ಅರುಣಾ ನರೇಂದ್ರ-ಗಜಲ್

ಕಾವ್ಯ ಸಂಗಾತಿ

ಅರುಣಾ ನರೇಂದ್ರ-

ಗಜಲ್

ಮಧ್ಯರಾತ್ರಿ ಕಣ್ಣೀರ ಸುರಿಸುವುದ ಬಿಟ್ಟಿದ್ದೇನಂತೆ ಹೊದ್ದ ದುಪ್ಪಟ ಹೇಳಿತು
ನಿದ್ದೆ ಇರದೆ ಮಗ್ಗಲು ಬದಲಿಸುವುದ ಬಿಟ್ಟಿದ್ದೇನಂತೆ ಮಧುಮಂಚ ಹೇಳಿತು

ಬಚ್ಚಿಟ್ಟುಕೊಳ್ಳುತ್ತಿದ್ದ ಚಂದ್ರ ತಾರೆ ನಿರಾಳವಾಗಿದ್ದಾರೆ ನನ್ನ ಕಾಟ ತಪ್ಪಿತೆಂದು
ಅವನ ನೆನಪಲ್ಲಿ ಬೀದಿ ಬೀದಿ ಸುತ್ತುವುದ ಬಿಟ್ಟಿದ್ದೇನಂತೆ ಚೌರಾಹ ಹೇಳಿತು

ಸಣ್ಣಗೆ ಸಿಳ್ಳೆ ಹಾಕುತ್ತಿದೆ ಖುಷಿಯಿಂದ ತಂಗಾಳಿ ಅದಕೀಗ ನನ್ನ ಭಯವಿಲ್ಲ
ಕಿಟಕಿ ಬಾಗಿಲು ಹಾಕಿ ಪರದೆ ಎಳೆಯುವುದ ಬಿಟ್ಟಿದ್ದೇನಂತೆ ಚಿಲಕ ಹೇಳಿತು

ಹಸಿರ ಗಿಡ ಮರ ಬಳ್ಳಿ ಉಸಿರು ಹೊರಚೆಲ್ಲಿ ಹಗುರಾಗಿ ತೂಗಾಡಿವೆ
ಹಾಡುವ ಕೋಗಿಲೆಗೆ ಕಣ್ಣಲ್ಲೇ ಗದರಿಸುವುದ ಬಿಟ್ಟಿದ್ದೇನಂತೆ ಮಾಮರ ಹೇಳಿತು

ಎಲ್ಲವನ್ನು ಬಿಟ್ಟು ಬಿಡದಂತೆ ತನ್ನೆದೆಯೊಳಗೆ ಹಿಡಿದಿಟ್ಟುಕೊಂಡಿದ್ದಾಳೆ ಅರುಣಾ
ಮೈಮನ ಆವರಿಸಿಕೊಂಡವನ ಹುಡುಕುವುದ ಬಿಟ್ಟಿದ್ದೇನಂತೆ ಅಂತರಂಗ ಹೇಳಿತು


       ಅರುಣಾ ನರೇಂದ್ರ

Leave a Reply

Back To Top