ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಹಮೀದಾಬೇಗಂ ರವರ ಗಜಲ್ ಗಳಲ್ಲಿ ಸ್ತ್ರೀ ಸಂವೇದನೆ

ಎಲ್ಲರಿಗೂ ನಮಸ್ಕಾರಗಳು, ಹೇಗಿದ್ದೀರಿ ಎಲ್ಲರೂ… ಸೌಖ್ಯ ಅಲ್ಲವೇ; ಖಂಡಿತ ತಾವೆಲ್ಲರೂ ಸುಖವಾಗಿದ್ದೀರಿಯೆಂದು ಭಾವಿಸುವೆ! ಏನಿದು ಪುರಾಣ ಅಂತೀರಾ, ಹೌದು.. ಇದೊಂಥರಾ ಗಜಲಾಯಣ, ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಗಜಲ್ ಲೋಕದ ನಕ್ಷತ್ರದೊಂದಿಗೆ ತಮ್ಮ ಮುಂದೆ ಬಂದಿರುವೆ. ಮತ್ತೇಕೆ ವಿಳಂಬ, ನಕ್ಷತ್ರದ ಚೆಲುವನ್ನು ಆಸ್ವಾದಿಸೋಣ ಬನ್ನಿ.

“ಎಷ್ಟು ದಿನಗಳ ಬಾಯಾರಿಕೆಯಿತ್ತು ಎಂದು ಒಮ್ಮೆ ಯೋಚಿಸಿ
ಒಂದು ಹನಿ ಇಬ್ಬನಿ ಕೂಡ ಅವರಿಗೆ ನದಿಯಂತೆ ಭಾಸವಾಗುತ್ತದೆ”
-ಕೈಸರ್-ಉಲ್ ಜಾಫರಿ

