ಪುಸ್ತಕ ಸಂಗಾತಿ
ವಿಶ್ವಾಸ್.ಡಿ. ಗೌಡ ಅವರ ಕೃತಿ
“ಬಾಳೊಂದು ಚೈತ್ರಾ ಮಯ”
ಒಂದು ಅವಲೋಕನ
ಬಿ.ಹೆಚ್. ತಿಮ್ಮಣ್ಣ


“ಬಾಳೊಂದು ಚೈತ್ರಾಮಯ ತಿಳಿದು ನಡೆದರೆ ರಸಮಯ”
ಕೃತಿ: ಬಾಳೊಂದು ಚೈತ್ರಾ ಮಯ
ಲೇಖಕರು: ವಿಶ್ವಾಸ್.ಡಿ. ಗೌಡ
ಪ್ರಕಾಶನ: ಬೊಂಬೆ ಎಂಟರ್ಪ್ರೈಸಸ್ , ಮೈಸೂರು
ಬೆಲೆ:158 /-
ದೊರೆಯುವ ಸ್ಥಳ: ಅಕ್ಷರ ಬುಕ್ ಡಿಪೋ, ಸಪ್ನಾ ಬುಕ್ ಹೌಸ್, ಹಾಸನ ಜಿಲ್ಲೆ.
ಸಂಪರ್ಕಿಸುವ ಮೊಬೈಲ್ ನಂ:9743636831
‘ಬಾಳು’ ಎಂದರೆ ಒಂದು ಅರ್ಥಗರ್ಭಿತವಾದ ಜೀವನದ ರಸಾನುಭವ. ಬದುಕು ಬಂಗಾರವಾಗಲು ಪ್ರತಿದಿನವೂ ಹೊಸ ಚೈತನ್ಯ ತುಂಬಿದ ಸದಾ ಚಲನೆಯಲ್ಲಿರುವ ವ್ಯಕ್ತಿಯ ಜೀವನ ಚಕ್ರವು ದಿನನಿತ್ಯವೂ ಸಾಗುತ್ತಲೇ ಮುನ್ನುಗ್ಗುವಂತಿರಬೇಕು. ಮನುಷ್ಯರ ಜೀವನದ ಪ್ರತಿಯೊಂದು ಕ್ಷಣವು ಆನಂದಮಯವಾಗಿ, ಖುಷಿಯಿಂದ, ಲವಲವಿಕೆಯಿಂದ ಸಾಗುವಂತಿರಬೇಕು. ವ್ಯಕ್ತಿಯು ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ವಿಚಾರವಂತನಾಗಲೇಬೇಕು.ಈ ನಿಟ್ಟಿನಲ್ಲಿ ಓದುಗರಿಗೆ ಹೊಸ ರೀತಿಯ ವಿಷಯಗಳು ನಮಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳನ್ನು, ವ್ಯಕ್ತಿಯ ಪರಿಚಯಗಳು, ಅವರ ಸಾಧನೆಗಳು ಹಾಗೂ ವೈಜ್ಞಾನಿಕ ಚಿಂತನೆಗಳು, ಸೃಜನಾತ್ಮಕ ಚಟುವಟಿಕೆಗಳು,ಎಷ್ಟೋ ಸಂಪ್ರದಾಯಗಳು ಮುಚ್ಚಿ ಹೋಗುತ್ತಿರುವ ಈ ಕಾಲದಲ್ಲಿ ಆಡಂಬರದ ಬದುಕು, ಮೂಢನಂಬಿಕೆ, ಕಂದಾಚಾರ, ಅನಿಷ್ಟ ಪದ್ಧತಿಗಳ ಬೆನ್ನ ಹಿಂದೆ ಬಿದ್ದು ದುಶ್ಚಟಗಳ ಬಲೆಯೊಳಗೆ ಸಿಲುಕಿ ನೆರಳಾಡುತ್ತಿರುವ ಈ ಮನುಕುಲ ಇದರಿಂದ ಬಿಡಿಸಿಕೊಂಡು ಆಚೆ ಬರಬೇಕು ಎನ್ನುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಲೇಖಕರು, ಶಿಕ್ಷಕರು, ಪತ್ರಕರ್ತರು, ಬರಹಗಾರರು ಹಾಗೂ ಉದ್ದಿಮೆದಾರರಾಗಿ ಖ್ಯಾತಿಯನ್ನು ಪಡೆದುಕೊಂಡಿರುವ ವಿಶ್ವಾಸ ಡಿ.ಗೌಡರು ಹೊರತಂದಿರುವ ಲೇಖನಗಳ ಗುಚ್ಛವಾದ “ಬಾಳೊಂದು ಚೈತ್ರಮಯ” ನಮಗೆ ನಿದರ್ಶನವಾಗಿದೆ.
