ಆಂಡ್ರಾಯ್ಡ್ ಫೋನ್ ಮತ್ತು ನಾನು- ರುಕ್ಮಿಣಿನಾಯರ್

ವಿಶೇಷ ಲೇಖನ

ರುಕ್ಮಿಣಿನಾಯರ್

ಆಂಡ್ರಾಯ್ಡ್ ಫೋನ್ ಮತ್ತು ನಾನು

ಆಂಡ್ರಾಯ್ಡ್ ಫೋನ್ ನನ್ನ ಕೈಗೆ ಬಂದ ಮೇಲೆ ಹೊಸ ಪ್ರಪಂಚವೇ ನನ್ನ ಮುಂದೆ ತೆರೆದುಕೊಂಡಿದೆ.

ಮೊದಲೆಲ್ಲ ದೂರದ ಊರಲ್ಲಿ ಇರುವ ನನ್ನ ಅಕ್ಕ ತಂಗಿ ಸ್ನೇಹಿತರು ಸಂಬಂಧಿಕರಿಗೆ ಕರೆ ಮಾಡಿ ಮಾತನಾಡುತ್ತಾ ಇದ್ದೆ. ಆಗಾಗ ಅಲ್ಲಿ ಹೋಗಿ ಬರಲು ಸಾಧ್ಯ ಆಗದ ಕಾರಣ ಆಂಡ್ರಾಯ್ಡ್ ಫೋನ್ ಬಂದ ನಂತರ ವಿಡಿಯೋ ಕಾಲ್ ಮೂಲಕ ಅವರನ್ನೆಲ್ಲ ನೋಡಿ ಮಾತನಾಡುವ ಹಾಗಾಯ್ತು.  ಊರಿಗೆ ಹೋದಾಗ ನೆನಪಿಗಾಗಿ ಅವರ ಜೊತೆಯಲ್ಲಿ ಇರುವ  ಛಾಯಾಚಿತ್ರಗಳನ್ನು ಸೆರೆ ಹಿಡಿದು ತರುವಂತೆ ಆಯ್ತು. ಆದರೆ ಸ್ಮಾರ್ಟ್ ಫೋನ್  ಕೈಯಲ್ಲಿ ಇರುವ ಕಾರಣ ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡುವುದು ಕಡಿಮೆ ಆದಂತೆ ಆಗಿದೆ. 

ಆಂಡ್ರಾಯ್ಡ್ ಫೋನ್ ಕೈ ಸೇರಿದ ಮೇಲೆ ಹಲವಾರು ಆಪ್ಗಳೂ ಕೂಡಾ ಜೊತೆಗೆ ಬಂದವು ಅದರ ಉಪಯೋಗವನ್ನು ಕಲಿತು ಉಪಯೋಗಿಸುವುದನ್ನು ಅಭ್ಯಾಸ ಮಾಡಿಕೊಂಡೆ. ಆಂಡ್ರಾಯ್ಡ್ ಫೋನ್ ನನಗೆ ಅತ್ಯಂತ ಆಪ್ತ ಗೆಳತಿ ಇದ್ದಂತೆ. ಯಾವ ವಿಷಯದ ಬಗ್ಗೆ ಅರಿತುಕೊಳ್ಳಬೇಕೆಂದರೂ ಜಾಲತಾಣದಲ್ಲಿ ಹುಡುಕಿದರೆ ಸಾಕು ತಕ್ಷಣಕ್ಕೆ ಸಿಕ್ಕುವುದು. ಆದರೆ ಇದರಿಂದ ಹೊರ ಹೋಗಿ ಪ್ರಪಂಚ ಜ್ಞಾನ ಪಡೆಯುವುದು ಕಡಿಮೆ ಆಯಿತು. ಮೊದಲೇ ನಾನು ಹೆಚ್ಚಾಗಿ ಯಾರಲ್ಲೂ ಬೇರೆಯದೇ ಇರುವವಳು ಸ್ವಲ್ಪ ಕೂಡಾ ಹೊರಗೆ ಹೋಗದೆ ಮನೆಯಲ್ಲಿ ಕುಳಿತಲ್ಲಿಯೇ ಇರುವಂತೆ ಆದೆ. ಪರಿಚಯಸ್ಥರು ಎಲ್ಲರ ನಂಬರ್ ಇರುವ ಕಾರಣ ಅಗತ್ಯ ಬಂದಾಗ ಸಂದೇಶದ ಮೂಲಕ ಮಾತನಾಡುವುದು ಅಭ್ಯಾಸ ಆಯಿತು. ಇದರಿಂದ ಫೋನ್ ಹೆಚ್ಚು ಹೆಚ್ಚು ಕೈಯಲ್ಲಿ ಇರುವಂತೆ ಆಯ್ತು. 