      “ಮಹಿಳೆಯರು ಸಮಾಜದ ನಿಜವಾದ ವಾಸ್ತುಶಿಲ್ಪಿಗಳು” ಎಂಬ ಅಮೇರಿಕನ್ ಗಾಯಕಿ ಚೆರ್ ಅವರ ಮಾತು ‘ಮಹಿಳಾ ಸ್ವಾತಂತ್ರ್ಯ’ ಎನ್ನುವುದು ಕೇವಲ ಅವರಿಗೆ ಮಾತ್ರ ಸೀಮಿತವಾದ ವಿಚಾರವಲ್ಲ, ಬದಲಿಗೆ ಅದೊಂದು ಸಾಮಾಜಿಕ ಸ್ವಾತಂತ್ರ್ಯದ ಸಂಕೇತ ಎಂಬುದನ್ನು ಪ್ರತಿಧ್ವನಿಸುತ್ತದೆ. ಇದು ಒಂದು ದಿನದಲ್ಲಾದ ಬದಲಾವಣೆಯಲ್ಲ. ಅವರ ಧ್ವನಿಯು ಅಭಿವೃದ್ಧಿಯಾಗಲು ಸಾಕಷ್ಟು ಸಮಯ ಹಿಡಿದಿದೆ. ಈ ನೆಲೆಯಲ್ಲಿ ಯಾವುದೇ ಒಂದು ಸಮಾಜವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಕುಟುಂಬವನ್ನು ಮುನ್ನಡೆಸುವ ಸಮಯದಲ್ಲಿ ಬಂದೊದಗುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಯಾವುದೇ ಮಹಿಳೆಯು ನಮ್ಮ ಸಾಮಾಜಿಕ ವ್ಯವಸ್ಥೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬಲ್ಲಳು. ಮಹಿಳೆ ಹೊಂದಬಹುದಾದ ಅತ್ಯಂತ ಆಕರ್ಷಕವಾದ ವಿಷಯವೆಂದರೆ ಆತ್ಮವಿಶ್ವಾಸ. ಅದರಿಂದಲೇ ಇಂದು ಮಹಿಳೆ ಎಲ್ಲ ರಂಗಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ, ಮೂಡಿಸುತ್ತಿದ್ದಾಳೆ. ಅವಳ ಸಾಧನೆಗೆ ಯಾವುದೇ ಮಿತಿಯಿಲ್ಲ ಎಂಬುದಕ್ಕೆ ಇಂದಿನ ಸ್ಪರ್ಧಾತ್ಮಕ ಯುಗವೇ ಸಾಕ್ಷಿ. ಅಂತೆಯೇ “ಜಗತ್ತಿನಲ್ಲಿ ಎರಡು ಶಕ್ತಿಗಳಿವೆ; ಒಂದು ಕತ್ತಿ ಮತ್ತು ಇನ್ನೊಂದು ಲೇಖನಿ. ಎರಡಕ್ಕಿಂತ ಬಲವಾದ ಮೂರನೆಯ ಶಕ್ತಿ ಇದೆ, ಮಹಿಳೆಯರದು” ಎಂಬ ಪಾಕಿಸ್ತಾನಿ ಮಹಿಳಾ ಶಿಕ್ಷಣ ಕಾರ್ಯಕರ್ತೆ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜಾಯ್ ರವರ ಮಾತು ಮಹಿಳೆಯರ ಬಗೆಗೆ ಅಭಿಮಾನವನ್ನು ಮೂಡಿಸುತ್ತದೆ. ಒಂದು ಕಾಲದಲ್ಲಿ ಅಕ್ಷರ ಲೋಕದಿಂದ ದೂರವಿದ್ದ ಮಹಿಳೆಯರು ಬದಲಾದ ಕಾಲದ ತಿರುವಿನಲ್ಲಿ ಅಕ್ಷರ ಲೋಕದ ಅಕ್ಕರೆಯ ಮಾನಿನಿಯಾಗಿ ತಮ್ಮ ಭಾವನೆಗಳನ್ನು ಬರಹದ ಮೂಲಕ ವ್ಯಕ್ತಪಡಿಸುತ್ತ ವಾಙ್ಭಯ ದುನಿಯಾದಲ್ಲೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿರುವುದು ಅನನ್ಯ ಹಾಗೂ ಅನುಪಮ ಸಾಧನೆಯೇ ಸರಿ. ಇಂಥ ಮಹಿಳೆ ಮೃದುತ್ವದ ಲೇಪನದೊಂದಿಗೆ ಚಿಗುರೊಡೆದ ಗಜಲ್ ಗುಲ್ಮೋಹರ್ ನಿಂದ ದೂರವಿರಲು ಸಾಧ್ಯವೇ ಇಲ್ಲ. ಇಂದು ಕನ್ನಡದಲ್ಲಿ ಹತ್ತಾರು ಸ್ತ್ರೀಯರು ಗಜಲ್ ಪರಪಂಚದಲ್ಲಿ ತಮ್ಮ ಅಸ್ಮಿತೆಯನ್ನು ದಾಖಲಿಸಿದ್ದಾರೆ. ಅವರುಗಳಲ್ಲಿ ಶ್ರೀಮತಿ ಹಮೀದಾಬೇಗಂ ದೇಸಾಯಿ ಯವರೂ ಒಬ್ಬರು.

