vatsala

ಅಂಕಣ ಬರಹ

ವತ್ಸಲಾ ಶ್ರೀಶ

ನಾವುಮರೆತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ವೀರಾಂಗನೆ ಜಲ್ಕಾರಿ ಬಾಯಿ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1857ರ ಸಿಪಾಯಿ ದಂಗೆ ಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಗಿದೆ.ಅಂದು ಹಲವಾರು ರಾಜ ಮಹಾರಾಜರು ಸೇರಿ ಬ್ರಿಟಿಷರ ವಿರುದ್ಧ ಹೋರಾಡಲು ಪಣತೊಟ್ಟರು. ಅದಲ್ಲದೆ ಬುಡಕಟ್ಟು ಜನಾಂಗಕ್ಕೆ ಸೇರಿದ ಹಲವರು ಕೂಡಾ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು.ಅವರ ಹೆಸರುಗಳು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದಾಖಲಾಗಿಲ್ಲ. ಹಾಗೆ ಶೌರ್ಯದಿಂದ ಹೋರಾಡಿದವರಲ್ಲಿ ಕೋಲಿ ಎಂಬ ದಲಿತ ಸಮುದಾಯದ ಜಲ್ಕಾರಿ ಬಾಯಿ ದೊಡ್ಡ ಪಾತ್ರವಹಿಸಿದವಳು. ಭಾರತದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಯ ಹೆಗಲಿಗೆ ಹೆಗಲು ಕೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ವೀರಾಂಗನೆ.  

