ಮೊಬೈಲ್ ಕಳೆದುಕೊಂಡವರ ಯಾತನೆಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಲೇಖನ ಸಂಗಾತಿ

ಮೊಬೈಲ್ ಕಳೆದುಕೊಂಡವರ ಯಾತನೆಗಳು…

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಇಂದು ಆಧುನಿಕ ಕಾಲದಲ್ಲಿ ಸಂಪರ್ಕ  ಸಾಧನಗಳ ಸಾಲಿನಲ್ಲಿ ಅನೇಕ ಪರಿಕರಗಳು ಸಾಲು ಸಾಲಾಗಿ ನಿಲ್ಲುತ್ತವೆ.  ಅದರಲ್ಲಿ ವಿಶೇಷವಾಗಿ ಮೊಬೈಲ್ ನಮ್ಮೆಲ್ಲರ ಬದುಕನ್ನು ಆವರಿಸಿಕೊಂಡು ಬಿಟ್ಟಿದೆ.  ಸರ್ಕಾರಿ ಸೌಲಭ್ಯಗಳಿರಲಿ, ವೈಯಕ್ತಿಕ ಫೈಲ್ ಗಳಿರಲಿ,  ನೆನಪುಗಳಿರಲಿ, ಮನೆಯ ಆಗುಹೋಗುಗಳಿರಲಿ, ಕಚೇರಿಯ ಕೆಲಸಗಳಿರಲಿ, ಬಹುತೇಕ ಅರ್ಧದಷ್ಟು ಕೆಲಸವನ್ನು ನಾವು ಮೊಬೈಲ್ ಗಳಲ್ಲಿ ಮಾಡಿ, ಕಡತವನ್ನು ಸಿದ್ಧತೆಗೊಳಿಸುತ್ತೇವೆ.
ಮೊಬೈಲ್ ಎಷ್ಟು ನಮ್ಮೊಂದಿಗೆ ಬೆರೆತು ಹೋಗಿದೆ ಎಂದರೆ ನಾವು ಎಲ್ಲಿಯೇ ಹೋದರೂ ಕೂಡ ಸದಾ ನಮ್ಮೊಂದಿಗೆ ಮೊಬೈಲ್ ತೆಗೆದುಕೊಂಡು ಹೋಗುತ್ತೇವೆ.

ಮೊಬೈಲ್ ಅಂದರೆ ‘ಜಂಗಮವಾಣಿ’ ಎನ್ನುತ್ತಾರೆ.  ಮೊಬೈಲ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ವಿಶೇಷವಾಗಿ ಮೊಬೈಲ್ ನ  ವಿವಿಧ ತರ ತರಹದ ಅನೇಕ ಪಿಚ್ಚರ್ ಗಳನ್ನು ಒಳಗೊಂಡಿರುವ ಸರಕುಗಳು ಮಾರುಕಟ್ಟೆಯಲ್ಲಿ ಬಂದಿವೆ.  ಇಂದು ಬಂದ ಮಾಡಲ್ ಗಳು ನಾಳೆ ಮತ್ತೊಂದು ರೀತಿಯ ಹೊಸ ಸಂಶೋಧನೆಗಳೊಂದಿಗೆ ಮಾಡಲ್ ಗಳು ಬಿಡುಗಡೆಯಾಗುತ್ತವೆ. ಒಂದು ಮಾಡೆಲ್ ಗಳಿಗಿಂತ ಇನ್ನೊಂದು ಮಾಡಲು ವಿಭಿನ್ನವಾಗಿರುತ್ತವೆ. ವಿಭಿನ್ನ ಸೌಲಭ್ಯಗಳನ್ನು ಒಳಗೊಂಡಿರುತ್ತವೆ.

