ನಾನು ಓದಿದ ಪುಸ್ತಕ

ಚಿಗುರಿದ ಕನಸು

ಡಾ.ಶಿವರಾಮ ಕಾರಂತ

ಮೊನ್ನೆ ನಮ್ಮ ಬತ್ತಲಹಳ್ಳಿಗೆ ಹೊರಟಾಗ ಎದುರಿಂದ ಕುರುಚಲು,ಸಣ್ಣ ಕಾಡು ಗಿಡಗಳಿಂದಲೇ ತುಂಬಿರುವ ಹಸಿರುಟ್ಟ ಬೆಟ್ಟ ಸಾಲುಗಳು ಬರಮಾಡಿಕೊಂಡವು. ಬೆಟ್ಟದ ತಪ್ಪಲಿನಲ್ಲಿ ಇರುವ ನಮ್ಮ ಹೊಲ,ತುಂಡು ಭೂಮಿಯ ಕಂಡಾಗ ಎಂತದೋ ಖುಷಿ. ಈ ದಿನ ಅದೆಲ್ಲವನ್ನೂ ಮತ್ತೆ ಮತ್ತೆ ನೆನೆಯಲು ಕಾರಣವಾಯ್ತು ಈ “ಚಿಗುರಿದ ಕನಸು”.


ಈ ಕಾದಂಬರಿಯು ಶಿವರಾಮ ಕಾರಂತರು  ‌ಬರೆದಿರುವ‌ ಕಾದಂಬರಿಗಳಲ್ಲಿ ಒಂದಾಗಿದ್ದು ತುಂಬಾ ಅದ್ಭುತವಾದ ಕಾದಂಬರಿಯಾಗಿದೆ.


                  ಈ ಕಾದಂಬರಿಯನ್ನು ಓದಿ ಮುಗಿಸಿದ ನನಗೆ ಈ ಒಂದು ವಿಷಯ ಮನಸ್ಸಿಗೆ ಬರದೆ ಇರಲು ಸಾಧ್ಯವಾಗಲಿಲ್ಲ ಅದೇನೆಂದರೆ ನಾವು ಸಹ ಈ ನಗರದ ಜೀವನವನ್ನು, ಯಾಂತ್ರಿಕ ಬದುಕನ್ನು ಬಿಟ್ಟು ಹಳ್ಳಿಗೆ ಹೋಗಿ ಅಲ್ಲಿ ಇರುವಂತಹ ಅಲ್ಪ ಸ್ವಲ್ಪ ಜಮೀನಿನಲ್ಲಿ ವೈಜ್ಞಾನಿಕವಾಗಿ ವ್ಯವಸಾಯವನ್ನು ಮಾಡಿಕೊಂಡು ನಿಸರ್ಗದ ಮಡಿಲಲ್ಲಿ ಸುಸ್ಥಿರವಾದಂತಹ ಜೀವನವನ್ನು ತೃಪ್ತಿಯಿಂದ ಜೀವಿಸಬಹುದಲ್ಲವೇ ಎಂಬುದು.


               ಈ ಕಥೆಯ ನಾಯಕ ಶಂಕರ ರವರ ಪಾತ್ರ ಮಹತ್ವದ್ದು. ಅವರ ವ್ಯಕ್ತಿತ್ವ, ಯೋಚನಾ ಲಹರಿ, ಸಾಧನೆ, ಅವರ ಮಿತಭಾಷೆ ಎಲ್ಲವೂ ಇತರರಿಗೆ ಮಾದರಿಯಾಗಿದೆ.


            ಉನ್ನತ ವ್ಯಾಸಂಗವನ್ನು ಮಾಡಿ ಮುಂಬಯಿ, ದೆಹಲಿಯಂತಹ ಮಹಾ ನಗರಗಳಲ್ಲಿ ಓದಿ, ಬೆಳೆದು ತಾನು ಬೆಳೆದ ವಾತಾವರಣಕ್ಕೆ ತೀರಾ ವಿರುದ್ಧವಾದಂತಹ ತನ್ನ ತಾತ ಮುತ್ತಾತಂದಿರು ಬಾಳಿ ಬದುಕಿದ ಒಂದು ಪುಟ್ಟ ಹಳ್ಳಿಗೆ ಬಂದು ಅಲ್ಲಿ ಅವರ ತಾತಂದಿರ ಜಮೀನು ಕಾಡು ಪಾಲಾಗಿದ್ದನ್ನು ದಕ್ಕಿಸಿಕೊಂಡು ತನ್ನ ಶ್ರಮ ಮತ್ತು ವೈಜ್ಞಾನಿಕ ವಿಧಾನಗಳಿಂದ ಆ ಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ಮಾಡಿದ ಕೀರ್ತಿ ಶಂಕರ್ ರವರದ್ದಾಗಿದೆ.


