ಅಂಕಣ ಬರಹ

ಗಜಲ್ ಲೋಕ

ಡಾ. ಮಲ್ಲಿನಾಥ ಎಸ್. ತಳವಾರ

ಶೋಭಾ ಹರಿಪ್ರಸಾದ್

ಅವರ ಗಜಲ್ ಗಳಲ್ಲಿ

ದಾಂಪತ್ಯಯಾನ

ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಸೌಖ್ಯವಾಗಿರುವಿರಿ ಎಂಬ ಭಾವದೊಲವಿನೊಂದಿಗೆ ತಮ್ಮ ಮುಂದೆ ಗಜಲ್ ಗಂಗೆ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಏನಿದ್ದರೂ ಇವಾಗ ಗಜಲಯಾನ…

“ಒಂದು ಯುಗವೇ ಆಯಿತು ನನ್ನ ತಾಯಿ ನಿದ್ದೆ ಮಾಡಿ ‘ತಾಬಿಶ್’
ನಾನೊಮ್ಮೆ ಹೇಳಿದ್ದೆ ನನಗೆ ಭಯವಾಗುತ್ತದೆ ಎಂದು”
-ಅಬ್ಬಾಸ್ ತಾಬೀಶ್

         ಭಾಷೆ ಕೇವಲ ಸಂವಹನದ ಸಾಧನವಲ್ಲ. ಇದು ಸಂಸ್ಕೃತಿಯನ್ನು ರವಾನಿಸುತ್ತದೆ. ಇದು ಸಂಪ್ರದಾಯಗಳು, ನಿರಂತರತೆಯ ಪ್ರಜ್ಞೆ ಮತ್ತು ಗುರುತನ್ನು ಒಳಗೊಂಡಿದೆ. ಭಾರತದಲ್ಲಿ ಉರ್ದು ಭಾಷೆಯನ್ನು ಸೃಷ್ಟಿಮಾಡಿದ ಕೀರ್ತಿ ನಮ್ಮ ಗಜಲ್‍ಗೆ ಸಲ್ಲುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಸೌಮ್ಯತೆ ಹಾಗೂ ಮುಗ್ದತೆಯು ಗಜಲ್ ನ ಭಾಷೆಯಾಗಿದೆ. ದೈನಂದಿನ ಜೀವನದೊಂದಿಗೆ ಗಜಲ್‌ನ ಭಾವಪ್ರಧಾನತೆ ಮತ್ತು ಆಧ್ಯಾತ್ಮಿಕತೆಯನ್ನು ಸಾಧಿಸಬೇಕು. ಇದು ಸಾಧ್ಯವಾಗಬೇಕಾದರೆ ಪ್ರತಿ ಸುಖನವರ್ ಜನರ ನಾಡಿಮಿಡಿತ ಅರಿಯುವುದು ತೀರ ಅತ್ಯವಶ್ಯಕ. ಗಜಲ್‌ ಸಾಹಿತ್ಯದ ಇತಿಹಾಸ, ಪರಂಪರೆ, ಸ್ವರೂಪ ಹಾಗೂ ಲಕ್ಷಣಗಳನ್ನು ಅರಿಯದೆ ರಚಿಸಿದರೆ ಅದೊಂದು ಸಾಹಿತ್ಯ ಪ್ರಕಾರವಾಗಬಹುದು ಅಷ್ಟೆ, ಆದರೆ ಗಜಲ್ ಆಗಲಾರದು. ಈ ದಿಸೆಯಲ್ಲಿ ಗಜಲ್ ಮುಖಮ್ಮಲ್ ಆಗಲು ಲಕ್ಷಣಗಳೊಂದಿಗೆ ಭಾವದಲೆಯ ಸೆಳೆತವೂ ಇರಬೇಕು. ಇದೊಂದು ಲಯಬದ್ಧವಾಗಿ ಜೋಡಿಸಲಾದ ಅಶಅರ್ ಸರಣಿಯಿಂದ ಕೂಡಿದ ಕಾವ್ಯ ಪ್ರಕಾರವಾಗಿದೆ. ಇಲ್ಲಿಯ ಪ್ರತಿ ಷೇರ್ ಸ್ವಯಂ ಸಮರ್ಥನೀಯವಾಗಿದ್ದು, ಸಂಪೂರ್ಣವಾಗಿ ಒಂದು ಆಲೋಚನೆಯನ್ನು ತಿಳಿಸುತ್ತವೆ. ಹೀಗಾಗಿ ಒಂದು ಗಜಲ್ ಹೊಂದಿರುವ ಅಶಅರ್ ನ ಸಂಖ್ಯೆಯಷ್ಟು ವಿಚಾರಗಳು/ಆಲೋಚನೆಗಳನ್ನು ಹೊಂದಿರುತ್ತದೆ, ಹೊಂದಿರಬೇಕು ಎನ್ನಲಾಗುತ್ತದೆ. ಇಂಥಹ ಗಜಲ್ ನ ರೂಪವು ಬರಹಗಾರರಿಗೆ ಪರಿಪೂರ್ಣವಾದ ಸೃಜನಶೀಲತೆಯ ಕ್ಯಾನ್ವಾಸ್ ಅನ್ನು ಒದಗಿಸುತ್ತ ಬಂದಿದೆ ಕಾವ್ಯ ಮತ್ತು ಸಂಗೀತದ ಸೌಂದರ್ಯದ ಮೂಲಕ ಮಾನವನ ಭಾವನೆಗಳು ಮತ್ತು ಅನುಭವಗಳ ಸಂಕೀರ್ಣತೆಗಳನ್ನು ಸೆರೆಹಿಡಿಯುವ ಸಾಮರ್ಥ್ಯದಲ್ಲಿ ಗಜಲ್ ನಿರಂತರ ಆಕರ್ಷಣೆಯನ್ನು ಕಾಪಾಡಿಕೊಂಡು ಬಂದಿದೆ. ಅಂತೆಯೇ ಕೇಳುಗರನ್ನು ಭಾವನಾತ್ಮಕ ಪ್ರಯಾಣಕ್ಕೆ ಕರೆದೊಯ್ಯಲು ಗಜಲ್ ಅನ್ನು ವಿನ್ಯಾಸಗೊಳಿಸಲಾಗಿದೆ! ಗಜಲ್‌ನಲ್ಲಿನ ಪ್ರತಿಯೊಂದು ಪದದ ಸರಿಯಾದ ಉಚ್ಚಾರಣೆಯು ನಿರೂಪಣೆಯ ಪ್ರಮುಖ ಅಂಶವಾಗಿದೆ. ಪ್ರತಿಯೊಂದು ಪದವನ್ನು ಉಚ್ಚರಿಸುವ ವಿಧಾನವು ಗಜಲ್ ನ ಉದ್ದೇಶಿತ ಭಾವನೆಗಳು, ಅರ್ಥಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಸಹಾಯ ಮಾಡುತ್ತವೆ. ಧ್ವನಿಮುದ್ರಣ ಮತ್ತು ಚಲನಚಿತ್ರ ಉದ್ಯಮಗಳ ಬೆಳವಣಿಗೆಯೊಂದಿಗೆ ಗಜಲ್ ಗಳು ಜನಸಾಮಾನ್ಯರಲ್ಲಿ ಹೆಚ್ಚು ಜನಪ್ರಿಯವಾಗಿವೆ.

