ಮನದ ಭಾವ ಸ್ಪುರಿಸುವ ಇಂದಿರಾ ಮೋಟೆಬೆನ್ನೂರ ಅವರ “ಭಾವ ಬೆಳಗು” ವಿಶ್ಲೇಷಣೆ ರೋಹಿಣಿ ಯಾದವಾಡ

ಪುಸ್ತಕ ಸಂಗಾತಿ

ಮನದ ಭಾವ ಸ್ಪುರಿಸುವ

ಇಂದಿರಾ ಮೋಟೆಬೆನ್ನೂರ ಅವರ

“ಭಾವ ಬೆಳಗು”

ವಿಶ್ಲೇಷಣೆ ರೋಹಿಣಿ ಯಾದವಾಡ

ಇಂದಿರಾ ಮೋಟೆಬೆನ್ನೂರ ಭರವಸೆಯ ಕವಯಿತ್ರಿ.  ಬೆಳಗಾವಿಯ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಚುರುಕಿನಿಂದ, ಹಸನ್ಮುಖಿಯಾಗಿ ಓಡಾಡುವ , ಮೃದುಹೃದಯಿ, ಸ್ನೇಹಮಯಿ. ಕವನ ಬರೆಯುವುದು ಚಿಕ್ಕಂದಿನಿಂದಲೂ ಹವ್ಯಾಸ. ಸಾಹಿತ್ಯದ ಓದು ಅವರ ಆಸಕ್ತಿ. ಹೀಗಾಗಿ ಅನೇಕ ಪುಸ್ತಕಗಳನ್ನು ಇಂದಿರಾವರು ಓದುವಂತಾಗಿದೆ. ಈಗೀನ ಪ್ರೌಢಶಾಲಾ ವಿದ್ಯಾರ್ಥಿಗಳಿಗೇನೆ ‘ ಕಾದಂಬರಿ’ ಎಂಬ ಸಾಹಿತ್ಯದ ಪ್ರಕಾರವೇ ಗೊತ್ತಿರದಂತಿರುವಾಗ , ಇಂದಿರಾವರು ನಾಲ್ಕನೇಯ ತರಗತಿಯಲ್ಲಿಯೇ ” ಶಾಂತಲಾ” ಕಾದಂಬರಿ ಓದಿದ್ದನ್ನು ನೋಡಿದರೆ , ಅವರ ಸಾಹಿತ್ಯಾಸಕ್ತಿ ಎಷ್ಟೀರಬಹುದೆಂದು ಊಹಿಸಬಹುದು. ಅದುವೇ ಅವರಿಗೆ ಕಥೆ, ಕವನ ಬರೆಯುವಂತೆ ಮಾಡಿತು. ಚಿಕ್ಕಂದಿ‌ನಿಂದಲೂ ಬರೆಯುತ್ತಿದ್ದರೂ ಅವುಗಳನ್ನು ಕೂಡಿಡದೇ ಇರುವುದರಿಂದ, ಇದೀಗ ಬೆಳಗಾವಿಯಲ್ಲಿ ಲೇಖಕಿಯರ ಸಂಘದ ಪದಾಧಿಕಾರಿಗಳಲ್ಲೊಬ್ಬರಾಗಿ ಕಾರ್ಯ ನಿರ್ವಹಿಸುವಾಗ ತಮ್ಮದೇ ಆದ ಒಂದು ಕೃತಿ ತರಬೇಕನಿಸಿ ” ಭಾವ ಬೆಳಗು ” ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ.

      ” ಭಾವ ಬೆಳಗು ” ಇಂದಿರಾ ಅವರ ಪ್ರಥಮ ಕವನ ಸಂಕಲನ. ಬೆಂಗಳೂರಿನ ಚೇತನ ಬುಕ್ಸದವರಿಂದ ಎ.ಎಂ. ಪ್ರಿಂಟ್ಸ್ ದಲ್ಲಿ ಮುದ್ರಣಗೊಂಡಿದ್ದು , ಅರುಣಕುಮಾರ ಅವರ ಸುಂದರವಾದ ಮುಖಪುಟ ವಿನ್ಯಾಸ ಆಕರ್ಷಕವಾಗಿದೆ. ಬೆಲೆ. ರೂ. ೧೮೦ ಇದೆ. ಪ್ರಸ್ತುತ ಕವನ ಸಕಲನದಲ್ಲಿ ಒಟ್ಟು ೭೦ ಕವನಗಳು ಸಂಕಲಿತಗೊಂಡಿವೆ. ಈ ಕೃತಿಗೆ ಪ್ರಬುದ್ಧ ಸಾಹಿತಿ , ಕವಿಯಿತ್ರಿ ಡಾ. ಗುರುದೇವಿ ಹುಲೆಪ್ಪನವರಮಠ ಅವರಿಂದ ಮುನ್ನುಡಿಯು ಆಶೀರ್ವಚನದಂತಿದೆ.