ಜಲ್ಕಾರಿಬಾಯಿ ಉತ್ತರಪ್ರದೇಶದ ಝಾನ್ಸಿ ಬಳಿಯ ಭುಜ್ಲಾ ಗ್ರಾಮದ ಕೋಲಿ ಮನೆತನದಲ್ಲಿ ೨೨ ನವೆಂಬರ್ ೧೮೩೦ರಲ್ಲಿ  ಜನಿಸಿದಳು. ಇವಳ ತಂದೆ ಸಡೋವರ್ ಸಿಂಗ್ ತಾಯಿ ಜಮುನಾ ದೇವಿ. ಜಲ್ಕಾರಿ ಬಾಯಿ ಚಿಕ್ಕವಳಿದ್ದಾಗಲೇ ಅವಳ ತಾಯಿ ತೀರಿಕೊಂಡಿರುತ್ತಾಳೆ. ಅವಳ ತಂದೆ ಅವಳನ್ನು ಗಂಡು ಮಗನಂತೆ ಬೆಳೆಸುತ್ತಾನೆ.  ಶಸ್ತ್ರಾಭ್ಯಾಸ ಹಾಗೂ ಕುದುರೆ ಸವಾರಿ ಮುಂತಾದವುಗಳನ್ನು ಕಲಿಸುತ್ತಾನೆ..ಅವಳು ಪ್ರತಿದಿನ ದನಗಳನ್ನು ಮೇಯಿಸಲು ಕಾಡಿಗೆ ಹೋಗಬೇಕಾಗಿತ್ತು.ಒಮ್ಮೆ ದನಗಳನ್ನು ಬೇಟೆಯಾಡಲು ಬಂದ ಹುಲಿಯೊಂದಿಗೆ ಹೋರಾಡಿ ತನ್ನ  ದನಗಳನ್ನು ರಕ್ಷಿಸುತ್ತಾಳೆ.ಅವಳ ಈ ಧೈರ್ಯ ಸಾಹಸವನ್ನು ಮೆಚ್ಚಿ ಕೋಲಿ ಸಮುದಾಯದ ಝಾನ್ಸಿಯ ಪೂರಣ್ ಕೋಲಿ  ಎಂಬವನು  ಅವಳನ್ನು ಮದುವೆಯಾಗಲು ಬಯಸುತ್ತಾನೆ.  ಅವನು ಬಿಲ್ವಿದ್ಯೆ ಹಾಗೂ ಕುಸ್ತಿಯಲ್ಲಿ ಪರಿಣಿತನಾಗಿರುತ್ತಾನೆ. ಅಲ್ಲದೆ ಅವನು ಝಾನ್ಸಿ ಸೇನೆಯಲ್ಲಿರುತ್ತಾನೆ.1843ರಲ್ಲಿ ಇವರ ಮದುವೆಯಾಗುತ್ತದೆ. ಮದುವೆಯ ನಂತರ ಅವಳು ಝಾನ್ಸಿಗೆ ಬರುತ್ತಾಳೆ. ಗೌರಿಹಬ್ಬದ ದಿನ‌ಎಲ್ಲರಂತೆ ಜಲ್ಕಾರಿಬಾಯಿ ಉಡುಗೊರೆಗಳೊಂದಿಗೆ ಲಕ್ಷ್ಮಿ ಬಾಯಿಯನ್ನು ನೋಡಲು ಹೋಗುತ್ತಾಳೆ. ಜ಼ಲ್ಕಾರಿ‌ಬಾಯಿಯನ್ನು ಕಂಡ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ದಂಗಾಗುತ್ತಾಳೆ. ಏಕೆಂದರೆ ಜಲ್ಕಾರಿ ಬಾಯಿ ನೋಡಲು ಲಕ್ಷ್ಮಿಬಾಯಿಯಂತೆಯೇ ಇದ್ದಳು.ನಂತರ  ಅವಳ ಪರಾಕ್ರಮದ ಬಗ್ಗೆ ತಿಳಿದು ಅವಳನ್ನು ತನ್ನ ದುರ್ಗಾ ಸೇನೆಗೆ ಸೇರಿಸಿಕೊಳ್ಳುತ್ತಾಳೆ. ಚಿಕ್ಕಂದಿನಲ್ಲಿ ಎಲ್ಲವನ್ನೂ ಕಲಿತಿದ್ದ ಅವಳು ಅಲ್ಲಿ ಸೈನ್ಯಕ್ಕೆ ಸೇರಿ ಎಲ್ಲಾ ಯುದ್ದಕಲೆಗಳಲ್ಲಿ ಪಾರಂಗತಳಾಗುತ್ತಾಳೆ.   ಅವಳ ಪರಾಕ್ರಮವನ್ನು ಕಂಡ ರಾಣಿ ಝಲ್ಕಾರಿ ಬಾಯಿಯನ್ನು ದುರ್ಗಾ ಸೇನೆಯ ಸೇನಾ ನಾಯಕಳಾಗಿ ನೇಮಿಸುತ್ತಾಳೆ.  ರಾಣಿ ಝಲ್ಕಾರಿ ಬಾಯಿ ಎಂದೇ ಕರೆಯಲ್ಪಡುತ್ತಿದ್ದ ಝಲ್ಕಾರಿ ಬಾಯಿ ಬ್ರಿಟಿಷರ ವಿರುದ್ಧ ಹೋರಾಡಲು ಬೆಸ್ತರು, ಮೊಗವೀರರು, ಕೋಲಿ, ತಳವಾರರು, ಅಂಬಿಗರು, ಕಬ್ಬಲಿಗ ಮುಂತಾದ ಸಮುದಾಯದ ಪಡೆಗಳನ್ನು ಕಟ್ಟಿ ರಾಣಿಯ ಸೇನೆಗೆ ಸಜ್ಜುಗೊಳಿಸಿದಳು…ಮುಂದೆ ಬ್ರಿಟಿಷರು ಝಾನ್ಸಿಕೋಟೆಯನ್ನು ಮುತ್ತಿಗೆ ಹಾಕಿದಾಗ ಈ ಪಡೆಗಳು ಅವರ ವಿರುದ್ಧ ಹೋರಾಡಿ ಅವರ ರುಂಡಗಳನ್ನು ಚೆಂಡಾಡಿದವು. ಝಲ್ಕಾರಿ ಬಾಯಿ ರಾಣಿಯ ಅಂಗರಕ್ಷಕಳಂತಿದ್ದಳು ಮಾತ್ರವಲ್ಲದೆ,  ರಾಣಿಯ ಎಲ್ಲಾ ನಿರ್ಧಾರಗಳಲ್ಲಿಯೂ ಇವಳ ಸಲಹೆ ಸೂಚನೆಗಳು ಇರುತ್ತಿದ್ದವು. ೨೩-ಮಾರ್ಚ್ ೧೮೫೮ ರಲ್ಲಿ ಜನರಲ್  ವ್ಯೂಸ್ ರೋಸ್ ಝಾನ್ಸಿಯ ಮೇಲೆ ಆಕ್ರಮಣ ಮಾಡುತ್ತಾನೆ.