ಮನೆಯಲ್ಲಿ ಎಲ್ಲರ ಜೊತೆ ಬೆರೆತು ಮಾತನಾಡುವುದು ಮೊದಲಿಗಿಂತ ಕಡಿಮೆ ಆಯ್ತು. ಏಕೆಂದರೆ ನಮ್ಮ ನಾಲ್ವರ ಕೈಯಲ್ಲೂ ಮೊಬೈಲ್ ಇದೆ. ಆದರೆ ಹೊರಗೆ ಎಲ್ಲೇ ಹೋಗಲಿ  ಜೊತೆಗೆ ಸಂಪರ್ಕದಲ್ಲಿ  ಮನೆಯ ಸದಸ್ಯರೆಲ್ಲ ಇರುವರಲ್ಲ ಹಾಗಾಗಿ ಮನಸ್ಸಿಗೆ ನೆಮ್ಮದಿ ಕೂಡಾ ಇದೆ. ಮೊದಲೆಲ್ಲ ಪತಿ ಕೆಲಸಕ್ಕೆ ಹೋದಾಗ ಸಂಜೆ ಬರುವುದು ತಡ ಆದರೆ ಆತಂಕ ಆಗುತ್ತಿತ್ತು. ಆದರೆ ಜೊತೆಯಲ್ಲಿ ಮೊಬೈಲ್ ಇರುವುದರಿಂದ ಕರೆ ಮಾಡಿ ಏಕೆ ತಡ ಎಂದು ತಿಳಿದು ಕೊಳ್ಳಬಹುದು. ಮೊಬೈಲ್ ಕೈಗೆ ಬರುವ ಮೊದಲು ನೆಂಟರು  ಇಷ್ಟರ ಮನೆಗೆ ಆಗಾಗ ಭೇಟಿ ಕೊಟ್ಟು ಯೋಗಕ್ಷೇಮ ವಿಚಾರಿಸುವುದು ವಾಡಿಕೆಯಾಗಿತ್ತು ಆದರೆ ಈಗ ಕರೆ ಮಾಡಿ ಇಲ್ಲದಿದ್ದರೆ ವಿಡಿಯೋ ಕಾಲ್ ಮೂಲಕ ಅವರೊಂದಿಗೆ ಮಾತನಾಡಿ ಯೋಗಕ್ಷೇಮ ತಿಳಿದು ಕೊಳ್ಳುತ್ತೇವೆ. ಆದರೆ ಜೊತೆಗೆ ಕುಳಿತು ಎದುರಿದ್ದು ಮಾತನಾಡಿದ ಸುಂದರ ಕ್ಷಣಗಳನ್ನು ಕಸಿದು ಕೊಂಡಂತೆ ಆಗಿದೆ. ಆಂಡ್ರಾಯ್ಡ್ ಫೋನ್ ಕುಟುಂಬದವರ ನಡುವೆ ಇದ್ದ ಭಾವನಾತ್ಮಕ ಅನುಬಂಧವನ್ನು ಕಡಿಮೆ ಮಾಡಿದೆ. 

ನಾವು ಮಹಾನಗರಿ ಬೆಂಗಳೂರಿನಲ್ಲಿ ಇರುವ ಕಾರಣ ಕೆಲವೊಮ್ಮೆ ಅನಾರೋಗ್ಯದ ಕಾರಣ ಅಡುಗೆ ಮಾಡಲು ಸಾಧ್ಯ ಆಗದೇ ಇರುವಾಗ ಹಾಗೂ ಎಲ್ಲಾದರೂ ಹೊರ ಹೋಗಿ ತಡವಾಗಿ ಮನೆಗೆ ಬರುವಂತೆ ಆದರೆ ಹೋಟೆಲ್ ಗಳಿಂದ ಆಹಾರವನ್ನು ಕೂಡಾ ಆಪ್ ಗಳ ನೆರವಿನಿಂದ ತರಿಸಿ ಕೊಳ್ಳುತ್ತೇವೆ. ಸಮಯಕ್ಕೆ ಬಿಸಿ ಆಹಾರ ಮನೆ ಬಾಗಿಲಿಗೆ ತಲುಪುತ್ತದೆ. ಅಪರೂಪಕ್ಕೆ ಹೀಗೆ ತರಿಸಿ ಕೊಳ್ಳುವುದು ಈಗ ಅನಿವಾರ್ಯವಾಗಿದೆ. ಆದರೆ ಮನೆಯಲ್ಲಿ ಮಾಡಿದ ಶುದ್ಧ ಆಹಾರ ಸೇವಿಸಿದ ಹಾಗೆ ಹಿಡಿಸದು ನನಗೆ. ಅನಿವಾರ್ಯವಾಗಿ ಇಷ್ಟವಿಲ್ಲದ ಹೆಚ್ಚು ಕ್ಯಾಲೋರಿ ಇರುವ ಅನಾರೋಗ್ಯಕರ ಆಹಾರ ಸೇವಿಸಿದಂತೆ ಆಗುತ್ತದೆ. 

