ಹಡಪದಪ್ಪಣ್ಣಗಳ ಪುಣ್ಯಸ್ತ್ರೀಲಿಂಗಮ್ಮನ ವಚನಪ್ರೊ. ಜಿ.ಎ, ತಿಗಡಿ.

ವಚನ ಸಂಗಾತಿ

ಹಡಪದಪ್ಪಣ್ಣಗಳ ಪುಣ್ಯಸ್ತ್ರೀಲಿಂಗಮ್ಮನ ವಚನ

ಪ್ರೊ. ಜಿ.ಎ, ತಿಗಡಿ.

ಮನವ ಗೆದ್ದೆಹೆನೆಂದು, ತನುವ ಕರಗಿಸಿ ಕಾಯವ ಮರುಗಿಸಿ,
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬ
ಬುದ್ಧಿಹೀನರಿರಾ ನೀವು ಕೇಳಿರೋ,
ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆ
ಕಾಮ ಕ್ರೋಧವ ನೀಗಿ,
ಲೋಭ ಮೋಹ ಮದ ಮತ್ಸರವ ಛೇದಿಸಿ,
ಆಸೆ ರೋಷವಳಿದು, ಜಗದ ಪಾಶವ ಬಿಟ್ಟು,
ಆ ಮರುಗಿಸುವ ಕಾಯವನೆ
ಪ್ರಸಾದಕಾಯವ ಮಾಡಿ ಸಲಹಿದರು.
ಕೆಡಿಸುವ ನಿದ್ರೆಯನೆ ಯೋಗಸಮಾಧಿಯ ಮಾಡಿ,
ಸುಖವನೇಡಿಸಿ ಜಗವನೆ
ಗೆದ್ದ ಶರಣರ ಬುದ್ಧಿಹೀನರೆತ್ತ ಬಲ್ಲರೊ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?
*********

    ದೇಹವನ್ನು ದಂಡಿಸಿ ಮರುಗಿಸಿ,  ನಿದ್ರಾಹೀನರಾಗಿ, ವಿದ್ಯೆ ಕಲಿತು ಮನವನ್ನು ಗೆದ್ದನೆಂಬ ಬುದ್ಧಿಹೀನರೇ, ನೀವು ಕೇಳಿರೋ ! ಶರಣರು ಮನವ ಗೆಲುವ ರೀತಿಯನ್ನು.   ಕಾಮ ಕ್ರೋಧಾದಿಗಳನ್ನು ಇಲ್ಲವಾಗಿಸಿ ಲೋಭ, ಮೋಹ, ಮದ, ಮತ್ಸರಗಳನ್ನು ಕತ್ತರಿಸಿ ಹಾಕಿ, ಆಸೆ – ರೋಷಗಳನ್ನು ನಾಶಮಾಡಿ ಜಗದ ಬಂಧನವನ್ನು ತ್ಯಜಿಸಿದರು.   ಮರುಗಿಸುವ ಕಾಯವನ್ನೇ ಪ್ರಸಾದ ಕಾಯವನ್ನಾಗಿ ಮಾಡಿದವರು ಶರಣರು.  ಕೆಡುಕನ್ನುಂಟು ಮಾಡುವ ನಿದ್ರೆಯನ್ನೇ ಯೋಗ ಸಮಾಧಿಯನ್ನಾಗಿಸಿದರು.  ಸುಖವನ್ನು ಹೀಯಾಳಿಸುತ್ತಾ ಜಗವನ್ನೇ ಗೆದ್ದ ನಮ್ಮ ಧೀರ ಶರಣರನ್ನು ನಿಮ್ಮಂಥ ಬುದ್ಧಿ ಹೀನರು ಅರಿಯಲು ಸಾಧ್ಯವೇ ಇಲ್ಲ ಎನ್ನುತ್ತಾಳೆ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ.

    ಮನವನ್ನು ಗೆಲ್ಲುವ ಇಲ್ಲವೇ ಹತೋಟಿಯಲ್ಲಿಟ್ಟುಕೊಳ್ಳುವ ಬಗೆಯ ರೀತಿಯನ್ನು ಹಡಪದ ಅಪ್ಪಣ್ಣ ಪುಣ್ಯಸ್ತ್ರೀ ಲಿಂಗಮ್ಮ ಈ ವಚನದಲ್ಲಿ ವಿವರಿಸಿದ್ದಾಳೆ.   ಮರ್ಕಟ ಸ್ವರೂಪಿ ಮನದ ಕುರಿತು ಋಷಿಮುನಿಗಳು, ಸಾಧುಸಂತರು, ಶರಣರು ದಾಸರು, ಕವಿಗಳು ಕೋವಿದರು, ಬಲ್ಲಿದರು ಮುಂತಾದವರು ಹಲವು ಬಗೆಯಲ್ಲಿ ಚಿಂತನ ಮಂಥನ ನಡೆಸಿದ್ದಾರೆ.   ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಮನವನ್ನು ನಿಯಂತ್ರಿಸುವ ಅರಿವಿನಡಿಯಾಳಾಗಿ ವರ್ತಿಸುವ ಕುರಿತು ವಿವರಿಸಿದ್ದಾರೆ.  ದೇಹವನ್ನು ದಂಡಿಸಿ ವೃತ ನಿಯಮಾದಿಗಳಿಂದ ಶರೀರವನ್ನು ಕರಗಿಸುತ್ತ ನಿದ್ದೆಯನ್ನು ನೈವೇದ್ಯ ಮಾಡಿ ಮನವ ಗೆಲ್ಲುವ ವಿದ್ಯೆಯನ್ನು ಕರಗತ ಮಾಡಿಕೊಂಡೆನೆಂದು ಜಂಬ ಕೊಚ್ಚುವವರನ್ನು ಲಿಂಗಮ್ಮ ಬುದ್ಧಿಹೀನರೆಂದು ಜರೆಯುತ್ತಾಳೆ.  ನಮ್ಮ ಶರಣರು ಹೇಳಿದ ಮನವ ಗೆಲ್ಲುವ ರೀತಿಯನ್ನು ಹೇಳುತ್ತೇನೆ  ಕೇಳಿರೆಂದು  ಕರೆಯುತ್ತಾಳೆ.

       ಮನವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ.  ಬಹಿರಂಗದ ದೇಹದಂಡನೆಯಿಂದ ಇದು ಸಾಧ್ಯವಾಗದು. ಅಂತರಂಗದಲ್ಲಿದ್ದು ಮನವನ್ನು ದಿಕ್ಕು ತಪ್ಪಿಸುತ್ತಿರುವ ಅರಿಷಡ್ವರ್ಗಾದಿಗಳನ್ನು,  ಆಶೆ ಆಮಿಷಗಳನ್ನು ಮೊದಲು ನಿಯಂತ್ರಿಸಬೇಕು.
          ಕಾಮಕ್ರೋದಾದಿಗಳನ್ನು ಇಲ್ಲವಾಗಿಸಿಕೊಳ್ಳಬೇಕು. ಆಸೆಯನ್ನು ಸಂಪೂರ್ಣವಾಗಿ ತ್ಯಜಿಸಿ ಕೋಪ ಸಿಟ್ಟುಗಳನ್ನು ಸುಟ್ಟು ಹಾಕಬೇಕು.  ಲೋಭ ಮೋಹ ಮದ ಮತ್ಸರಗಳನ್ನು ಕತ್ತರಿಸಿ ಹಾಕಿ ಬಿಸಾಕಬೇಕು.  ಸೃಷ್ಟಿಯ ಚರಾಚರ ವಸ್ತು ಪ್ರಾಣಿಗಳೆಲ್ಲವೂ ಭಗವಂತನ ಅಂಶವೆಂದಾಗ     ಕಾಮ ಕ್ರೋಧಾದಿ ಅರಿಷಡ್ವರ್ಗಗಳು ನಮ್ಮಿಂದ ತಕ್ಷಣ ದೂರವಾಗುತ್ತವೆ.   ಯಾವುದರ ಮೇಲೂ ಆಸೆ, ಮೋಹ, ಕ್ರೋಧ, ಮದ, ಮತ್ಸರಗಳಿರಲು ಸಾಧ್ಯವೇ ಇಲ್ಲ.    ಹೀಗೆ ಆಸೆ ರೋಷಗಳನ್ನು ಹೂತು ಹಾಕಿ ಜಗತ್ತಿನ ಭವಪಾಶದ ಬಂಧನವನ್ನು ಹರಿದೊಗೆದು,   ಕಾಯವನ್ನು ಮರುಗಿಸಲಾರದೆ ಪ್ರಸಾದ ಕಾಯವಾಗಿಸಿ ಪೋಷಿಸಿದ್ದಾರೆ.

” ಮನವ ನಿಲ್ಲಿಸುವುದಕ್ಕೆ ಶರಣರ ಸಂಗಬೇಕು,
ಜನನ ಮರಣವ ಗೆಲಬೇಕು.
ಗುರುಲಿಂಗ ಜಂಗಮದಲ್ಲಿ ವಂಚನೆಯಿಲ್ಲದೆ,
ಮನಸಂಚಲವ ಹರಿದು,……”

 ನಿಶ್ಚಿಂತವಾಗಿರಬೇಕೆಂದು ಮತ್ತೊಂದೆಡೆ ಹೇಳಿದ್ದಾಳೆ.  ಹೀಗಾದಾಗ ಮನವೆಂಬುದು,
” ಗಾಳಿ ಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ, ಬೆಳಗಿದ ದರ್ಪಣದಂತೆ ”  ನಿರ್ಮಲವಾಗುತ್ತದೆ. ಆಗ ಮಾತ್ರ  ಆ ಮಹಾಘನವನ್ನು ಕಾಣಲು ಸಾಧ್ಯವೆನ್ನುತ್ತಾಳೆ.

         ಎಲ್ಲ ಸತ್ಕಾರ್ಯಗಳಿಗೆ ಅಡ್ಡಿಯುಂಟು ಮಾಡುವ ನಿದ್ದೆಯನ್ನೇ ನೈವೇದ್ಯ ಮಾಡಿ ಯೋಗಸಮಾಧಿಯನ್ನಾಗಿಸಿಕೊಂಡು ಕ್ಷಣಿಕವಾದ ಬಾಹ್ಯ ಸುಖವನ್ನು ಹೀಯಾಳಿಸುತ್ತಾ ಜಗತ್ತನ್ನೇ ಗೆದ್ದ ಶರಣರ ಪರಿ ನಿಮ್ಮಂತ ಬುದ್ಧಿಗೇಡಿಗಳಿಗೆ ಪಾರಮಾರ್ಥಿಕದ ನೆಲೆ, ಸ್ವರೂಪ ಹೇಗೆ ತಿಳಿದಾವು ಎಂದು ಲಿಂಗಮ್ಮ ಮತ್ತೊಮ್ಮೆ ಛೇಡಿಸುತ್ತಾಳೆ.


   ಪ್ರೊ. ಜಿ.ಎ, ತಿಗಡಿ.

Leave a Reply

Back To Top