 ಮೊಬೈಲ್ ಎಂದರೆ ಹಾಗೆ..!! ಅಯ್ಯೋ ಇನ್ನೊಂದಿಷ್ಟು ಸಮಯ ತಡೆದು ಅದನ್ನೇ ತೆಗೆದುಕೊಳ್ಳಬಹುದಿತ್ತು ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಕಾಡಿಸದೆ ಬಿಡದು.  ಮೊಬೈಲ್ ಒಂದು ಮಾಯಾಜಾಲ. ಅದಕ್ಕೆ ಒಂದು ಸಲ ನಾವು ಅಡಿಕ್ಟ್ ಆದರೆ ಅದು ನಮ್ಮಿಂದ ದೂರ ಹೋಗಲು ಸಾಧ್ಯವೇ ಇಲ್ಲ.  ಇಂದು ದೊಡ್ಡವರಿಂದ ಚಿಕ್ಕವರವರೆಗೂ ಮೊಬೈಲ್ ಬಳಸುವುದನ್ನು ನಾವು ಕಾಣುತ್ತೇವೆ.  ಚಿಕ್ಕ ಚಿಕ್ಕ ಮಕ್ಕಳು ಕೂಡ ಮೊಬೈಲಿನ ವ್ಯಾಮೋಹಕ್ಕೆ ಒಳಗಾಗಿದ್ದಾರೆ.


ತಾಯಿ ತನ್ನ ಮಗುವಿಗೆ ಊಟ ಮಾಡಿಸುವಾಗ ಚಂದಿರನನ್ನು ತೋರಿಸಿ ಊಟ ಮಾಡಿಸುತ್ತಿದ್ದ ಕಾಲವೊಂದಿತ್ತು.  ಆದರೆ ಈಗ ಕಾಲ ಬದಲಾಗಿದೆ ಮೊಬೈಲ್ ಕೈಯಲ್ಲಿ ಕೊಟ್ಟ ತಕ್ಷಣ ಮಗು ಊಟ ಮಾಡಲು ಪ್ರಾರಂಭವಾಗುತ್ತದೆ. ಇದಕ್ಕೆ ಕಾರಣವಿಷ್ಟೇ ಮೊಬೈಲಿನಲ್ಲಿ ವಿವಿಧ ಬಗೆಯ ಆಟಿಕೆಗಳು, ಡಿಸೈನ್ಗಳು, ಮನಮೋಹಕಗೊಳ್ಳುವ ಬಣ್ಣ ಬಣ್ಣದ ಪರದೆಗಳು, ಅವು ಮತ್ತೊಂದು ಭ್ರಮಾಲೋಕಕ್ಕೆ ಕೊಂಡೊಯ್ಯುವುದರಿಂದ ಮಗುವಿನ ಮನಸ್ಸು ಸೆಳೆಯುತ್ತದೆ.

 ಹೀಗೆ ಮಗುವಿನ ವಯಸ್ಸಿನಿಂದ ದೊಡ್ಡವರವರೆಗೂ ಬೇಕಾಗಿರುವ ಎಲ್ಲಾ ರೀತಿಯ ಹಾಡು, ಕಥೆ ಕವಿತೆ, ಸಾಹಿತ್ಯ, ವ್ಯವಹಾರ, ಸಂಗೀತ,ಸಿನೆಮಾ, ವಾಣಿಜ್ಯ, ಕಲೆ, ವಿದ್ಯಾರ್ಥಿಗಳಿಗೆ ಬೇಕಾದ ಸಂಪನ್ಮೂಲಗಳು, ಶಿಕ್ಷಕರಿಗೆ, ಉಪನ್ಯಾಸಕರಿಗೆ ಬೇಕಾಗಿರುವ ಮಾಹಿತಿಗಳು, ದೇಶ ವಿದೇಶಗಳ ಮಾಹಿತಿಗಳು…. ಎಲ್ಲವನ್ನು ಕೇವಲ ಕೈ ಬೆರಳಿನಲ್ಲಿಯೇ ಕೆಲವೇ ಸೆಕೆಂಡ್ ನಲ್ಲಿ  ಸಿಗುವಂತೆ ಮಾಡುತ್ತದೆ. ಈ ಮಾಯಾ ಲೋಕದ ಜಂಗಮವಾಣಿ ಅರ್ಥಾರ್ಥ ಮೊಬೈಲ್..!!

