ನನ್ನೂರಿನಲ್ಲಿ
ಎಸ್.ಕಲಾಲ್
ನೀ ಬರಲೆಂದೆ ಮರುಭೂಮಿ ಹಸಿರಾಗಿದೆ
ನನ್ನೂರಿನಲ್ಲಿ..
ನೀ ನೋಡಲೆಂದೆ ಕಲ್ಲು-ಕಗ್ಗಲ್ಲು ಶಿಲೆಯಾಗಿದೆ
ನನ್ನೂರಿನಲ್ಲಿ.
ಪಾಳು ಮಸಣದ ಮಲ್ಲಿಗೆಯರಳಿ ಪಾವನವಾಗಿದೆ
ನಿನ್ನ ಮುಡಿ ಸೇರಲೆಂದೆ ನನ್ನೂರಿನಲ್ಲಿ..
ಇತಿಹಾಸದ ರಾಜ-ಮಹಾರಾಜರು ಮೆರೆದ ನೆಲ
ನಿನ್ನ ಹೆಜ್ಜೆಗೆ ಕಾಯುತ್ತಿದೆ ನನ್ನೂರಿನಲ್ಲಿ..
ಆ ಆಗಸದ ಚಂದಿರನನ್ನು ಗಲ್ಲಿಗೆರಿಸಿದ್ದೇನೆ
ನಿನ್ನ ಕದಿಯದಿರಲೆಂದು ನನ್ನೂರಿನಲ್ಲಿ..
ನನ್ನ ಸಾವಿರ ಕನಸಿನ ಹೆಬ್ಬಾಗಿಲು ನೆಟ್ಟಿದ್ದೇನೆ
ಬಲಗಾಲಿಟ್ಟು ಬಂದುಬಿಡು ನನ್ನೂರಿನಲ್ಲಿ..
ನೀ ಬರುವ ಹಾದಿಯ ಕಾದು ಕಾದು
ಬೀದಿಯಲ್ಲಿ ಹೆಣವಾಗಿವೆ ಮೈಲುಗಲ್ಲುಗಳು
ನನ್ನೂರಿನಲ್ಲಿ..
ನಿನ್ನ ಗೆಜ್ಜೆಯ ನಾದವ ಕೇಳಲು ಸಿಟ್ಟಾಗಿ
ಮಳೆಯೆ ಸುರಿಸಿಲ್ಲ ಮೋಡ ನನ್ನೂರಿನಲ್ಲಿ..
ಶತ-ಶತಮಾನದ ಶಾಸನ ತಾಮ್ರಪಟಗಳು ಕೂಗುತ್ತಿವೆ
ನಿನ್ನ ಹೆಸರು ನನ್ನೂರಿನಲ್ಲಿ..
ತಾಯಿಯಿಲ್ಲದ ಕಂದಮ್ಮಗಳು ಹಸಿದಿವೆಯಂತೆ
ನಿನ್ನ ಕೈ ತುತ್ತಿಗೆ ನನ್ನೂರಿನಲ್ಲಿ..
ಮತ್ತೆ ಮರಳಿ ಮರುಗಿ ನಾ ಸಾಯಲಾರೆ
ನನಗಾಗಿ ಅಳುವವರಿಲ್ಲ ನನ್ನೂರಿನಲ್ಲಿ..
ಮುರಿದ ಜೋಪಡಿಯ ಜಗುಲಿಯಲಿ
ಒಲವಿನ ದೇವತೆಯಾಗಿ ನಿಲ್ಲು ನನ್ನೂರಿನಲ್ಲಿ..
**********