      ಇಂದಿರಾ ಅವರದು ಭಾವನೆಗಳ ಅದ್ಬುತ ಪ್ರತಿಭೆ. ಕವಯಿತ್ರಿ  ಒಬ್ಬ ನಿಷ್ಠಾವಂತ ರಸಗ್ರಾಹಿಯಾಗಿ ಕಂಡುಬರುತ್ತಾರೆ. ತನ್ನ ಸುತ್ತಲಿನ ಪರಿಸರದಲ್ಲಿ ಕಂಡ , ಅನುಭವಕ್ಕೆ ದಕ್ಕಿದ , ತನ್ನ‌ ಮನಸ್ಸಿಗೆ ಹಿಡಿಸಿದ, ಪ್ರಸ್ತುತ ವಿದ್ಯಮಾನದ ಘಟನೆ, ವಸ್ತು ಎಲ್ಲವನ್ನೂ ಕವಿತೆಗೆ ವಿಷಯವನ್ನಾಗಿರಿಸಿಕೊಂಡಿರುವುದನ್ನು ಕಾಣುತ್ತೇವೆ. ಇವರ ಕವಿತೆಗಳನ್ನು ಓದುತ್ತಿದ್ದಂತೆ ಭಾವಲೋಕದೊಳಗೊಂದು ಸುತ್ತು ಹೊಡೆದಂತಾಗುತ್ತದೆ.

     ಸೃಷ್ಠಿಯ ಗೋಚರಗಳು ತುಂಬ ವಿಸ್ಮಯವಾದವುಗಳು ಎಂಬಂತೆ , ಹಸಿರು ಒಡಮೂಡಲು ಎಲ್ಲ ಅನುಕೂಲತೆಗಳು ಬೇಕೆಂದಿಲ್ಲ ಎನ್ನುವುದನ್ನು ಬದುಕಿನಲ್ಲಿ ಕಂಡ ಕನಸು ನನಸಾಗಿಸಲು ಛಲ, ಆತ್ಮಬಲವಿದ್ದರೆ ಸಾಕು ಎಂಬುದನ್ನು ” ಛಲ” ಎಂಬ ಪ್ರಾರಂಭದ ಕವನದಲ್ಲಿ

 ” ಕೊನರಿ ಹಸಿರಾಗಲು
ಕಲ್ಲಾದರೇನು ? ಮಣ್ಣಾದರೇನು?
 ಮೃದು ನೆಲದ ತಾವಾದರೇನು

ಬರಬಿಸಿಲು ಕಾವಾದರೇನು” ಎನ್ನುವಲ್ಲಿ

ಬೀಜಕ್ಕೆ ಮೊಳಕೆಯೊಡೆದು ಸಸಿ, ಮರವಾಗಿಬಿಡಬೇಕೆಂಬ ಛಲವೊಂದಿದ್ದರೆ, ” ಕೊರಕಿನಲಿ ಬದುಕಿನಲಿ/ಇರುಕಿನಲಿ ಸಿಲುಕಿದರೂ/ ಕೊರತೆಯಾ ನಡುವೆಯೂ / ಸಿಹಿ ಒರತೆಯಾಗುವೆ ನಾನು” ಎಂಬ ಛಲದ ಮನೋಭಾವವನ್ನು ಎತ್ತಿ ತೋರಿದ್ದಾರೆ.