ಈ ಬಾಳೊಂದು ಚೈತ್ರಮಯ ಲೇಖನ ಕೃತಿಯು ಒಟ್ಟು 36 ಲೇಖನಗಳನ್ನು ಒಳಗೊಂಡಿದೆ. ಇವುಗಳನ್ನು ಓದುತ್ತಾ ಹೋದಂತೆಲ್ಲ ನಮ್ಮನ್ನು ದೀರ್ಘ ಆಳಕ್ಕೆ ಕರೆದೊಯ್ಯುತ್ತವೆ. ಒಂದೊಂದು ಲೇಖನವೂ ತುಂಬಾ ವಿಸ್ತಾರವಾದ ಚಿಂತನೆ ಮಾಡುವಂತಹ ವಿಷಯಗಳಿಂದ ಕೂಡಿಕೊಂಡಿವೆ. ಇಲ್ಲಿ ಲೇಖಕರಾದ ವಿಶ್ವಾಸ ಡಿ. ಗೌಡರನ್ನು ಮೆಚ್ಚಲೇಬೇಕು. ಈ ಕೃತಿಯಲ್ಲಿರುವ ಲೇಖನಗಳನ್ನು ನೋಡಿದರೆ ಒಬ್ಬ ಮಹಾನ್ ಪಂಡಿತರು, ವೇದಗಳ ಕಾಲದಲ್ಲಿದ್ದ ಜ್ಞಾನಿಗಳು ಕೂಡ ಊಹಿಸಲಾರದಂತಹ ವಿಷಯಗಳು ಇಲ್ಲಿ ನಮಗೆ ತೋರಿಸಿಕೊಟ್ಟಿದ್ದಾರೆ. ಇವರನ್ನು ನಾನು ಒಬ್ಬ ಪಂಡಿತ, ಜ್ಯೋತಿಷ್ಯ, ಪರಿಸರ ಪ್ರೇಮಿ,ಪ್ರಾಣಿತಜ್ಞ, ಪ್ರವಾಸಗಾರ, ವೈದ್ಯ, ಇಂಜಿನಿಯರ್ ಹಾಗೂ ಶಿಕ್ಷಣ ಪ್ರೇಮಿ ಅಂತಲೂ ಕರೆಯಬೇಕೆಂದೆನಿಸುತ್ತಿದೆ. ಏಕೆಂದರೆ ಇವರೆಲ್ಲರೂ ಮಾಡುವಂತಹ ಕಾರ್ಯವನ್ನು ಇಲ್ಲಿ ತಾವು ಒಬ್ಬರೇ ತಮ್ಮ ಅನುಭವದ ರಸಾನುವಾದಗಳನ್ನು ಈ ಒಂದು ಲೇಖನಗಳ ಹೊತ್ತಿಗೆಯಲ್ಲಿ ಚಿತ್ರಿಸಿದ್ದಾರೆ. ಇವುಗಳನ್ನು ಓದುತ್ತಾ, ಆನಂದಿಸುತ್ತಾ, ಅನುಭವಿಸುತ್ತಾ ಹೋದರೆ ಇವರ ಬಗ್ಗೆ ಸ್ವಲ್ಪ ಮಟ್ಟಿಗಾದರೂ ತಿಳಿಯುತ್ತದೆ.