“ತುಮ್ ಇತ್ನಾ ಜೋ ಮುಸ್ಕುರಾ ರಹೇ ಹೋ
ಕ್ಯಾ ಘಮ್ ಹೈ ಜಿಸ್ಕೋ ಛುಪಾ ರಹೇ ಹೋ”

ಎಂಬ ಹಾಡುಗಳೊಂದಿಗೆ ಜಗಜಿತ್ ಸಿಂಗ್ ಆಧುನಿಕ ಗಜಲ್‌ನ ಧ್ವನಿಯಾದರು. ಇಂಥಹ ಅನುಪಮ ಗಜಲ್‌ಗಳ ಸೂಕ್ಷ್ಮ ಸೌಂದರ್ಯದ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದು ನಿಜಕ್ಕೂ ತುಂಬಾ ಕಷ್ಟ. ಅದರಲ್ಲೂ ಸೂಕ್ಷ್ಮ ಸಂವೇದನಾಶೀಲ ಬರಹಗಾರರಿಗಂತೂ ಅಸಾಧ್ಯವೇ ಸರಿ. ಈ ಕಾರಣಕ್ಕಾಗಿಯೋ ಏನೋ ಇಂದು ಕನ್ನಡದಲ್ಲಿ ಲಿಂಗ, ಪ್ರದೇಶ, ವಯಸ್ಸಿನ ತಾರತಮ್ಯವಿಲ್ಲದೆ ಗಜಲ್ ಕೃಷಿ ಯಥೇಚ್ಛವಾಗಿ ಸಾಗುತ್ತಿದೆ. ಅವರಲ್ಲಿ ಶ್ರೀಮತಿ ಶೋಭಾ ಹರಿಪ್ರಸಾದ್ ಅವರೂ ಒಬ್ಬರು.