    ಹಬ್ಬಗಳಂತೂ ಭಾರತೀಯ ಸಂಸ್ಕೃತಿಯಲ್ಲಿ ತುಂಬ ವೈಶಿಷ್ಟ್ಯಗಳನ್ನು ಹೊಂದಿವೆ. ಪ್ರತಿಯೊಂದು ಹಬ್ಬವನ್ನು ಒಂದೊಂದು ವಿಶೇಷತೆಯೊಂದಿಗೆ ವಿಭಿನ್ನವಾಗಿ ಸಾಮರಸ್ಯದಲ್ಲಿ ಆಚರಿಸುತ್ತೇವೆ. ಕವಯಿತ್ರಿ ಹೆಣ್ಣುಮಕ್ಕಳ ಸಂಭ್ರಮದ ಹಬ್ಬವಾದ ಪಂಚಮಿಯನ್ನು ” ಕೈ ಬೀಸಿ ಕರದಾವ” ಕವನದಲ್ಲಿ ಬಿಂಬಿಸಿದ್ದು ಹೀಗೆ

” ಸರಗೀಯ ಸರಬ್ಯಾಡ ಅಣ್ಣಯ್ಯ
ಸುರಿದ ಸರಗೀಯ ಹೂವ
ಸೆರಗಿನ್ಯಾಗ ಸುರಕೊಂಡು
ಜೋಕಾಲಿ ಜೀಕುತ ಪಂಚಮಿ ಮಾಡಾಕ
ಹಾಲುಂಡ ತವರಿಗೆ ಹರಸಾಕ
ನಾ ಹೊರಟೆ ಓ ನನ್ನ ಸರದಾರ”

    ಹಬ್ಬ ಆಚರಿಸಿ ತವರಿನ ಏಳ್ಗೆಗೆ  ಹರಸುತ್ತದೆ ಎಂದಿದ್ದಾರೆ. ಅದೇ ರೀತಿ ” ಎಳ್ಳು ಬೆಲ್ಲ ” ಮೆದ್ದು ದ್ವೇಷಾಸೂಹೆ ಮರೆತು ಒಂದಾಗುವ “ಸಂಕ್ರಾಂತಿ ” ಹಬ್ಬವನ್ನು

” ರಥವನೇರಿದ ಸೂರ್ಯ
 ಪಥವ ಬದಲಿಸಿ ನಡೆಯುತ
  ಜಾತಿ ಮತದ ಭ್ರಾಂತಿಯಳಿಸುತ
ಸ್ನೇಹ ಸೌರಭವ ಬೀಗುತ
ಬಂತಿದೋ ಸಂಕ್ರಾಂತಿ
ಚಿಮ್ಮಿಸುವ ಹೊಸ ಕಾಂತಿ”

 ಎನ್ನುತ ಅದೇ ರೀತಿ ಕಹಿ ನೋವು ಮರೆತು ಆಚರಿಸುವ ” ಯುಗಾದಿ” , ಬೆಳಕಿನ ಹಬ್ಬ “ದೀಪಾವಳಿ” ಗಳನ್ನು ತುಂಬ ಚನ್ನಾಗಿ ಕವನದಲ್ಲಿ ಕಟ್ಟಿಕೊಟ್ಟಿದ್ದಾರೆ.

  ಬದುಕು ತುಂಬ ವಿಚಿತ್ರ ಜೀವನ ಪಾಠವನ್ನು ಕಲಿಸುತ್ತದೆ ಎಂಬುದನ್ನು  ” ಜೀವನ” ಕವನದಲ್ಲಿ

 ” ದಕ್ಕಿದುದನು ಬಿಟ್ಟು
  ಕೈ ಚಾಚಿ ಓಡುವ ಭರದಾಟ
  ಭದ್ರಬುನಾದಿ ಇಟ್ಟು
ಬದುಕು ಕಟ್ಟಿ ಕೊಳ್ಳುವವರಿಗೆ
ಬರೆ ಎಳೆವ ಪರಿಪಾಠ ಮುಂದುವರಿಕೆಯಾಗಿದೆ.