ಇಲ್ಲಿ ಕಂಡು ಬರುವ ಒಂದು ಲೇಖನ ‘ಕನ್ನಡದ ಬೆಳವಣಿಗೆಗೆ ನಾವೇನು ಮಾಡಬಹುದು?’ ಎನ್ನುವುದು ಇದು ಕೇವಲ ಕಿವಿಯಿಂದ ಕೇಳಲು ಕಠೋರವೆನಿಸಬಹುದೇ ನೋ,ಆದರೂ ಕನ್ನಡಭಿಮಾನಿಗಳಾದ ನಾವು ಪ್ರಶ್ನಿಸಿಕೊಳ್ಳುವಂತದ್ದು, ಯಾಕಂದ್ರೆ ಬಾಯಿಂದ ಬರಿ ಕನ್ನಡ,ಕನ್ನಡ ಎಂದು ಜಂಭ ಕೊಚ್ಚಿಕೊಳ್ಳುತ್ತಿರುವ ನಾವುಗಳು ಮತ್ತು ನಮ್ಮ ಕನ್ನಡಪರ ಸಂಘಟನೆಗಳು, ಹೋರಾಟಗಳು ಎಷ್ಟರಮಟ್ಟಿಗೆ ಕನ್ನಡವನ್ನು ಬಳಸುತ್ತಿದ್ದೇವೆ, ಉಳಿಸುತಿದ್ದೇವೆ ಎಂಬುದನ್ನು ತಿಳಿಯಬೇಕಾಗುತ್ತದೆ. ಕನ್ನಡದ ಬಗ್ಗೆ ಹೇಳುವುದಾದರೆ ದಿನಗಳು ಸಾಕಾಗಲ್ಲ, ಬರೆದರೆ ಪುಟಗಳು ಉಳಿಯಲ್ಲ ಹಾಗಿದೆ. ಆದ್ರೂ ನಾವು ನಮ್ಮ ಕನ್ನಡವನ್ನು ಬಳಸಿ,ಬೆಳಸಿ, ಉಳಿಸಿಕೊಂಡು ಹೋಗಬೇಕಾದ ಕರ್ತವ್ಯವಾಗಿದೆ.
ಗೌಡರನ್ನು ಒಬ್ಬ ತಜ್ಞರನ್ನಾಗಿ ನೋಡುತ್ತೇನೆ ಎಂದು ತಿಳಿಸಿದ್ದೆ. ‘ಬ್ರಾಹ್ಮೀ ಮುಹೂರ್ತ’ ಎಂದರೆ ಎಷ್ಟೋ ಜನಗಳಿಗೆ ಗೊತ್ತೇ ಇಲ್ಲ.ಅದು ಇತ್ತೀಚಿನ ಆಧುನಿಕ ತಂತ್ರಜ್ಞಾನ ಯುಗದ ಯುವಕ ಯುವತಿಯರಿಗಂತೂ ದೂರದ ಮಾತಾಗಿದೆ. ಎಲ್ಲರೂ ಮೊಬೈಲ್ನ ಹಿಂದೆ ಬಿದ್ದು ಸಮಯದ ಪರಿವೇ ಇಲ್ಲದೆ ಬದುಕುತ್ತಿದ್ದಾರೆ. ರಾತ್ರಿ ಇಡೀ ಮೊಬೈಲ್ ನೋಡುವುದು ಮಧ್ಯರಾತ್ರಿಯ 2-3 ಗಂಟೆಗೆ ನಿದ್ದೆಗೆ ಜಾರೋದು.ಬೆಳಗ್ಗೆ 10-11ಗಂಟೆಗೆ ಎದ್ದೇಳುವುದಾಗಿದೆ. ತಮ್ಮ ಬದುಕಿನ ಅರ್ಧಯುಷ್ಯವನ್ನು ನಿದ್ದೆಯಲ್ಲಿ ಕಳೆಯುತ್ತಿದ್ದಾರೆ. ಅದರಿಂದ ಹೊರಬರುವುದು ಹೇಗೆಂದು ಎಷ್ಟೋ ಜನಗಳು ವಿಲವಿಲ ಒದ್ದಾಡುವಂತಹ ಸ್ಥಿತಿ ಎದುರಾಗಿದೆ. ಇಂಥವರಿಗೆ ಬ್ರಾಹ್ಮಿ ಮುಹೂರ್ತ ಎಂದರೆ ಹೇಗೆ ತಿಳಿದೀತು. ಇದರ ಬಗ್ಗೆ ಅರಿವು ಮೂಡಿಸುವುದಕ್ಕೆ ಈ ಒಂದು ಲೇಖನ ದಾರಿ ದೀಪವಾಗಿದೆ.
