಳಿಸುತ್ತಿವೆ.


ಜ್ಯೋತಿ , ಡಿ.ಬೊಮ್ಮಾ.

One thought on “ಬೆಳಕಿನ ಹಲವು ಮುಖಗಳು ಜ್ಯೋತಿ , ಡಿ.ಬೊಮ್ಮಾ ಪ್ರಬಂಧ

Leave a Reply

Back To Top