ಪ್ರಸ್ತುತ ನಾಗಾಲೋಟದ ಬದುಕಿನಲ್ಲಿ ಮನುಷ್ಯ ಸಂಬಂಧಗಳು ಮಾನವೀಯತೆಯನ್ನು ಮರೆತು ಹೇಗೆ ಸಾಗಿದೆ ಎಂಬುದನ್ನು ” ಸಂಬಂಧಗಳು” ಕವನದಲ್ಲಿ

    ” ಮುರಿದ ಮನಸುಗಳ ಮಹಲಿದು
ಬೇಸುಗೆ ಹಾಕುವವರಾರಿಲ್ಲ
ಕಳಚಿದ ಸರಪಣಿಯ ಬಂಧವಿದು
ಕೊಂಡಿ ಜೋಡಿಸುವವರಾರಿಲ್ಲ”

ಎಂಬಲ್ಲಿ  ಮಾನವತೆಗೆ ಬೆಲೆ ಎಲ್ಲಿದೆ ಎಂದು ಹುಡುಕುವಂತಾಗಿದೆ ಎಂಬ ವಾಸ್ತವ ಬಿಚ್ಚಿಟ್ಟಿದ್ದನ್ನು ನೋಡುತ್ತೇವೆ.

   ಮನುಷ್ಯನಲ್ಲಿ ಪ್ರೀತಿ ಜಿನಗುಟ್ಟುವ ರೀತಿಯೇ ಅಗಮ್ಯ. ಇಂದಿರಾವರು ಪ್ರೀತಿಯನ್ನು ಮನುಷ್ಯ ಸಂಬಂಧಗಳಲ್ಲಿ , ಪ್ರಕೃತಿಯಲ್ಲಿ ವಿವಿದೆಡೆ ಕಂಡುಕೊಂಡಿದ್ದಾರೆ.

  ” ಬೆಳದಿಂಗಳಾಗಿ ನನ್ನದೆಯ
     ಅಂಗಳಕೆ ಇಳಿದವನೇ
     ಕಂಗಳಲ್ಲಿ ಹೊಳೆದವನೆ
     ಬಾಳಂಗಳದ ಚಂದಿರನು ನೀನಲ್ಲವೆ”

ಎನ್ನುವ ಮೂಲಕ ತನ್ನ ಮನದನ್ನ ನಲ್ಲನನ್ನು ಪ್ರೀತಿಸಿ ಆರಾಧಿಸಿದ ಪರಿ ತುಂಬ ಸೊಗಸಾಗಿ, ಪ್ರಾಸಬದ್ಧವಾಗಿ ಮಧುರ ಪದ ಬಳಕೆಯಿಂದ ಹೆಣೆದಿದ್ದನ್ನು ನೋಡುತ್ತೇವೆ. ಅವಳು, ಅವನು, ನಿನ್ನ ಪ್ರೀತಿ, ಕನಸುಗಳು ಮೊದಲಾದ ಕವನಗಳಲ್ಲಿ ಪ್ರೀತಿ ಜಿನಗಿದೆ.

” ರೆಕ್ಕೆ ಬಿಚ್ಚಿ ಚಿಮ್ಮಿದೊಡನೆ
   ಮೋಡ ಮುಡಿವ ಮಲ್ಲಿಗೆ ದಂಡೆ,
ನೀಲಿ ಮುಗಿಲ ಮನೆಯಲೊಂದು
ತೂಗುತಿಸ ಹಸೆಯ ಕಂಡೆ”  

ಎಂಬುದಾಗಿ ” ಬೆಳ್ಳಕ್ಕಿ ಹಿಂಡು” ಕವನದಲ್ಲಿ ನೀಲಾಕಾಶದಲ್ಲಿ ಹಕ್ಕಿಗಳ ಹಿಂಡು ಸಾಗುವ ದ್ರಶ್ಯವನ್ನು , ತನ್ನ ಕಲ್ಪನಾ ಲೋಕದಲ್ಲಿ ಹೀಗೆ ಕಂಡಿದ್ದಾರೆ. ಅದೇ ರೀತಿ ನಿಸರ್ಗದ ಹೂವು, ಪಕ್ಷಿ, ನದಿ, ಹಸಿರಿನ ವರ್ಣನೆ  ಮಾಡಿದ್ದನ್ನು ಕಾಣುತ್ತೇವೆ.  ನಿಸರ್ಗದಲ್ಲಿ ರಾತ್ರಿ ಅರಳುವ ” ಬ್ರಹ್ಮಕಮಲ” ದ ವೈರತ್ವವನ್ನು

