“ವಾಖರಿ ಧೂಸ” ನಾಟಕ

ರಂಗಭೂಮಿ

“ವಾಖರಿ ಧೂಸ”

ನಾಟಕದ ಪ್ರದರ್ಶನ ಕುರಿತು

ಜಿ. ಹರೀಶ್ ಬೇದ್ರೆ

“ವಾಖರಿ ಧೂಸ”
ನಾಟಕ ರಚನೆ: ಡಾ. ಡಿ. ಎಸ್. ಚೌಗಲೆ
ನಿರ್ದೇಶನ : ಶ್ರೀ ಕಾಂತೇಶ ಕದರಮಂಡಲಗಿ
ಸಂಗೀತ : ರಾಘವೇಂದ್ರ ಪ್ರಭು, ಕೊಂಡಯ್ಯ
ಪ್ರಸಾದನ: ಬಾ. ಸಾಸ್ವೆಹಳ್ಳಿ ಸತೀಶ್
ಪ್ರಸ್ತುತಿ : ಸಹ್ಯಾದ್ರಿ ರಂಗ ತರಂಗ (ರಿ), ಶಿವಮೊಗ್ಗ

ಸುವರ್ಣ ಸಾಂಸ್ಕೃತಿಕ ಭವನ, ಶಿವಮೊಗ್ಗದಲ್ಲಿ ನಿನ್ನೆ (29.07.2023) ನಗರದ ಸಹ್ಯಾದ್ರಿ ರಂಗ ತರಂಗ ತಂಡದವರು “ವಾಖರಿ ಧೂಸ” ಎನ್ನುವ ನಾಟಕವನ್ನು ಪ್ರದರ್ಶಿಸಿದರು. ಇದೊಂದು ತಂಬಾಕು ಬೆಳೆಗಾರರ ಹಾಗೂ ತಂಬಾಕು ಉತ್ಪನ್ನಗಳ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರ ಮೇಲೆ ಅದರ ಮಾಲೀಕರು ನಡೆಸುವ ಶೋಷಣೆ, ದಬ್ಬಾಳಿಕೆಯನ್ನು ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ನಾಟುವಂತೆ ಮೂಡಿಬಂದ ನಾಟಕ.

ಕಿತ್ತು ತಿನ್ನುವ ಬಡತನ, ಬಂಡವಾಳಶಾಹಿಗಳ ಶೋಷಣೆಯ ನಡುವೆಯೂ ನಗುನಗುತ್ತಾ ಬದುಕು ಸಾಗಿಸುವ ದೃಶ್ಯದೊಂದಿಗೆ ನಾಟಕ ಆರಂಭವಾಗುತ್ತದೆ. ತಾವು ಕೆಲಸ ಮಾಡುವ ವಖಾರಿಯ ಮಾಲೀಕರಾದ ಗೌಡ, ಕುಲಕರ್ಣಿ, ಪಾಟೀಲ ಮುಂತಾದವರು ಹೇಗೆ ಅಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರನ್ನು ಬಳಸಿಕೊಳ್ಳಲು ಬಯಸುತ್ತಾರೆ, ಅವರಿಗೆ ತಕ್ಕ ಶಾಸ್ತಿ ಮಾಡಿದರೂ ಮತ್ತೆ ಮತ್ತೆ ರಣಹದ್ದುಗಳ ಹಾಗೆ ಮೇಲೇರಿ ಬರುತ್ತಾರೆ ಎನ್ನುವ ನೋವನ್ನು ವಿಡಂಬನೆ ಮಾಡಿ ನಗುವ ಪರಿ ಆಪ್ತ ಎನಿಸುತ್ತದೆ.

ಇದೇ ವಖಾರಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನವರೆಲ್ಲರನ್ನು ಕಳೆದುಕೊಂಡು ಒಂಟಿಯಾಗಿದ್ದ ಭೀಮವ್ವಳನ್ನು ಬಳಸಿಕೊಳ್ಳಲು ಬಂದ ಮಾಲೀಕನಿಗೆ ಬಗ್ಗದೆ, ಹೊತ್ತಿನ ತುತ್ತಿಗೆ ಎಲ್ಲವನ್ನೂ ಸಹಿಸಿಕೊಂಡು ಬರ್ಬರ ಬದುಕು ಬದುಕುತ್ತಿರುವ ತನ್ನಂತ ಬಡ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಧೈರ್ಯದಿಂದ ಮುನ್ನುಗ್ಗುತ್ತಾಳೆ. ಇವಳಿಗೆ ಬೆನ್ನೆಲುಬಾಗಿ ಸಾಧು ಬಾಬ ಹಾಗೂ ಶಶಾಂಕ್ ದೇಶಪಾಂಡೆ ಎನ್ನುವ ಹೋರಾಟಗಾರ ನಿಲ್ಲುತ್ತಾರೆ.

