ಭಾರತಿ ಅಶೋಕ್ ಕವಿತೆ-ಹಣತೆ ಬೆಳಗಲು ಒಡಲ ಬೆವರೆ ಸಾಕು….

ಕಾವ್ಯ ಸಂಗಾತಿ

ಭಾರತಿ ಅಶೋಕ್

ಹಣತೆ ಬೆಳಗಲು……ಒಡಲ ಬೆವರೆ ಸಾಕು...

ಹಣತೆ ಬೆಳಗಲು
ಯಾವ ಅಂಗಡಿಯ ತೈಲ ಬೇಕಿಲ್ಲ ಗೆಳತಿ
ಒಡಲ ಬೆವರೇ ಸಾಕು.

ನನ್ನ ಹಣತೆ ಬೆಳಗಲು
ಯಾವ ಅಂಗಡಿಯ ತೈಲ ಬೇಕಿಲ್ಲ ಗೆಳತಿ
ಎಲ್ಲರೆದೆಯಲಿ ಸಮತೆಯ ಬೀಜ
ಮೊಳೆತರೆ ಸಾಕು
ಸ್ವಾರ್ಥ ಮನದ ಮಲೀನತೆ ತೊಳೆದರೆ ಸಾಕು
ಸೋದರತೆಯ ಭಾವ ಬೆಳೆದರೆ ಸಾಕು
ಸೌಹಾರ್ದದ ಹಣತೆ ಬೆಳಗುವುದು

ನನ್ನ ಹಣತೆ ಬೆಳಗಲು
ಯಾವ ಅಂಗಡಿಯ ತೈಲ ಬೇಕಿಲ್ಲ ಗೆಳತಿ
ಪಂಕ್ತಿಯಲ್ಲೊಂದು ಎಲೆ ನನ್ನದಾಗಿದ್ದತೆ ಸಾಕು
ನನ್ನಂತವಳಿಗೆ ಜಗ ಸೋದರನಾದರೆ ಸಾಕು
ಹರಯಕೆ ಕಿರಿಯ ಊರುಗೋಲಾದರೆ ಸಾಕು
ಹೆತ್ತಪ್ಪ ಅಪ್ಪನಾಗಿದ್ದರೆ ಸಾಕು
ಗುರು ಅರಿವಾಗಿದ್ದರೆ ಸಾಕು
ಮಾತೃತ್ವದ ಹಣತೆ ಬೆಳಗುತ್ತದೆ.

ನನ್ನ ಹಣತೆ ಬೆಳಗಲು
ಯಾವ ಅಂಗಡಿಯ ತೈಲ ಬೇಕಿಲ್ಲ ಗೆಳತಿ
ರೈತನುದರ ಉರಿಯದಿದ್ದರೆ ಸಾಕು
ಅವ್ವನ ಒಲೆ ಉರಿದರೆ ಸಾಕು
ಸಂತೃಪ್ತಿಯ ಜ್ಯೋತಿ ಬೆಳಗುತ್ತದೆ

ನನ್ನ ಹಣತೆ ಬೆಳಗಲು
ಯಾವ ಅಂಗಡಿಯ ತೈಲ ಬೇಕಿಲ್ಲ ಗೆಳತಿ
ವೈರಿ ಎದೆಯಲಿ
ಗುಲಾಬಿ ಅರಳಿದರೆ ಸಾಕು
ಬಂದೂಕಿನ ನಳಿಕೆಯಲಿ
ಪಾರಿವಾಳವೊಂದು ಗೂಡು ಕಟ್ಟಿದರೆ ಸಾಕು
ಗಡಿಯ ಇಕ್ಕೆಲದ ಯೋದರ ಹಸ್ತಲಾಗವದಿ
ಶಾಂತಿ ಹಣತೆ ಬೆಳಗುತ್ತದೆ

ನನ್ನ ಹಣತೆ ಬೆಳಗಲು
ಯಾವ ಅಂಗಡಿಯ ತೈಲ ಬೇಕಿಲ್ಲ ಗೆಳತಿ
ಶಾಂತಿ, ಸಹನೆ,ಸಹಬಾಳ್ವೆ
ನನ್ನ ತವರಾದರೆ ಸಾಕು
ಒಡಲ ಹಣತೆ ಬೆಳಗುತ್ತದೆ


ಭಾರತಿ ಅಶೋಕ್

Leave a Reply

Back To Top