ಬದುಕು ಬದಲಿಸಿದ ಆಂಡ್ರಾಯ್ಡ್ ಮೊಬೈಲ್-ಡಾ. ಮೀನಾಕ್ಷಿ ಪಾಟೀಲ್

ವಿಶೇಷ ಲೇಖನ

ಡಾ. ಮೀನಾಕ್ಷಿ ಪಾಟೀಲ್

ಬದುಕು ಬದಲಿಸಿದ ಆಂಡ್ರಾಯ್ಡ್ ಮೊಬೈಲ್

ಸುಮಾರು ವರುಷಗಳ ಹಿಂದಿನ ಮಾತು ಉದಯ ವಾಹಿನಿಯ” ಚಿಣ್ಣರ ಲೋಕ” ಕಾರ್ಯಕ್ರಮದಲ್ಲಿ ಮಗಳ ಭರತನಾಟ್ಯ ಕಾರ್ಯಕ್ರಮವಿತ್ತು. ಮೊದಲ ಬಾರಿಗೆ ಆಯ್ಕೆಯಾದ ಕುರಿತು ಮಾಧ್ಯಮದವರು ಫೋನ್ ಮೂಲಕ ತಿಳಿಸಿದಾಗ ಸಂತೋಷಕ್ಕೆ ಮುಗಿಲು ಮೂರೇ ಗೇಣು .ಆಗ ಮನೆಯವರೆಲ್ಲ ಸಂಭ್ರಮಿಸಿದ್ದೆವು. ಆಗ ನಮ್ಮ ಯಜಮಾನರು ಕೀಪ್ಯಾಡ್ ಮೊಬೈಲ್ ಅನ್ನು ಬಳಸುತ್ತಿದ್ದರು. ನಾನು ಯಾವ ಮೊಬೈಲ್ ಅನ್ನು ಬಳಸುತ್ತಿರಲಿಲ್ಲ. ಸ್ನೇಹಿತರೆಲ್ಲರೂ ಮೊಬೈಲ್ ಕೊಳ್ಳುವಂತೆ ಒತಾಯಿಸುತ್ತಿದ್ದರು. ಆದರೂ ಮನಸ್ಸು ಮಾಡಿರಲಿಲ್ಲ. ಮಗಳ ಡ್ಯಾನ್ಸ್ ಪ್ರೋಗ್ರಾಮಿಗೆ ಉದಯವಾಹಿನಿಯ ಸ್ಟುಡಿಯೋಗೆ ಹೋದೆವು. ನಮ್ಮ ಸರದಿಯನ್ನು ಬಂದಿರಲಿಲ್ಲ. ಕಾಯುತ್ತಾ ಕುಳಿತಿದ್ದೆವು ಮೇಕಪ್ ರೂಮಿನಲ್ಲಿ . ಅಲ್ಲಿ ಮಕ್ಕಳನ್ನು ತಯಾರು ಮಾಡಿ ವೇದಿಕೆಗೆ ಕಳಿಸುವ ವ್ಯವಸ್ಥೆಯನ್ನು ಟಿವಿ ಮಾಧ್ಯಮದವರೇ ಮಾಡಿದ್ದರು. ಪಾಲಕರು ತಮ್ಮ ಮಕ್ಕಳ ಫೋಟೋ ಕ್ಲಿಕ್ಕಿಸುತ್ತಿದ್ದರು. ಅವರ ಕೈಯಲ್ಲಿ ದೊಡ್ಡದೊಂದು ಫೋನು ಅದಕ್ಕೆ ಆಂಡ್ರಾಯ್ಡ್ ಅಂತಾರೆ ಎಂಬುದು ನಂತರದಲ್ಲಿ ತಿಳಿಯಿತು.ಯಾವ ಕೀ ಪ್ಯಾಡ್ ಇಲ್ಲದೆ ಕೇವಲ ಸ್ಕ್ರೀನ್ ಟಚ್ ಮಾಡುವುದರ ಮೂಲಕ ಅದನ್ನು ಬಳಸಬಹುದು ಎಂಬುದನ್ನು ಅವರಿವರ ಬಾಯಿಂದ ಕೇಳಿದ್ದೆ. ನೃತ್ಯ ನಡೆಯುತ್ತಿದ್ದ ವೇಳೆ ಮಕ್ಕಳ ಹಾವಭಾವಗಳನ್ನು ಪಾಲಕರು ದೂರದಿಂದಲೇ ಆಂಡ್ರಾಯ್ಡ್ ಸೆಟ್ ನಲ್ಲಿ ಫೋಟೋ ತೆಗೆಯುತ್ತಿದ್ದರು. ನಮ್ಮ ಯಜಮಾನರಿಗೆ ಹೇಳಿದೆ”ನೋಡ್ರಿ ನಮ್ಮ ಹತ್ರಾನು ಅಂತದ್ದೆ ಫೋನ್ ಇದ್ರ ನಾವು ಮಗಳ ಫೋಟೋ ತೆಗಿತಿದ್ವಿ” ಅಂತ ಕೊಣಗಿದೆ. ನಂತರದಲ್ಲಿ ನನ್ನ ಹತ್ರ ಫೋನ್ ಇಲ್ಲ ಅಂತ ನಮ್ಮವರು ಆಂಡ್ರಾಯ್ಡ ಸೆಟ್ಟನ್ನು ಕೊಡಿಸಿದರು.

