“ವರ್ತಮಾನದ ಮಹಿಳೆ- ತಲ್ಲಣ ಡಾ.ಜಿ.ಪಿ.ಕುಸುಮಾಮುಂಬಯಿ.

ಕಾವ್ಯ ಸಂಗಾತಿ

ಡಾ.ಜಿ.ಪಿ.ಕುಸುಮಾಮುಂಬಯಿ.

“ವರ್ತಮಾನದ ಮಹಿಳೆ- ತಲ್ಲಣ

ಇಂದಿನ ಆಧುನಿಕ ಜಗತ್ತಿಗೆ ಮುಖಾಮುಖಿಯಾಗುವ ವರ್ತಮಾನದ ಮಹಿಳೆಯನ್ನು ಆವರಿಸಿಕೊಂಡಿರುವ ತಲ್ಲಣಗಳಿಗೆ ಕೊನೆ ಎಂಬುದಿದೆಯೇ ? ಈ ತಲ್ಲಣ ಅಂದ್ರೆ ಏನು? ತಲ್ಲಣ ಅಂದ್ರೆ ಭಯ, ಹೆದರಿಕೆ, ಗಾಬರಿ, ಭೀತಿ ಎಂದು ಅರ್ಥ ಬರುತ್ತೆ. ವರ್ತಮಾನದ ಮಹಿಳೆ ಅನುಭವಿಸುತ್ತಿರುವ ಎಲ್ಲವನ್ನು ಒಟ್ಟಾಗಿಸಿ ಒಂದು ಶಬ್ದದಲ್ಲಿ ನಾವು ‘ತಲ್ಲಣ’ ಅಂತ ಹಿಡಿದಿಡುತ್ತೇವೆ. ಈ ಭಯ ಅನ್ನುವಂಥದ್ದು ಇಂದು ಮನೆಯಲ್ಲೇ ಹುಟ್ಟಿ.. ಸಮಾಜದಲ್ಲಿ ಬೆಳೆಯುತ್ತಾ ಇರುತ್ತದೆ. ಪೀಡೆಯ ತರಹ ಬದುಕಿನ ಸುತ್ತ ಗಿರಕಿ ಹೊಡೆಯುತ್ತಿರುತ್ತೆ.

 ನಿಜಾರ್ಥದಲ್ಲಿ, ಮನುಷ್ಯನಾಗಿ ಹುಟ್ಟಿದ ಮೇಲೆ ಈ ‘ತಲ್ಲಣ’ ಎನ್ನುವುದಂತೂ ಜಾತಿ ಭೇದವಿಲ್ಲದೆ, ಲಿಂಗಭೇದವಿಲ್ಲದೆ ಎಲ್ಲರನ್ನೂ ಕಾಡುವಂತಹದ್ದೇ ಆಗಿದೆ. ಆದರೆ ಗಂಡಸರಿಗಿಂತ ಹೆಚ್ಚು ಮಹಿಳೆಯರ ಮೇಲೆ ಇದು ನೆಗೆಟಿವ್ ಎಫೆಕ್ಟ್ ಅನ್ನು ಮಾಡುತ್ತದೆ ಎನ್ನುವುದು ಅಧ್ಯಯನಕಾರರು ಕಂಡುಕೊಂಡ ಸತ್ಯ. ಪುರುಷನಂತೆ ದುಡಿಮೆಗೆ, ಕಲಿಕೆಗೆ, ಸವಾಲೊಡ್ಡಿ ನಿಂತಿರುವ ಇಂದಿನ ಮಹಿಳೆಗೆ ಸ್ವರಕ್ಷಣೆಯೇ ಇಂದು ಬಹು ದೊಡ್ಡ ಸಮಸ್ಯೆಯಾಗಿದೆ. ದೇಶದ 70% ಮಹಿಳೆಯರು ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಾ ಇದ್ದಾರೆ. ಕೆಲವೇ ಪ್ರತಿಶತ ಕೇಸುಗಳು ಮಾತ್ರ ರಿಜಿಸ್ಟರ್ ಆಗುತ್ತವೆಯೇ ವಿನಹ ಇತರ ಹಿಂಸೆಗಳು ನಾಲ್ಕು ಗೋಡೆಗಳೊಳಗೆ  ಸದ್ದಿಲ್ಲದೆ ಸತ್ತು ಹೋಗುತ್ತವೆ.

