ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಉಮೇಶ್ ಮುನವಳ್ಳಿ ಯವರ ಗಜಲ್ ಗಳಲ್ಲಿ

ಪ್ರೇಮಿಗಳ ತಳಮಳ

ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಸೌಖ್ಯವಾಗಿರುವಿರಿ ಎಂಬ ಭಾವದೊಲವಿನೊಂದಿಗೆ ತಮ್ಮ ಮುಂದೆ ಗಜಲ್ ಗಂಗೆ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಏನಿದ್ದರೂ ಇವಾಗ ಗಜಲಯಾನ…

“ಜೀವನವು ಕಣ್ಣೀರಿನ ಬಟ್ಟಲು ಆಗಿತ್ತು
 ಕುಡಿದದ್ದೇ ಒಂದು ಚೆಲ್ಲಿದ್ದು ಮತ್ತೊಂದು”
-ಶಾಹೀದ್ ಕಬೀರ್

       ಕಲಿಕೆ ಎನ್ನುವುದು ಒಂದು ಘಟನೆ, ಒಂದು ದಿನದ ಕ್ರಿಯೆಯಲ್ಲ, ಇದೊಂದು ಜೀವಮಾನದ ಪ್ರಕ್ರಿಯೆ. ಇದು ಮನಸ್ಸನ್ನು ಎಂದಿಗೂ ದಣಿಸುವುದಿಲ್ಲ.  ಕಲಿಕೆ ಎಂಬುದು ಶಾಲಾ ಶಿಕ್ಷಣದ ಉತ್ಪನ್ನವಲ್ಲ. ಆದರೆ ಇದನ್ನು ಪಡೆಯಲು ಜೀವಿತಾವಧಿಯ ಪ್ರಯತ್ನ ಬೇಕು. ಕಲಿಯುತ್ತಲೇ ಇರುವ ಯಾರಾದರೂ ಸದಾ ಯೌವ್ವನಾವಸ್ಥೆಯಲ್ಲಿಯೇ ಇರುತ್ತಾರೆ. ಅಂತೆಯೇ ನಮ್ಮ ಮನಸ್ಸನ್ನು ಯೌವ್ವನವಾಗಿ ಇಟ್ಟುಕೊಳ್ಳುವುದೇ ಜೀವನದ ಶ್ರೇಷ್ಠ ವಿಷಯ. ಇಂಥಹ ಯೌವ್ವನವನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ಕಲಿಕೆಯು ಆಕಸ್ಮಿಕವಾಗಿ ಸಾಧಿಸಲ್ಪಡುವುದಿಲ್ಲ. ಬದಲಿಗೆ ಇದನ್ನು ಶ್ರದ್ಧೆಯಿಂದ ಹುಡುಕಬೇಕು. ಕಲಿಕೆಯಲ್ಲಿ ಕುತೂಹಲ ತುಂಬಾ ಮುಖ್ಯ.‌ ಇದು ಕಲಿಕೆಯ ಮೇಣದಬತ್ತಿಯಲ್ಲಿನ ಬತ್ತಿಯಾಗಿದೆ. ಕಲಿಕಾರ್ಥಿಗಳು ಕುತೂಹಲದ ಮೂಲಕ ಕಲಿತರೆ, ಅವರು ಬದುಕಿರುವವರೆಗೂ ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯ. ಅಂತೆಯೇ ಕಲಿಯಲು ಸಿದ್ಧರಿಲ್ಲದಿದ್ದರೆ ಯಾರೂ ಸಹಾಯ ಮಾಡಲಾರರು. ಅದೇ ಕಲಿಯಲು ನಿರ್ಧರಿಸಿದರೆ ಯಾರೂ ತಡೆಯಲಾರರು ಎನ್ನಬಹುದು. ನಿಖರವಾಗಿ ಮಾತನಾಡುವ ಸಾಮರ್ಥ್ಯವು ನಿಖರವಾಗಿ ತಿಳಿದುಕೊಳ್ಳುವ ಸಾಮರ್ಥ್ಯದೊಂದಿಗೆ ಬೆಸೆದುಕೊಂಡಿದೆ. ಈ ನೆಲೆಯಲ್ಲಿ “ದೀರ್ಘಾವಧಿಯಲ್ಲಿ ಸ್ಪೂನ್ ಫೀಡಿಂಗ್ ನಮಗೆ ಚಮಚದ ಆಕಾರವನ್ನು ಹೊರತುಪಡಿಸಿ ಏನನ್ನೂ ಕಲಿಸುವುದಿಲ್ಲ” ಎಂಬ ಆಂಗ್ಲ ಲೇಖಕ ಇ.ಎಮ್ ಫಾರ್ಸ್ಟರ್ ರವರ ಈ ಮಾತು ಇಂದಿನ ಕಲಿಕೆಯ ಮನಸ್ಥಿತಿಯನ್ನು ಪ್ರತಿನಿಧಿಸುತ್ತಿದೆ. ಎಲ್ಲವೂ ಬೇಕು, ಶ್ರಮ ಬೇಡ ಎನ್ನುವ ಭೋಗ ಸಂಸ್ಕೃತಿ ಎಲ್ಲೆಡೆ ವ್ಯಾಪಿಸುತ್ತಿರುವುದು ನಗ್ನ ಸತ್ಯ. ಸಣ್ಣ ಮನಸ್ಸುಗಳು ಯಾವಾಗಲೂ ತಮಗೆ ಅರ್ಥವಾಗದ ವಿಷಯಗಳ ಬಗ್ಗೆ ಉದ್ಧಟತನ ನಡೆಸುತ್ತವೆ. ಇದು ಬದಲಾಗಬೇಕಾದರೆ ನಾವು ಕನಸು ಕಾಣುವುದನ್ನು, ನಂಬುವುದನ್ನು, ಪ್ರಯತ್ನಿಸುವುದನ್ನು ಹಾಗೂ ಕಲಿಯುವುದನ್ನು ಎಂದಿಗೂ ನಿಲ್ಲಿಸಬಾರದು. ಕಲಿಕೆ ಮಗುವಿನ ಆಟವಲ್ಲ; ಇಲ್ಲಿ ನೋವು ಇಲ್ಲದೆ ಯಾವುದನ್ನೂ ಕಲಿಯಲು ಸಾಧ್ಯವಿಲ್ಲ. ಕಲಿಯಲು ಅಸಮರ್ಥರಾದ ಎಲ್ಲರೂ ಬೋಧನೆಗೆ ಮುಂದಾಗುತ್ತಾರೆ. ಆಲೋಚನೆಯಿಲ್ಲದೆ ಕಲಿತರೆ ಶ್ರಮವು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ; ಕಲಿಕೆಯಿಲ್ಲದ ಬರಿ ಆಲೋಚನೆ ತುಂಬಾ ಅಪಾಯಕಾರಿ. ಈ ದಿಸೆಯಲ್ಲಿ ಗಮನಿಸಿದಾಗ ಸಾರಸ್ವತ ಲೋಕದಿಂದಲೂ ಕಲಿಕೆ ಸಾಧ್ಯ ಎಂಬುದನ್ನು ಅಲ್ಲಗಳೆಯಲಾಗದು. ಇಂಥಹ ಸಾಹಿತ್ಯದಲ್ಲಿ ಬದುಕಿನ ತೇಹಜೀಬ್ ಗೆ ಹತ್ತಿರವಾಗಿರುವ ಗಜಲ್ ಇಂದು ಎಲ್ಲರ ಮನವನ್ನು ಸೆಳೆಯುತ್ತಿದೆ. ಅಂತೆಯೇ ಕನ್ನಡ ವಾಙ್ಮಯ ಲೋಕದಲ್ಲಿ ಗಜಲ್ ಹಂಗಾಮ ಶುರುವಾಗಿದ್ದು ಅಸಂಖ್ಯಾತ ಬರಹಗಾರರು ಗಜಲ್ ಗಂಗೆಯಲ್ಲಿ ಮುಳುಗಿದ್ದಾರೆ. ಅವರಲ್ಲಿ ಶ್ರೀ ಉಮೇಶ್ ಮುನವಳ್ಳಿ ಅವರೂ ಒಬ್ಬರು.‌