         ಫೋನೇನೋ ತೆಗೆದುಕೊಂಡೆ. ಬಳಸುವದು ಹೇಗೆ ಗೊತ್ತೇ ಇರಲಿಲ್ಲ. ಎಷ್ಟೋ ದಿನಗಳವರೆಗೂ ಕಾಲ್ -ರಿಸೀವ್ ಮಾತ್ರ ಗೊತ್ತಿತ್ತು. ಬರ ಬರುತ್ತಾ ಇತ್ತೀಚಿಗಂತೂ ನನ್ನ ವೃತ್ತಿ ಬದುಕಿಗೆ ಅತ್ಯಂತ ಸಹಾಯಕಾರಿಯಾದ ಮೊಬೈಲ್ ನನ್ನ ಸಾಹಿತ್ಯದ ಬೆಳವಣಿಗೆಗೂ ಕೂಡ ಪೂರಕವಾಯಿತು. ಅಲ್ಲದೆ ಕಂಪ್ಯೂಟರ್ ಬಳಸುವುದನ್ನು ಸಹ ಇದರಿಂದಲೇ ಕಲಿತೆ ಎನ್ನುವ ಹೆಮ್ಮೆ ನನಗಿದೆ. ಈ ಆಂಡ್ರಾಯ್ಡ್ ಮೊಬೈಲ್ ನಿಂದಾದ ಅನುಕೂಲಗಳು ಒಂದೇ ಎರಡೇ….

