ನಾನು ಓದಿದ ಪುಸ್ತಕ

ಮೌನ ಮಂದಾರ

ಕವಿ: ವಾಣಿ ಮಹೇಶ್

ಕವಯಿತ್ರಿ ವಾಣಿ ಮಹೇಶ್ ರವರ “ಮೌನಮಂದಾರ” ಪುಸ್ತಕ

*ಎಪ್ಪತ್ತು ಕವನಗಳ ಮುಪ್ಪುಬರುವವರೆಗೂ ಓದಬೇಕು ಬೆಪ್ಪ* ಎನ್ನುವ *ಮೌನ ಮಂದಾರ*

        ಮನದಲ್ಲಿ ಮತ್ತೇರಿ ಮಿಡಿದ ಭಾವನಾತ್ಮಕತೆ ಗೆ ಕೊನೆಯಿಲ್ಲ, ಎತ್ತೆತ್ತ ಸುತ್ತಿದರು ಅಂತ್ಯವಿಲ್ಲ, ಹೊತ್ತು ಮುಳುಗಿದರೂ ಪತ್ತೆ ಮಾಡುವ ಅವಕಾಶವನ್ನು ಕೊಡುವುದಿಲ್ಲ, ಅತ್ತುಅತ್ತು ಉತ್ತರಗಳು ಕಣ್ಣೀರ ಹಾಕದಿದ್ದರೆ ಮತ್ತೇರಿದ ನುಡಿಗಳು ಮೌನಿಯಾಗಿಸಿ ಸುತ್ತುವರಿಯುತ್ತವೆ. ನುಡಿಯದೇ ಭಾವನಾಕ್ಷರಗಳ ಪೋಣಿಸಿ ಗೀಚುತ್ತಿದ್ದರೆ, ಆ “ಮೌನ ಮಂದಾರ ಪುಷ್ಪ ವಾಗಿ ತನ್ನ ಸಕಲ ಶ್ರೇಷ್ಠ ಗುಣಗಳಿಂದ ಸೌರಭವನ್ನು ಸೂಸುತ್ತ ತನ್ನೆಡೆಗೆ ಸೆಳೆಯುತ್ತದೆ. ಅದರ ಸೌಂದರ್ಯ ಭಾವವು ಹಂದರವ ನಿರ್ಮಿಸಿ, ಒಂದೊಂದು ದಳಗಳು ಕವಿತೆಯಾಗಿ ಬಾಂದಳವನ್ನು ನೋಡುತ್ತಿದೆ. ಇಣುಕಿ ನಾನೋಡಿ ಒಮ್ಮೆ ಸ್ಪರ್ಶಿಸಿದೆ’. ಅದು “ಮೌನ ಮಂದಾರ”  ಪುಸ್ತಕವಾಗಿ ನನ್ನ ಕೈಸೇರಿತು, ಅದನ್ನು ಓದಿದೆ ಎನ್ನಲು ಹರ್ಷಿಸುವೆ. 



‘ಪುರುಷ ಸಮಾಜಕ್ಕೆ ಸಬಲೆ ಎಂದು ತಿಳಿಸುವ ಮತ್ತು ಮಹಿಳೆಯರಿಗೆ ಗೌರವಿಸಬೇಕೆಂಬ ಭಾವ ತುಂಬಿರುವ ಪುಸ್ತಕ ಮೌನ ಮಂದಾರ’