ಲಕ್ಷ್ಮೀ ಬಾಯಿ ತನ್ನ ೪,೦೦೦ ಸೈನಿಕರ ದಳದೊಂದಿಗೆ ಅವನನ್ನು ಎದುರಿಸುತ್ತಾಳೆ.ರಾಣಿ ಕಾಲ್ಪಿ ಪೇಶ್ವೆಗಳ ಸಹಾಯಕ್ಕಾಗಿ ಕಾಯುತ್ತಿದ್ದಳು.ಆದರೆ ತಾತ್ಯಾಟೋಪೆ ಅದಾಗಲೇ ಬ್ರಿಟಿಷರಿಂದ ಸೋತು ಹೋಗಿದ್ದನು.ಜೊತೆಗೆ ರಾಣಿಯ ಒಬ್ಬ ಸೇನಾನಾಯಕ ದುಲ್ಹೇ ರಾವ್  ಬ್ರಿಟಿಷರ ಆಮಿಷದಿಂದಾಗಿ ಅವರ ಜೊತೆ ಸೇರಿಕೊಂಡಿದ್ದನು. ಝಾನ್ಸಿಗೆ  ದ್ರೋಹ ಬಗೆದು ಕೋಟೆಯ ಒಂದು ಬಾಗಿಲನ್ನು ತೆರೆದು ಬ್ರಿಟಿಷರ ಸೈನ್ಯ ಒಳನುಗ್ಗಲು ದಾರಿಮಾಡಿಕೊಡುತ್ತಾನೆ.ವ್ಯೂಸ್ ರೋಸ್ ನ ಸೈನ್ಯ ಕೋಟೆಯೊಳಗೆ ನುಗ್ಗಿತು.ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ಮುಂದುವರಿಯಲು ರಾಣಿಯು ಜೀವದಿಂದಿರುವುದು ಮುಖ್ಯವಾಗಿತ್ತು. ಕೆಲ ನಂಬಿಕಸ್ಥ ಸೈನಿಕರೊಂದಿಗೆ ರಾಣಿಗೆ ಝಾನ್ಸಿ ಬಿಟ್ಟು ಹೋಗುವಂತೆ ಜಲ್ಕಾರಿ ಬಾಯಿ ಹೇಳುತ್ತಾಳೆ. ರಾಣಿ ತಪ್ಪಿಸಿಕೊಂಡು ಝಾನ್ಸಿ ಬಿಟ್ಟು ಹೋಗುತ್ತಾಳೆ.ದುರದೃಷ್ಟವಶಾತ್ ಅದೇ ಸಮಯದಲ್ಲಿ ಸೇನೆಯಲ್ಲಿದ್ದ ಜಲ್ಕಾರಿ ಬಾಯಿಯ ಗಂಡ ಪೂರಣ್ ವೀರ‌ಮರಣ ಹೊಂದುತ್ತಾನೆ. ಆದರೆ ದುಃಖಿಸಿಕೊಂಡು‌ ಕುಳಿತುಕೊಳ್ಳುವ ಸಮಯ ಅದಾಗಿರಲಿಲ್ಲ. ಅವಳು ರಾಣಿಯ ಉಡುಪು, ಕವಚ ಧರಿಸಿ ಲಕ್ಷ್ಮೀ ಬಾಯಿ ಯಂತೆ ಕುದುರೆಯೇರಿ ಬ್ರಿಟಿಷರ ಸೈನ್ಯದ ಮೇಲೆರಗುತ್ತಾಳೆ. ರಣಚಂಡಿಯಂತೆ ಹೋರಾಡುತ್ತಾ ಅವರ ಗಮನವನ್ನೆಲ್ಲ ತನ್ನೆಡೆಗೆ ಸೆಳೆದು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸುರಕ್ಷಿತವಾಗಿ ಕೋಟೆಯಿಂದ ಹೊರ ಹೋಗಲು ಅನುವು ಮಾಡಿಕೊಡುತ್ತಾಳೆ..ಬ್ರಿಟಿಷರು ಅವಳನ್ನು ರಾಣಿಯೆಂದು ತಿಳಿದು ಜೀವಂತವಾಗಿ ಹಿಡಿಯಬೇಕೆಂದು ನಿಶ್ಚಯಿಸುತ್ತಾರೆ. ಜಲ್ಕಾರಿ ಬಾಯಿ ಹಾಗೂ ಬ್ರಿಟಿಷರ ನಡುವೆ ಭೀಕರ ಯುದ್ಧ ನಡೆಯುತ್ತದೆ.ಕೊನೆಗೂ ಜಲ್ಕಾರಿ ಬಾಯಿ ಸೆರೆಯಾಗುತ್ತಾಳೆ. ಸೆರೆಯಾದವಳು ಲಕ್ಷ್ಮೀಬಾಯಿಯಲ್ಲವೆಂದು  ತಿಳಿದ ಅಧಿಕಾರಿ ನಿನಗೇನು ಶಿಕ್ಷೆ ಕೊಡಬೇಕು ಎಂದು ಅವಳನ್ನೇ ಕೇಳುತ್ತಾನೆ. ಅವಳು ವಿಚಲಿತಳಾಗದೆ ನನ್ನನ್ನು ನೇಣು ಕಂಬಕ್ಕೇರಿಸಿ  ಎಂದು ಹೇಳುತ್ತಾಳೆ..ಅವನು ಅವಳ ಧೈರ್ಯವನ್ನು ಕಂಡು ದಂಗಾಗುತ್ತಾನೆ.  ಬಿಡುಗಡೆಗೊಳಿಸುತ್ತಾನೆ. ಮುಂದೆ ಯುದ್ಧದಲ್ಲಿ ಹೋರಾಡುತ್ತ ಹೋರಾಡುತ್ತ ವೀರ ಮರಣವನ್ನು ಹೊಂದುತ್ತಾಳೆ.ಕೆಲವು ಮೂಲಗಳ ಪ್ರಕಾರ ಅವಳು ರಾಣಿಯಂತೆ ವೇಷಧರಿಸಿ ದಾರಿ ತಪ್ಪಿಸಿದ್ದಕ್ಕಾಗಿ ಕೋಪಗೊಂಡುಬ್ರಿಟಿಷರು ಅವಳನ್ನು ನೇಣುಗಂಬಕ್ಕೆ ಏರಿಸುತ್ತಾರೆ. ಇನ್ನೊಂದು ಮೂಲದ ಪ್ರಕಾರ ಬಾಂಬ್ ಸಿಡಿಸಿ ಕೊಲ್ಲಲಾಗುತ್ತದೆ.