ಆಂಡ್ರಾಯ್ಡ್ ಫೋನ್ ಗಳಲ್ಲಿ ಫೇಸ್ ಬುಕ್ ವಾಟ್ಸ್ ಆ್ಯಪ್ ಇನ್ಸ್ಟಗ್ರಾಂ ಟೆಲಿಗ್ರಾಂ ನಂತಹ ಸಾಮಾಜಿಕ ಜಾಲ ತಾಣಗಳು ಇರುವುದರಿಂದ ಹೊರ ಪ್ರಪಂಚಕ್ಕೆ ಬಹಳ ಸುಲಭವಾಗಿ ನಾನು ಸಂಪರ್ಕ ಹೊಂದಿದೆ. ಹೊಸ ಗೆಳೆಯ ಗೆಳತಿಯರ ಪರಿಚಯ ಆಯಿತು. ಹಲವಾರು ಹೊಸ ವಿಷಯಗಳ ಅರಿವು ದೊರಕಿತು. ಹಲವು ಒಳ್ಳೆಯ ಸ್ನೇಹಿತ/ತೆಯರು ಪರಿಚಯ ಆದರು. ಕುಳಿತಲ್ಲಿಯೇ ಕೈಯಲ್ಲಿ ಮೊಬೈಲ್ ಹಿಡಿದು ಕೊಂಡು ಹೊರ ಪ್ರಪಂಚದ ಆಗು ಹೋಗುಗಳನ್ನು ಅರಿಯ ತೊಡಗಿದೆ. ಹೊರಗಿನ ವಾರ್ತೆ ಸುದ್ದಿಗಳು ಕ್ರೀಡೆ ನೃತ್ಯ ಸಿನೆಮಾ ನಾಟಕ ಎಲ್ಲವೂ ಕುಳಿತಲ್ಲಿಯೇ ದೊರೆಯಿತು ನನಗೆ.  ಹಾಡುಗಳು ಎಂದರೆ ಪಂಚಪ್ರಾಣ ಹಾಗಾಗಿ ಬಿಡುವಿನ ವೇಳೆಯಲ್ಲಿ ಹಾಡುಗಳನ್ನು ಕೇಳುವ ಅಭ್ಯಾಸ ಆಯಿತು. ಹಲವಾರು ಹಾಡುಗಳ ಆಪ್ಗಳನ್ನು  ಮೊಬೈಲ್ನಲ್ಲಿ ತುಂಬಿಸಿ ಕೊಂಡಿದ್ದಾಯ್ತು. ಈಗ ಅಡುಗೆ ಮಾಡುವಾಗಲೂ ಏರ್ ಪೋಡ್ ಸಂಪರ್ಕದಿಂದ ಹಾಡುಗಳನ್ನು ಕೇಳುತ್ತಾ ಕೆಲಸ ಮಾಡುವುದನ್ನು ರೂಢಿಸಿಕೊಂಡೆ ಹಾಗಾಗಿ ಸಮಯ ಕಳೆಯುವುದೇ ತಿಳಿಯದು ಆಯಾಸವೂ ಇರದು. ಒಂಟಿ ಅನ್ನುವ ಭಾವ ಆಂಡ್ರಾಯ್ಡ್ ಮೊಬೈಲ್ ನಿಂದ  ಇಲ್ಲವಾಯಿತು. ಏಕೆಂದರೆ ಮನೆಯಲ್ಲಿ ಎಲ್ಲರೂ ಅವರವರ ಕೆಲಸ ಕಾರ್ಯದಲ್ಲಿ ತೊಡಗಿರುವ ಸಮಯದಲ್ಲಿ ನಾನು ಒಂಟಿಯೇ ಅಲ್ಲವೇ?

