ರವೀಂದ್ರ ರವರ ಗಜಲ್ ಗಳಲ್ಲಿಸಾಮಾಜಿಕ ಕಳಕಳಿ

ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ರವೀಂದ್ರ ರವರ ಗಜಲ್ ಗಳಲ್ಲಿ

ಸಾಮಾಜಿಕ ಕಳಕಳಿ

ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಸೌಖ್ಯವಾಗಿರುವಿರಿ ಎಂಬ ಭಾವದೊಲವಿನೊಂದಿಗೆ ತಮ್ಮ ಮುಂದೆ ಗಜಲ್ ಗಂಗೆ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಏನಿದ್ದರೂ ಇವಾಗ ಗಜಲಯಾನ…

“ನೀನು ಪ್ರೀತಿಯನ್ನು ಆಟವೆಂದುಕೊಂಡಿರುವೆ;
ಅದಕ್ಕಾಗಿ ನಾನು ಬದುಕನ್ನೇ ಹಾಳು ಮಾಡಿಕೊಂಡಿರುವೆ”
-ಬಷೀರ್ ಬದ್ರ್

      ಮನುಕುಲದ ಜೀವಂತಿಕೆಯಲ್ಲಿ, ಅವರ ನೆಮ್ಮದಿಯಲ್ಲಿ ‘ಹೃದಯ’ದ ಪಾತ್ರ ಅನನ್ಯ. ಇದು ಹೆಚ್ಚು ಬಡಿದರೂ ಕಷ್ಟ, ಬಡಿಯದೆ ಇದ್ದರೂ ಕಷ್ಟ! ಭಾವುಕ ಹೃದಯ ಮತ್ತು ಸಂದೇಹಾಸ್ಪದ ಮನಸ್ಸು ಶಾಂತಿ ಮರೀಚಿಕೆಯಾಗುವಂತೆ ಮಾಡುತ್ತದೆ.‌ ಮೃದುವಾದ ಹೃದಯಗಳು ಈ  ಪ್ರಪಂಚವನ್ನು ಬದುಕಲು ಯೋಗ್ಯವಾಗಿಸುತ್ತವೆ. ಆದಾಗ್ಯೂ ಹೃದಯಗಳು ಗಾಯಗೊಳ್ಳುವ ಮೂಲಕ ಬದುಕುತ್ತವೆ ಎಂಬುದಂತೂ ಸತ್ಯ! ನಾವು ಸಲಹುತ್ತಿರುವ, ಪೋಷಿಸುತ್ತಿರುವ ಕೋಪ, ಅಸಮಾಧಾನ ಮತ್ತು ಅಸೂಯೆ ಯಾವತ್ತೂ ಇತರರ ಹೃದಯವನ್ನು ಬದಲಾಯಿಸುವುದಿಲ್ಲ, ಅದೇನಿದ್ದರೂ ನಮ್ಮ ಹೃದಯವನ್ನು ಮಾತ್ರ ಬದಲಾಯಿಸಬಲ್ಲದು, ಘಾಸಿಗೊಳಿಸಬಲ್ಲದು. ಅದಕ್ಕೆ ಯಾರು ಮಗುವಿನ ಹೃದಯವನ್ನು ಕಳೆದುಕೊಳ್ಳದೆ ಜೀವಿಸುತ್ತಾರೊ ಅವರು ಮಹಾನ್ ವ್ಯಕ್ತಿಗಳಾಗಲು ಸಾಧ್ಯ ಎಂದು ಹೇಳಲಾಗುತ್ತದೆ. ಹೃದಯವು ಯಾವಾಗಲೂ ಕ್ಷಮಿಸುವ ಶಕ್ತಿಯನ್ನು ಹೊಂದಿರುತ್ತದೆ. ಸಂಸಾರದಲ್ಲಿ ತಲೆಗಳಿರುವಷ್ಟು ಮನಸುಗಳಿರುವುದು ನಿಜವಾದರೆ , ಹೃದಯಗಳಿರುವಷ್ಟು ಪ್ರೀತಿಯೂ ಇದೆ ಎಂಬುದನ್ನು ಮರೆಯುವಂತಿಲ್ಲ.