ಶೃತಿ ಮಧುಸೂಧನ್.ಬೆಂಗಳೂರು ಅವರ ಕವಿತೆ

ಕಾವ್ಯ ಸಂಗಾತಿ

ಶೃತಿ ಮಧುಸೂಧನ್.ಬೆಂಗಳೂರು

ಕವಿತೆ

ಬಿಂದುವಲ್ಲದ ಬಿಂದುವಿನಿಂದ, ಬ್ರಹ್ಮಾಂಡದಿಂದ ಹುಟ್ಟಿ ಘಟಿಸಿದ್ದೆಲ್ಲವೂ ಈ ಕಡೆ ಕ್ಷಣದವರೆಗೆ.
ಸೋಜಿಗದ ಬಲೆ ಬೆಸುಗೆಯು ಎಲ್ಲವೂ.
ಪೂರ್ಣತೆಗಳೇ ಹಾಗೆ.
ತುಂಬ ಮೌನದ ಹಿಂದೆ ಅಡಗಿದ ಸವಿ ಸದ್ದಿನಂತೆ.
ಎಂದಿಗೂ ಸುಂದರ .

ಅರ್ಧಗಳು ಅಪೂರ್ಣವೇನಲ್ಲ. ಪೂರ್ಣಗೊಳ್ಳುವುದಕ್ಕಾಗಿ ಕಾದಿರುವ ಚಂದಗಳು.
ಕೆಲವೊಂದು ಭೇಟಿಗಳೇ ಹಾಗೆ.
ಪೂರ್ಣತೆಯ ಸಾಕ್ಷಿಗಳು.
ಜೀವಮಾನದ ಕಾತುರತೆಗಳ ಕಡೆ ಬಿಂದು.

ಇಶಾರೆಗಾಗಿ ಕಾದಿದ್ದೇನೆ.
ತೋಳುಗಳನ್ನು ಅಗಲಿಸಿ ತಯಾರಾಗಿಯಾಗಿದೆ.
ಚಿರ ಹುಣ್ಣಿಮೆ, ತಂಪು, ಬೆಳ್ಳಿ ಬೆಳಕು, ಬಣ್ಣ ಕಳೆದುಕೊಂಡ ಸೌಂದರ್ಯಗಳು.
ನಾವಿಬ್ಬರು ಸದಾ ಹಂಚಿಕೊಳ್ಳುವ ಅದ್ಭುತಗಳು.

ಚಿರಂತಕ್ಕೆ ದಿನ ಕ್ಷಣಗಳ ಲೆಕ್ಕಗಳು ಬೇಕೆ?
ನೆನಪುಗಳಾಗಿ ಕಟ್ಟಿಡಲು,
ಅವು ಕೊನೆಯಾದವುಗಳಲ್ಲ.
ಹಂಚಿಕೊಂಡ ಸೊಬಗುಗಳು ಸದಾ ಜೀವಂತ.
ಮುಗಿಲೆತ್ತರಕ್ಕೆ ಹಾರುವ ಉನ್ಮಾದಗಳು.
ಮಂದವಾಗಿ ಹರಿದು ಎದೆ ಹೊಕ್ಕಿದ್ದು ಇದೆ.
ಗದ್ದಲಗಳ ನಡುವೆಯೂ,
ಪಿಸು ಮಾತುಗಳಾಗಿ ನಿನ್ನನ್ನು ಹಿಂಬಾಲಿಸುತ್ತಿವೆ.

ಪಾನಮತ್ತ ಅಕ್ಷರಗಳ ಏಳು ಬೀಳುಗಳ
ಸುರಪಾನ ಸುರಕಾವ್ಯ ನೀನು.
ಓದುವ ಮುನ್ನವೇ ಅಮಲೇರಿಸಿ
ಹಾಳೆಯ ಮೇಲೆ ಬರೆದದ್ದಾಗಿದೆ.
ಹೊಸ ಪರ್ವ, ತಂಪು ತುಂಬಿದ ಎದೆಗೆ
ಸಿಹಿ ಕಿಚ್ಚನ್ನು ಹಚ್ಚಿದವನು ನೀನು.

ಕೆಂಪಾಗುವುದು ನಾಚಿಕೆಯ ಸ್ವತ್ತು.
ಆ ನಾಚಿಕೆಯು ಕೂಡ ನನ್ನದು.
ಸಾಲು ಸಾಲಿಗೂ ಹುಚ್ಚೆದ್ದು ಕುಣಿಯುವ,
ಎಳೆಕರುವಿನಂತವಳು.
ಹೋಲಿಕೆ ಮತ್ತು ಅಳತೆಗಳ ಗೊಡವೆ ಇಲ್ಲ.
ಕುಣಿತವಷ್ಟೇ ಗೊತ್ತು ನಿನ್ನ ತಾಳಕ್ಕೆ.

ನೀ ಕೇಳಿದ ಮೇಲೆ ಹೇಳುವುದಾದರೂ ಏನಿದೆ?
ಮಾತು ಮೌನ ಲಜ್ಜೆಗಳ ನಡುವೆ,
ಸ್ವಲ್ಪ ಜಾಗವನ್ನು ಎತ್ತಿಟ್ಟಿರುತ್ತೇನೆ.
ಹಂಚಿಕೊಳ್ಳೋಣ ಬಾ.
ಭಾವನೆಗಳು ಜೀವಂತಿಕೆಯ ಸಂಕೇತ.
ಸದಾ ಚಿಮ್ಮುವ ಜೀವಂತಿಕೆಯೊಂದಿಗೆ ಕಾದಿರುತ್ತೇನೆ.
ನಿನ್ನ ನಿರೀಕ್ಷೆಯಲ್ಲಿ ನಾನಿರುತ್ತೇನೆ.