       ಶೋಭಾ ಹರಿಪ್ರಸಾದ್‌ ರವರು ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿಯ ಸಾಲಿಕೇರಿಯವರು. ತಂದೆ ನಾರಾಯಣ ಶೆಟ್ಟಿಗಾರ್, ತಾಯಿ ಲಲಿತಾ ಶೆಟ್ಟಿಗಾರ್. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯಾಮಂದಿರದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಪೂರ್ಣಗೊಳಿಸಿ ಪ್ರೌಢ ಶಿಕ್ಷಣ ಮತ್ತು ಬಿ. ಎ ಪದವಿಯನ್ನು ಎಸ್.ಎಮ್.ಎಸ್ ಬ್ರಹ್ಮಾವರ ಕಾಲೇಜಿನಲ್ಲಿ ಪೂರೈಸಿದ್ದಾರೆ. ಮುಂದೆ ಮಂಗಳೂರಿನ‌ ಸರಕಾರಿ ಕಾಲೇಜಿನಲ್ಲಿ ಬಿ.‌ಎಡ್. ಅನ್ನು ಮುಗಿಸಿ ಕೆಲ ೦೮-೦೯ ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯವನ್ನು ಆಸ್ವಾದಿಸುತ್ತ, ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾವ್ಯ, ಭಾವಗೀತೆ, ಭಕ್ತಿಗೀತೆ, ಶಿಶುಗೀತೆ, ಚುಟುಕು, ಹನಿಗವನ, ಮುಕ್ತಕ, ವೃತ್ತಗಳು, ತ್ರಿಪದಿ, ಲಾವಣಿ, ಗೀಗೀ ಪದಗಳು, ಷಟ್ಪದಿ, ಆಧುನಿಕ ವಚನಗಳು, ಕತೆ, ರುಬಾಯಿ, ಅಬಾಬಿ ಹಾಗೂ ಗಜಲ್ ಮುಂತಾದ ಸಾಹಿತ್ಯ ರೂಪಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ಇವರು ‘ಚಿಣ್ಣರ ಕನಸಿನ ಬಣ್ಣದ ಲೋಕ’ ಎಂಬ ಶಿಶುಗೀತಾ ಸಂಕಲನ, ‘ಬೇವು ಬೆಲ್ಲ’ ಎಂಬ ಕಥಾ ಸಂಕಲನ, ‘ಸುಬ್ಬಕ್ಕನ ವಚನಗಳು’ ಎಂಬ ತ್ರಿಪದಿ ಸಂಕಲನ, ‘ಅಂತರಾಳ’ ಎಂಬ ಪೌರಾಣಿಕ ನೀಳ ಕಾವ್ಯ ಸಂಕಲನ,  ‘ಭಾಮಿ ಪುಟ್ಟಿ’ ಎಂಬ ಭಾಮಿನಿ ಷಟ್ಪದಿಯ ಸಂಕಲನ, ‘ಭಾವಕಸ್ತೂರಿ’ ಎಂಬ ಭಾವಗೀತೆ ಸಂಕಲನ ಹಾಗೂ ‘ಬಿಂಕದ ಸಿಂಗಾರಿ’ ಎಂಬ ಗಜಲ್ ಸಂಕಲನದೊಂದಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಕನ್ನಡ ವಾಙ್ಮಯ ಲೋಕಕ್ಕೆ ನೀಡಿದ್ದಾರೆ. ಪ್ರಸ್ತುತ ಮೂಲ ರಾಮಾಯಣವನ್ನು ೩೦೦೦ ಷಟ್ಪದಿಗಳಲ್ಲಿ ಪೂರ್ಣಗೊಳಿಸಿ, ಪ್ರಕಟಿಸುವ ಪ್ರಯತ್ನದಲ್ಲಿ ಇದ್ದಾರೆ.