‌ “ವಿದಾಯವು ಅವರ ಕಣ್ಣುಗಳಿಂದ ಪ್ರೀತಿಸುವವರಿಗೆ ಮಾತ್ರ. ಏಕೆಂದರೆ ಹೃದಯ ಮತ್ತು ಆತ್ಮದಿಂದ ಪ್ರೀತಿಸುವವರಿಗೆ ಪ್ರತ್ಯೇಕತೆಯಿಲ್ಲ” ಎಂಬ ಪರ್ಷಿಯನ್ ಸೂಫಿ ಸಂತ ಜಲಾಲುದ್ದೀನ್ ರೂಮಿಯವರ ಈ ಮಾತು ಹೃದಯ ಮತ್ತು ಪ್ರೀತಿಯ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ಈ ಪ್ರೀತಿಯೇ ಇಂದು ಜಗತ್ತನ್ನು ಗುರಾಣಿಯಾಗಿ ಕಾಪಾಡುತ್ತಿರುವುದು. ಒಬ್ಬಂಟಿಯಾಗಿ ಬದುಕಲು ಪ್ರಯತ್ನಿಸುವ ವ್ಯಕ್ತಿಯು ಎಂದಿಗೂ ಮನುಷ್ಯನಾಗಿ ಯಶಸ್ವಿಯಾಗುವುದಿಲ್ಲ. ಇನ್ನೊಂದು ಹೃದಯಕ್ಕೆ ಉತ್ತರ ಕೊಡದ ವ್ಯಕ್ತಿಯ ಹೃದಯ ಬತ್ತಿ ಹೋಗುತ್ತದೆ. ಮನುಷ್ಯ ಕೇವಲ ತನ್ನ ಸ್ವಂತ ಆಲೋಚನೆಗಳ ಪ್ರತಿಧ್ವನಿಗಳನ್ನು ಮಾತ್ರ ಕೇಳಿದರೆ ಸಾಲದು, ಇತರರಿಗೂ ಸ್ಪಂದಿಸಬೇಕು. ಈ ದಿಸೆಯಲ್ಲಿ ಗಮನಿಸಿದಾಗ ಒಲವಿನ ಅಪ್ಪುಗೆಯಲ್ಲಿ ಭಾವನೆಗಳಿವೆ, ಗೌರವ ಮತ್ತು ಪ್ರೀತಿಯ ರೂಪಗಳಿವೆ ಎಂಬುದು ಮನದಟ್ಟಾಗುತ್ತದೆ. ನಮ್ಮ ಭೂತಕಾಲದ ಕಾರಣದಿಂದ ನಮ್ಮ ಹೃದಯವನ್ನು ಭವಿಷ್ಯಕ್ಕೆ ಗಟ್ಟಿಯಾಗಿಸಲು ಸಾಧ್ಯವಿಲ್ಲ. ಅಂತೆಯೇ ಪ್ರೀತಿಯ ಹೃದಯವು ಜ್ಞಾನದ ಮೂಲವಾಗಿದೆ ಎನ್ನಲಾಗುತ್ತದೆ.‌ “ಸಂಗೀತ ಹೃದಯದ ಸಾಹಿತ್ಯ; ಮಾತು ಕೊನೆಗೊಳ್ಳುವ ಸ್ಥಳದಲ್ಲಿ ಅದು ಪ್ರಾರಂಭವಾಗುತ್ತದೆ” ಎಂಬ ಫ್ರೆಂಚ್ ಲೇಖಕಿ ಅಲ್ಫೋನ್ಸ್ ಡಿ ಲಾಮಾರ್ಟಿನ್ ರವರು ಹೃದಯದ ಭಾಷೆ ಕುರಿತು ಹೇಳಿದ್ದಾರೆ. ಭಾಷೆಗೆ ಯಾವುದೇ ಗಡಿ, ಸೀಮೆಗಳೂ ಇಲ್ಲ. ಇದೊಂದು ಸೀಮಾತೀತ. ಇದು ಜನರ ಹೃದಯದ ಕೀಲಿಕೈ. ಇಂಥಹ ಹೃದಯವನ್ನು ನೆಚ್ಚಿಕೊಂಡ ಕಾವ್ಯ ಪ್ರಕಾರಗಳಲ್ಲಿ ಗಜಲ್ ಗೆ ಅಗ್ರ ಸ್ಥಾನವಿದೆ. ಅಂತೆಯೇ ಪ್ರತಿಯೋರ್ವ ಬರಹಗಾರ ತಾವೂ ಒಂದು ಗಜಲ್ ಬರೆಯಲು ಬಯಸುತ್ತಾರೆ ಎಂಬುದು ಇಂದಿನ ಉವಾಚವಾಗಿದೆ! ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಕನ್ನಡ ಸಾರಸ್ವತ ಲೋಕವು ಅಸಂಖ್ಯಾತ ಸುಖನವರ್ ಅವರಿಂದ ಕಂಗೊಳಿಸುತ್ತಿದೆ. ಅವರುಗಳಲ್ಲಿ ಶ್ರೀ ಬಿ.ಆರ್. ರವೀಂದ್ರ ರವರೂ ಒಬ್ಬರು.‌