      ಶ್ರೀ ಉಮೇಶ್ ಮುನವಳ್ಳಿ ಯವರು ಶ್ರೀ ಬಸಪ್ಪ ಮತ್ತು ಶ್ರೀಮತಿ ಗಂಗಮ್ಮಾ ದಂಪತಿಗಳ ಮಗನಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಎಂಬಲ್ಲಿ ೧೯೭೩ ರ ಜುಲೈ ೧೦ ರಂದು ಜನಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಎಂ.ಇಡಿ ಯನ್ನೂ ಪೂರೈಸಿದ್ದಾರೆ. ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಸಂಗೀತ ರತ್ನ’ ವನ್ನೂ ಪೂರ್ಣಗೊಳಿಸಿದ್ದಾರೆ.  ಸಾಹಿತ್ಯ, ಸಂಗೀತ, ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಗೊಂಡಿರುವ ಶ್ರೀಯುತರು ‘ಪೂವಲ್ಲಿ’ ಎಂಬ ಕವನ ಸಂಕಲನ, ‘ವಚನವಲ್ಲಿ’ ಎಂಬ ಬಹು ಭಾಷಾ ವಚನ ಸಂಕಲನ (ಇಂಗ್ಲೀಷ್ ಹಾಗೂ ಹಿಂದಿ ಭಾಷಾಂತರದೊಂದಿಗೆ), ‘ಕನ್ನಡ ಜಾಣ್ನುಡಿ’ ಎಂಬ ಸೂಕ್ತಿ ಸಂಕಲನ, ‘ಬದುಕ ದೀಪ್ತಿ’ ಎಂಬ ಮಿನಿ ಬರಹಗಳು, ‘ಸ್ವರ್ಣವಲ್ಲಿ’ ಎಂಬ ಕನ್ನಡ ನುಡಿ ಮುತ್ತುಗಳು (ಇಂಗ್ಲೀಷ್ ಹಾಗೂ ಹಿಂದಿ ಭಾಷಾಂತರದೊಂದಿಗೆ), ಹಾಗೂ ‘ಗುಲದಸ್ತಾ’ ಎನ್ನುವ ಗಜಲ್ ಸಂಕಲನ… ಹಲವು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಪ್ರಸ್ತುತವಾಗಿ ಇವರು ಧಾರವಾಡದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

     ಸದಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಶ್ರೀ ಉಮೇಶ್ ಮುನವಳ್ಳಿ ಯವರು ‘ಹಾಡೋಣ ಬಾ ಗೆಳತಿ’ ಎಂಬ ಭಾವಗೀತೆಗಳ ಧ್ವನಿ ಸುರುಳಿಯನ್ನು ಸಾಂಸ್ಕೃತಿಕ ಲೋಕಕ್ಕೆ ಅರ್ಪಿಸಿದ್ದಾರೆ. ಹಲವಾರು ಕಮ್ಮಟ, ಕಾರ್ಯಾಗಾರ, ಉಪನ್ಯಾಸ, ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಉಪಸ್ಥಿತಿ, ಉಪನ್ಯಾಸ, ಕಾವ್ಯ, ಗಜಲ್ ವಾಚನ ಮತ್ತು ಗಾಯನ, ಪ್ರತಿಷ್ಠಿತ ವೇದಿಕೆಗಳಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಆಕಾಶವಾಣಿ ಕಾರ್ಯಕ್ರಮ….. ಮುಂತಾದ ಕಡೆಗಳಲ್ಲಿ ತಮ್ಮ ಸಾಹಿತ್ಯ ಹಾಗೂ ಸಾಂಸ್ಕೃತಿಕ ಒಲವನ್ನು ಧಾರೆಯೆರೆದಿದ್ದಾರೆ. ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸಾಹಿತ್ಯ, ಸಾಂಸ್ಕೃತಿಕ ಲೋಕದ ನಂಟು ಮತ್ತು ಸಾಧನೆಯನ್ನು ಗುರುತಿಸಿ ಕರುನಾಡಿನ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಶ್ರೀ ಬಿ.ವಿ.ಜಿ ಪ್ರಶಸ್ತಿ ಪ್ರಮುಖವಾಗಿದೆ.