ಶೃತಿ ಮಧುಸೂಧನ್.ಬೆಂಗಳೂರು

5 thoughts on “ಶೃತಿ ಮಧುಸೂಧನ್.ಬೆಂಗಳೂರು ಅವರ ಕವಿತೆ

  1. ನಲ್ಮೆಯ ಧನ್ಯವಾದಗಳು. ಸಾರ್. ನಂಗೆ ಒಂದು ಅವಕಾಶ ಕೊಟ್ಟು ನನ್ನ ಕವಿತೆಯನ್ನು ಪ್ರಕಟಿಸಿದ್ದಕ್ಕೆ. ಪ್ರೀತಿಯ ವಂದನೆಗಳು.

  2. ಸುಂದರ ಪದಗಳ ಸರಮಾಲೆ,ನಿನ್ನ ಕರದೊಳು ಕವನದ ರೂಪ ಪಡೆದು ನಲಿಯುತಲಿದೆ

  3. ಅಕ್ಷರಗಳಿಗೆ ಭಾವನೂಲನು ಕೂಡಿಸಿ ಪದಕುಸುಮಗಳ ಮಾಲೆಯ ಭಾವನೆಗಳ ಜೊತೆಗೂಡಿಸಿ ಕಟ್ಟಿದಂತಿದೆ
    ಪ್ರತಿ ಸಾಲುಗಳೂ ಜೇನ್ಬೆರೆತ ಹಾಲಂತೆ ಬಹು ಸ್ವಾದ ಭರಿತವಾಗಿವೆ ಭಾವಗಳಿಗೆ ಶಾಯಿ ರೂಪವ ಕೊಟ್ಟು ಮೌನ ಮಾತುಗಳಿಗೆ ಜೀವವಿತ್ತಂತಿದೆ
    ಕವಿಯ ಮನವೇ ಹಾಗಲ್ಲವೇ ಕಿತ್ತಲೆ ಎಸಳಿನ ತುಟಿದಳಗಳ ಬಿರಿದು ಬಾರದ ಎಷ್ಟೋ ನುಡಿಗಳಿಗೆ ಅಕ್ಕರದಲೇ ಮಾತಾಡುವ ನೈಪುಣ್ಯತೆ ಕವಿಯ ಹೃದಯಕ್ಕಿದೆ

    ಬಿಂದು ಬಿಂದುವಿನಿಂದ ಮೊದಲ್ಗೊಂಡು ಜೀವನದ ಸಂತಸಮಯ ಗಳಿಗೆಗಳ ಪದಕುಸುಮಗಳಲಿ ಅಡಗಿಸಿ ಕಾವ್ಯ ರೂಪವ ಕೊಟ್ಟು. ಸ್ಥಬ್ದವಾಗಿರುವ ಮನದ ಮಾತುಗಳಿಗೆ ಕವನ ರೂಪದ ಚಲನೆ ಇಡುವ ಕಲಾ ನೈಪುಣ್ಯತೆ ನಿಮಗೆ ಕರತಲಾಮಲಕ ವಾದಂತಿದೆ ನಿಮ್ಮ ಪದಪುಂಜಗಳು ಬಹಳಾ ಅದ್ಭುತ ಕಾಳಿದಾಸನ ಕಾವ್ಯಮಾಲೆಯಂತೆ ರವಿವರ್ಮನ ಕುಂಚದಿ ಅರಳಿದ ಚಿತ್ರಗಳಂತೆ. ಓದುಗನ ಮನಕೆ ತಂಗಾಳಿಯ ತಂಪಾದ ಅನುಭವದಂತೆ ರುದ್ರಾಗ್ನಿ ನಿಮ್ಮ ಪದಕಟ್ಟುವ ಕುಶಲತೆಗೆ ನಿಮಗೆ ನೀವೇ ಸಾಟಿ
    ನಿಮ್ಮ ಪದಪುಂಜಗಳ ಪದಪ್ರಯೋಗಕ್ಕೆ ನಾನಾದೆ ಅಭಿಮಾನಿ ಕಾವ್ಯದೊನಲಿಗೆ ನಮಿಸುವೆನು ಎನ್ತನುವನು ಬಾಗಿ. ಶೈವಾನೀಕ .

    ಚೆಂದದ ಭಾವಲಹರಿ ಅಂದದ ಅದ್ಭುತ ಪದಪ್ರಯೋಗದ ರಚನೆಗೆ ಅನಂತಾನಂತ ಧನ್ಯವಾದಗಳು ಹೀಗೇ ಹರಿದು ಬರಲಿ ಕಾವ್ಯದ ರಸಧಾರೆ ತಣಿಸಲಿ ಕಾವ್ಯಾಭಿನಿಗಳ ಎದೆಗೂರಿ ಮೊಳಗಲೀ ಪದಕಾವ್ಯಗಳ ರಸಭೇರಿ ಅಭಿನಂದನೆಗಳು

Leave a Reply

Back To Top