ಆದರೂ ಅವಳ ಪರಾಕ್ರಮವನ್ನು ಕಂಡ ಆ ಅಧಿಕಾರಿ  ಇಂತಹ ಮಹಿಳೆಯ ಒಂದು ಶೇಕಡಾ ಜನ ಭಾರತದಲ್ಲಿದ್ದರೆ ನಾವು ಭಾರತ ಬಿಟ್ಟು ಹೋಗುವ ದಿನ ದೂರವಿಲ್ಲ ಎಂದು ಹೇಳುತ್ತಾನೆ.
 ಝಲ್ಕಾರಿ ಬಾಯಿ ೧೮೫೮ ಏಪ್ರಿಲ್ ೪ರಂದು ತನ್ನ ೨೭ ನೇ ವಯಸ್ಸಿನಲ್ಲಿ ಮರಣ ಹೊಂದುತ್ತಾಳೆ..

ರಾಷ್ಟ್ರಕವಿಗಳಾದ ಮೈಥಿಲಿ ಶರಣ್ ಗುಪ್ತಾ  ಜಲ್ಕಾರಿಬಾಯಿಯ ಶೌರ್ಯದ ಬಗ್ಗೆ ಕಾವ್ಯಮಯವಾಗಿ ಹೀಗೆ ಹೇಳಿದ್ದಾರೆ.