              ಶಂಕರ ರವರ ತನ್ನ ಆಸೆ, ಕನಸು ಆಗಿದ್ದಿದ್ದು ಏನೆಂದರೆ ತನ್ನ ತಾತ ನವರು ಬಾಳಿ ಬದುಕಿದ ಹಳ್ಳಿಯಲ್ಲಿ ಅವರ ಜಮೀನಿನಲ್ಲಿ ತಾನು ವ್ಯವಸಾಯವನ್ನು ಮಾಡಿಕೊಂಡು ಬದುಕಬೇಕು ಎಂಬುದು.ತನ್ನ ಈ ಆಸೆಯನ್ನು ತನ್ನ ಅಪ್ಪ ಅಮ್ಮನಿಗೆ ತಿಳಿಸಿದಾಗ ಅವರಿಂದ ಒಪ್ಪಿಗೆ ಸಿಗುವುದಿಲ್ಲ.ಕಾರಣ ಅವರಿಗೆ ಹಳ್ಳಿ, ವ್ಯವಸಾಯ ಇವು ತಮ್ಮ ಪ್ರತಿಷ್ಠೆಗೆ ಸರಿಹೊಂದುವುದಿಲ್ಲ ಎಂಬುದು.ತನ್ನ ಅಪ್ಪ ಅಮ್ಮ ನವರಿಂದ ಯಾವುದೇ ರೀತಿಯ ಆರ್ಥಿಕ ಸಹಾಯ ಸಿಗುವುದಿಲ್ಲ. ಆದರೂ ಛಲ ಬಿಡದೆ ಹಳ್ಳಿಗೆ ಬಂದು ಕೃಷಿಯನ್ನು ಮಾಡಿ ಯಶಸ್ವಿಯಾಗುತ್ತಾರೆ. ತನ್ನ ತಮ್ಮ ಅಣ್ಣನ ಆಸೆ ಕನಸುಗಳಿಗೆ ತನ್ನ ಕೈಲಾದಷ್ಟು ಹಣ ಸಹಾಯ ಮಾಡುತ್ತಾನೆ.


                ಶಂಕರ ರವರು ಹಳ್ಳಿಗೆ ಬಂದು ಕಾಡು ಬೆಳೆದುಕೊಂಡ ಜಮೀನಿನಲ್ಲಿ ವೈಜ್ಞಾನಿಕವಾಗಿ ಕೃಷಿ ಮಾಡಲು ಶುರು ಮಾಡುತ್ತಾರೆ.ಅವರ ಈ ಹಾದಿಯಲ್ಲಿ ಮೇಲಿಂದ ಮೇಲೆ ಕಷ್ಟಗಳು, ಆಘಾತಗಳು ಎಷ್ಟು ಬಂದರು ಧೃತಿಗೆಡುವುದಿಲ್ಲ.ಆ ಕಷ್ಟಗಳನ್ನು ಮೇಲಿಂದ ಮೇಲೆ ಬಂದ ತನ್ನ ಆಪ್ತರ ಸಾವುಗಳನ್ನು ಸಹನೆಯಿಂದ, ಧೈರ್ಯದಿಂದ ಎಲ್ಲಾ ತೊಂದರೆಗಳನ್ನು ನಿಭಾಯಿಸಿ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.


      ಇವರ ಈ ಸಾಧನೆ ಸುತ್ತಾ ಹತ್ತಾರು ಹಳ್ಳಿಗಳಿಗೆ ಹಬ್ಬಿ ಇವರ ಮಾದರಿಯ ಕೃಷಿ ವಿಧಾನಗಳನ್ನು ಬೇರೆಯವರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಲು ಮನಸ್ಸು ಮಾಡುವರು. ಇದರಲ್ಲಿ ಮೊದಲಿಗರು ಶಂಕರರ ಗೆಳೆಯನಾದ ಸೀತಾರಾಮನ ತಮ್ಮ ಕೃಷ್ಣನೂ ಸಹ ಕೆಲವು ವರ್ಷಗಳು ಶಂಕರರೊಂದಿಗೆ ಕೆಲಸ ಮಾಡಿ ತಮ್ಮದೇಯಾದ ಹೊಸ ಜಮೀನನ್ನು ಕೊಂಡು ಅದನ್ನು ಶಂಕರ ರವರ ಮಾರ್ಗದರ್ಶನದಲ್ಲಿ ಸಾಗುವಳಿ ಮಾಡಿ ಯಶಸ್ವಿಯಾಗುತ್ತಾರೆ.


              ಕಥಾನಾಯಕ ಶಂಕರ ರವರ ವ್ಯಕ್ತಿತ್ವ, ಸಾಧನೆ ಇಂದಿನ ಯುವಜನತೆಗೆ ಮಾದರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಹಳ್ಳಿಯಿಂದ ಸುಮಾರು ಜನ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಇದರಿಂದ ಕೃಷಿಯ ಮೇಲೆ,ಅದರ ಪ್ರಗತಿಯ ಮೇಲೆ ತುಂಬಾ ದುಷ್ಪರಿಣಾಮಗಳುಂಟಾಗುತ್ತಿವೆ. ಯುವ ಜನತೆ ಇಂತಹ ದುಷ್ಪರಿಣಾಮಗಳಿಗೆ ಅವಕಾಶ ಕೊಡದೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕೃಷಿಯನ್ನು ಆಧುನಿಕ ರೀತಿಯಲ್ಲಿ ಮಾಡಿ ಅಲ್ಲಿಯೇ ತಮ್ಮ ಬದುಕನ್ನು ಸುಸ್ಥಿರವಾಗಿ ಕಟ್ಟಿಕೊಂಡು ಇತರರಿಗೂ ನೆರವಾಗಬೇಕು ಎಂಬುದು ನನ್ನ ಆಶಯ….

********

ಸೌಮ್ಯ.ವಿ.

Leave a Reply

Back To Top