ಮೊದಲ ಪುಟದಲ್ಲಿ ವೀರಯೋಧನ ಕಥೆ ಹೇಳುವ ‘ಸಮರ ಸಾಮ್ರಾಟ’ ಎಂಬ ಕವಿತೆಯಲ್ಲಿ ಹೇಳುತ್ತಾರೆ; “ಒಂಟಿಯಾಗಿ ಬೆನ್ನಿಗಂಟಿದ ಸಿಡಿಮದ್ದು ಲೆಕ್ಕಿಸದೆ ಮನೋಬಲಕ್ಕೆ ಕಿವಿಗೊಟ್ಟು ವೀರಾಧಿವೀರನಂತೆ ಸದೆಬಡಿದ ಸಮರದಿ ದೇಹವೆಲ್ಲ ತೂತಾಗಿ ಕಾಲಿಲ್ಲದ ಕುಂಟನಾದರೂ ಭರತಮಾತೆಯ ಸೆರಗಿಗಂಟಿದ ನೆತ್ತರ ಒರೆಸಿ ಬಲಿಕೊಡಲು ತಂದ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದ” ಎಂಬ ಸಾಲು ವೀರಯೋಧನ ವೀರತ್ವ ದೇಶಪ್ರೇಮವನ್ನು ಎತ್ತಿಹಿಡಿಯುವ ಸಾಲುಗಳಾಗಿದ್ದು ಹೃದಯ ಸ್ಪರ್ಶಿಸುವಂತೆ ಲೇಖಕಚಿತ್ರಿಸಿದ್ದಾರೆ. 



ಇನ್ನು ‘ನೆತ್ತರ ದಾಹ’ ಎಂಬ ಕವಿತೆಯಲ್ಲಿ ಅಮಾಯಕ ಬಲಿ ತೆಗೆದುಕೊಳ್ಳುತ್ತಿರುವ ಭಯೋತ್ಪಾದಕರಿಗೆ ಕಾಮಾಂಧರಿಗೆ ಪ್ರಶ್ನಿಸುತ್ತಾ ಗಾಂಧೀಜಿ ಮತ್ತು ಬುದ್ಧರ ಅಹಿಂಸಾ ಮಂತ್ರಗಳನ್ನು ನೆನೆಸುತ್ತಾ ಧರ್ಮಕ್ಕಾಗಿ ಹೋರಾಡದೆ ಮನುಷ್ಯತ್ವ ಧರ್ಮ ಗುಣಗಳಿಗೆ, ನ್ಯಾಯಕ್ಕೆ ಹೋರಾಡಿ ಎನ್ನುತ್ತಾ ಶಾಂತಿ ಮಂತ್ರವ ಪಾಲಿಸಿ ಎಂಬ ಸಂದೇಶವನ್ನು ನೀಡಿದ್ದಾರೆ

   ಇನ್ನು ‘ದರ್ಪಣ’ ಎಂಬ ಕವಿತೆಯಲ್ಲಿ ಕನ್ನಡಿಯ ವಾಸ್ತವವನ್ನು ನೈಜತೆಯ ಗುಣಗಳನ್ನು ತೋರುತ್ತದೆ. ಅದೇ ರೀತಿ ನಾನಾ ಮುಖವಾಡಗಳನ್ನು ಧರಿಸಿ ವಿಷವನ್ನು ಅಂತರಂಗದಲ್ಲಿರಿಸಿರುವ ಮನೋವಿಕಾರಗಳಿಗೂ ಸಹ ದರ್ಪಣ ಬಿಡಬೇಕು ಎಂಬುದನ್ನು ಸುಪ್ರಿಯವಾಗಿ ವರ್ಣಿಸಿದ್ದಾರೆ. 



ಸಾಹಿತ್ಯ ಕೃಷಿಯಲ್ಲಿರುವ ಲೇಖಕರ ‘ಸಬಲೆ’  ಎಂಬ ಕವನವನ್ನು ಗಮನಿಸಿದರೆ “ಒಂಟಿ ಜೀವ ಕಾಲಿ ಕೈಯಲ್ಲಿ ಹೊರಟೆ ಅರಿಯದ ದೂರದೂರಿನತ್ತ ದಿನವಿಡೀ ದುಡಿತ ಸಂಜೆಯಾಯಿತೆಂದರೆ ಜ್ಞಾನಾರ್ಜನೆಯ ತುಡಿತ ಅಂತೂ ಗಿಟ್ಟಿಸಿ.. ಬಿಟ್ಟೆ ಪದವಿಯ” ಈ ಕವಿತೆಯಲ್ಲಿ ಹೆಣ್ಣಿನ ಮನಸ್ಸು ಮೃದುವಾಗಿದ್ದರೂ ದಿಟ್ಟ ಹೆಜ್ಜೆ ಇಟ್ಟು ನಿಂತರೆ ಸಾಧನೆಯಲ್ಲಿ ಗುರಿಮುಟ್ಟುವಳು, ಒಂಟಿ ತಾನಾದರೂ ಧೃತಿಗೆಡದೆ ಜೀವನದಲ್ಲಿ ತಟ್ಟುತ್ತಾ ಇರಬಹುದಾದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಜ್ಞಾನಾರ್ಜನೆ ಪಡೆದು ತನ್ನ ಸಾಧನೆಯಲ್ಲಿನ ನೂರಾರು ಕಷ್ಟಗಳನ್ನು ಗೆದ್ದು ತನ್ನ ಬದುಕನ್ನು ಕಟ್ಟಿಕೊಂಡು ಬದುಕಬಲ್ಲಳು ಎಂಬ ಕಟು ಸತ್ಯವನ್ನು ಹೊರಗೆಳೆದಿದ್ದಾರೆ.

