ಕಾವ್ಯಯಾನ

ಎಚ್ಚರವಾಗಿದ್ದರೂ ಏಳದೆ!

ಧಾಮಿನಿ

ಅವಳು ಮಲಗೇ ಇದ್ದಾಳೆ…
ಬೆಳಗು ಮುಂಜಾನೆದ್ದು ರಂಗೋಲಿ ಹಾಕುತ್ತಿದ್ದವಳು
ಇವತ್ತೇನೋ ನೀರು ಹಾಕಿದರೆ ಸೂರ್ಯನ ಮುಖಕ್ಕೇ ರಾಚುವಷ್ಟು
ಸಮಯವಾಗಿದ್ದರೂ ಮಲಗೇ ಇದ್ದಾಳೆ.

ಹಾಗಂತ ರಾತ್ರಿಯೆಲ್ಲ ಕ್ರೀಡೆಯಾಡಿರಲಿಲ್ಲ
ಲೀಲೆಯಾಡಿದಂತ ಕಸಸೂ ಕಂಡಿರಲಿಲ್ಲ, ಶತಮಾನವಾಗಿದ್ದರೂ.

ಹಾಗಂತ ಮೈಮರೆತು ಮಲಗಿರಲಿಲ್ಲ
ಎಲ್ಲದರಿಂದ ವಿಮುಖವಾದವಳೂ ಅಲ್ಲ
ಬದುಕೇ ಎಲ್ಲದರಿಂದ ದೂರ ಸರಿದಿದೆ
ಸುಮ್ಮನೆ ಮಲಗೇ ಇದ್ದಾಳೆ
ವೇಳೆ ಸರಿದಿದ್ದರೂ.

ಹಾಗಂತ ಕೆಲಸವಿಲ್ಲದೇ ಏನಿಲ್ಲ
ಶುರು ಮಾಡಿದರೆ ಅತ್ತಿತ್ತ ತಿರುಗಲೂ ಪುರುಸೊತ್ತಿಲ್ಲ
ಒಂದೊಂದು ಘಳಿಗೆ ಮುಂದಕ್ಕೋಗುತ್ತಿದ್ದರೂ
ಮಲಗೇ ಇದ್ದಾಳೆ.

ಹಾಗಂತ ಹೇಳುವವರು ಕೇಳುವವರು ಇಲ್ಲವೇನು ?
ಇಲ್ಲದೇ ಏನು !
ಇವಳೇ ಎಲ್ಲರ ದೂರ ತಳ್ಳಿ ನಿಡುಸುಯ್ದಿದ್ದಾಳೆ.
ಬೆನ್ನು ತಿರುಗಿಸಿ ಮಲಗೇ ಇದ್ದಾಳೆ
ಕ್ಷಣ ಕ್ಷಣವೂ ಓಡುತ್ತಿದ್ದರೂ.

ನಿರ್ಲಿಪ್ತ ಮುಖ, ಕಣ್ಣು ಮರೆಮಾಡಿಕೊಂಡ ಕೈ,
ಹರಡಿದ ಕೂದಲು,
ಅಸ್ತವ್ಯಸ್ತ ಬಟ್ಟೆ,
ಮಲಗಿರುವ ರೀತಿ,
ಇವೆಲ್ಲವೂ

ಕವಿಯ ಕಣ್ಣಿಗೆ ಬಿದ್ದರೆ
ಒಂದು ಸುಂದರ ಕವಿತೆ

ಒಬ್ಬ ಕಲಾಕಾರ ನೋಡಿದರೆ
ಒಂದು ಸುಂದರ ಚಿತ್ರ

ಒಬ್ಬ ರಸಿಕ ನೋಡಿದರೆ
ಒಂದು ಸುಂದರ ಹಾಡು

ಅವಳು ಮಲಗೇ ಇದ್ದಾಳೆ
ಎಚ್ಚರವಾಗಿದ್ದರೂ ಏಳದೇ…

******

2 thoughts on “ಕಾವ್ಯಯಾನ

    1. ಮತ್ತೊಮ್ಮೆ ಓದಬೇಕಿನಿಸುವಷ್ಟು ಆಪ್ತ

Leave a Reply

Back To Top