 ಭಾರತೀಯ ಸಮಾಜ ಆಧುನಿಕ  ಪಾಶ್ಚಾತ್ಯ ಸಮಾಜದಂತೆ ಏಕರೂಪದ್ದಾಗಿಲ್ಲ . ಇಲ್ಲಿನ ಸಂಸ್ಕೃತಿ ಬಹುರೂಪಿಯಾದದ್ದು. ಈ ಸಂಸ್ಕೃತಿಯಲ್ಲಿನ ಸ್ತ್ರೀಯರ ಇಂದಿನ ಪರಿಸ್ಥಿತಿ ಹಲವು ಬಗೆಯ ಗೊಂದಲಕರ, ಅಸಂಗತ ಹಾಗೂ ಪರಸ್ಪರ ವಿರುದ್ಧವೆನ್ನಬಹುದಾದ ಅಂಶಗಳಿಂದ ಕೂಡಿದೆ. ವರ್ತಮಾನದ ಮಹಿಳೆ ಅಂದಾಕ್ಷಣ ಒಟ್ಟು ಮಹಿಳೆಯರು ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತಾರೆ. ನಮ್ಮ ಪರಂಪರೆಯ ಹಿಡಿತದಿಂದ ಹೊರಬರಲಾರದೆ ಅಂದರೆ ಮಗಳಾಗಿ, ಪತ್ನಿ, ತಾಯಿ, ಅಕ್ಕ-ತಂಗಿ ಇತ್ಯಾದಿಯಾಗಿ ಕರ್ತವ್ಯ ನಿರ್ವಹಣೆಯಲ್ಲಿ  ವ್ಯಸ್ತರಾಗಿದ್ದುಕೊಂಡು…ಒಂದು ಪಕ್ಷ ಇದನ್ನು ನಿರ್ಲಕ್ಷಿಸಿದಲ್ಲಿ ಸಮಾಜ ಏನಂದುಕೊಂಡೀತು? ಎನ್ನುವಂತಹ ಸಾಮಾಜಿಕ ಭಯ ಅವರಿಗೆ ಒಂದೆಡೆಯಾದರೆ, ಆಧುನಿಕ ಮಹಿಳೆಯಾಗಿ ಶಿಕ್ಷತಳಾಗಿ ಹೊಸ ವಿಚಾರಗಳಿಗೆ ತನ್ನನ್ನು ತೆರೆದುಕೊಂಡು ಅಂದರೆ ಉದ್ಯೋಗ, ಆರ್ಥಿಕ ಸ್ವಾವಲಂಬನೆ, ಅಪ್ಡೇಟ್ ಆಗಿರುವುದು… ಹೀಗೆ ಸ್ವತಂತ್ರ ಮನೋವೃತ್ತಿಯನ್ನು ಬೆಳೆಸಿಕೊಳ್ಳಲು ಅರ್ಹಳಾಗಿದ್ದರೂ ಕೂಡ ಹಳೆಯ ಮೌಲ್ಯಗಳನ್ನು ತಿರಸ್ಕರಿಸಲಾಗದೆ ತೊಳದಾಡುವಂತಹ ಪರಿಸ್ಥಿತಿ ಇನ್ನೊಂದೆಡೆ. 

ಗ್ರಾಮೀಣ ಮಹಿಳೆಯರಲ್ಲೂ ನಗರದ ಮಹಿಳೆಯರಲ್ಲೂ ಇದಕ್ಕೆ ಹೊರತಾದವರಿದ್ದಾರೆ. ಪರಂಪರೆಯ ಸೆರಗು ಹೊದ್ದು ಬದುಕುವರು, ಆಧುನಿಕತೆಯನ್ನೇ ಜೀವಳವಾಗಿಸಿಕೊಂಡವರು ಮತ್ತು ಈ ಎರಡರ ಮಧ್ಯೆ ನಲುಗುತ್ತಿರುವವರು. ಈ ರೀತಿಯಾಗಿ ವರ್ತಮಾನದ ಮಹಿಳೆಯನ್ನು ನಾವು ಕಂಡರಿಯಬಹುದಾದರೂ ತಲ್ಲಣ ಎನ್ನುವುದಂತೂ ಈ ಎಲ್ಲಾ ವರ್ಗದ ಮಹಿಳೆಯರನ್ನು ಕಾಡುವಂತಹದ್ದಾಗಿದೆ. ಇದೊಂದು ವ್ಯಾಪಕವಾಗಿ ಹಬ್ಬಿರುವಂತಹ ಸಾಮಾಜಿಕ ಪಿಡುಗು. 