   “ಪರ್ಣ ಪರ್ಣದಿ
   ತೂಗುತಿಹ ಹೂದೀಪಗಳು
   ಶ್ವೇತವರ್ಣದ ಬೆಳಗು
   ಭುವಿಯ ಅಂಗಳದಲ್ಲಿ”

 ಎಂದು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

    ಸಮಾಜದ ಕಂಟಕಗಳಿಗೂ ಒಬ್ಬ ಹೆಣ್ಣಾಗಿ ಇಂದಿರಾರವರ ಮನವು ಮಿಡಿದು ತನ್ನ ಅಸ್ಮಿತೆ ತೋರುವಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ಕಟುವಾಗಿ ಖಂಡಿಸಿದ್ದನ್ನು ನೋಡಲಾಗಿ

” ಮಾಂಸದ ಮುದ್ದೆ ನಾನಲ್ಲ ಅವ್ವ
ನಿನ್ನೊಳಗಿಂದಲೆ ನೋಡುತಿಹೆ ನಾನೆಲ್ಲ
ನಿನ್ನಂತೆ ನಾನು ಹೆಣ್ಣಲ್ಲವೇ ನನ್ನವ್ವ
ಮಿಡಿಯಗೊಡು…..”

 ಹೆಣ್ಣು ಭ್ರೂಣಿನ ಅಳಲನ್ನು ಬಿಚ್ಚಿಟ್ಟಿದ್ದಾರೆ.

   ಕವಯಿತ್ರಿ ಇಲ್ಲಿ ವರ್ಷದುದ್ದದ ಋತುಮಾನಗಳ ವಿಶೇಷತೆಯನ್ನು ಕವನಗಳಿಗೆ ಬಳಸಿಕೊಂಡಿರುವುದನ್ನು ಹೇಮಂತ, ವಸಂತ, ಬರಗಾಲ, ಮುಂಗಾರಿನ ಸೊಬಗು, ಹುಯ್ಯೊ ಹುಯ್ಯೊ ಕವನಗಳಲ್ಲಿ ಕಾಣುತ್ತೇವೆ. ಅದೇ ನಮ್ಮ ಕವಿಗಳು , ಗಣ್ಯ ವ್ಯಕ್ತಿಗಳ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿರುವುದನ್ನು ಅಟಲಜೀ, ಕುವೆಂಪು, ಸಿದ್ದಪುರುಷ ಕವನಗಳ ನೋಡುತ್ತೇವೆ.

    ನಾಡು- ನುಡಿಯ ಹೆಮ್ಮೆ‌ ಪ್ರತಿಯೊಬ್ಬ ನಾಗರಿಕರಲ್ಲಿಯೂ ಧಮನಿ ಧಮನಿಗಳಲ್ಲಿ ಮಿಡಿಯಬೇಕು.  ಈ ದೆಸೆಯಲ್ಲಿ ‘ತಾಯಿ ಭಾರತಿ’ , ‘ ಕನ್ನಡಾಂಬೆ’ ಕವಿತೆಗಳಲ್ಲಿ ತುಂಬ ಅಭಿಮಾನಪೂರ್ವಕವಾಗಿ ಮೂಡಿಬಂದಿವೆ. ‘ ಗುರು ‘ ಕವನದಲ್ಲಿ ಗುರುವಿನ ಮಹತ್ವ ತಿಳಿಸಿದ್ದಾರೆ.

      ಇಂದಿರಾ ಅವರಲ್ಲಿ ಪ್ರತಿಭೆ ಇದೆ ಎನ್ನುವುದನ್ನು ಅವರ ಕವಿತೆಗಳ ಓದಿನಲ್ಲಿ ಕಂಡುಬರುತ್ತದೆ. ಇದಕ್ಕೊಂದು ಉದಾಹರಣೆ ನಾವು ನಿತ್ಯ ಹೊದ್ದು ಮಲಗುವ ” ಕೌದಿ” ನಮ್ಮೊಂದಿಗೆ ಮಧುರಾತೀಮಧುರ ಬಾಂಧವ್ಯ ಬೆಸೆದುಕೊಂಡಿದೆ. ಅದರ ಚಿತ್ತಾರವನ್ನು  