 ಇಂತಹ ಮೊಬೈಲ್ ಬಳಸುವಾಗ ನಾವು ಮನೆಯ ಹಿರಿಯರಿಂದ ಬೈಸಿಕೊಳ್ಳುತ್ತೇವೆ.  “ಹಿರಿಯರು ಬೈಯುತ್ತಾರೆ” ಎಂಬ ಭಯದಿಂದ ಮುಚ್ಚುಮರೆಯಿಂದ ಮೊಬೈಲ್ ಬಳಸುವುದನ್ನು ಬಿಡುವುದಿಲ್ಲ.  ದುರಾದೃಷ್ಟ ಹಿರಿಯರು ಕೂಡ ಮೊಬೈಲ್ ಬಳಸುತ್ತಿರುವುದು ವಿಷಾದನೀಯ ಎಂದೆ ಹೇಳಬಹುದು.  ಮೊಬೈಲ್ ಬಳಕೆ ಹಿತವಾಗಿರಬೇಕು. ಮಿತವಾಗಿರಬೇಕು. ಮೊಬೈಲನ್ನು ಧನಾತ್ಮಕವಾಗಿ ಬಳಸಿಕೊಂಡಾಗ ನಮಗೆ ಬೇಕಾದ ಎಲ್ಲಾ ಮಾಹಿತಿಗಳು ಅದರಲ್ಲಿ ಸಿಗುತ್ತವೆ.   ಯಾವುದೇ ವಸ್ತುವಿನಲ್ಲಿ ಒಳ್ಳೆಯ ಅಂಶಗಳು ಸೇರಿರುತ್ತವೆ, ಕೆಟ್ಟ ಅಂಶಗಳೂ ಸೇರಿರುತ್ತವೆ. ಋಣಾತ್ಮಕ ಅಂಶಗಳನ್ನು ಕಿತ್ತೊಗೆದು,  ಧನಾತ್ಮಕ ಅಂಶಗಳನ್ನು ಸ್ವೀಕರಿಸುವ ಮನಸ್ಸು ನಮ್ಮದಾಗಬೇಕು. ಹಾಗಾಗುವಂತೆ  ಹಿರಿಯರಾದವರು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು.
 ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿಕೊಂಡು ಮಗುವಿನ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಬೇಕು. ಅದನ್ನು ನಾವು ಅರಿತುಕೊಳ್ಳಬೇಕು. ಯಾವಾಗ ನಮಗೆ ಶೈಕ್ಷಣಿಕ ವಿಷಯಗಳನ್ನು ಪ್ರಾಯೋಗಿಕವಾಗಿ ಹೇಳಲು ಸಾಧ್ಯವಾಗುವುದಿಲ್ಲ     ವೋ ಆಗ ಮೊಬೈಲ್ ಗಳ ಬಳಕೆ ನಮಗೆ ಅವಶ್ಯಕವಾಗುತ್ತವೆ.

 ಒಂದು ಊರಿನಿಂದ ಇನ್ನೊಂದು ಊರಿಗೆ ಸಂಪರ್ಕ ಸಾಧಿಸಲು ಆಗ ನಮಗೆ ಹಲವಾರು ವಾರಗಳು ಬೇಕಾಗಿತ್ತು. ನಂತರ ಹಲವಾರು ದಿನಗಳು ಬೇಕಾಗಿದ್ದವು. ಈಗ ಅಂತಹ ಪ್ರಮೇಯವೇ ಇಲ್ಲ…!!  ಕೇವಲ ಕೆಲವೇ  ಕ್ಷಣಗಳಲ್ಲಿ ದೂರದ ಸಂಬಂಧಿಕರ, ಸ್ನೇಹಿತರ, ಬಂಧುಗಳ ಜೊತೆಗೆ ಸಂಪರ್ಕ ಸಾಧಿಸಿ ವಿಷಯ ಹಂಚಿಕೊಳ್ಳುತ್ತೇವೆ.  ಸಂವಾದಿಸುತ್ತೇವೆ. ವಿಷಯವನ್ನು ಅತ್ಯಂತ  ತೀವ್ರವಾದ ವೇಗದಲ್ಲಿ ತಲುಪಿ ಬಿಡುತ್ತದೆ.  ಇದು ಒಳಿತಲ್ಲವೇ..!? ಯಾವುದೇ ವೈಜ್ಞಾನಿಕ ಸಂಶೋಧನೆಗಳು ಒಳ್ಳೆಯತನಕ್ಕೆ  ಬಳಸಿದಾಗ ಮಾತ್ರ ಅದು ನಮಗೆ ಒಳ್ಳೆಯದಾಗುತ್ತದೆ. ಅದನ್ನು ಋಣಾತ್ಮಕವಾಗಿ ಕೆಟ್ಟ ದೃಷ್ಟಿಯಿಂದ ಬಳಸಿದಾಗ, ಅದರಿಂದ ಕೆಟ್ಟದ್ದಾಗುತ್ತದೆ.  ಮೊಬೈಲ್  ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಮೊಬೈಲನ್ನು ನಾವು ಜತನದಿಂದ ಕಾಪಾಡುತ್ತೇವೆ. ಕೆಲವು ಸಲ ಮಗುವನ್ನು ರಕ್ಷಿಸುವುದಕ್ಕಿಂತಲೂ ಹೆಚ್ಚು ಮೊಬೈಲನ್ನು  ರಕ್ಷಿಸುತ್ತೇವೆ.

