ಕನ್ನಡಕ್ಕೊಬ್ಬನೇ ಕೈಲಾಸಂ

ನೆನಪು

 ಕನ್ನಡಕ್ಕೊಬ್ಬನೇ  ಕೈಲಾಸಂ

ಎಲ್. ಎಸ್. ಶಾಸ್ತ್ರಿ

           ನಿಜ, ಕನ್ನಡದಲ್ಲಿ ಕೈಲಾಸಂ ಅವರಿಗೆ ಹೋಲಿಕೆ ಇಲ್ಲ. ಅವರದೇ ಆದ  ಒಂದು ‌ವಿಶಿಷ್ಟ ವ್ಯಕ್ತಿತ್ವ ಹೊಂದಿದವರು. ಅವರ ಬರೆಹಗಳೂ ಅಷ್ಟೇ. ಕನ್ನಡ ಸಾಹಿತ್ಯ ಲೋಕದಲ್ಲಿ ಅವರಿಗೆ ಪ್ರತ್ಯೇಕ ಸ್ಥಾನ ಇದೆ. ಖ್ಯಾತ ರಂಗನಟ ನಿರ್ದೇಶಕ ಸಿ. ಆರ್. ಸಿಂಹ ಅವರು ಕೈಲಾಸಂ ಕುರಿತಾಗಿ ” ಟಿಪಿಕಲ್ ಕೈಲಾಸಂ” ಎಂಬ ನಾಟಕವನ್ನು ಪ್ರದರ್ಶಿಸುತ್ತಿದ್ದರು.

          ಮೂಲತಃ ತಮಿಳು ಕುಟುಂಬದವರಾದ ಕೈಲಾಸಮ್ ಅವರ ತಂದೆ ತ್ಯಾಗರಾಜ ಪರಮಶಿವ ಅಯ್ಯರ್ ಮೈಸೂರು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದರು. ಮೈಸೂರು ಮಹಾರಾಜರು ಕೈಲಾಸಂ ಅವರಿಗೆ ಜೀವಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಲಂಡನ್ನಿಗೆ ಕಳಿಸಿದರು. ಆರು ವರ್ಷ ಅಲ್ಲಿದ್ದ ಕೈಲಾಸಂ ಆಗಲೇ ರಂಗ ಚಟುವಟಿಕೆಗಳತ್ತ ಆಕರ್ಷಿತರಾಗಿದ್ದರು. ಲಂಡನ್ನಿನ ರಂಗಭೂಮಿಯ ಸಂಪರ್ಕ ಹೊಂದಿದ್ದರು.

            ‌ ಭಾರತಕ್ಕೆ ಮರಳಿದ ಕೈಲಾಸಂ ಸರಕಾರಿ ಜಿಯಾಲಾಜಿ ಇಲಾಖೆ ಕೆಲಸಕ್ಕೆ ಸೇರಿದರಾದರೂ‌ ಅವರಿಗೆ ಅದು ಹೊಂದಾಣಿಕೆ ಆಗದೆ ಕೆಲಸ ಬಿಟ್ಟು ನಾಟಕಗಳ ರಚನೆಗೆ ತೊಡಗಿದರು. ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರು  ಬರೆದ ಕನ್ನಡ ನಾಟಕಗಳಲ್ಲೂ ಧಾರಾಳವಾಗಿ ಇಂಗ್ಲಿಷ್ ಶಬ್ದಗಳು ಬಳಕೆಯಾಗಿವೆ.  ಅವರ ನಾಟಕಗಳಲ್ಲಿ ಹಾಸ್ಯ, ವ್ಯಂಗ್ಯ ವಿಡಂಬನೆಗಳೇ  ಮುಖ್ಯವಾಗಿದ್ದವು. ಸಮಾಜದ ಓರೆಕೋರೆಗಳನ್ನು ಕಟುವಾಗಿ ವಿಡಂಬಿಸುತ್ತಿದ್ದ ಕೈಲಾಸಂ ತಮ್ಮ ನಾಟಕಗಳಿಗೆ ಇಡುವ ತಲೆಬರೆಹಗಳೂ ವಿಶಿಷ್ಟವೇ ಆಗಿರುತ್ತಿದ್ದವು. ಅವರ ನಾಟಕದ ಭಾಷೆ ತುಂಬ ಗಡುಚಾಗಿರುತ್ತಿದ್ದವು‌. ಅವರ ಎಲ್ಲ ನಾಟಕಗಳೂ ರಂಗದಲ್ಲಿ ಪ್ರಯೋಗವಾಗಿವೆ.

                ಕೈಲಾಸಂ ಬರೆದ ನಾಟಕಗಳಲ್ಲಿ -” ತಾಳಿ ಕಟ್ಟೋಕ್ಕೂಲೀನೇ, ಟೊಳ್ಳುಗಟ್ಟಿ, ಪೋಲಿ ಕಿಟ್ಟಿ, ಗಂಡಸ್ಕತ್ರಿ, ಬಂಡ್ವಾಳಿಲ್ಲದ ಬಡಾಯಿ, ಹೋಂ ರೂಲ್, ಅಮ್ಮಾವ್ರ ಗಂಡ, ಸೀಕರ್ಣೆ ಸಾವಿತ್ರಿ, ಅನುಕೂಲಕ್ಕೊಬ್ಬಣ್ಣ, ಸೂಳೆ, ನಂ ಕಂಪ್ನಿ, ಸತ್ತವನ ಸಂತಾಪ, ನಮ್ಮ ಬ್ರಾಹ್ಮಣ್ಕೆ ಮೊದಲಾದವು ರಾಜ್ಯದೆಲ್ಲೆಡೆ ಹವ್ಯಾಸಿ ತಂಡಗಳಿಂದ , ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರಯೋಗ ಕಂಡಿವೆ.

            ಟಿ. ಪಿ. ಕೈಲಾಸಂ ಅವರದು ಒಂದು ರೀತಿಯಲ್ಲಿ ಅಸ್ತವ್ಯಸ್ತ ಜೀವನ. ಅವರು ಏಕಾಕಿಯಾಗಿ ಇರುತ್ತಿದ್ದ ಒಂದು ಕೊಠಡಿ ಯಾವತ್ತೂ ತುಂಬ ಗಲೀಜಾಗಿರುತ್ತಿತ್ತು. ಚೈನ್ ಸ್ಮೋಕರ್ ಆಗಿದ್ದ ಅವರು ಮುಕ್ತ ಜೀವನವನ್ನು ಬಯಸುತ್ತಿದ್ದರು. ಮಹಾ ಪ್ರತಿಭಾವಂತರು. ನಾಲ್ಕು ಇಂಗ್ಲಿಷ ನಾಟಕಗಳನ್ನೂ ಅವರು ಬರೆದಿದ್ದಾರೆ.

         ೧೯೪೫ ರಲ್ಲಿ ಮದ್ರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಅವರಿಗೆ ದೊರಕಿತು. ೧೯೪೬ ರಲ್ಲೇ ಅವರು ನಿಧನ ಹೊಂದಿದರು. ಅವರು ತಮ್ಮ “ಟಿಪಿಕಲ್  ನಾಟಕ”ಗಳ ಮೂಲಕ “ಕನ್ನಡಕ್ಕೊಬ್ಬರೇ ಕೈಲಾಸಂ” ಆಗಿ ಉಳಿದರು.    ಅವರಿಗೆ ಬೇರೆ ಹೋಲಿಕೆ ಯಾವುದೂ ಇಲ್ಲ.


ಎಲ್. ಎಸ್. ಶಾಸ್ತ್ರಿ

Leave a Reply

Back To Top