       ಸದಾ ಎಲೆಮರೆಯ ಕಾಯಿಯಂತಿರುವ ಶ್ರೀಮತಿ ಶೋಭಾ ಹರಿಪ್ರಸಾದ್ ಅವರ ಹಲವು ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ‘ರಾಜ್ಯ ಕವಿ ವೃಕ್ಷ ಪ್ರಶಸ್ತಿ’, ‘ವ್ಯಾಕರಣ ಚೂಡಾಮಣಿ ಪ್ರಶಸ್ತಿ’…. ಪ್ರಮುಖವಾಗಿವೆ.

       ಪ್ರೀತಿ ಎಂಬುದು ಸೌಂದರ್ಯದ ಭಾವನೆಯಾಗಿರುವುದರಿಂದ ಎಲ್ಲಾ ಜನರ ಆಶಯಗಳೊಂದಿಗೆ ಅಂತರ್ಗತವಾದ ಸಂಬಂಧ ಹೊಂದಿದೆ. ಅಂತೆಯೇ ಜನರು ತಮ್ಮ ಜೀವನದುದ್ದಕ್ಕೂ ಅದಕ್ಕಾಗಿ ಹಂಬಲಿಸುತ್ತಾರೆ. ಪ್ರಬುದ್ಧತೆಯ ಸಮಯದಲ್ಲಿ ಅದರಲ್ಲಿ ಸಂತೋಷಪಡುತ್ತಾರೆ ಮತ್ತು ವೃದ್ಧಾಪ್ಯದಲ್ಲಿ ಅದರ ಸವಿಯನ್ನು ಮೆಲುಕು ಹಾಕುತ್ತಾರೆ. ಪ್ರೀತಿಯು ಕತ್ತಲೆಯಲ್ಲಿ ಬೆಳಕಿನ ಕಿರಣವಾಗಿ, ದೌರ್ಬಲ್ಯದ ಸಮಯದಲ್ಲಿ ಶಕ್ತಿಯ ಉಲ್ಬಣವಾಗಿ ಹಾಗೂ ತೀವ್ರತೆ ಮತ್ತು ಕಷ್ಟಗಳ ವಿರುದ್ಧ ವಿಶ್ವಾಸಾರ್ಹ ಅಸ್ತ್ರವಾಗಿದೆ. ಪ್ರೀತಿಯು ಯಾವತ್ತೂ ಜೀವನದಲ್ಲಿ ಒಳ್ಳೆಯದನ್ನೆ ಪ್ರತಿನಿಧಿಸುತ್ತದೆ. ಒಕ್ಕೂಟದಲ್ಲಿ ಉತ್ತುಂಗಕ್ಕೇರುವ ಪ್ರೀತಿ ಸಂತೋಷ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ಜೊತೆ ಜೊತೆಗೆ ಕಣ್ಣೀರು, ಕಹಿ ನೋವು ಮತ್ತು ಸಿಹಿ ದುಃಖವನ್ನೂ ಪ್ರತಿನಿಧಿಸುತ್ತದೆ!! ಇಂಥಹ ಪ್ರೀತಿಯೇ ಗಜಲ್ ಗೆ ಉಸಿರು ನೀಡಿರೋದು.‌ ಕಾಲದ ತಿರುವಿನಲ್ಲಿ ಗಜಲ್ ಪ್ರೀತಿಯ ಕೇಂದ್ರ ವಿಷಯದ ಸುತ್ತ ಅಸಾಧಾರಣ ವೈವಿಧ್ಯತೆಯ ಸಾಮರ್ಥ್ಯವನ್ನು ಸಾಬೀತುಪಡಿಸುತ್ತ ಬರುತ್ತಿದೆ. ಈ ನೆಲೆಯಲ್ಲಿ ಶಾಯರಾ ಶ್ರೀಮತಿ ಶೋಭಾ ಹರಿಪ್ರಸಾದ್ ಅವರ ‘ಬಿಂಕದ ಸಿಂಗಾರಿ’ ಗಜಲ್ ಸಂಕಲನವನ್ನು ಗಮನಿಸಿದಾಗ ಬಡತನದ ಬವಣೆ, ಪ್ರೀತಿಯ ಸಿರಿತನ, ಕನಸುಗಳ ಆಲಿಂಗನ, ದಂಪತಿಗಳ ಪ್ರೇಮಯಾನ, ಕನವರಿಕೆ, ಕಾತುರ, ನಿರೀಕ್ಷೆ, ಮುನಿಸು, ಜಗಳ, ವಿರಹ, ಓಲೈಕೆ, ಸಂತೈಸುವ ಪರಿ, ಪ್ರಣಯ, ದೇಸಿ ಸೊಗಡು, ಸೀರೆಯ ಸೊಬಗು, ಗ್ರಾಮೀಣ ಬದುಕಿನ ವಿವಿಧ ಆಯಾಮಗಳು, ಭಕ್ತಿ, ಸ್ನೇಹ… ಎಲ್ಲವೂ ನಮ್ಮನ್ನು ಆವರಿಸಿ ಬಿಡುತ್ತವೆ.