ಅಂದಿನ ದುಡಿಮೆ ಅಂದಿಗೆ ಎಂದು ಬದುಕುತ್ತಿರುವ ಕಾರ್ಮಿಕರು, ಒಂದೊಮ್ಮೆ ತಾವು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ ಎನ್ನುವುದು ಮಾಲೀಕರಿಗೆ ತಿಳಿದು, ಕೆಲಸದಿಂದ ತೆಗೆದು ಹಾಕಿದರೆ ಹೊಟ್ಟೆಪಾಡಿಗೆ ಏನು ಮಾಡಬೇಕು? ಇದೆಲ್ಲಾ ಆಗದ ಹೋಗಾದ ಮಾತು ಇದರ ಉಸಬಾರಿಯೇ ಬೇಡ ಎಂಬಂತ ಮನಸ್ಥಿತಿಯವರನ್ನು ಒಪ್ಪಿಸಿ, ಒಂದುಗೂಡಿಸಿ, ಆಂದೋಲನ ನಡೆಸುವುದು ಸುಲಭದ ಮಾತಾಗಿರುವುದಿಲ್ಲ. ಈ ಎಲ್ಲಾ ಸವಾಲುಗಳನ್ನು ಭೀಮವ್ವ, ಬಾಬ ಹಾಗೂ ದೇಶಪಾಂಡೆಯವರ ಸಹಾಯದಿಂದ ಯಶಸ್ವಿಯಾಗಿ ದಾಟಿ ಆಂದೋಲನ ನಡೆಸಲು ಮುಹೂರ್ತ ನಿಗದಿ ಪಡಿಸುತ್ತಾಳೆ.

ಇಷ್ಟೆಲ್ಲಾ ಆಗುವುದನ್ನು ನೋಡಿಯೂ ಬಂಡವಾಳಶಾಹಿಗಳು ಸುಮ್ಮನೆ ಕೂರಲು ಸಾಧ್ಯವೇ? ಅವರೆಲ್ಲ ಒಗ್ಗೂಡಿ ಸಾಮ, ದಾನ, ಭೇದ, ದಂಡಗಳ ಪ್ರತಿ ತಂತ್ರಗಳನ್ನು ಹೆಣೆಯುತ್ತಾರೆ. ಇದರ ನಡುವೆ ಹೋರಾಟಕ್ಕೆ ಬೆಂಬಲ ಸೂಚಿಸುವ ನೆಪದಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಮುಂದಾಗುವ ಪಟ್ಟಭದ್ರ ಹಿತಾಸಕ್ತಿಗಳು ಬಂದುಹೋಗುತ್ತಾರೆ. ಭೀಮವ್ವ ಯಾವುದಕ್ಕೂ ಬಗ್ಗುವುದಿಲ್ಲ ಎಂದು ಅರಿತ ಮೇಲೆ ಶಶಾಂಕ್ ದೇಶಪಾಂಡೆಯ ಮೇಲೆ ಕಣ್ಣಿಟ್ಟು, ಆತನ ವೈಯಕ್ತಿಕ ತೆವಲುಗಳನ್ನು ಚಿತ್ರೀಕರಿಸಿದ ಸಿ.ಡಿ. ತೋರಿಸಿ ತಮ್ಮ ದಾರಿಗೆ ತಂದುಕೊಳ್ಳುತ್ತಾರೆ.

ಸಿ.ಡಿ. ರಹಸ್ಯಕ್ಕೆ ಬೆದರಿದ ದೇಶಪಾಂಡೆ, ಆಂದೋಲನವನ್ನು ಕೈ ಬಿಡುವ ಅಥವಾ ಮುಂದೆ ಹಾಕುವ ವಿಷಯ ಭೀಮವ್ವಳ ಮುಂದಿಡುತ್ತಾನೆ. ಇದಕ್ಕೆ ಭೀಮವ್ವ ಒಪ್ಪದಿದ್ದಾಗ, ಹಿಂದೆ ಹೋರಾಟ ಮಾಡಲು ಹೋಗಿ ಹೆಣವಾದ ಮಹಮ್ಮದನ ಕತೆ ಹೇಳುತ್ತಾನೆ. ಇದರಿಂದ ದೇಶಪಾಂಡೆ, ಬಂಡವಾಳಶಾಹಿಗಳಿಗೆ ಬಿಕರಿಯಾದ ವಿಷಯ ಅರಿತ ಭೀಮವ್ವ, ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಾಳೆ.