          ಪ್ರೀತಿಯ ಹೃದಯವು ಎಲ್ಲಾ ಜ್ಞಾನದ ದ್ವಾರ ಬಾಗಿಲು. ಇದು ಏನೆಲ್ಲವನ್ನೂ ಕಲಿಸಬಹುದು ಎಂದು ನಮಗೆ ಊಹಿಸಲೂ ಸಾಧ್ಯವಿಲ್ಲ. ತಿಳುವಳಿಕೆಯನ್ನು ಮೀರಿದ ಶಾಂತಿಯನ್ನು ಬಯಸದೆ ಶಾಂತಿಯನ್ನು ತರುವ ತಿಳುವಳಿಕೆಯನ್ನು ಬಯಸಬೇಕು ಎಂಬುದನ್ನು ಕಲಿಸುತ್ತದೆ. ಇಂಥ ಕಲಿಕೆಯಲ್ಲಿ ರೂಪವೆತ್ತ ಸಾಹಿತ್ಯ ಪ್ರಕಾರವೆಂದರೆ ಗಜಲ್. ಪ್ರೀತಿ ಗಾಳಿಯಂತೆ, ಅದನ್ನು ನೋಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅದನ್ನು ಅನುಭವಿಸಬಹುದು ಎಂಬುದನ್ನು ಈ ಗಜಲ್ ತನ್ನ ಅಶಅರ್ ನಲ್ಲಿ ದಾಖಲಿಸುತ್ತ ಬಂದಿದೆ. ಪ್ರೀತಿ ಹೊರಹೊಮ್ಮಿಸುವ ಭಾವನಾತ್ಮಕ ಸುಗಂಧದ ಹರಹು ಸಾಕಷ್ಟು ವಿಶಾಲವಾಗಿದೆ. ಈ ನೆಲೆಯಲ್ಲಿ ಗಜಲ್ ಪ್ರೀತಿಯ ಪಾರಿಜಾತ. ಇದು ಯಾವಾಗಲೂ ಪ್ರೀತಿಯನ್ನೇ ಉಸಿರಾಡುತ್ತ ಬಂದಿದೆ. ಈ ಪ್ರೀತಿಯೇ ಗಜಲ್ ಗಳಲ್ಲಿ ಮೈದಳೆದು ರಸಿಕರ ಮನವನ್ನು ತಣಿಸುತ್ತಿದೆ, ಕುಣಿಸುತ್ತಿದೆ. ಈ ನೆಲೆಯಲ್ಲಿ ಶಾಯರ್ ಉಮೇಶ್ ಮುನವಳ್ಳಿ ಅವರ ‘ಗುಲ್ ದಸ್ತಾ’ ಗಜಲ್ ಸಂಕಲನ ಗಮನಿಸಿದಾಗ ಪ್ರೀತಿಯ ವಿವಿಧ ಮಜಲುಗಳಾದ ನಿರೀಕ್ಷೆ, ಕನವರಿಕೆ, ಆಲಿಂಗನ, ನೋವು, ಸಂತೈಸುವ ಪರಿ, ಮೋಸ, ತೊಳಲಾಟ, ಜೀವನದ ಸಾರ, ಸ್ನೇಹ, ಸಾಮಾಜಿಕ ವ್ಯವಸ್ಥೆ, ಸಾತ್ವಿಕ ಸಿಟ್ಟು, ಅಸಹಾಯಕತೆ.. ಎಲ್ಲವೂ ನಮಗೆ ಗೋಚರಿಸುತ್ತವೆ.