ಕಾಲ ಸರಿದಂತೆ ವರ್ತನೆಗಳು ಬದಲಾಗುತ್ತಾ ಬರುತ್ತವೆ. ರೀತಿ, ನೀತಿ, ಜೀವನಶೈಲಿ ಈಗ ಹಿಂದಿನಂತಿಲ್ಲ. ಹಿಂದೆ ಹಿರಿಯರು ಹೇಳಿದ ಹಾಗೆ ಮಕ್ಕಳು ಕೇಳ್ತಾ ಇದ್ರು, ಈಗ ಮಕ್ಕಳು ಹೇಳಿದ ಹಾಗೆ ಹಿರಿಯರು ಕೇಳಬೇಕು. ಹಿಂದೆ ಮದುವೆಯ ಆಮಂತ್ರಣ ಮನೆಗೆ ಹೋಗಿ ಕೊಡ್ತಾ ಇದ್ರು. ಈಗ ವಾಟ್ಸಪ್ ನಲ್ಲಿ ಹಾಕಿದ್ರೆ ಆಯಿತು. ಇಂತಹ ಬದಲಾವಣೆಗಳು ಅಪರಾಧ ಜಗತ್ತಿನಲ್ಲೂ ಆಗ್ತಾ ಇದೆ.

 ನಮ್ಮ ವರ್ತಮಾನ ಹೇಗಿದೆ?  ವರ್ತಮಾನ ಪತ್ರಿಕೆಗಳು ಏನನ್ನು ಮೈತುಂಬಿಸಿಕೊಂಡು ಬರುತ್ತವೆ.

 + ಬಾಲಕಿಯ ಅತ್ಯಾಚಾರ – ಆರೋಪಿಯ ಬಂಧನ

+   Ragging   ನಿಂದ ಮನನೊಂದು ಇಂಜಿನಿಯರಿಂಗ್ ವಿದ್ಯಾರ್ಥಿ  ಆತ್ಮಹತ್ಯೆ

 + ಕೆರೆಯಲ್ಲಿ ತಾಯಿ ಮಗಳ ಶವ ಪತ್ತೆ. 

+  ಪ್ರೇಯಸಿಗೆ ಆಸಿಡ್ ಎಸೆತ -ಆರೋಪಿ ಪರಾರಿ.

+  ಪ್ರೇಯಸಿಗೆ ಅಮಲು ಪದಾರ್ಥನೀಡಿ ಅಶ್ಲೀಲ ವೀಡಿಯೋ ಕ್ಲಿಕ್ಕಿಸಿದ ಆರೋಪಿ.

 + ಸಾಮೂಹಿಕ ಅತ್ಯಾಚಾರ -ಬಾಲಕಿಯ ಶವ ಪತ್ತೆ.

ಇದು ನಮ್ಮ ವರ್ತಮಾನ. ಇಂತಹ ಕೃತ್ಯಗಳಿಗೆ ಮಹಿಳೆ ದಿನ ಬಲಿಯಾಗುತ್ತಾ ಇದ್ದಾಳೆ. ಹಿಂದೆ ಇದ್ದಂತಹ ದಬ್ಬಾಳಿಕೆ ಅಪರಾಧಗಳ ರೂಪ ಇಂದು ತಂತ್ರಜ್ಞಾನದ ಮುನ್ನಡೆಯಿಂದಾಗಿ ಇನ್ನಷ್ಟು ಮಾರ್ಡನೈಸ್ ಆಗ್ತಾ ಇದೆ. ಇಲ್ಲಿ ಸರಕಾರದ ಪಾತ್ರ ಏನು ಎನ್ನುವ ಪ್ರಶ್ನೆ ಬರುತ್ತೆ. ನಮ್ಮ ಸಂವಿಧಾನದ 14ನೇ ವಿಧಿ ಏನು ಹೇಳುತ್ತದೆ, ಭಾರತ ರಾಜ್ಯ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನುಗಳಿಂದ ಸಮಾನ ಸಂರಕ್ಷಣೆ ಯನ್ನು ರಾಜ್ಯವು ನಿರಾಕರಿಸತಕ್ಕದ್ದಲ್ಲ ಎಂದು. ಮಹಿಳೆಯರು ಕಾನೂನಿನ ನೆರವು ಪಡೆಯಬೇಕು. ಮಹಿಳೆಯರ ವೃತ್ತಿ ವೇತನ, ವಿವಾಹ ವಿಚ್ಛೇದನ, ಜೀವನಾಂಶ, ವ್ಯಭಿಚಾರ, ಸಾಹಚರ್ಯ, ಬಾಲಾಪರಾಧಗಳು, ಮಹಿಳೆಯರ ವಿರುದ್ಧದ ಅಪರಾಧಗಳು, ಮಹಿಳಾ ನೌಕರರು, ಲೈಂಗಿಕ ಕಿರುಕುಳ, ಮಾನ ನಷ್ಟ… ಹೀಗೆ ಎಲ್ಲಾ ಸಮಸ್ಯೆಗಳಿಗೆ ಕಾನೂನು ನೆರವನ್ನು ನೀಡುತ್ತದೆ. ಅಪರಾಧಿಗೆ ಶಿಕ್ಷೆ ವಿಧಿಸಲಾಗುತ್ತದೆ.