ಇಷ್ಟಾಗಿಯೂ…
ದುರಾದೃಷ್ಟಕ್ಕೆ  ನಮ್ಮ ಮರೆವಿನ ಕಾಯಿಲೆಯಿಂದಲೋ ಅಥವಾ ಯಾರಾದರೂ ಕಳವು ಮಾಡುವುದರಿಂದಲೋ  ಮೊಬೈಲ್ ಕಳೆದುಕೊಂಡಾಗ ಈ ಪ್ರಪಂಚವೇ ಕಳಚಿ ಬಿದ್ದಷ್ಟು ಹಪಾಹಪಿಯಾಗುತ್ತೇವೆ.  ಕಣ್ಣೀರಿಡುತ್ತೇವೆ. ಒಳಮನಸ್ಸಿನಿಂದ ದುಃಖದ ಯಾತನೆಯನ್ನು ಅನುಭವಿಸುತ್ತೇವೆ. ಈ ರೀತಿ ದುಃಖದ ಯಾತನೆಗಳು ಮೊಬೈಲ್ ಕಳೆದು ಹೋಗಿರುವುದರಿಂದ ಅಲ್ಲದೆ ಹೋದರು ಅದರಲ್ಲಿರುವ ಡಾಟಾ ಅರ್ಥಾತ್  ನಮ್ಮ ಎಲ್ಲಾ ಫೈಲ್ ಗಳು, ಫೋಟೋಗಳು, ಮಾಹಿತಿಗಳು, ಬ್ಯಾಂಕಿನ ವಿವರಗಳು, ವ್ಯವಹಾರದ ಸರಕುಗಳು …ಎಲ್ಲವೂ ಅದರಲ್ಲಿ ತುರಿಕಿಬಿಟ್ಟಿರುತ್ತೇವೆ..!!  ಅಂದರೆ ಲ್ಯಾಪ್ ಟ್ಯಾಪ್ ನಲ್ಲಿ ಸೇವ್ ಮಾಡುವುದನ್ನು ಮರೆತು, ಕೇವಲ ಮೊಬೈಲಿನಲ್ಲಿ ಸೇವ್ ಮಾಡಿಟ್ಟುಕೊಂಡು ಕೆಲವು ಸಲ ಮೊಬೈಲ್ ಕಳೆದುಕೊಂಡಾಗ ಇಂತಹ ಸಂಕಟಗಳನ್ನು ಅನುಭವಿಸುತ್ತೇವೆ.
ನಾನಂತೂ ಮೂರ್ನಾಲ್ಕು ಮೊಬೈಲ್ ಗಳನ್ನು ಕಳೆದುಕೊಂಡರೂ ಇನ್ನು ಬುದ್ದಿ ಬಂದಿಲ್ಲ ಎನ್ನುವ ನನ್ನ ಒಳಮನಸ್ಸು ಪದೇ ಪದೇ ಬಡಿದು ಎಚ್ಚರಿಕೆ ಹೇಳಿದರೂ  ಇನ್ನೂ ಎಚ್ಚರವಾಗದೆ ಇರುವುದು ದುರಂತ ಎನ್ನುತ್ತದೆ ನನ್ನ ಮನಸ್ಸು..!!  ನನಗೆ ನಾನೇ ಹಾಗೆಯೇ..!!  
ಮೊಬೈಲ್ ಕಳೆದುಕೊಂಡ ತಕ್ಷಣ ಹೊಸ ಮೊಬೈಲ್ ತೆಗೆದುಕೊಂಡಾಗಿಯೂ ಅನೇಕ ತೊಂದರೆಗಳನ್ನು ಎದುರಿಸುತ್ತೇವೆ.  ನಮ್ಮ ಜಿಮೇಲ್ ಅಕೌಂಟ್ ಕೆಲವು ಸಲ ಕಾರ್ಯನಿರ್ವಹಿಸದೆ ಹೋಗಬಹುದು.  ಕೆಲವು ಸಲ ಪಾಸ್ವರ್ಡ್ (ಗುಪ್ತ ಸಂಕೇತ) ಗಳನ್ನು ಮರೆತು ಹೋಗುತ್ತೇವೆ.  ಅನೇಕ ಸಲ ಜಿಮೇಲ್ ಅಕೌಂಟ್ ಅನ್ನು ಪುನಃ ಪುನಃ ಸಿದ್ಧತೆ ಮಾಡಿ ಮಾಡಿ ಸೋತಾಗ, ನಮ್ಮ ಬದುಕೇ ಮುಗಿದು ಹೋಯಿತು ಎನ್ನುವಷ್ಟರ ಮಟ್ಟಿಗೆ ಅಸಹಾಯಕರಾಗಿ ಬಿಡುತ್ತೇವೆ. ಹೊಸದಾಗಿ ಜಿಮೇಲ್ ಕ್ರಿಯೇಟ್ ಮಾಡಿದರೆ ಅಂದರೆ ಸೃಷ್ಟಿಸಿದರೆ ಹಿಂದಿನ ಎಲ್ಲಾ ಡಾಟಾಗಳನ್ನು ಫೈಲ್ ಗಳನ್ನು, ಮಾಹಿತಿಗಳನ್ನು ಕಳೆದುಕೊಂಡು ಬಿಡುತ್ತೇವೆಲ್ಲ ಎನ್ನುವ ಸಂಕಟ, ನೋವು… ಯಾರ ಮುಂದೆ ಹೇಳಬೇಕು..?  ಎಂದು ಮನಸ್ಸು ಕೊತ ಕೊತನೆ ಕುದಿಯುತ್ತದೆ.