“ನನ್ನ ಪ್ರೀತಿ ಹಳೆಯದು ದಿಢೀರ ಅಂತ ಹುಟ್ಟಿಕೊಂಡಿದ್ದಲ್ಲ ನೀ ಅಂದುಕೊಂಡಂತೆ
ನನ್ನ ಪ್ರೀತಿ ಆಲದಂತೆ ಬೆಳೆದದ್ದು ಈಗ ಚಿಗುರಿದ್ದಲ್ಲ ನೀ ಅಂದುಕೊಂಡಂತೆ”

ಮೇಲಿನ ಷೇರ್ ನಲ್ಲಿ ಬಳಕೆಯಾದ ‘ನೀ ಅಂದುಕೊಂಡಂತೆ ಎಂಬ ರದೀಫ್ ಪ್ರೇಮಿಗಳ ಹೃದಯ ಬಡಿತದ ಏರಿಳಿತದ ಪ್ರತೀಕವಾಗಿದೆ. ಪ್ರೀತಿಯ ಆಲದ ಮರ ಗಟ್ಟಿಯಾಗಿ ನೆಲೆ ಕಂಡುಕೊಳ್ಳಬೇಕಾದರೆ ಪರಸ್ಪರರಲ್ಲಿ ವಿಶ್ವಾಸ, ನಂಬಿಕೆ, ಗೌರವ ಇರಬೇಕು. ಒಂಚೂರು ಆಚೆ-ಈಚೆಯಾದರೂ ಪ್ರೀತಿಗೆ ಅಭದ್ರತೆಯ ಭಾವ ಕಾಡುತ್ತದೆ. ಆವಾಗ ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನು ಸಾಬೀತು ಪಡಿಸುವ, ಆಲಾಪಿಸುವ ಕೆಟ್ಟ ಸಂದರ್ಭ ಉಂಟಾಗುತ್ತದೆ. ಪ್ರೀತಿ ಎಂದರೆ ಅದು ಒಬ್ಬರ ಭಾವದೀಪ್ತಿಯಲ್ಲ, ಪರಸ್ಪರರ ಭಾವದೋಕುಳಿ. ಅಲ್ಲಿ ನಂದು-ನಿಂದು ಅಂತೇನೂ ಇರುವುದಿಲ್ಲ. ಇರುವುದು ಕೇವಲ ‘ನಮ್ಮದು’ ಎನ್ನುವುದು ಎಂಬ ಪ್ರೀತಿಯ ಫಿಲಾಸಫಿಯನ್ನು ಈ ಷೇರ್ ದಾಖಲಿಸುತ್ತದೆ.‌

“ಪ್ರೀತಿ ಮಾಡಲು ಅರಿತಿಲ್ಲ ಕ್ಷಮಿಸಿಬಿಡು
ಸ್ನೇಹ ಮಾಡಲು ತಿಳಿದಿಲ್ಲ ಕ್ಷಮಿಸಿಬಿಡು”