ತನ್ನ ಪ್ರಾಣವನ್ನು ಲೆಕ್ಕಿಸದೆ ದಿಟ್ಟ ಹೆಜ್ಜೆ ಇಟ್ಟ ಭೀಮವ್ವಳ ಹೋರಾಟಕ್ಕೆ ಗೆಲುವು ಸಿಕ್ಕಿತೆ, ವಖಾರಿ ಮಾಲೀಕರು ತಮ್ಮ ಕಾರ್ಮಿಕರ ಷರತ್ತುಗಳಿಗೆ ತಲೆ ಬಾಗಿದರೆ ಎನ್ನುವುದೇ ನಾಟಕದ ಕೌತುಕ.

ಇದರ ಜೊತೆಗೆ, ಮಾಂಸದ ಮುದ್ದೆಯಂತೆ ಒಂದು ಕಡೆ ಬಿದ್ದುಕೊಂಡ ಮಗನಿಗೆ ಆರೈಕೆ ಮಾಡಿ ಸರಿಪಡಿಸಿದ ಲಗುಮ, ಲಚುಮಿಯರಿಗೆ ಮಿಡಿಯುವ ಪಾಟಿಲನ ಹೆಂಡತಿ, ಮಾಲೀಕರು ಇಲ್ಲದಿದ್ದಾಗ ತಾನೂ ಒಂದು ಕೈ ನೋಡೋಣ ಎಂದು ಮಹಿಳಾ ಕಾರ್ಮಿಕರನ್ನು ಬಳಸಿಕೊಳ್ಳಲು ನೋಡುವ ದೀವಾನಾ, ಏನೇ ಆದರೂ ಸರಿ ಇಂದು ತಾವು ನೀಡಿದ ಬೆಳೆಯ ಪೂರ್ಣ ಹಣ ಪಾವತಿ ಮಾಡಲೇಬೇಕು ಎಂದು ಸಿಟ್ಟಿನಿಂದ ಕೇಳಿಕೊಂಡು ಬಂದ ರೈತರಿಗೆ ಬಿಡಿಗಾಸು ನೀಡಿ ಮೂಗಿಗೆ ತುಪ್ಪ ಸವರಿ ಕಳಿಸುವ ದೃಶ್ಯಗಳು ಮನಸಿನಲ್ಲಿ ಹಸಿಹಸಿಯಾಗಿ ಉಳಿಯುತ್ತವೆ. ಜೊತೆಗೆ ಬೆಳಗಾವಿಯ ಮರಾಠಿ ಮಿಶ್ರಿತ ಕನ್ನಡ, ಸಹಜ ಎನ್ನುವಂತೆ ಸುಲಲಿತವಾಗಿ ಬರುವ ಬೈಗುಳ, ಆ ಭಾಗದ ವೇಷಭೂಷಣಗಳು, ಸಂದರ್ಭಕ್ಕೆ ತಕ್ಕಂತೆ ಮೂಡಿಬರುವ ಹಿನ್ನೆಲೆ ಗಾಯನ ಎಲ್ಲವೂ ನಮ್ಮನ್ನು ಮತ್ತೊಂದು ಆಯಾಮಕ್ಕೆ ಕರೆದುಕೊಂಡು ಹೋಗುವುದು ಸುಳ್ಳಲ್ಲ.

ಇದರಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ಅವರೆಲ್ಲರನ್ನೂ ಸಮರ್ಥವಾಗಿ ಬಳಸಿಕೊಳ್ಳುವುದು ನಿರ್ದೇಶಕರಿಗೆ ಸವಾಲಿನ ಕೆಲಸ. ಈ ಸವಾಲಿನಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಕಲಾವಿದರು ಸಹ, ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿ ನಾಟಕದ ಗೆಲುವಿಗೆ ಕಾರಣಕರ್ತರಾಗಿದ್ದಾರೆ.

ನಾಟಕದ ಪೋಟೊ ಆಲ್ಬಂ


ಜಿ. ಹರೀಶ್ ಬೇದ್ರೆ

6 thoughts on ““ವಾಖರಿ ಧೂಸ” ನಾಟಕ

  1. ಅನಿಸಿಕೆಯ ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರೆ ಅದು ಅತಿಶಯೋಕ್ತಿ ಆಗಲಾರದು.thank you ಹರೀಶ್

  2. ನಾಟಕದ ಕಥೆಯ ಸರಳ ವಿವರಣೆ ಸಹೃದಯಿ ಕೇಂದ್ರದಿಂದ ಕೂಡಿದೆ.ಅಭಿನಂದನೆಗಳು ಗೆಳೆಯ. ಪೋಟೋ ಆಲ್ಬಮ್ ಸೊಗಸಾಗಿದೆ

  3. ನಾಟಕದ ವಿಮರ್ಶೆ ತುಂಬಾ ಚೆನ್ನಾಗಿ ಮೂಡಿಬಂದಿದೆ, ಅಭಿನಂದನೆಗಳು

Leave a Reply

Back To Top