ಎನ್.ಜಯಚಂದ್ರನ್ ಅವರ ಮೂರು ಕಿರು ಕವಿತೆಗಳು

ಕಾವ್ಯ ಸಂಗಾತಿ

ಎನ್.ಜಯಚಂದ್ರನ್

ಮೂರು ಕಿರು ಕವಿತೆಗಳು



ಭಾವ ಸಂದರ್ಭ

ಹೃದಯದಲಿ  ಮರೆಯಾದ
ಬಾಲ್ಯದ ನೆನಪುಗಳ
ಕನ್ನಡಿಯಲ್ಲಿ ನೋಡಿದಾಗ
ಕಂಡದ್ದು  ….

ಎಲ್ಲರಿಗೂ ತಮ್ಮ ತಮ್ಮ
ಮುಖ ಮಾತ್ರವಲ್ಲದೇ
ಮತ್ತಿನ್ನೇನು ?
ಜಿಜ್ಞಾಸೆಯ ಚತುರೋಕ್ತಿಯಲ್ಲಿ
ಔಚಿತ್ಯ ಸ್ಪಷ್ಟವೇ ಇದೆ

ಆದರೆ ;
 ಭಾವ ಸಂದರ್ಭ
ಹಲವು ನವೀನ
ಕವನಗಳಿಗೆ
ಹುಟ್ಟು ಹಾಕಿದೆ ಇಲ್ಲಿ!

******

ಸಂಸಾರದ ಅಳಲು

ಸಂಸಾರವೆಂಬ ಸಾಗರದಿ
ಎಂತಿಹುದೊ, ಏನಿಹುದೋ
ಕಂಡವರು ಯಾರಿದ್ದಾರೆ  ?

ಬಣ್ಣದ  ಗಾಣದಲಿ ಎಣ್ಣೆಯಾಗಿ
ಹಣ್ಣಾಗಿ  ನುಣ್ಣಗೆ  ನುಂಗಿ,
ಕೊರಳಿನಲಿ ಜೋತು  
ಹಗಲಿನಲಿ ಸೋತು,

ಪಕ್ಕೆಗಳಿಗೆ ನಿತ್ರಾಣದ
ಉಗಿ ತುಂಬಿ ತುಳಿದು
ಬಿಡುವ ಬಾಳು  

******


ಹಿರಿಯ ಜೀವದ ಆತಂಕ

ವ್ರದ್ಧಾಪ್ಯವೊಂದು ಶಾಪ ,
ಅವರ ಬದುಕೊಂದು ಕೂಪ
ವ್ರದ್ಧಾಶ್ರಮದ  ಒಂಟಿತನದ
ಸರಳುಗಳ  ಹಿಂದೆ
ತಡಕಾಡುವ ಜೀವ

ಸಂಬಂಧಗಳ  ಎಳೆ ಎಳೆಗಳ
ಮಕ್ಕಳು, ಮೊಮ್ಮಕ್ಕಳ
ಪ್ರೀತಿಯ ಸೆಲೆಗಳನ್ನು ನೆನಸಿ
ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ
ಜೀವಂತ  ಶವವಾಗಿದ್ದಾರೆ

ಈಗಲೂ ಕನವರಿಸುತ್ತಾರೆ
ಮಕ್ಕಳು, ಮೊಮ್ಮಕ್ಕಳು
ಬಂದಾರೆಂದು  !


ಎನ್.ಜಯಚಂದ್ರನ್

3 thoughts on “ಎನ್.ಜಯಚಂದ್ರನ್ ಅವರ ಮೂರು ಕಿರು ಕವಿತೆಗಳು

  1. ಕವನಗಳು ಚೆನ್ನಾಗಿ ಮೂಡಿ ಬಂದಿವೆ.ಶುಭಾಶಯಗಳು.Dr.P.V.Shanbhag

Leave a Reply

Back To Top