ಇಲ್ಲಿ ‘ಕ್ಷಮಿಸಿಬಿಡು’ ಎಂಬ ರದೀಫ್ ಪ್ರೇಮಿಗಳ ಮನದ ತಳಮಳವನ್ನು ಅನುಮೋದಿಸುತ್ತದೆ. ಕ್ಷಮೆ ಕೇಳುವುದು ಎಂದರೆ ತಪ್ಪು ಮಾಡಿರುವುದು ಎಂದಲ್ಲ, ಬದಲಿಗೆ ಬೆಸುಗೆಯ ಬಂಧ ಕಳಚದಿರಲಿ ಎಂಬ ಅಕ್ಷಯ ಪ್ರೀತಿಯ ಸಂಕೇತ. ತಾನು ಪ್ರೀತಿಸಿದ ಪ್ರೇಮಿ, ಪ್ರಿಯತಮಗೆ ಅನುರಾಗದ ಒಲವಿನ ಫೀಲ್ ಆಗದೆ ಹೋದಾಗ, ಸ್ನೇಹದ ಸೇತುವೆ ಗಟ್ಟಿಯೆನಿಸದೆ ಇದ್ದಾಗ ಎಲ್ಲೋ ತನ್ನಿಂದಲೇ ತಪ್ಪಾಯ್ತ ಎಂಬ ಹತಾಶೆ ಅವರನ್ನು ಕಾಡುತ್ತದೆ. ಹಾಗಂತ ಇಲ್ಲಿ ಪ್ರೀತಿ, ಸ್ನೇಹ ಸುಳ್ಳಲ್ಲ ಎಂಬುದು ಎದುರಿಗಿದ್ದವರಿಗೂ ಗೊತ್ತಿರುತ್ತದೆ. ಪ್ರೀತಿಸುವ, ಪರಸ್ಪರ ಪೂಜಿಸುವ ಹೃದಯಗಳಲ್ಲಿ ಈ ಭಾವ ಮೂಡಲು ಸಾಧ್ಯ ಎಂಬುದನ್ನು ಸುಖನವರ್ ಶ್ರೀ ಉಮೇಶ್ ಮುನವಳ್ಳಿ ಯವರು ತಮ್ಮ ಷೇರ್ ಮೂಲಕ ಅಭಿವ್ಯಕ್ತಿಸಿದ್ದಾರೆ.

     ಪ್ರೀತಿಯು ಈ ದುನಿಯಾದಲ್ಲಿರುವ ಅತ್ಯಂತ ದೊಡ್ಡ ಶಕ್ತಿ. ಇದು ಇತರ ಎಲ್ಲ ಶಕ್ತಿಗಳ ಹಿಂದಿನ ಪ್ರೇರಣೆಯಾಗಿದೆ. ಇದು ನಕಾರಾತ್ಮಕ ಗುಣಗಳನ್ನು ಧನಾತ್ಮಕವಾಗಿ ಪರಿವರ್ತಿಸುವ, ಕೋಪವನ್ನು ದಯೆಯಾಗಿ ಪರಿವರ್ತಿಸುವ ಅದಮ್ಯ ಚೇತನ. ಪ್ರೀತಿಯ ಸೋಂಕು ತಗುಲಿದ ವ್ಯಕ್ತಿಗೆ ಇಡೀ ಪ್ರಪಂಚವು ಹೆಚ್ಚು ಪ್ರಕಾಶಮಾನವಾದ ಬೆಳಕಿನಲ್ಲಿ ಹೊಳೆದಂತೆ ಭಾಸವಾಗುತ್ತದೆ. ಇಂಥಹ ಪ್ರೀತಿಯಲ್ಲಿ ಅರಳಿದ ಗಜಲ್ ಗುಲ್ಜಾರ್ ನಲ್ಲಿ ಗಜಲ್ ಗೋ ಶ್ರೀ ಉಮೇಶ್ ಮುನವಳ್ಳಿ ಯವರು ವಿಹರಿಸುತ್ತಾ ಗಜಲ್ ಗಳನ್ನು ಮತ್ತಷ್ಟು ಮೊಗೆದಷ್ಟೂ ಬರೆಯುತ್ತ ಸಾಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

“ಸಾಯಲು ಎಲ್ಲರೂ ವಿಷ ಕುಡಿಯುತ್ತಾರೆ.
ಜೀವವೇ ನಿನಗಾಗಿ ವಿಷ ಕುಡಿದಿದ್ದೇನೆ ನಾನು”
-ಖಲೀಲ್-ಉರ್-ರಹೇಮಾನ ಆಜಮಿ

ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ.‌ ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ,

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top