ಮಲಯಾಳಂ ಕವಿತೆಯ ಅನುವಾದ-ದೋಣಿ ಸುನೀತ ಕುಶಾಲನಗರ ಅವರಿಂದ

ಅನುವಾದ ಸಂಗಾತಿ

ದೋಣಿ

ಮಲಯಾಳಂ:ನಾರಾಯಣ ಮೂರ್ತಿ


ಕನ್ನಡಕ್ಕೆ:ಸುನೀತ ಕುಶಾಲನಗರ

ದೋಣಿ ಹೊಳೆಯ ಮಧ್ಯೆ ತಲುಪಿದೆ
ನಡೆಸುವವನು
ವೇಗ ಹೆಚ್ಚಿಸಿದ್ದಾನೆ
ಯಾತ್ರಿಕರು ಇಬ್ಬರೇ
ಇಬ್ಬರಾದರೂ ನಾಲ್ವರಾದರೂ
ದೋಣಿಯ ಗೋಳು
ಒಂದೇ ತಾನೇ.

ಈ ಕರೆಯೂ ಹೊರೆಯೂ
ದೋಣಿಗೆ ಈಗ
ಪರಿಚಿತವೆ.

ಗಾಳಿ ಬಂದರೂ ಮಳೆ ಬಂದರೂ
ಕೆಸರಲ್ಲಿ
ನಿದ್ರಿಸುವುದೇ ಅದರ
ವಿಧಿ

ಮಳೆಗಾಲದಲ್ಲಿ ಅಪರೂಪಕ್ಕೊಮ್ಮೆ
ಹೊಳೆ ಬಂದೊಮ್ಮೆ
ಆಲಿಂಗಿಸಿ ಪಿಸು ನುಡಿಯುತ್ತದೆ
ಕೆಲವೊಮ್ಮೆ
ಕೆಲವು ಹಕ್ಕಿಗಳು
ದೋಣಿಗೆ ಕಥೆ ಹೇಳುತ್ತವೆ
ಅವು ಹಾರಿದ
ಆಕಾಶದ ಬಗ್ಗೆಯೂ
ಕದ್ದು ತಿಂದ
ಬತ್ತದ ಕುರಿತೂ
ಮೋಹಿಸಿದ ಜೀವದ ಕುರಿತೂ

ಆಗಲೆಲ್ಲಾ
ದೋಣಿ
ನೀರನ್ನು ನೋಡಿ ನಸುನಗುತ್ತದೆ
ನೀರು ಒಮ್ಮೆ ನಕ್ಕಂತೆ
ಮಾಡುತ್ತದೆ.

ಹೀಗಿರುವಾಗ
ಪ್ರವಾಹವಾಗುತ್ತದೆ
ನಾಡೂ ನದಿಯೂ ಕೆಸರುಮಯ
ದೋಣಿ ದಡದ
ಕೆಸರಿನಿಂದ
ಪ್ರಳಯ ಜಲದ ಕಡೆಗೆ
ನುಗ್ಗಿತು.

ಎಂತಹ ಉನ್ಮಾದ!
ದೋಣಿ ನಕ್ಕಿತು.
ದೋಣಿಯವನೇ
ಪ್ರಳಯ ಜಲದವನಾದ.

ಹಲವು ದಡಗಳನ್ನು
ತಾಕಿ
ದೋಣಿ ತೇಲಿತು
ಇನ್ನೂ ದಾಟಬೇಕಿರುವ
ಸುಳಿಗಳ
ತಿಳಿಯದೆ.

ಪ್ರಳಯ ಸರಿಯಿತು
ಗಾಳಿ ತಗ್ಗಿತು
ದೋಣಿ
ಮತ್ಯಾವುದೋ ದಡದಲ್ಲಿ
ನಿದ್ದೆಗೆ ಜಾರಿತು.


ಮಲಯಾಳಂ:ನಾರಾಯಣ ಮೂರ್ತಿ
ಕನ್ನಡಕ್ಕೆ:ಸುನೀತ ಕುಶಾಲನಗರ

5 thoughts on “ಮಲಯಾಳಂ ಕವಿತೆಯ ಅನುವಾದ-ದೋಣಿ ಸುನೀತ ಕುಶಾಲನಗರ ಅವರಿಂದ

  1. ಒಳ್ಳೆಯ ಕವಿತೆ ಓದಿಸಿದಿರಿ ಸುನಿತಕ್ಕ

  2. ಕವನದ ವಸ್ತುವಿನ ಚಿತ್ರಣ ಕಣ್ಣೆದುರು ಹಾಯ್ವಾಗ…ಆಹಾ ಸೊಗಸು.

  3. ಆಹಾ !!! ಎಂಥಾ ಶಬ್ದ ವಿನ್ಯಾಸ ! ನಿರಾಳವಾಗಿ ಕವಿತೆ ಹರಿಯುವಿಕೆಯ ಹದವೋ !!! ಮೂಲದಲ್ಲಿ ಅದ್ಭುತ ಕವಿತೆ ಎನ್ನಲು ಸಂಶಯವಿಲ್ಲ, ಅನುವಾದವೂ ಅಷ್ಟೇ ಸಶಕ್ತ…. ಅಭಿನಂದನೆಗಳು. ಒಂದೊಳ್ಳೆ ಕವಿತೆಯ ಓದಿಗೆ ಕಾರಣರಾದ ಕವಿಗೆ ವಂದನೆಗಳು…

Leave a Reply

Back To Top