ನನಗೆ ಕಥೆ ಕವನ ಲೇಖನ ಬರೆಯುವ ಆಸಕ್ತಿ ಮೊದಲಿನಿಂದಲೂ ಇತ್ತು ಹಾಗಾಗಿ ಈಗ ಆಂಡ್ರಾಯ್ಡ್ ಫೋನ್ ಸಹಾಯದಿಂದ ಕಥೆ ಕವನಗಳನ್ನು ಬರೆಯುವ ನನ್ನ ಕನಸು ನನಸಾಗಲು ಸುಲಭ ಮಾರ್ಗ ದೊರೆತಂತೆ ಆಯಿತು. ಫೇಸ್ಬುಕ್ನಲ್ಲಿ ಬರವಣಿಗೆಯನ್ನು ಪ್ರಕಟಿಸುವ ಮುಖಾಂತಂತರ ಹಲವಾರು ಲೇಖಕರು, ಪತ್ರಿಕೆಗಳ ಸಂಪಾದಕರು, ಸಾಹಿತಿಗಳು, ಕವಿಗಳು, ಓದುಗರು ಸಾಹಿತ್ಯದ ಆಸಕ್ತಿ ಹುಟ್ಟಿಸುವಂತಹ ಕಾರ್ಯಕ್ರಮಗಳ ಆಯೋಜಕರು  ಪರಿಚಯ ಆದರು. ಈಗ ದೊಡ್ಡ ಪ್ರಪಂಚವೇ ನನ್ನ ಕೈಯಲ್ಲಿ ಇರುವ  ಫೋನ್ನಲ್ಲಿ ಇದೆ ಅನಿಸುತ್ತಿದೆ. ಮೊದಲೆಲ್ಲ ಹೆಚ್ಚು ಮೊಬೈಲ್ ಉಪಯೋಗಿಸದೆ ಇದ್ದ ನಾನು ಈಗ ಹೆಚ್ಚು  ಉಪಯೋಗಿಸಲು ಪ್ರಾರಂಭಿಸಿದ್ದೇನೆ. ಇದು ನನ್ನ ಹೆಚ್ಚು ಸಮಯವನ್ನು ನುಂಗುತ್ತಾ ಇದೆ ಎಂದು ಅನಿಸಿದೆ. ಉಪಯೋಗದ ಜೊತೆಗೆ ಸ್ವಲ್ಪ ಹಾನಿಯೂ ಆಗುತ್ತಿದೆ. ಹಾಗೇಯೇ ಮೊದಲಿನಂತೆ ಜೊತೆಗೆ ಹಣ ಕಾಸು ಕೊಂಡೊಯ್ಯುವ ಅಗತ್ಯ ಇಲ್ಲ. ಬ್ಯಾಂಕುಗಳ ವ್ಯವಹಾರ ಕೂಡಾ ಮೊಬೈಲ್ ನಲ್ಲಿಯೇ ನಡೆಯುತ್ತದೆ. ಹತ್ತು ರೂಪಾಯಿಗೆ ಕೂಡಾ ಗೂಗಲ್ ಪೇ, ಫೋನ್ ಪೇ ಹಾಗೂ ಪೇ ಟಿ ಎಂ ಉಪಯೋಗ ಮಾಡುತ್ತಿದ್ದೇನೆ. ಆದರೆ ಕೆಲವೊಮ್ಮೆ ಕೆಲವು ಕಡೆ ಹಣವನ್ನು ನೇರವಾಗಿ ಕೊಡುವಂತಹ ಸಂದರ್ಭ ಬಂದಾಗ ಪೇಚಿಗೆ ಸಿಲಕಿದ ಪ್ರಸಂಗಗಳು ಇವೆ. ಒಟ್ಟಿನಲ್ಲಿ ಈ ಆಂಡ್ರಾಯ್ಡ್ ಮೊಬೈಲ್ ಬಹಳ ಉಪಯೋಗಿ ಹಾಗೂ ಕೆಲವೊಂದು ಸಂದರ್ಭದಲ್ಲಿ ತೊಂದರೆ ಅನುಭವ ಕೂಡಾ ಆಗಿದೆ ನನಗೆ.  ಎಲ್ಲಕ್ಕಿಂತ ಎಲ್ಲಾ ಮಾನವ ಸಂಬಂಧಗಳು ಕೂಡಾ ಈಗ ಯಾಂತ್ರಿಕವಾದ ಹಾಗೆ ನನಗೆ ಅನುಭವ ಆಗುತ್ತಿದೆ.


ರುಕ್ಮಿಣಿ ನಾಯರ್

Leave a Reply

Back To Top