      ‘ರಾಣಾ’ ಎಂಬ ಕಾವ್ಯನಾಮದಿಂದ ಕನ್ನಡಿಗರ, ಕನ್ನಡ ಸಾಹಿತ್ಯ ಲೋಕದಲ್ಲಿ
ಮನೆಮಾತಾಗಿರುವ ಶ್ರೀ ಬಿ.ಆರ್.ರವೀಂದ್ರ ರವರು ೧೯೮೦ ರ ಮೇ ೧೩ ರಂದು ಕೋಲಾರ ಜಿಲ್ಲೆಯ ಕೋಲಾರ ತಾಲ್ಲೂಕಿನ ಬೆಳ್ಳಂಬರಿ ಗ್ರಾಮದಲ್ಲಿ ಶ್ರೀಮತಿ ಹೇಮಾವತಮ್ಮ ಹಾಗೂ ಶ್ರೀ ಬಿ.ಕೆ.ರಾಮಚಂದ್ರಪ್ಪ ದಂಪತಿಗಳ ಮಗನಾಗಿ ಜನಿಸಿದರು. ೨೦೦೩ ರಲ್ಲಿ ಕೋಲಾರದ ಕಾನೂನು ಮಹಾವಿದ್ಯಾಲಯದಲ್ಲಿ ತಮ್ಮ ಕಾನೂನು ಪದವಿಯನ್ನು ಪಡೆದು, ಅಂದಿನಿಂದ ವಕೀಲ ವೃತ್ತಿಯನ್ನು ಮಾಡುತ್ತಿದ್ದಾರೆ. ಶ್ರೀಯುತರು ತಮ್ಮ ಪ್ರೌಢಶಾಲಾ ದಿನಗಳಿಂದಲೆ ಸಾಹಿತ್ಯದ ಒಲವನ್ನು ಹೊಂದಿದ್ದು, ಕಥೆ, ಕವನ, ಲೇಖನ, ನಾಟಕ… ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತಿಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಶ್ರೀಯುತರು ಅವುಗಳೊಂದಿಗೆ ಹೈಕು, ಲೇಖನ, ಸಂಶೋಧನಾ ಬರಹ, ವಿಮರ್ಶೆ, ಗಜಲ್… ಮುಂತಾದ ವೈವಿಧ್ಯಮಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. ‘ಅಂತಃಪುರ ಗೀತೆ’ ಎಂಬ ಕವನ ಸಂಕಲನ, ‘ಯಕ್ಷಪ್ರಸಂಗ’ ಎಂಬ ನಾಟಕ, ‘ಕತ್ತಲು ಮತ್ತು ಬೆಳಕು’ ಎಂಬ ಕವನ ಸಂಕಲನ ಹಾಗೂ ‘ಅಪರಿಚಿತನ ಅಂತರಂಗದ ಗಜಲ್’ ಎಂಬ ಗಜಲ್ ಸಂಕಲನ… ಮುಂತಾದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.

     ರವೀಂದ್ರ ರವರು ವೃತ್ತಿಯಿಂದ ವಕೀಲರಾದರು ಪ್ರವೃತ್ತಿಯಿಂದ ಸಾಹಿತಿಗಳು ಹಾಗೂ ಉತ್ತಮ ಸಂಘಟಕರಾಗಿದ್ದು ತಮ್ಮನ್ನು ತಾವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ. ಇವರು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯದ ಒಲವನ್ನು ಹಂಚಿಕೊಂಡಿದ್ದಾರೆ. ಇವರ ಅನೇಕ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆಯನ್ನು ಗಳಿಸಿವೆ. ಶ್ರೀಯುತರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ರಾಜ್ಯದ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಸಾಹಿತ್ಯ ಶರಭ ಪ್ರಶಸ್ತಿ, ಕರ್ನಾಟಕ ಸೇವಾ ರತ್ನ ಪ್ರಶಸ್ತಿಗಳು ಪ್ರಮುಖವಾಗಿವೆ.