ಇದು ಒಂದು ರೀತಿಯ ಸಂಕಟವಾದರೆ…

 ಮೊಬೈಲ್ ಕಳೆದುಕೊಂಡಿದ್ದರಿಂದ ಮನೆಯವರಿಂದ ಬೈಗುಳ ತಿನ್ನುವ ನೋವು ಹೇಳುತೀರದು. ಎಂತಹ ಬೈಗುಳಗಳು ಅಬ್ಬಾಬ್ಬಾ…!! ಮೊದಲೇ ಆದ ಗಾಯಕ್ಕೆ ಬರೆ ಎಳೆದಂತೆ..!  ಬರೆ ಎಳೆದ ಗಾಯಕ್ಕೆ ಉಪ್ಪು ಸವರಿದಂತೆ ನೋವಿನ ಮೇಲೆ..!!  ಹಾಗಾಗಿ ನಮ್ಮ ಬದುಕು ಮೊಬೈಲಿನೊಂದಿಗೆ ಬೆಸೆದು ಹೋಗಿದೆ. ಮೊಬೈಲ್ ಜೊತೆ ಜೊತೆಗೆ ಜಿಮೇಲ್ ಅಕೌಂಟ್ ಕೂಡ ನಮ್ಮೊಂದಿಗೆ ನಮ್ಮ ವೈಯಕ್ತಿಕ ಬದುಕಿನಲ್ಲಿ  ಬೆರೆತು ಹೋಗಿದೆ.