ಇಲ್ಲಿ ಸುಮಾರು ಲೇಖನಗಳು ಓದುಗರಿಗೆ ಹೊಸತನ್ನು ನೀಡುತ್ತವೆ. ಅವುಗಳಲ್ಲಿ ಕೆಲವು ಹೀಗಿವೆ. ಅವುಗಳಲ್ಲಿ ನೋಡುವುದಾದರೆ “ತ್ಯಾಗ ಮಾಡುವುದನ್ನು ಕಲಿಯಿರಿ….! ಇಲ್ಲಿ ಒಬ್ಬ ಮಹಾನ್ ವ್ಯಕ್ತಿಯ ಬಾಲ್ಯದ ಕಥೆಯನ್ನೇ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ “ಸದಾ ಸತ್ಯವನ್ನೇ ಹೇಳಿ….! “ದರ್ಬೆ ಹುಲ್ಲು” ಮತ್ತು “ದಕ್ಷಯಜ್ಞ”ವಂತೂ ಒಂದು ಪೌರಾಣಿಕವಾದ ಕಥೆಯನ್ನು ಹೇಳುತ್ತದೆ. ಇದು ಎಷ್ಟೋ ಜನರಿಗೆ ಗೊತ್ತಿರದ ಸಂಗತಿ.ಅದನ್ನು ಇಲ್ಲಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಹೇಳುತ್ತೇನೆ. ಹಾಗೆಯೇ ‘ಹುಟ್ಟು ಉಚಿತ ಸಾವು ಖಚಿತ’ ಎನ್ನುವಂತೆ ಪರಿಸರದಲ್ಲಿ ಉಸಿರಾಡುವ ಪ್ರತಿಯೊಂದು ಜೀವಿಗೆ ಹುಟ್ಟು ಅಂದ ಮೇಲೆ ಸಾವು ಇರಲೇಬೇಕು, ಯಾರು ಶಾಶ್ವತವಲ್ಲ ಎಂಬುದು ತಿಳಿದಿರಬೇಕು. ಹಾಗೆ ಇನ್ನು ಮುಂದೆ ಹೋದಂತೆ ‘ಹಸು’ವನ್ನು ಗೋಮಾತೆಯೆಂದು ಪೂಜಿಸುವಂತಹ ಒಂದು ತಾಯಿ.ಇವಳನ್ನು ಹೇಗೆ “ಹಟ್ಟಿ” ಎಂಬ ಜೈಲಿನಲ್ಲಿ ಇಟ್ಟರೆ ಹೇಗೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ. ಇದಕ್ಕೆ ಪರ್ಯಾಯವಾಗಿ ಹೇಳಬೇಕೆಂದರೆ ಇತ್ತೀಚಿನ ನಗರವಾಸಿಯ ಹೆಣ್ಣು ಮಕ್ಕಳು ಎಂದು ಹೇಳಬಹುದು.
ಇನ್ನೂ ಪ್ರಕೃತಿಯ ನಾಶಕ್ಕೆ ಕೈಗಾರೀಕರಣ ಹೇಗೆ ಕಾರಣವಾಗುತ್ತಿದೆ, ಎಂಬುದು ತಿಳಿಯಬೇಕು. ಇನ್ನು ಕ್ಷೇತ್ರ ಭೇಟಿಯಾದ “ಶ್ರೀ ಕ್ಷೇತ್ರ ವರದಪುರ” ಇದು ಎಷ್ಟೋ ಸುಮಾರು ಜನರಿಗೆ ಗೊತ್ತಿರದ ಒಂದು ಪುಣ್ಯ ಸ್ಥಳವಾಗಿದೆ.ಹಾಗೆಯೇ “ಸಹ ಶಿಕ್ಷಣ” ಎನ್ನುವಂತದ್ದು ಪರಕೀಯರಿಂದ ಪಡೆದುಕೊಂಡದ್ದು ಅಥವಾ ಬಂದದ್ದು ಹೇಗೆ ಎನ್ನುವುದನ್ನು ತಿಳಿಸಿದ್ದಾರೆ. ಹಾಗೆಯೇ “ವಿಜಯದಶಮಿ”ಯ ಬಗ್ಗೆಯಂತೂ ತುಂಬಾ ಹಿನ್ನೆಲೆ ಹೊಂದಿದ ಕಥೆಯನ್ನು ಇಲ್ಲಿ ಮುದ್ರಿಸಿದ್ದಾರೆ.
ಇತ್ತೀಚಿನ ಕಾಲದಲ್ಲಿ ಕೂಡು ಕುಟುಂಬ ಹೊಡೆದು ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ. ಇದರಿಂದ ಹಿರಿಯರ ಮತ್ತು ಕಿರಿಯರ ನಡುವಿನ ನಂಟಿನ ಸೇತುವೆ ಮುರಿದು ಬೀಳುತ್ತಿದೆ. ಅದು ಹಾಗಾಗಬಾರದೆಂದರೆ ನಾವುಗಳು “ವಸುದೈವ ಕುಟುಂಬಕಂ” ಪದ್ಧತಿಯನ್ನು ಪಾಲಿಸಬೇಕಾಗುತ್ತದೆ.