” ಒಲವ ಜರಿಯಂಚು ಇಂಚಿಂಚಿಗೆ ಹಚ್ಚಿ
ಒಳಹೊರಗನ್ನು ಪದರು ಪದರಾಗಿ ಬಿಚ್ಚಿ
ಒಂದರ ಮೇಲೊಂದರವಿ ಚಂದಾಗಿ ಹೊಚ್ಚಿ
ಅವ್ವ ಹೊಲಿದಿಹಳೊಂದು ಚಂದದ ಕೌದಿ”

ಎಂಬುದನ್ನು ಓದುತ್ತಿದ್ದರೆ ಬೆಚ್ಚನೆಯ ಭಾವ ಬಿಚ್ಚಿಕೊಂಡು ನಲಿಯುತ್ತದೆ.

    ಪ್ರೀತಿ ಭಾವವೇ ಕವನ ಸಂಕಲನದುದ್ದಕ್ಕೂ ಹರಡಿಕೊಂಡಿರುವುದು ಈ ಕವನ ಸಂಕಲನದ ವಿಶೇಷ. ” ಪ್ರೀತಿ ಬಿಟ್ಟರೆ ಏ‌ನಿಹುದು ಈ ಜಗದಲಿ? ” ಎಂಬ ಕವಿವಾಣಿ ನೆನಪಿಗೆ ಬಂದು , ಪ್ರೀತಿಗಿಂತ ಶಕ್ತಿಶಾಲಿ ಭಾವ ಬೇರಿಲ್ಲ ಎಂಬುದನ್ನು ರುಜುಪಡಿಸುವಂತಿವೆ. ಇಂದಿರಾ ಮೋಟೆಬೆನ್ನೂರ ಅವರ ಕವನಗಳು ನಗು, ಪ್ರತಿಕ್ಷೆ, ತನ್ಮಯಿ, ಆಸರೆ, ಗೋಡೆಗಳು , ಆ ಒಂದು ಗಂಡು, ನನ್ನ ಕೂಸು, ಅವನು, ಸವಾರಿ, ಸಮರ್ಪಣೆ, ಆರಂಭ , ಬಿದಿರು, ನೀರಸ, ಬೆಳಕಿನ ಬೀಜಗಳು, ಬೆಳಕಿನೂರು, ಚಂದ್ರಾಮ, ಅಲೆಮಾರಿಗಳು, ಲಾಕಡೌನ
ಕಥನ ಮೊದಲಾದ ಕವನಗಳು ಹಾಗೂ ವಿಶೇಷವಾಗಿ ಎರಡು ಸುಂದರ ಗಜಲ್ ಗಳು ಕೂಡ ಅಡಕಗೊಂಡಿವೆ.

      ಕವಯಿತ್ರಿ ಇಂದಿರಾ ಅವರು ಇಂದು ಸಾಹಿತ್ಯದ ವಿವಿಧ ಪ್ರಕಾರಗಳಾದ ಹಾಯ್ಕು, ಗಜಲ್ , ಹನಿಗವನ, ಚುಟುಕು, ಹಾಗೂ ಕಥೆ, ನ್ಯಾನೊ ಕಥೆ ಮುಂತಾದವುಗಳನ್ನು ಬರೆದಿದ್ದು, ಅವು ವಿವಿಧ ಸಾಹಿತ್ಯದ ವಾಟ್ಸಫ್ ಗುಂಪು, ದಿನಪತ್ರಿಕೆ, ಮಾಸಪತ್ರಿಕೆ, ಬ್ಲಾಗ್  ಗಳಲ್ಲಿ ಪ್ರಕಟಗೊಳ್ಳುತ್ತಿದ್ದು , ಕೆಲವು ಬಹುಮಾನ ಬಂದರೆ, ಅನೇಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿವೆ. ಇಂದಿರಾ ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಮೂಡಿಬಂದು ಸಾಹಿತ್ಯ ಸಿರಿದೇವಿಯ ಮಡಿಲು ತುಂಬಲಿ ಎಂದು ಹಾರೈಸೋಣ.


 ರೋಹಿಣಿ ಯಾದವಾಡ

Leave a Reply

Back To Top