ಮೊಬೈಲ್ ಏನೋ ಕಳೆದು ಹೋಯಿತು ಅಥವಾ ಬೇರೆಯವರ ಕೈಗೆ ಹೋಯಿತು ಎಂದು ಸಂಕಟಪಡುತ್ತಲೇ, ಪೊಲೀಸ್ ಇಲಾಖೆಯ ಮೆಟ್ಟಿಲು ಏರಿದಾಗ ಅರ್ಜಿ ತೆಗೆದುಕೊಳ್ಳಲು   ಪೊಲೀಸ್ ಇಲಾಖೆಯವರು ಬಿಲ್ಲುಗಳನ್ನು ಕೇಳುತ್ತಾರೆ.  ನಿಜ
ಐ ಎಮ್ ಇ ಸಂಖ್ಯೆಯಿದ್ದರೆ ಅವರಿಗೆ ಹುಡುಕಲು ಸಹಾಯವಾಗುತ್ತದೆ ಎನ್ನುವ ಮುಂದಾಲೋಚನೆ ಅವರದಾಗಿರುತ್ತದೆ.
ಮೊಬೈಲ್ ಕಳೆದುಕೊಂಡವರ  ನಮ್ಮ ಸಂಕಟಗಳು ಹೀಗೆ ಮುಂದುವರೆಯುತ್ತವೆ ಎನ್ನುವುದಕ್ಕೆ ಹೊಸ ಮೊಬೈಲ್ ತರುವಾಗ  ಅದರ ಜೊತೆಗೆ ಮೊಬೈಲಿನ ಬಿಲ್ಲನ್ನು ತಂದಿರುತ್ತೇವೆ.  ಅದರ    ಬಾಕ್ಸ್ ಮೇಲಿರುವ ಎಲ್ಲಾ ಮೊಬೈಲಿನ ವಿವರಗಳು ಇರುತ್ತವೆ, ವರ್ಷಾನೋ ಒಂದೂವರೆ ವರ್ಷನೋ ಕಳೆದ ನಂತರ ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ.  ಮನೆ ಸ್ವಚ್ಛ ಮಾಡುವಾಗ ಇಲ್ಲವೇ ಸಾಮಾನುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ಬಿಲ್ಲು ಕೂಡ ಮಾಯವಾಗಿ ಬಿಡುತ್ತದೆ..!!  ಬಾಕ್ಸ್ ಎಲ್ಲಿಯೋ ಬಿದ್ದು ಬಿಡುತ್ತದೆ. ಮತ್ತೆ ಮೊಬೈಲ್ ಕಳೆದಾಗ ಇವುಗಳನ್ನು ಹುಡುಕುವ ದೊಡ್ಡ ಯುದ್ದವೇ ಆಗುತ್ತದೆ…!!
 ಹೀಗೆ ಅನೇಕ ಸಂಕಟಗಳೊಂದಿಗೆ ಮೊಬೈಲ್ ಕಳೆದುಕೊಂಡವರ ಹಳವಂಡುಗಳು, ಸಮಸ್ಯೆಗಳು, ಯಾತನೆಗಳು, ಸಂಕಟಗಳು ಯಾರ ಮುಂದೆಯೂ ಹೇಳದಂತಾಗುತ್ತದೆ. ಮೊಬೈಲ್ ಕಳೆದುಕೊಂಡಾಗ ಯಾರು ಕಾಲ್ ಮಾಡುತ್ತಾರೋ ಅವರ ಜೊತೆಗೆ ಸಂಭಾಸಿಸುವಾಗ ಅವರ ನಂಬರ್ ಕೂಡ ನೆನಪಾಗುವುದಿಲ್ಲ..!!  ಈ ಕಡೆಯಿಂದ ಯಾರು..?  ಎಂದರೆ ಅವರಿಗೆ ಎಲ್ಲಿ ಮುಜುಗರ ಆಗುತ್ತದೆಯೋ ಎನ್ನುವ ಸಂಕಟ ಬೇರೆ.  ಮತ್ತೆ ನಮ್ಮ ನೋವನ್ನು ಹೇಳಲೇಬೇಕು ನಂತರ ಅದನ್ನು ಸರಿಪಡಿಸಿ ನಮ್ಮ ಬದುಕನ್ನು ಮತ್ತೆ ಕಟ್ಟಬೇಕು.  

ಹೊಸ ಬದುಕಿಗೆ ನಾವು ಒಗ್ಗುವಂತೆ ಹೊಸ ಮೊಬೈಲ್ ಕೂಡ ಅನೇಕ ದಿನಗಳವರೆಗೆ ಅದರೊಂದಿಗೆ ಹೊಂದಾಣಿಕೆಯಾಗುವವರೆಗೂ ನಮ್ಮ ಬದುಕಿನ ತಳಮಳಗಳು ಹಾಗೆ ಮುಂದುವರೆಯುತ್ತದೆ.