ಜಾ ಕರ್ ರಣ್ ಮೆ ಲಲ್ಕಾರೀ ಥೀ..
ವಹ್ ತೋ ಝಾಸೀ ಕಿ ಝಲ್ಕಾರೀ ಥೀ..
ಗೋರೋಂಸೇ ಲಡ್ನಾ ಸಿಕಾಗಯೀ ಥೀ..
ಹೈ ಇತಿಹಾಸ್ ಮೆ ಝಲಕ್ ರಹೀ
ವೋ ಭಾರತ್ ಕೀ ಹೀ ನಾರೀ ಥೀ..
ವೋ ಭಾರತ್ ಕೀ ಹೀ ನಾರೀ ಥೀ..

ಬುಂದೇಲ್ ಖಂಡ್ ನ ಜನಪದ ಗೀತೆಯಲ್ಲಿ ಈಗಲೂ ಕೂಡ ಪೂರಣ್ ಸಿಂಗ್ ಹಾಗೂ ಝಲ್ಕಾರಿ ಬಾಯಿ ದಂತ ಕಥೆಯಾಗಿದ್ದಾರೆ. .ಅವರ ಕಥೆಗಳನ್ನು ಜಾನಪದ ಗೀತೆಗಳ ಮೂಲಕ ಹಾಡುತ್ತಾರೆ. ಜುಲೈ 22, 2018 ರಂದು  ಭಾರತ ಸರ್ಕಾರವು ರಾಣಿ ಜಲ್ಕಾರಿ ಬಾಯಿಯ ಹೆಸರಿನಲ್ಲಿ ಒಂದು ಸ್ಟ್ಯಾಂಪ್ ಅನ್ನು ಬಿಡುಗಡೆ ಮಾಡುತ್ತದೆ.ಭಾರತೀಯ ಪುರಾತತ್ವ ಇಲಾಖೆಯ ಸರ್ವೆ ತನ್ನ ಪಂಚಮಹಲ್ ಮ್ಯೂಸಿಯಂ ನಲ್ಲಿ ಝಾನ್ಸಿ ಕೋಟೆಯ ಜೊತೆಗೆ ಜಲ್ಕಾರಿ ಬಾಯಿಯ ಹೆಸರನ್ನೂ ಉಲ್ಲೇಖಿಸಿದೆ.ಅಜ್ಮೀರ್ ರಾಜಸ್ಥಾನ ದಲ್ಲಿ ಅವಳ ಪ್ರತಿಮೆ ಹಾಗೂ ಸ್ಮಾರಕವಿದೆ.ಉತ್ತರ ಪ್ರದೇಶ ಸರ್ಕಾರ ಅವಳ ಪ್ರತಿಮೆಯನ್ನು ಆಗ್ರಾದಲ್ಲಿ ಸ್ಥಾಪಿಸಿದೆ. ಲಕ್ನೋದಲ್ಲಿ ಅವಳ ಹೆಸರಿನ ಉಚಿತ ಚಿಕಿತ್ಸಾಲಯವೂ ಇದೆ. ಇತಿಹಾಸದ ಪುಟಗಳಲ್ಲಿ ಹಲವಾರು ಇಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಜ್ಜೆಗಳೇಕೆ ಮಸುಕಾಗಿವೆ??  ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಸಮರ್ಪಿಸಿದವರ ಇಂತಹ ಒಂದೊಂದು ಕಥೆಗಳನ್ನು ಓದಿದಾಗಲೂ ನಿಟ್ಟುಸಿರಿನೊಂದಿಗೆ ಕಣ್ಣು ತೇವವಾಗುವುದಂತೂ ಸುಳ್ಳಲ್ಲ…