ಮಕ್ಕಳ ಮೇಲಾಗುವ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು 2012ರಲ್ಲಿ ವಿಶೇಷ ಕಾನೂನನ್ನು ಹೊರಡಿಸಲಾಗಿದೆ. ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಸ್ 2002 ಎಂದು ಇದನ್ನು ಕರೆಯಲಾಗುತ್ತದೆ. ಆದರೆ ಎಷ್ಟು ಮಂದಿ ಮಹಿಳೆಯರು ದೂರು ಸಲ್ಲಿಸಲು ಮುಂದೆ ಬರುತ್ತಾರೆ?

 ಇಂದು ವಿವಾಹ ವಿಚ್ಛೇದನೆ ಎನ್ನುವುದಂತೂ ಪ್ರತಿ ಮನೆಯಲ್ಲೂ ಕೇಳಿ ಬರುತ್ತಿರುವ ಸಾಮಾನ್ಯ ಸಂಗತಿಯಾಗಿದೆ. ಅತ್ತ ಮದುವೆ ಮುಗಿದಿಲ್ಲ….ಇತ್ತ ಡೈವೋರ್ಸ್ ಗೆ ಮುಂದಾಗುವ ಜನ. ಆರೋಪಗಳ ಪಟ್ಟಿ, ಮಾನಸಿಕ ತೊಳಲಾಟ, ಕೇಸ್ ಗೆಲ್ಲಬೇಕು ಎಂದು ಅಹೋರಾತ್ರಿ ಶ್ರಮಿಸುವುದು, ಇಲ್ಲಿ ಮೂಲ ಕಾರಣ ‘ ಅಹಂಕಾರ ‘ಎನ್ನುವಂತಹದ್ದನ್ನು ನಾವು ಮರೆತಿರುತ್ತೇವೆ. ಇಲ್ಲಿಯೂ ಪ್ರಧಾನವಾಗಿ ಮಹಿಳೆಯನ್ನೇ ಟಾರ್ಗೆಟ್ ಮಾಡಲಾಗುತ್ತದೆ. ಅವರ ಚಾರಿತ್ರ್ಯವನ್ನು ಹೀಯಾಳಿಸುವುದು, ಬೇರೆಯವರೊಂದಿಗೆ ಸಂಬಂಧವನ್ನು ಕಲ್ಪಿಸುವಂಥದ್ದು ಸಾಮಾನ್ಯವಾಗಿ ಬಿಟ್ಟಿದೆ.

 ವರ್ತಮಾನದ ಮಹಿಳೆಯರನ್ನು ಕಾಡುವ ಪೆಡಂಭೂತಗಳೆಂದರೆ ಕೊಲೆ,  ಬಲಾತ್ಕಾರದಂತಹ ಅಮಾನುಷ ಕೃತ್ಯಗಳು. ಆಕೆಯ ಬದುಕ ಬಳ್ಳಿಯನ್ನು ಮುರುಟಿ ಹಾಕುತ್ತವೆ. ಪ್ರತಿ 20 ನಿಮಿಷಕ್ಕೊಮ್ಮೆ ಮಹಿಳೆಯ ಮೇಲೆ ಬಲಾತ್ಕಾರ ಮಾಡಲಾಗುತ್ತಿದೆ. ಪ್ರತಿ 10 ಕೇಸುಗಳಲ್ಲಿ ಆರು ಕೇಸುಗಳು ಬಾಲಕಿಯರ ಮೇಲಿನ ಬಲಾತ್ಕಾರವಾಗಿರುತ್ತದೆ.