 ಸ್ನೇಹಿತರೆ,

ಇಂದು ನಮ್ಮ ಬದುಕು  ನಮ್ಮ ಹಿಡಿತದಲ್ಲಿಲ್ಲ.  ನಮ್ಮ ಎಲ್ಲಾ ಅಗತ್ಯಗಳನ್ನು, ಅವಶ್ಯಕತೆಗಳನ್ನು ಪೂರೈಸುವ ಅನೇಕ ಬಂಧನಗಳು ನಮ್ಮೊಡನೆ ಬೆರೆತುಬಿಟ್ಟಿವೆ. ಅದರೊಳಗೆ ಈ ಮೊಬೈಲ್ ಕೂಡ ಒಂದು. ಸಂಜೆಯಾದರೆ ಟಿವಿ ಮುಂದೆ ಕುಳಿತು ಧಾರವಾಹಿಗಳನ್ನು ನೋಡುವ, ಸಿನಿಮಾಗಳನ್ನು ನೋಡುವ ಹುಚ್ಚು ಒಂದು ಕಾಲದಲ್ಲಿ ಹೆಚ್ಚು ಇತ್ತು. ಕೆಲವು ಸಲ ಅದು ಇನ್ನೂ ಮುಂದುವರಿದಿರಬಹುದು.  ಹಾಗೆಯೇ ಮೊಬೈಲ್ ಬಳಕೆಯು ಕೂಡ.  

ಹೀಗೆ ಮೊಬೈಲ್ ಕಳೆದುಕೊಂಡು ಅನೇಕ ಸಂಕಟಗಳನ್ನು, ಯಾತನೆಗಳನ್ನು ಅನುಭವಿಸುವ ಕೆಟ್ಟ ಸಮಯ ಯಾರಿಗೂ ಬಾರದಿರಲಿ…!!  
ಮೊನ್ನೆ ನಾನು ದಸರಾ ಹಬ್ಬಕೆಂದು ಮೈಸೂರಿಗೆ ಹೋದಾಗ ನನ್ನ ಮೊಬೈಲ್ ನ್ನು ಸಾಕಷ್ಟು  ಕಾಪಾಡಿಕೊಂಡಿದ್ದರೂ ಬಸ್ಸು ಹತ್ತುವ ಸಮಯದಲ್ಲಿ ಯಾರೋ ಪ್ಯಾಂಟಿನ ಜೇಬಿನಿಂದ ಮೊಬೈಲನ್ನು ಕಿತ್ತುಕೊಂಡುಬಿಟ್ಟರು..!!
 ಮೊಬೈಲ್ ಕಳೆದ ನಂತರ ಆದ ನೋವು, ಹತಾಶೆಯ, ಕಣ್ಣೀರು ಅಯ್ಯೋ..!  ಎನ್ನುವ ಸಂಕಟಗಳು ಯಾರಿಗೂ ಬಾರದಿರಲಿ.  ಆ ನೋವು ನನ್ನನ್ನು ಬಾಧಿಸಿದಷ್ಟು ಇನ್ನೊಬ್ಬರನ್ನು ಬಾಧಿಸದಿರಲಿ. ಯಾಕೆಂದರೆ ಎಲ್ಲಿಯೋ ಸಿಕ್ಕ ಮೊಬೈಲ್ ಯಾರಿಂದಲೋ ಕಿತ್ತುಕೊಂಡ ಮೊಬೈಲ್ ಆಗಲಿ ಅಥವಾ ವಸ್ತುವಾಗಲಿ ಬಹಳ ದಿವಸ ಇರುವುದಿಲ್ಲ ಎನ್ನುವ ಮನುಷ್ಯತ್ವದ ಮಾತು ಎದೆಯೊಳಗಿರಬೇಕು.  ಕಳವು ಮಾಡಿದವರಿಗೂ ಕಳೆದುಕೊಂಡವರ ಸಂಕಟ ಅರ್ಥವಾದರೆ ಅವರು ಕೂಡ ಅದನ್ನು ತಿರುಗಿ ಕೊಟ್ಟಾರು ಅಥವಾ ವಾಪಸ್ ಮರಳಿಸಿಯಾರು ಎನ್ನುವ ಸದಾಶಯದೊಂದಿಗೆ ಮೊಬೈಲ್ ಕಳೆದುಕೊಂಡವನ ಸಂಕಟಗಳನ್ನು ಮನಸೋ ಇಚ್ಛೆ ಕೇಳಿದಿರಿ, ಓದಿದಿರಿ… ಈ ಅನುಭವ ನಿಮಗೂ ಆಗಿರಬಹುದು.  ಹಾಗೆಯೇ  ನಿಮಗೆ ಅಂತಹ ಮೊಬೈಲ್ ಕಳೆದ  ನೋವಾಗಿದ್ದರೆ  ನಾನು ವಿಷಾದಿಸುತ್ತೇನೆ..!!  ಹಾಗಾಗದಂತೆ ಆಗದಿರಲೆಂದು ಸದಾಶಯ ಬಯಸುತ್ತೇನೆ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