ಬಾಲ್ಯದಲ್ಲಿ ಕಲಿತ ವಿಷಯಗಳ ಪುನರ್ ಓದಿಗೆ ನೆರವಾಯಿತು. ಹೆಚ್ಚು ಹೆಚ್ಚು ಸಾಮಾನ್ಯ ಜ್ಞಾನ ತಿಳಿಯುವಂತಾಯ್ತು
  ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ತೆಗೆದುಕೊಳ್ಳಲು ಆಂಡ್ರಾಯ್ಡ್ ಬಳಕೆಯಾಯಿತು.
ಯೂಟ್ಯೂಬ್ ಕ್ಲಾಸ್ ಗಳನ್ನು ಮಾಡಿ ಪ್ರಚಾರ ಮತ್ತು ಪ್ರೋತ್ಸಾಹ ಸಿಕ್ಕಂತಾಯ್ತು
ಶೈಕ್ಷಣಿಕ ಸಾಹಿತ್ಯಕ ಧಾರ್ಮಿಕ ಇನ್ನೂ ಅನೇಕ ಗುಂಪುಗಳಲ್ಲಿ ಭಾಗವಹಿಸಿ ಸಾಹಿತ್ಯಿಕವಾಗಿ ಬೆಳವಣಿಗೆ ಹೊಂದುವಾಯಿತು.
ಸಾಹಿತ್ಯ ರಚನೆಗೆ ಬ್ಲಾಗುಗಳ ಮೂಲಕ ಪ್ರಕಟಣೆ ಪ್ರಚಾರ ಪ್ರೋತ್ಸಾಹ ಸಿಕ್ಕಂತಾಯಿತು.
ಯಾವುದೋ ಒಂದು ಪುಸ್ತಕ ಹುಡುಕುವ ತೊಂದರೆ ತಪ್ಪಿದೆ ಅದನ್ನು ಆಂಡ್ರಾಯ್ಡ್ ಮೊಬೈಲ್ ನಿಂದ ಪಡೆಯಬಹುದು. ಉದಾಹರಣೆಗೆ, ಕಣಜ ಆಪ್ ನಿಂದ ಸಾಹಿತ್ಯಕ ಅಂಗಳವೇ ತೆರೆದುಕೊಂಡಿದೆ.
ಸಣ್ಣ ಮಗುವಿನಿಂದ ಹಿಡಿದು ವಯೋ ವೃದ್ಧರವರೆಗೂ ಅವರವರಿಗೆ ಅನುಕೂಲವಾಗುವಂತೆ ಸಾವಿರಾರು ಆಪ್ ಗಳ ಲೋಕವೇ ಸೃಷ್ಟಿಯಾಗುತ್ತದೆ.
ಯಾರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದಕ್ಕೆ ಸಂಬಂಧಿಸಿದ ಆಪಗಳು ಲಭ್ಯವಿವೆ..ನಿರಂತರವಾಗಿ ಅವುಗಳ ಹುಡುಕಾಟ ಕೂಡ ನಡೆದಿದೆ.
ಮಾರ್ಕೆಟಿಂಗ್ ಕ್ಷೇತ್ರದಲ್ಲೂ ಕ್ರಾಂತಿಯನ್ನೇ ಉಂಟುಮಾಡಿದೆ.ಆನ್ ಲೈನ್ ಮಾರ್ಕೆಟಿಂಗನಲ್ಲಿ ಬಡವರ ಉಪ್ಪು ಮೆಣಸಿನಕಾಯಿ ಇಂದ ಹಿಡಿದು ಶ್ರೀಮಂತರ ವೈಭೋಗದ ವರೆಗೂ ಆನ್ ಲೈನ್ ಮಾರ್ಕೆಟ್ ನಲ್ಲಿ ಲಭ್ಯ. ಶೇರ್ ಮಾರ್ಕೆಟಿಂಗ್ ನಲ್ಲೂ ಕೂಡ ಯುವಕರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಯುವ ಪೀಳಿಗೆಯವರಿಗಂತೂ ಆಂಡ್ರಾಯ್ಡನಿಂದ ನಿತ್ಯ ಸಂಭ್ರಮ. ಯಾವುದನ್ನು ಖರೀದಿಸಲಾಗುವುದಿಲ್ಲವೋ ಅದನ್ನು ನೋಡಿ ಸಂಭ್ರಮಿಸುತ್ತಾರೆ. ಇನ್ನು ಮನರಂಜನ ವಿಷಯದಲ್ಲಂತು ಕೇಳುವುದೇ ಬೇಡ.
ಕರೋನ ಲಾಕ್ಡೌನ್ ಸಂದರ್ಭದಲ್ಲಿ ಗೂಗಲ್ ಮೀಟ್ ನಂತಹ ಬೇರೆ ಬೇರೆ ಆಪ್ ಗಳ ಮುಖಾಂತರ ಮನೆಯಲ್ಲಿಯೇ ಕುಳಿತುಕೊಂಡು ಉಪನ್ಯಾಸ ಪಾಠ ಬೋಧನೆ ಯಂತ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.