Criminal Law Amendment Act 2013 ರಲ್ಲಿ existing rape Laws ಏನು ಇತ್ತೋ ಅದರಲ್ಲಿ significant changes ನ್ನು ಈ Act ತಂದುಕೊಟ್ಟಿತು. Repeated offender ಗೆ death penalty. ಶಕ್ತಿ ಮಿಲ್ಲ್ ರೇಪ್ ಕೇಸ್ ಇಡೀ ದೇಶವನ್ನೇ ನಲುಗಿಸಿದಂತಹ ಪ್ರಕರಣ. ಈ ಕೇಸಲ್ಲಿ ಆರೋಪಿಗೆ  death penalty ಯನ್ನು ನೀಡಿದ್ದು ಅದು ಐತಿಹಾಸಿಕ ತೀರ್ಪಾಗಿತ್ತು.

ತಂದೆ ತಾಯಿಗಳಿಲ್ಲದ ಹೆಣ್ಣು ಮಕ್ಕಳು ಎಷ್ಟೋ ಸಾರಿ ಸಂಬಂಧಿಕರ ಮನೆಯಲ್ಲಿ ಬೆಳೆಯಬೇಕಾದ ಸಂದರ್ಭಗಳು ಬರುತ್ತವೆ. ಇಲ್ಲಿ ಇಂತಹ ಸಂಬಂಧಿಕರೇ ಆ ಮಕ್ಕಳೊಂದಿಗೆ ಮಕ್ಕಳ ಭವಿಷ್ಯವನ್ನು ಹಾಳುಗೆಡಹುತ್ತಾರೆ. ಇನ್ನು ಹೆಣ್ಣು ಮಕ್ಕಳನ್ನು ಬಿಟ್ಟು ತಾಯಿ ಊರಿಗೆ ಹೋದ ಸಂದರ್ಭದಲ್ಲಿ ತಂದೆ, ಅಣ್ಣ, ತಮ್ಮಂದಿರಿಂದಲೇ ಬಲತ್ಕಾರಕ್ಕೊಳಗಾಗುವುದು, ಅನಾಥಾಶ್ರಮದ ಹೆಣ್ಣು ಮಕ್ಕಳನ್ನು ಅಲ್ಲಿಯ ಅಧಿಕಾರಿಗಳೇ ಹಣದಾಸೆಯಿಂದ ಇನ್ನಿತರರಿಗೆ ಒದಗಿಸುವಂತಹ ವ್ಯವಹಾರ ಅವ್ಯಾಹತವಾಗಿ ನಡೀತಾ ಬಂದಿದೆ ಇಂತಹ ಮತ್ತು ಕಲ್ಪನಾತೀತವಾದ ಇಂತಹ ಅನೇಕ ಮೊಕದ್ದಮೆಗಳು ನಮ್ಮ ಕೋರ್ಟಿನ ಎದುರು ಬರುತ್ತವೆ. 