      ಶ್ರೀಮತಿ ಹಮೀದಾ ಬೇಗಂ ಬಾಬುರಾವ ದೇಸಾಯಿ ರವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಹತ್ತಿರ ಸಣ್ಣ ಹಳ್ಳಿ ಎಂ. ಮಲ್ಲಾಪೂರದಲ್ಲಿ ೧೯೫೦ ರ ಅಕ್ಟೋಬರ್ ಹತ್ತರಂದು ಜನಿಸಿದರು.‌ಇವರ ತಂದೆ ಬಾಬುರಾವ ದೇಸಾಯಿಯವರು ರಂಗಭೂಮಿ ಕಲಾವಿದರು ಮತ್ತು ನಿರ್ದೇಶಕರಾಗಿದ್ದರೆ, ತಾಯಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಆಗಿದ್ದರು.‌ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಮಕನಮರಡಿಯಲ್ಲಿ, ಮಾಧ್ಯಮಿಕ ಶಿಕ್ಷಣ ಹುಕ್ಕೇರಿಗಳಲ್ಲಿ ಪೂರೈಸಿದ್ದಾರೆ. ಮುಂದೆ ಬಿಎಸ್ಸಿ, ಎಂ.ಎ, ಬಿ.ಇಡಿ ಪದವಿಗಳನ್ನು ಮುಗಿಸಿ ಸಂಕೇಶ್ವರದ ಎಸ್.ಡಿ.ಎ.ಎಸ್ ಸಂಘದ ದುರುದುಂಡೇಶ್ವರ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಷಯದಲ್ಲಿ ಸಹ ಶಿಕ್ಷಕರಾಗಿ, ನಂತರ ಮುಖ್ಯೋಪಾಧ್ಯಾಯರಾಗಿ ಒಟ್ಟು ೩೮ ವರ್ಷಗಳ ಸೇವೆಯನ್ನು ಸಲ್ಲಿಸಿ ೨೦೧೦ ರ ಅಕ್ಟೋಬರ್ ಮೂವತ್ತೊಂದರಂದು ನಿವೃತ್ತರಾಗಿದ್ದಾರೆ. ತಮ್ಮ ವಿಶ್ರಾಂತ ಜೀವನವನ್ನು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾವ್ಯ, ವಿಮರ್ಶೆ, ಕಥೆ, ವೈಚಾರಿಕ ಲೇಖನ, ಹೈಕು, ರುಬಾಯಿ ಹಾಗೂ ಗಜಲ್ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ ‘ನುಡಿಮುತ್ತುಗಳು ಪುಸ್ತಿಕೆ’ ಎಂಬ ಜ್ಞಾನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನದಿಂದ ಆಯ್ದ ನುಡಿಗಳು, ‘ಮನೋಗೀತೆ’ ಎಂಬ ಕವನ ಸಂಕಲನ, ‘ವಚನಾಂಜಲಿ’ ಎಂಬ ಷಟ್ಪದಿಕಾವ್ಯ, ಹಾಗೂ ‘ಬೇಗಂ ಗಜಲ್ ಗುಚ್ಛ’ ಎಂಬ ಹಲವು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

       ಹಮೀದಾ ಬೇಗಂ ರವರು ರಚಿಸಿದ ಹಲವು ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಿಶೇಷವಾಗಿ ‘ವೈಚಾರಿಕ ಲೇಖನಗಳು’ ಅಂಕಣ ರೂಪದಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ತಾಲ್ಲೂಕು, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯ ಸರಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಉತ್ತಮ ವಿಜ್ಞಾನ ಸಂಘಟನಾ ಶಿಕ್ಷಕಿ (೧೯೯೮), ಹುಕ್ಕೇರಿ ತಾಲೂಕು ಮಟ್ಟದ ಇಂದಿರಾ ಪ್ರಿಯದರ್ಶಿನಿ ಅತ್ಯುತ್ತಮ ಶಿಕ್ಷಕಿ (೨೦೦೧), ಅತ್ಯುತ್ತಮ ಜನಗಣತಿ ಸೇವೆಗಾಗಿ ಭಾರತ ಸರ್ಕಾರದಿಂದ ಸನ್ಮಾನ ಪತ್ರ ಮತ್ತು ರಜತ ಪದಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರಿಂದ ಪುರಸ್ಕಾರ, ಡಾ.ಸ.ಜ. ನಾಗಲೋತಿಮಠ ಪ್ರಶಸ್ತಿ ಮತ್ತು ಉತ್ತಮ ವಿಜ್ಞಾನ ಪ್ರಸಾರ ಸೇವೆಗಾಗಿ ೨೦೦೬ರಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕಿ, ೨೦೦೭-೦೮ ನೇ ಸಾಲಿಗಾಗಿ ಭಾರತ ಸರ್ಕಾರದಿಂದ ರಾಷ್ಟ್ರಪ್ರಶಸ್ತಿ, ರಾಜ್ಯ ಮಟ್ಟದ ಕಾವ್ಯಸಿರಿ ಪ್ರಶಸ್ತಿ, ರಾಜ್ಯಮಟ್ಟದ ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’….. ಮುಂತಾದವಗಳು ಪ್ರಮುಖವಾಗಿವೆ.