     ಇಂದು ನಾವು ದಾಖಲೀಕರಣದ ದುನಿಯಾದಲ್ಲಿ ಜೀವಿಸುತಿದ್ದೆವೆ. ಆದರೆ
ನಿಜವಾದ ಪ್ರೀತಿಗೆ ಪುರಾವೆಗಳ ಅಗತ್ಯವಿಲ್ಲ ಎಂಬುದನ್ನೆ ಮರೆಯುತಿದ್ದಾನೆ. ನಮ್ಮ ಕಣ್ಣುಗಳೇ ನಮ್ಮ ಹೃದಯದ ಭಾವನೆಗಳನ್ನು ಹೇಳುತ್ತವೆ. ಆದರೆ ಕಣ್ಣುಗಳಿಂದ ನೋಡುವ ಹೃದಯದಿಂದ ಅನುಭವಿಸುವ ಸಂಖ್ಯೆ ಚಿಕ್ಕದಾಗಿದೆ. ಈ ನೆಲೆಯಲ್ಲಿ ನಮ್ಮ ಹೃದಯದಲ್ಲಿ ಬೆಳಕಿದ್ದರೆ ನಮ್ಮ ಗಜಲ್ ರಚನೆ ಹೃದಯಗಳೊಂದಿಗೆ ಬೆಸೆಯಲು ಸೇತುವೆಯಾಗುತ್ತದೆ. ಅತ್ಯುತ್ತಮ ಗಜಲ್ ಗಳು ಹೃದಯದಿಂದ ಬರುತ್ತವೆಯೇ ಹೊರತು ಬರಿಯ ಬುದ್ಧಿಯಿಂದಲ್ಲ! ಕಾರಣ ಅದರಲ್ಲಿ ಅವಿತಿರುವ ಪ್ರೀತಿ ಎಲ್ಲಾ ಭಾವೋದ್ರೇಕಗಳಿಗಿಂತ ಪ್ರಬಲವಾಗಿದೆ.‌ ಅದು ಏಕಕಾಲದಲ್ಲಿ ತಲೆ, ಹೃದಯ ಮತ್ತು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಹೊಂದಿದೆ. ಈ ನೆಲೆಯಲ್ಲಿ ಗಜಲ್ ಗೋ ಬಿ.ಆರ್. ರವೀಂದ್ರ ರವರ ‘ಅಪರಿಚಿತನ ಅಂತರಂಗದ ಗಜಲ್’ ಸಂಕಲನವನ್ನು ಅವಲೋಕಿಸಿದಾಗ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಒಡೆದ ಹೃದಯ, ನೋವಿನ ಸೂತಕ, ಕನವರಿಕೆ, ನಿರೀಕ್ಷೆ…ಇವುಗಳ ಜೊತೆಗೆ ಸಾಮಾಜಿಕ ಕಳಕಳಿ, ವ್ಯವಸ್ಥೆಯ ಚಿತ್ರಣ, ರಾಜಕೀಯ ಪಕ್ಷಗಳ ಹಗ್ಗಜಗ್ಗಾಟ, ವರ್ತಮಾನದ ತಲ್ಲಣಗಳು, ಅರಾಜಕತೆಯ ಅವಾಂತರ, ಅತ್ಯಾಚಾರದ ರಕ್ತದೋಕುಳಿ, ಸಂಬಂಧಗಳ ತೊಳಲಾಟ, ಮುಖವಾಡಗಳ ಅಟ್ಟಹಾಸ, ಬೆವರಿನ ರುಚಿ….ಎಲ್ಲವುಗಳು ನಮ್ಮ ಹೃದಯದ ಬಾಗಿಲನ್ನು ತಟ್ಟುತ್ತವೆ.

“ಅವಮಾನಿಸುವವರು ಸಾವಿರ ಜನರಿದ್ದಾರೆ ಅಂಜದಿರು
ಮೇಲೇಳುವವರನ್ನು ತುಳಿಯುವವರಿದ್ದಾರೆ ಅಂಜದಿರು”

ಸುಖನವರ್ ರವೀಂದ್ರ ರವರು ವೃತ್ತಿಯಿಂದ ವಕೀಲರು. ಸಹಜವಾಗಿಯೇ ಇವರಿಗೆ ಸಮಾಜದ, ಜನರ ನಾಡಿ ಮಿಡಿತದ ಪರಿಚಯ ಇದ್ದೇ ಇರುತ್ತದೆ. ಇಲ್ಲಿ ರವೀಂದ್ರ ರವರು ‘ಅಂಜದಿರು’ ಎಂಬ ರದೀಫ್ ನೊಂದಿಗೆ ನೊಂದ ಮನಸ್ಸಿಗೆ ಸಾಂತ್ವನ ಹೇಳುತ್ತ, ಸಮಾಜದ ಕರಾಳತೆಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಅಂಜಿದರೆ ಅಂಜಿಸುವ ಜನರ ಮಧ್ಯೆ ಹೇಗೆ ಜೀವನ ಸಾಗಿಸಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.