       ಪ್ರೀತಿಯನ್ನು ಉಳಿಸುವ, ಬೆಳೆಸುವ ಹೊಣೆ ದಾಂಪತ್ಯ ಜೀವನಕ್ಕಿದೆ.‌ ಪ್ರೀತಿ, ಪ್ರೇಮ ಎಂಬುದು ಕೇವಲ ಪ್ರಿಯತಮ, ಪ್ರಿಯತಮೆಯರಿಗೆ ಮೀಸಲಾದುದಲ್ಲ. ಇದು ಇಡೀ ಮನುಕುಲಕ್ಕೆ, ವಯಸ್ಸಿನ ಹಂಗಿಲ್ಲದೆ ಪ್ರೀತಿಸುವ ಜೀವಿಗಳಿಗೆ ಸಂಬಂಧಿಸಿದೆ. ಗಜಲ್ ಗೋ ಶ್ರೀಮತಿ ಶೋಭಾ ಹರಿಪ್ರಸಾದ್ ಅವರು ತಮ್ಮ ಗಜಲ್ ಗಳಲ್ಲಿ ದಾಂಪತ್ಯದಲ್ಲಿ ಅಡಗಿದ, ಅಡಗಿರಬೇಕಾದ ಪ್ರೀತಿಯನ್ನು ಕುರಿತು ತುಂಬಾ ಸರಳವಾಗಿ ಹಾಗೂ ಅಷ್ಟೇ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಈ ಕೆಳಗಿನ ಷೇರ್ ನಲ್ಲಿ ಬಳಕೆಯಾಗಿರುವ ‘ಹತ್ತಿ ಸೀರೆ’ ಎನ್ನುವುದು ಇಂದಿನ ಸ್ಟೈಲಿಶ್ ಕಾಟನ್ ಸೀರೆಯನ್ನೂ ದಾಟಿ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುತ್ತದೆ. ಗಂಡ ತನ್ನ ಹೆಂಡತಿಯನ್ನು ಪ್ರೀತಿಯಿಂದ ಕೂಗುವ ಪರಿ ಮನಸ್ಸಿಗೆ ಮುದ ನೀಡುತ್ತದೆ. ಸೀರೆ ತಂದು ಕೊಡುವ, ಸೀರೆ ತೊಟ್ಟಾಗ ಅವಳ ಸೌಂದರ್ಯವನ್ನು ಆಸ್ವಾದಿಸುವ, ಹೊಗಳುವ ರೀತಿ ನೆನೆಸಿಕೊಂಡರೆ ಗಂಡಂದಿರು ತಮ್ಮ ಹೆಂಡತಿಯರ ಚೆಲುವಿನ ಕುಲುಮೆಯಲ್ಲಿ ಕಳೆದುಹೋಗುವುದು ಗ್ಯಾರಂಟಿ!

“ಬಿಟ್ಟೆಲ್ಲ ಕೆಲಸವನು ಓಡೋಡಿ ಬಾ ಚೆಲುವೆ ತಂದಿರುವೆ ಹತ್ತಿ ಸೀರೆ
ಉಟ್ಟಾಗ ಸಂತೃಪ್ತಿ ಮೈ ಮನಕೆ ಉಲ್ಲಾಸ ಹೇಳೆನ್ನ ಮುದ್ದು ನೀರೆ”