(ಆಧಾರ:ಟಿವಿ ನ್ಯೂಸ್ ಚಾನಲ್ಸ್ &ಅಂತರ್ಜಾಲ)


 ವತ್ಸಲಾ ಶ್ರೀಶ

ಶ್ರೀಮತಿ ವತ್ಸಲಾ ಶ್ರೀಶ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಎಂಬಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ಇವರ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು.ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ಸರ್ವೋದಯ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ಈಗ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೊಡಗಿನ ಶ್ರೀಶಕುಮಾರ್ ಅವರನ್ನು ವಿವಾಹವಾದ ನಂತರ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ವತ್ಸಲಾ ಶ್ರೀಶರವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ ,ಕವನ, ಲೇಖನ, ಷಟ್ಪದಿಗಳು,ಇತರ ಛಂದೋಬದ್ಧ ರಚನೆಗಳು, ವಿಮರ್ಶೆ,ಹಾಯ್ಕು,ಗಝಲ್ ಮುಂತಾದವುಗಳನ್ನು ರಚಿಸುತ್ತಾರೆ. ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ,೨೦೨೩ ರ ಬನವಾಸಿಯ ಕದಂಬೋತ್ಸವ ಸೇರಿ ಹೊರಜಿಲ್ಲೆಗಳ ಹಾಗೂ ಜಿಲ್ಲೆಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ.೨೦೨೧ ರಲ್ಲಿ ಇವರ ಕವನ ಸಂಕಲನ ಭ್ರಾಜಿತ – “ಬೆಳಕಿನಕಡೆಗೊಂದು ಪಯಣ” ಬಿಡುಗಡೆಯಾಗಿದ್ದು ಜನಮನ್ನಣೆ ಪಡೆದಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.ಇವರು ಬರೆಯುವ ನ್ಯಾನೋ ಕತೆಗಳು ಜನಪ್ರಿಯತೆ ಗಳಿಸಿವೆ.ವತ್ಸಲಾ ಶ್ರೀಶ ಇವರು ‘ವಿಶ್ರುತಾತ್ಮ’ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಹಾಗೂ ‘ತಪಸ್ಯಾ’ ಕಾವ್ಯನಾಮದೊಂದಿಗೆ ಗಝಲ್ ಗಳನ್ನು ರಚಿಸುತ್ತಾರೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಗಜ಼ಲ್ ಕೃತಿಯು ಕೊಡಗಿನ‌ ಮೊದಲ‌ ಗಜ಼ಲ್ ಕೃತಿಯಾಗಿ ಹೊರಬಂದಿದೆ.

3 thoughts on “

  1. ಉತ್ತಮ ಬರಹ ಈ ವಿಷಯಗಳೆಲ್ಲ ಏಷ್ಟೋ ಜನರಿಗೆ ತಿಳಿದಿಲ್ಲ .. ಒಳ್ಳೆಯ ಪ್ರಯತ್ನ ನಿಮ್ಮದು

Leave a Reply

Back To Top