         ನಾವು ಮಳೆಬಿಲ್ಲನ್ನು ನೋಡಲು ಬಯಸಿದರೆ ಸುರಿಯುವ ಮಳೆಯನ್ನು ಸಹಿಸಿಕೊಳ್ಳಲೇಬೇಕು. ನಾವು ಒಂಟಿಯಾಗಿ ನಿಲ್ಲುವಷ್ಟು ಬಲಶಾಲಿಯಾಗಬೇಕು. ಜೊತೆಗೆ ನಮಗೆ ಯಾವಾಗ ಸಹಾಯ ಬೇಕು ಎಂದು ತಿಳಿದುಕೊಳ್ಳುವಷ್ಟು ಬುದ್ಧಿವಂತರಾಗಬೇಕು. ಇದೊಂದು ಬದುಕಿನ ಕಲೆ. ಈ ಕಲೆಯನ್ನು ಗಜಲ್ ತನ್ನ ಪರಂಪರೆಯುದ್ದಕ್ಕೂ ಕಲಿಸುತ್ತ ಬಂದಿದೆ. ಈ ಕಾರಣಕ್ಕಾಗಿಯೇ ಗಜಲ್ ಎಂದರೆ ಬಾಳಿನ ತಮೀಜ್ ಕಲಿಸುವ ಶಾಲೆ ಎನ್ನಬಹುದು. ಇದು ಕಾಲಾತೀತವಾಗಿ, ಜಾತ್ಯಾತೀತವಾಗಿ, ಧರ್ಮಾತೀತವಾಗಿ ಹೃದಯಗಳನ್ನು ಬೆಸೆಯುವ, ಶಾಂತಿಯನ್ನು ಪಸರಿಸುವ ಕಾರ್ಯ ಸದ್ದಿಲ್ಲದೆ ಮಾಡುತ್ತ ಬಂದಿದೆ. ಹಿಂದೆಂದಿಗಿಂತಲೂ ಇಂದು ಗಜಲ್ ಸಾರುವ ಸೌಹಾರ್ದತೆಯ ಮಂತ್ರ ಮನುಕುಲದ ಸಂಜೀವಿನಿಯಾಗಬೇಕಿದೆ. ಗಜಲ್ ಗೋ ಶ್ರೀಮತಿ ಹಮೀದಾಬೇಗಂ ದೇಸಾಯಿ ಯವರ ‘ಬೇಗಂ ಗಜಲ್‌ ಗುಚ್ಛ’ ಗಜಲ್ ಸಂಕಲನದಲ್ಲಿ ಹೆಣ್ಣು ಗಂಡಿನ ನಡುವಿನ ಪ್ರೀತಿ, ಪ್ರೇಮ ಪ್ರಣಯ, ಕನವರಿಕೆ, ನಿರೀಕ್ಷೆ, ಕನಸಿನ ಲೋಕ, ವಿರಹ…..ಮುಂತಾದ ಸ್ಥಾಯಿ ಭಾವಗಳನ್ನು ಅಭಿವ್ಯಕ್ತಿಸುವ, ದೈವೀ ಭಕ್ತಿ, ಮಹಾನುಭಾವಿಗಳ ಸಾಧನೆ, ಸಾಮಾಜಿಕ ವ್ಯವಸ್ಥೆಯ ಓರೆ ಕೋರೆಗಳನ್ನು ಬಿಂಬಿಸುವ, ಸ್ತ್ರೀ ಸಂವೇದನೆ, ಶೋಷಣೆಗೆ ಶಾಬ್ದಿಕ ಅಭಿವ್ಯಕ್ತಿ ನೀಡುವ, ನಿಸರ್ಗ ಸೌಂದರ್ಯಕ್ಕೆ ಸ್ಪಂದಿಸಿದ ಪ್ರೇಮಿಗಳ ನಲಿವಿನ, ಒಲವಿನ ಉದ್ಗಾರಗಳಿದ್ದು ಗಜಲ್ ಮನಸುಗಳಿಗೆ ಔತಣವನ್ನು ಬಡಿಸುವಂತಿವೆ.