ಈ ರೀತಿಯ ಸಮಸ್ಯೆಗಳಿಂದ ಹಾದು ಹೋಗುವ ಮಹಿಳೆಯ ಮನಸ್ಸು ಇಂದು ಯಾವ ಹಂತಕ್ಕೆ ಬಂದು ತಲುಪಿದೆಯೆಂದರೆ ತೊಟ್ಟಿಲಲ್ಲಿ ಮಲಗಿರುವ ಹೆಣ್ಣು-ಕೂಸನ್ನು ಪುರುಷನೊಬ್ಬನ ಬಳಿಯಲ್ಲಿ ಬಿಟ್ಟು ಹೋಗಲು ಆಕೆ ಒಪ್ಪುವಂತಿಲ್ಲ .ಹೀಗೆ ಭಯದ ಉರಿಯಲ್ಲೇ ಬೇಯುತ್ತಿದ್ದಾಳೆ ವರ್ತಮಾನದ ಮಹಿಳೆ. ಆದರೆ ಕಾನೂನಿನ ವಿಷಯದಲ್ಲಿ ನಮ್ಮ ಮಹಿಳೆಯರು ಎಷ್ಟು ಜಾಗೃತರಾಗಿದ್ದಾರೆ? ಕಾನೂನಿನ ಬೇಸಿಕ್ ನಾಲೆಜ್ ಆದರೂ ನಮ್ಮ ಎಷ್ಟು ಮಹಿಳೆಯರಿಗಿದೆ ಎನ್ನುವುದು ಚಿಂತನಾರ್ಹವಾದುದು. ಪೊಲೀಸ್ ಸ್ಟೇಷನ್ ಅಂದಾಕ್ಷಣ ಭಯಭೀತರಾಗಿ ಮನೆಯ ವಿಷಯ ಮನೆಯೊಳಗೆ ಉರಿದು ಬೂದಿಯಾಗಲಿ ಎನ್ನುತ್ತಾ ಇಲ್ಲದ ಪ್ರತಿಷ್ಠೆ ,ಮಾನ -ಮರ್ಯಾದೆ ಎಂದೆಲ್ಲ ಮತ್ತೆ ಪರಂಪರೆಯ ತೆಕ್ಕೆಗೆ ಜೋತು ಬಿದ್ದು ನಮ್ಮನ್ನು ನಾವು ಬಲಿಕೊಡುತ್ತಾ ಬರುವುದು ಸಮಂಜಸವೇ ಎನ್ನುವುದು ಕೂಡ ಚಿಂತನಾರ್ಹ ವಿಷಯವೇ ಆಗಿದೆ. ಮನೆಯೊಳಗಾಗಲಿ, ಹೊರಗಾಗಲಿ ಅಪರಾಧಗಳಿಗೆ ಅನ್ಯಾಯಗಳಿಗೆ ಬಲಿಪಶುವಾದಾಗ ಸ್ಥಳೀಯ ಪೊಲೀಸ್ ಸ್ಟೇಷನ್ ನ್ನು ಸಂಪರ್ಕಿಸಬೇಕು. ಸ್ಥಳೀಯ ಮ್ಯಾಜಿಸ್ಟ್ರೇಟರ್ ಎದುರಿಗೆ ಅರ್ಜಿ ಸಲ್ಲಿಸಿ ಕಾನೂನು ನೆರವು ಪಡೆಯಲು ಮುಂದಾಗಬೇಕು. ನಗರಗಳಲ್ಲಾದರೆ ಮಹಿಳಾ ಆಯೋಗಗಳಿವೆ. ಅವುಗಳು ಕೂಡ ಈ ನಿಟ್ಟಿನಲ್ಲಿ ಬಹಳಷ್ಟು ದುಡಿಯುತ್ತಾ ಬಂದಿವೆ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ.

ಮಹಿಳೆಯರಿಗೆ ಕಾನೂನು ವಿಷಯದಲ್ಲಿ ಮಾಹಿತಿ ಒದಗಿಸಲು ಸಂಘ-ಸಂಸ್ಥೆಗಳ ಮೂಲಕವೂ ಸಾಧ್ಯವಿದೆ. ಅಲ್ಲಿರುವ  ಮಹಿಳಾ ವಿಭಾಗಗಳು ಕಾನೂನು ತಜ್ಞರನ್ನು ಕರೆಸಿ, ಆಗಾಗ್ಗೆ ಮಹಿಳೆಯರ ಬಗೆಗಿನ ಕಾನೂನುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುವಂತಾಗಬೇಕು. ಅವರಲ್ಲಿ ಧೈರ್ಯ ತುಂಬುವಂತಹ, ಅಪರಾಧಗಳು ನಡೆದಾಗ ಏನು ಮಾಡಬೇಕು, ಯಾವ ರೀತಿಯಲ್ಲಿ ಅವುಗಳನ್ನು ಎದುರಿಸಬೇಕು ಎನ್ನುವ ಬಗ್ಗೆಯೂ ಚರ್ಚಿಸಿದಲ್ಲಿ ಮಹಿಳೆಯ ಮನೋಬಲ ವೃದ್ಧಿಯಾಗಿ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಿದೆ. ತಾನು ಅಬಲೆ ಎಂದು ಕೊರಗುತ್ತಾ ಕೂರುವುದಕ್ಕಿಂತ ತಾನು ಸಬಲೆಯೆಂದು ಆಕೆ ತೋರಿಸಿ ಕೊಡಬೇಕಾಗಿದೆ.


ಡಾ.ಜಿ.ಪಿ.ಕುಸುಮಾಮುಂಬಯಿ.

Leave a Reply

Back To Top