    ಆಂಡ್ರಾಯ್ಡ್ ನಿಂದಾದ ನಷ್ಟಗಳು

ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಎಂಬ ಅತ್ಯಾಧುನಿಕ ಮೊಬೈಲ್ ನ ಬಳಕೆ ಸಾಮಾಜಿಕ ಪಿಡುಗಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಶಿಕ್ಷಣ ತಜ್ಞರು ಮನೋವಿಜ್ಞಾನಿಗಳು ತಲೆಕೆಡಿಸಿಕೊಳ್ಳುವಂತಾಗಿದೆ.
ಅದರಲ್ಲೂ ವಿಶೇಷವಾಗಿ ಹದಿಹರೆಯದ ವಯಸ್ಸಿನ ಮಕ್ಕಳಿಗೆ ಇದೊಂದು ರೋಗವಾಗಿ ಪರಿಣಮಿಸುತ್ತಿದೆ.
ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಈ ವಯಸ್ಸಿನ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುವುದರಿಂದ ಅವರು ಮಾನಸಿಕ ಖಿನ್ನತೆಯಿಂದ ಬಳಲುತಿದ್ದಾರೆ. ಅಲ್ಲ ಸಲ್ಲದ ಅಶ್ಲೀಲ ಚಿತ್ರಗಳು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ.
ಕೆಲವು ಮೊಬೈಲ್ ಆಟಗಳಿಂದ ಆತ್ಮಹತ್ಯೆಗೂ ಒಳಗಾಗುತ್ತಿರುವುದು ಸಮೀಕ್ಷೆಯ ವರದಿಂದ ತಿಳಿದು ಬರುತ್ತದೆ.
ಕೆಲವರು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಹದಿಹರದ ಮಕ್ಕಳ ಆರೋಗ್ಯ, ಶೈಕ್ಷಣಿಕ ಸಾಮಾಜಿಕ ಸಮಸ್ಯೆ ಮುಂತಾದವುಗಳು ಅವರ ಭವಿಷ್ಯದ ಪ್ರಶ್ನೆಯಾಗಿವೆ. ಇಂತಹ ಮಕ್ಕಳ ಸಮಸ್ಯೆಗಳಿಗೆ ಪಾಲಕರು ಹೊಣೆಗಾರರಾಗುತ್ತಿದ್ದಾರೆ.
ಒಂದು ವರ್ಷದ ಮಗುವಿದ್ದಾಗಲೇ ತಮ್ಮ ಕೆಲಸದ ಒತ್ತಡದಲ್ಲಿ ಮಕ್ಕಳ ಕೈಯಲ್ಲಿ ಆಟಿಕೆಯಂತೆ ಮೊಬೈಲನ್ನು ಕೊಟ್ಟು ಸುಮ್ಮನಾಗಿಸಲು ಪ್ರಯತ್ನಿಸುತ್ತಾರೆ . ಮುಂದೆ ಮಗು ಮೊಬೈಲ್ ಗೆ ಆಡಿಕ್ಟ್ ಆಗಿಬಿಡುವ ಅಪಾಯವಿದೆ.

   ಯಾವುದೇ ಒಂದು ವಿಷಯ , ವಸ್ತು , ವ್ಯಕ್ತಿ ,ಇರಲಿ ಅಲ್ಲಿ ಗುಣದೋಷಗಳ ತುಲನೆ ಆಗುತ್ತದೆ.ಆಂಡ್ರಾಯ್ಡ್ ಮೊಬೈಲ್ ವಿಷಯದಲ್ಲೂ ಈ ಮಾತು ಅನ್ವಯಿಸಲೇಬೇಕು. ವ್ಯಕ್ತಿ ಬದುಕನ್ನು ಬದಲಾಯಿಸಿದ ಈ ಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲಿ  ಕ್ರಾಂತಿಯನ್ನೇ ಉಂಟು ಮಾಡಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಅಪ್ಲಿಕೇಶನಗಳು ಆಪ್ ಗಳು ಪ್ರಗತಿಯಲ್ಲಿ ಸಾಗುತ್ತಿರುವ ಡಿಜಿಟಲ್ ಕ್ಷೇತ್ರದಲ್ಲಿ ಊಹೆಗೂ ಮೀರಿ ಬೆಳೆಯುತ್ತಿವೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳು ಆಂಡ್ರಾಯ್ಡ್ ಕಡ್ಡಾಯವಾಗಿ ಬಳಸಬೇಕು ಎನ್ನುವ ಹೇಳಿಕೆ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆ ಹೆಮ್ಮೆಪಡುವ ಸಂಗತಿ.   ಆದರೂ ಒಂದು ಎಚ್ಚರ ಇರಲೇಬೇಕು ಮಕ್ಕಳ ವಿಷಯದಲ್ಲಿ. “ಹಂಸ ಕ್ಷೀರ ನ್ಯಾಯದಂತೆ “ಬಳಸಿದರೆ ಯಾವ ತೊಂದರೆಯೂ ಇಲ್ಲ.


ಡಾ. ಮೀನಾಕ್ಷಿ ಪಾಟೀಲ್

Leave a Reply

Back To Top