       ಮೃದುವಾದ ಬೆಳಗಿನ ಬೆಳಕು ನಮ್ಮನ್ನು ಇರಳಿನಿಂದ ಹಗಲಿನತ್ತ ಕರೆದೊಯ್ಯುತ್ತದೆ. ಸೂರ್ಯಾಸ್ತದ ವೈಭವವು ನಾವು ಎಷ್ಟೇ ದೂರ ಹೋದರೂ ಪ್ರಕೃತಿಯು ನಮ್ಮನ್ನು ಮರಳಿ ಕರೆಯುವ ಮಾರ್ಗವನ್ನು ಪ್ರಕಟಿಸುತ್ತದೆ. ಪ್ರಕೃತಿಯ ಮಡಿಲಲ್ಲಿ ಜಡತ್ವ, ವಿಷಾದ ಎನ್ನುವುದೇ ಇಲ್ಲ. ಇದೊಂದು ನಮ್ಮ ಕಣ್ಣಮುಂದಿರುವ ಜನ್ನತ್. ಇಂಥಹ ಪ್ರಕೃತಿಯನ್ನು ಪ್ರೀತಿಸುವುದು, ಪೂಜಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು, ಸೌಭಾಗ್ಯವೂ ಹೌದು.‌ ಆದರೆ ವಿಪರ್ಯಾಸವೆಂದರೆ ನಾವು ಪ್ರಕೃತಿಯ ಮಡಿಲನ್ನು ಸೀಳುವುದರಲ್ಲಿ ಪೈಪೋಟಿಯಲ್ಲಿದ್ದೇವೆ. ಇದೆಲ್ಲವನ್ನು ತೊರೆದು ಪ್ರಕೃತಿಯ ಮಡಿಲಲ್ಲಿ ನಮ್ಮ ಜೀವನವನ್ನು ಕಟ್ಟಿಕೊಳ್ಳುವ ತುರ್ತು ಇದೆ. ಈ ದಿಸೆಯಲ್ಲಿ ಸುಖನವರ್ ದೇಸಾಯಿಯವರು ಪ್ರಕೃತಿಯ ಸೌಂದರ್ಯವನ್ನು ಈ ಗಜಲ್ ನಲ್ಲಿ ಸೆರೆ ಹಿಡಿದಿರುವ ರೀತಿ ಓದುಗರ ಮನಸನ್ನು ಸೂರೆಗೊಳ್ಳುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಿ ಕೆಳಗಿನ ಷೇರ್ ಗಮನಿಸಬಹುದು.  

“”ಪಚ್ಚೆ ರತ್ನಗಂಬಳಿ ಹಾಸಿಹುದೇ ಭೂರಮೆಗೆ ಪ್ರಕೃತಿ
ನೆಲದ ಬಸಿರಿಂದ ಹಸಿರೆತ್ತಲೂ ನೋಡು ಬಿರಿದಿದೆ ಸಖಿ”

       ಆಧುನಿಕ ಕನ್ನಡ ಗಜಲ್ ಬಿರಾದರಿಯಲ್ಲಿ ಮಹಿಳಾ ಸಂವೇದನೆಗೆ ಸಂಬಂಧಿಸಿದಂತೆ ಒಂದು ಮಹಾಪೂರವೇ ಹರಿದು ಬರುತ್ತಾ ಇದೆ. ಸ್ತ್ರೀಯರು ಮತ್ತು ಪುರುಷರು ಇಬ್ಬರೂ ಈ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಿದ್ದಾರೆ. ಆದರೆ ಪುರುಷರ ಮಹಿಳಾ ಸಂವೇದನೆಗಿಂತ ಸ್ತ್ರೀಯರ ಮಹಿಳಾ ಸಂವೇದನೆ ಹೆಚ್ಚು ವಾಸ್ತವ ಎನಿಸುತ್ತದೆ. ಹಮೀದಾ ಬೇಗಂ ದೇಸಾಯಿ ರವರ ಗಜಲ್ ಗಳಲ್ಲಿ ಮಹಿಳಾ ಸಂವೇದನೆಯ ವಿವಿಧ ಆಯಾಮಗಳನ್ನು ಗಮನಿಸಬಹುದು.