“ಹೇಗಾದರೂ ಆಗಲಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಘೋಷಿಸಿಬಿಡಿ ಉಚಿತ
ಆಗಾಗ ಯಾಮಾರಿಸಿ ಅಧಿಕಾರ ಹಿಡಿಯಲೇಬೇಕು ಘೋಷಿಸಿಬಿಡಿ ಉಚಿತ”

ಮನುಷ್ಯನ ಸರ್ವತೋಮುಖ ಅಭಿವೃದ್ಧಿಯಲ್ಲಿ ರಾಜಕೀಯದ ಪಾತ್ರ ಅಪಾರವಾಗಿದೆ. ಆದರೆ ಯಾವಾಗ ರಾಜಕೀಯ ಎನ್ನುವುದು ‘ಸೇವೆ’ಯಿಂದ ‘ಬಂಡವಾಳ’ದತ್ತ ತಿರುಗಿತೋ  ಅಂದಿನಿಂದ ರಾಜಕೀಯ ವ್ಯವಸ್ಥೆಯ ಚಿತ್ರಣವೇ ಬದಲಾಗಿದೆ. ಇಲ್ಲಿ ಸುಖನವರ್ ರವೀಂದ್ರ ರವರು ‘ಘೋಷಿಸಿಬಿಡಿ ಉಚಿತ’ ಎಂಬ ರದೀಫ್ ಮೂಲಕ ಇಂದಿನ ರಾಜಕೀಯ ಸ್ಥಿತಿಗತಿ, ಜನಸಾಮಾನ್ಯರ ಮನೋಲಹರಿ, ಶ್ರೀಮಂತಿಕೆಯ ಕಪಟತನ..‌ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ದಾಖಲಿಸಿದ್ದಾರೆ. ಈ ‘ಉಚಿತ’ ಎನ್ನುವುದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗದೆ ಪಕ್ಷಾತೀತವಾಗಿ ಎಲ್ಲೆಡೆ ಪಸರುತ್ತಿರುವುದು ಶೋಚನೀಯ. ‘ಉಚಿತ’ ಕುರಿತು ಚರ್ಚಿಸುವ, ತೆಗಳುವ ಜನರು ಆ ಉಚಿತದ ಫಲಾನುಭವಿಗಳಾಗುತ್ತಿರುವುದು ಮನುಷ್ಯನ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿಯಾಗಿದೆ.

     ಮನುಷ್ಯನ ಹೃದಯವು ಮನಸ್ಸು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಸಮಸ್ಯೆಗಳನ್ನು ಹೊಂದಿದೆ. ದಣಿದ ಹೃದಯವು ಬಡಿತವನ್ನು ನಿಲ್ಲಿಸುವವರೆಗೆ ಗಜಲ್ ತನ್ನ ಅಶಅರ್ ಮೂಲಕ ಆ ಹೃದಯದೊಂದಿಗೆ ಸಂವಾದ ಮಾಡುತ್ತಲೇ ಇರುತ್ತದೆ. ಇಂಥಹ ಗಜಲ್ ಗಳು ಗಜಲ್ ಗೋ ಶ್ರೀ ಬಿ.ಆರ್.ರವೀಂದ್ರ ಅವರಿಂದ ಮತ್ತಷ್ಟು ಮೊಗೆದಷ್ಟೂ ರೂಪುಗೊಳ್ಳಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.‌

ನಾನು ಪದಗಳನ್ನು ಬರೆಯುವೆ ಅವರು ಭಾವನೆಗಳನ್ನು ಅರಿಯಲಿ
ಇದೊಂದು ಅಪೂರ್ಣ ಕಥೆ
ಹೀಗಾದರೂ ಪರಿಪೂರ್ಣಗೊಳ್ಳಲಿ”
-ಮೊನಿಕಾ ಭಾರದ್ವಾಜ್

       ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ.‌ ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ, 

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top