ಇನ್ನು ವೈದ್ಯರಾಗಿ ನೋಡುವುದಾದರೆ “ಎಚ್ಚರ ಬ್ರೈನ್ ಸ್ಟ್ರೋಕ್….!” ಹೃದಯಘಾತ” ಮತ್ತು “ರಕ್ತದಾನ ಜೀವದಾನ..!” ಇವುಗಳಿಗೆಲ್ಲ ಮುಖ್ಯ ವ್ಯಾಯಾಮ ಮತ್ತು ಯೋಗ ಇವುಗಳ ಮಹತ್ವದ ಬಗ್ಗೆ ತುಂಬಾ ಮಾರ್ಮಿಕವಾಗಿ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ವ್ಯಕ್ತಿಗಳ ಪರಿಚಯ, ಹಬ್ಬಗಳ ಮಹತ್ವ ಹಾಗೂ ಇತ್ತೀಚಿಗಂತೂ ಲಕ್ಷಾನುಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿಕೊಂಡು ಕ್ಷಣಮಾತ್ರದಲ್ಲಿ ವಿಚ್ಛೇದನಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅದಕ್ಕಾಗಿ ಮೊದಲು ಮನಸುಗಳ ಮಧ್ಯೆ ಮದುವೆಯಾಗಬೇಕು. ಇದನ್ನೇ ಕುವೆಂಪುರವರ ಮಂತ್ರ ಮಾಂಗಲ್ಯವು ತುಂಬಾ ಮಹತ್ವವನ್ನು ಪಡೆದುಕೊಂಡಿದೆ.
ಒಟ್ಟಾರೆಯಾಗಿ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ರಹಸ್ಯಗಳು, ಜೀವನದ ಅನುಭವಗಳು, ಬಾಳು ಬಂಗಾರವಾಗಬೇಕೆಂದರೆ ಏನೆಲ್ಲ ಮಜಲುಗಳು, ಹಂತಗಳು,ದಾರಿಗಳು ಇದೆ ಎಂಬುದನ್ನು ಲೇಖಕರಾದ ವಿಶ್ವಾಸ ಡಿ. ಗೌಡರು ಪ್ರತಿಯೊಬ್ಬ ಪುಸ್ತಕ ಓದುವ ಪ್ರೇಮಿಗೆ ತಿಳಿಸುವಂತಹ ಕೆಲಸವನ್ನು ಮಾಡಿದ್ದಾರೆ. ಇದನ್ನು ಖರೀದಿ ಮಾಡಿ ಓದಿದರೆ ತುಂಬಾ ಪ್ರಯೋಜನಕ್ಕೆ ಬರಬಹುದೆಂದು ಎನಿಸುತ್ತದೆ. ದಿನದಲ್ಲಿ ಎಷ್ಟೆಷ್ಟೋ ಖರ್ಚು ಮಾಡಿ ಆರೋಗ್ಯ ಹದಗೆಡುವಂತಹ ತಿಂಡಿ, ತಿನಿಸು, ಊಟವನ್ನು ತಿಂದು ಹಾಳು ಮಾಡುವ ಬದಲು ಪುಸ್ತಕದ ಗೆಳೆತನವನ್ನು ಬೆಳೆಸಿ ಮುಂದೊಂದಿನ ಹೊಟ್ಟೆ ತುಂಬಾ ಅನ್ನ ನೀಡುತ್ತದೆ ಎಂದು ನಂಬಿರುವ ಕಂದ ನಾನು. ಈ ಪುಸ್ತಕವನ್ನು ಜೀವಂತಿಕೆಯಲ್ಲಿರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಕೈಯಲ್ಲಿದೆ. ಬರಹಗಾರರಿಗೆ ನನ್ನದೊಂದು ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ಇವತ್ತಿನ ದಿನಮಾನದಲ್ಲಿ ‘ಈಗ ಸ್ನೇಹವಾಗಿ ನಾಳೆ ಮುಗಿದು ಹೋಗುವ ಗೆಳೆತನಕ್ಕಿಂತ ಸದಾ ನಮ್ಮೊಟ್ಟಿಗೆ ಕೊನೆಯವರೆಗೂ ಇರುವ ಪುಸ್ತಕದ ಜೊತೆ ಗೆಳೆತನ ಬೆಳೆಸಿಕೊಳ್ಳಿ’ ಎಂದು ಹೇಳಲು ಇಚ್ಚಿಸುತ್ತೇನೆ
ಬಿ.ಹೆಚ್. ತಿಮ್ಮಣ್ಣ (ಯಾದಗಿರಿ)ಮೈಸೂರು.
[ಯುವ ಕವಿ, ಕಥೆಗಾರ, ಹವ್ಯಾಸಿ ಬರಹಗಾರ, ರಂಗಭೂಮಿ ಕಲಾವಿದ, ಲೇಖನಕಾರ.]