      ಇಂದಿನ ನಮ್ಮ ಜಾಗತಿಕ, ಆಧುನಿಕ ಜೀವನ ಶೈಲಿಯು ನಮ್ಮ ಅಸ್ಮಿತೆಯನ್ನೇ ಅಲುಗಾಡಿಸುತ್ತ, ನಮ್ಮ ಪರಂಪರೆಯನ್ನು ಮೂಲೆಗುಂಪಾಗಿಸುವ ಹುನ್ನಾರದಲ್ಲಿದೆ ಎಂದನಿಸದೆ ಇರದು! ಹಳ್ಳಿಯ ಬದುಕಿನ ರೀತಿ ನೀತಿಯನ್ನು ಸುಖನವರ್ ಶ್ರೀಮತಿ ಶೋಭಾ ಹರಿಪ್ರಸಾದ್ ಅವರು ತುಂಬಾ ಸೊಗಸಾಗಿ ತಮ್ಮ ಗಜಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇಂದಿನ ಫಾಸ್ಟ್ಫುಡ್ ಜಮಾನದಲ್ಲಿ ಹಪ್ಪಳ, ಸಂಡಿಗೆಯ ಕುರಿತು ಮಾತನಾಡುವುದೆ ನಮಗೆ ಒಂದು ರೀತಿಯ ಸಂತಸವನ್ನು ನೀಡುತ್ತದೆ.‌ ಭೋಗ ಸಂಸ್ಕೃತಿಯ ಓಡಾಟದ ಜೀವದಲ್ಲಿ ಉಪ್ಪರಿಗೆಯಲಿ ಜೊತೆಯಾಗಿ ಕುಳಿತು ತಿನ್ನೋಣ ಎನ್ನುವುದೇ ಆಶಾದಾಯಕ ವಿಚಾರವಾಗಿದೆ. ಈ ನೆಲೆಯಲ್ಲಿ ಕೆಳಗಿನ ಷೇರ್ ನಮ್ಮ ಗ್ರಾಮೀಣ ಪ್ರದೇಶದ ಜನರ ಸಾಂಸ್ಕೃತಿಕ ಜೀವನದ ಒಳನೋಟವನ್ನು ಪ್ರತಿಧ್ವನಿಸುತ್ತದೆ.

“ಹಪ್ಪಳದ ಜೊತೆಗಿಷ್ಟು ಸಂಡಿಗೆಯ ಕರಿದು ಬಿಡು ಮುಂಗಾರು ಮಳೆ ಸುರಿದಿದೆ
ಉಪ್ಪರಿಗೆಯಲಿ ಕುಳಿತು ಚಪ್ಪರಿಸಿ ತಿನ್ನೋಣ ಒಲವೆಂಬ ಹೊಳೆ ಹರಿದಿದೆ”



      ಪ್ರೀತಿಗೂ ಒಂದು ಸೊಗಡಿದೆ, ಒಂದು ಸಾಂಸ್ಕೃತಿಕ ಸೆಳೆತವಿದೆ, ಭವ್ಯವಾದ ಪರಂಪರೆಯಿದೆ ಮತ್ತು ಜೀವನ್ಮುಖಿ ಸೆಲೆಯಿದೆ. ಇದನ್ನು ಸಾಹಿತ್ಯದ ಎಲ್ಲ ಪ್ರಕಾರಗಳಿಗಿಂತಲೂ ಗಜಲ್ ತುಂಬಾ ಆಸ್ಥೆಯಿಂದ ತನ್ನ ಷೇರ್, ಅಶಅರ್ ನಲ್ಲಿ ಕಾಪಿಟ್ಟುಕೊಂಡು ಬರುತ್ತಿದೆ. ಇಂಥಹ ಗಜಲ್ ನ ಪರಂಪರೆಯಲ್ಲಿ ಶಾಯರಾ ಶ್ರೀಮತಿ ಶೋಭಾ ಹರಿಪ್ರಸಾದ್ ಅವರು ತಮ್ಮ ಗಜಲ್ ಗಳಿಂದ ದೃಢವಾದ ಹೆಜ್ಜೆ ಗುರುತುಗಳನ್ನು ಮೂಡಿಸಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

“ಮನೆಗೆ ಹಿಂದಿರುಗಿ ಪೋಷಕರು ಅಳುತ್ತಾರೆ ಏಕಾಂತದಲ್ಲಿ
ಮಣ್ಣಿನ ಗೊಂಬೆಗಳೂ ಅಗ್ಗವಾಗಿರಲಿಲ್ಲ ಜಾತ್ರೆಯಲ್ಲಿ”
-ಕೈಸರ್-ಉಲ್ ಜಾಫರಿ

       ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ.‌ ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ,

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top