ಇನ್ನು ‘ಗುಬ್ಬಿ’ ಎಂಬ ಶಿಶುಗೀತೆ ಯಲ್ಲಿ ಮಗುವಿನ ಹಿಂದುಮುಂದೊಬ್ಬರು ನಿಂತು ಜೀವನ ಪಾಠ ಕಲಿಸಿಕೊಡುವ ಅಪ್ಪ ಅಮ್ಮನ ಪಾತ್ರವನ್ನು ಪುಳಕ ಬರುವ ಕಾವ್ಯಾತ್ಮಕ ನೇರನುಡಿ ಗಳಿಂದ ಚಿತ್ರಿಸಿದ್ದಾರೆ

ಶೋಚನೀಯ ಕಥೆ ಹೇಳುವ ‘ಕಾಮದಬ್ಬರ’, ‘ಶಂಖೆಯ ಅಟ್ಟಹಾಸ’, ‘ಜನನ ಮರಣ’ ಮುಂತಾದವು ಕಣ್ಣೀರು ತರಿಸುತ್ತವೆ. ‘ನಂಜಿನ ಮನೆ’ ಯಲ್ಲಿ ಬರುವ “ಮುಂಜಾವಿನ ಮಂಜಲ್ಲಿ ಯಿಂದ ಸುಮವೊಂದು ಬಾಡಿದೆ ಪುರುಷನೋರ್ವನ ಗರ್ವದ ಕಾಮ ಕೇಳಿಗೆ ಸಿಲುಕಿ ನಲುಗಿದೆ” ಇದು ಅರಳಿದ ಸುಮದಂತಿರುವ ಹೆಣ್ಗರುಳ ಬಳ್ಳಿಗೆ ಕೊಳ್ಳಿಹಿಡಿದು ಕಮರಿದಂತಾಗುವ ಸಾಲುಗಳು ಓದುಗರ ಮನಕಲಕುತ್ತದೆ.



       ಇನ್ನು ‘ದೇವದಾಸಿ’ ಎಂಬ ಕವನದಲ್ಲಿ “ಊರಿಗೊಬ್ಬಳೇ ದೇವದಾಸಿ ಉರಿ ಮೊಗದಿ ಉಗಿದಟ್ಟಿದ ಪತಿವ್ರತೆಯರು ಸಹಿಸಿ ಸಾಕಾಗಿ ಬೇಕಾಗಿ ಬಂದ ಕಸುಬಲ್ಲವಿದೆಂದರೂ ಕೇಳುವರಾರು” ಕವಿತೆಯಲ್ಲಿ ಹಿಂದಿನ ಅನಿಷ್ಠ ಪದ್ದತಿಯಿಂದ ದೇವದಾಸಿ ಪಟ್ಟ ಕಟ್ಟಿ ಕಾಮಾಗ್ನಿ ಕೂಪಕ್ಕೆ ತಳ್ಳಿ ಹೆಣ್ಣಿನ ಜೀವನ ನರಕವಾಗಿಸಿ ಇದು ನನ್ನ ಕಸುಬಲ್ಲ ಎಂದರೂ ಕೇಳದೆ ಶೋಷಣೆಗೊಳಗಾಗುವ ಒಂದು ಹೆಣ್ಣಿನ ಕಥೆಯನ್ನು ಲೇಖಕರು ಕಣ್ಣೀರು ತರಿಸುವಂತೆ ಚಿತ್ರಿಸಿದ್ದಾರೆ. 