“ಅದೆಷ್ಟು ತುಳಿಯುವೆ ತುಳಿ ಮಣ್ಣಾದರೂ ಹೆಣ್ಣಾಗಿ ಹುಟ್ಟುವೆ ನಾನು
ನೀನೆಷ್ಟು ನಿಂದಿಸಿ ನೋಯಿಸಿ ಜರಿದರೂ ಶಕ್ತಿಯಾಗಿ ಮೆಟ್ಟುವೆ ನಾನು”

ಈ ಮೇಲಿನ ಷೇರ್ ನಲ್ಲಿ ಕೌಟುಂಬಿಕ ಪರಿಸರದ ಚಿತ್ರಣವಿದೆ. ಸಾಮಾನ್ಯವಾಗಿ ಹೆಣ್ಣಿನ ಜನ್ಮ ಬೇಡವೆನ್ನುವವರ ಮಧ್ಯೆ ‘ಹೆಣ್ಣಾಗಿ ಹುಟ್ಟುವೆ ನಾನು’ ಎಂದು ಹೇಳುವ ಶಾಯರಾ ಅವರ ಮನೋಭಾವ ಸ್ತ್ರೀಯ ಅನುಪಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ಎಲ್ಲರಿಗೂ ಸಾಧ್ಯವಾಗದು. ಇಲ್ಲಿ ದೇಸಾಯಿಯವರ ಹಿರಿತನ, ಓದು, ಮಾಗಿದ ಅನುಭವ ಮುನ್ನೆಲೆಗೆ ಬರುತ್ತದೆ.‌ ಜೀವನ ಪ್ರೀತಿಯನ್ನು ಸಾರುತ್ತ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ಮಾಡುತ್ತದೆ.

        ಪ್ರೀತಿಯು ಯಾವತ್ತೂ ದುರ್ಬಲವಾದ, ಬೆನ್ನುಮೂಳೆಯಿಲ್ಲದ ಭಾವನೆಯಲ್ಲ; ಇದು ನ್ಯಾಯದ ಬದಿಯಲ್ಲಿ ಪ್ರಬಲವಾದ ನೈತಿಕ ಶಕ್ತಿಯಾಗಿದ್ದು ಬದುಕಿಗೆ ಊರುಗೋಲಾಗಿದೆ. ಇಂಥಹ ಊರುಗೋಲನ್ನು ತನ್ನ ಅಶಅರ್ ಮೂಲಕ ಮನುಕುಲಕ್ಕೆ ವರ್ಗಾಯಿಸುತ್ತಿರುವ ಗಜಲ್ ಗಳು ಶಾಯರಾ ಶ್ರೀಮತಿ ಹಮೀದಾಬೇಗಂ ಬಾನು ರವರಿಂದ ರಚನೆಯಾಗಲಿ, ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ತುಂಬು ಹೃದಯದಿಂದ ಶುಭ ಕೋರುಸುತ್ತೇನೆ.

“ನಿನ್ನನ್ನು ಪಡೆಯುವ ಪ್ರಯತ್ನದಲ್ಲಿ ನಾನು ಇಷ್ಟನ್ನು ಕಳೆದುಕೊಂಡಿದ್ದೇನೆ
ನೀನು ನನಗೆ ಸಿಕ್ಕರೂ ಕೂಡ ಇವಾಗ ಸಿಕ್ಕ ಖುಷಿಯ ಇರುವುದಿಲ್ಲ”
 -ವಸೀಮ್ ಬರೇಲವಿ

ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ.‌ ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ,

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಬರೆಯುತ್ತಿದ್ದಾರೆ.’ರತ್ನ’ಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

  1. ತಮ್ಮ ಪ್ರೋತ್ಸಾಹ, ಪ್ರೀತಿ, ಅಭಿಮಾನಕ್ಕೆ ಅನಂತ ಕೃತಜ್ಞತೆಗಳು ಡಾ.ಮಲ್ಲಿನಾಥ ಗುರುಗಳೇ.ತಮ್ಮ ಮಾರ್ಗದರ್ಶನದಲ್ಲಿ ಗಜ಼ಲ್ ರಚನೆ ಮಾಡುವ ಸೌಭಾಗ್ಯ ನನ್ನದು ಸರ್. ನನ್ನ ಮೊದಲ ಗಜ಼ಲ್ ಕೃತಿಗೆ ಶುಭ ಹಾರೈಸಿದ ತಮಗೆ ಧನ್ಯವಾದಗಳು ಸರ್.
    ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top