3 thoughts on “ಮೊಬೈಲ್ ಕಳೆದುಕೊಂಡವರ ಯಾತನೆಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

  1. ನೋವಿನ ಮಿಡಿತ ಉತ್ತಮ ಲೇಖನ ನಾನು ಕಳೆದು ಕೊಡಿರುವೆ sir

  2. ಜೈಕರ‌್ನಾಟಕ

    ನನ್ನ ಕೈಯಿಂದಲೇ ಕಸಿದುಕೊಂಡು‌ಹೋದರು ಓಡಿ ಓಡಿ ಹತಾಶನಾಗಿದ್ದೆ ಬಹಳ ಕೊರಗಿದ್ದೆ ನಮ್ಮ ಆತಕ್ಷಕ ಗೆಳಯರ ಸಹಕಾರದಿಂದ ಬಹಳ ಪ್ರಯತ್ನ ಪಟ್ಟೆ ಆದರೆ ಅವಾಗ ಸಿಗಲಿಲ್ಲಾ ಆದರೆ ಅನಿರೀಕ್ಷಿತವಾಗಿ ಠಾಣೆಯವರು ಕರೆ ಮಾಡಿ ಸಿಕ್ಕಿದೆ ಬಂದು ತೆಗೆದುಕೊಂಡು ಹೋಗಿ ಅಂದ್ರು ಅದೊಂದು ಸನ್ತೋಷದ ಕ್ಷಣ ಆದರೆ ನಮ್ಮ ಗೆಳಯರಿಗೆ ನೆರವಾಗಲು ಅವರಿಗೆ ಕೊಟ್ಡಿದ್ದೆ ದುರದೃಷ್ಟವಶಾತ್ ಅವರು ಅದನ್ನು ಕಳೆದುಕೊಂಡರು.

    ನಂತರ ನಮ್ಮ ಅಣ್ಣನ ಮಗನ ಕೈಯಿಂದ ಮುಂಜಾನೆ ಸಮಯದಲ್ಲಿ ಕಸಿದುಕೊಂಡು ಓಡಿ ಹೋದರು ಅದೂ ಸಹ ಸಿಗಲಿಲ್ಲಾ, ಪುನಃ ನನ್ನ ತಂಗಿ ನನಗೆಂದು ಕೊಡಿಸಿದ ೨೫ ಸಾವಿರ ಬೆಲೆಯ ಸ್ಯಾಮ್ ಸಂಗ್ ಅಲೆಯುಲಿ ನಮ್ಮಮ ನೆಯ ಹತ್ರಾನೇ ಆಗಂತುಕರು ಕಿತ್ತುಕೊಂಡು ಹೋದರು ಓಡಿ ಓಡಿ ಅಸಹಾಯಕನಾಗಿ ದಣಿದೆ ಎಲ್ಲಾ ಕಣ್ಗಾವಲು (ಸಿಸಿಕ್ಯಾಮರ) ಮಾಹಿತಿ ಹುಡುಕಿ ಅವರ ಚಿತ್ರ ಸಮೇತ ಕೊಟ್ಟರು ನಾನೇ ಕಳೆದುಕೊಂಡ ಹಾಗೆ ದೂರು ಬರೆದುಕೊಳ್ಳುವ ವ್ಯವಸ್ಥೆ ಇದುವರೆಗೂ ಹುಡುಕಿ ಕೊಡಲಿಲ್ಲಾ
    ಅದರ ಜೊತೆ ಬಿಲ್ಲೆ (ಸಿಮ್)/ಹೊಸದಾಗಿ ಪಡೆಯುವ ರಗಳೆ . ಅನುಕೂಲದ ಜೊತೆ ಇದೆಲ್ಲಾ ಉಚಿತ.

    ನಿಮ್ಮ ಬರಹಕ್ಕೆ ಇದೊಂದು ಪ್ರತಿಕ್ರಿಯೆ.

Leave a Reply

Back To Top