     ಸಾಹಿತ್ಯ ಕೃಷಿಗೆ ಕವಿಯ ಮನವೇ ಹೊಲವಾದರೆ ಭಾವಗಳ ನೇಗಿಲಿನಿಂದ ಹದ ಮಾಡಿ ಪದಗಳ ಸುಬೀಜ ಬಿತ್ತಿ ಮಾಧುರ್ಯತೆಯ ನೀರುಗೊಬ್ಬರ ನೀಡಿದಾಗ ಉತ್ತಮ ಫಲ ದೊರೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ರಚಿತವಾದ ಒಂದೊಂದು ಕವನ ಓದುತ್ತ ಸಾಗಿದರೆ ಕರುಣೆ ಅನುಭವ, ಮಹಿಳಾ ಶೋಷಣೆ, ಮೌನ ಸಿಡಿದೇಳುವಕೆ ನೋವು, ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ಮಹಿಳೆಗೆ ಪ್ರಾಧಾನ್ಯತೆ ಮತ್ತು ಗೌರವ ಭಾವಗಳ ವಿಚಾರ ವೈಖರಿ ಕಾಣುತ್ತದೆ  ಕವಿತೆಗಳ ಎಲ್ಲಾ ಪದಗಳಲ್ಲಿ ಒಂದೊಂದು ಅನುಭವದ ಪ್ರಯೋಗಮಾಡಿ ವಿಭಿನ್ನ ಮನಸ್ಸಿನಿಂದ ಮುಕ್ತವಾಗಿ ಮಾಧುರ್ಯ ತುಂಬಿ “ಮೌನಮಂದಾರ”ವೆಂಬ ಪುಸ್ತಕವನ್ನು ಹೊರತಂದಿದ್ದಾರೆ ಎಂಬುದು ನನ್ನ ಅಭಿಪ್ರಾಯ

*******

ಚಂದ್ರು ಪಿ ಹಾಸನ್

8 thoughts on “ನಾನು ಓದಿದ ಪುಸ್ತಕ

  1. ಥ್ಯಾಂಕ್ಯೂ ಚಂದ್ರು. ತುಂಬಾ ಚೆನ್ನಾಗಿ ವಿಮರ್ಶಿಸಿರುವಿರಿ. ಸಾಹಿತ್ಯಾಸಕ್ತರೇ ಕಡಿಮೆ ಆಗುತ್ತಿರುವ ಇಂದಿನ ದಿನಗಳಲ್ಲಿ ಪುಸ್ತಕ ಪೂರ್ತಿ ಓದಿ ಅದನ್ನು ವಿಮರ್ಶಿಸಿರುವುದು ನಿಜಕ್ಕೂ ಸಂತಸದ ಸಂಗತಿ.

  2. ಸುಂದರ ಅರ್ಥಪೂರ್ಣ ಪುಸ್ತಕ ಪರಿಚಯ….
    ಧನ್ಯವಾದಗಳು……
    ಅಭಿನಂದನೆಗಳು ಮನಸೇ…..

    1. ತಮ್ಮ ಆತ್ಮೀಯ ಪ್ರೋತ್ಸಾಹಕ್ಕೆ ಹೃದಯಪೂರ್ವಕ ಧನ್ಯವಾದಗಳು

  3. ಸಕಾರಾತ್ಮಕ ವಿಮರ್ಶೆಗಾಗಿ ಅಭಿನಂದನೆಗಳು

    1. ತಮ್ಮ ಪ್ರೋತ್ಸಾಹಕ್ಕೆ ಆತ್ಮೀಯ ಧನ್ಯವಾದಗಳು

Leave a Reply

Back To Top